ಕುದುರೆ ಎದುರು ಚಕ್ಕಡಿ ನಿಲ್ಲಿಸಿದಂತೆ: ಕಿರಣ್ ಬೇಡಿ

7

ಕುದುರೆ ಎದುರು ಚಕ್ಕಡಿ ನಿಲ್ಲಿಸಿದಂತೆ: ಕಿರಣ್ ಬೇಡಿ

Published:
Updated:

ನವದೆಹಲಿ (ಪಿಟಿಐ): ಲೋಕಪಾಲ ಮಸೂದೆಯನ್ನು ಸಾಂವಿಧಾನಿಕ ಅಧಿಕಾರವನ್ನಾಗಿ ಮಾಡುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿರುವ ಅಣ್ಣಾ ತಂಡ, `ಇದು ಮಸೂದೆ ಅಂಗೀಕಾರವನ್ನು ವಿಳಂಬಗೊಳಿಸುವ ಹಾಗೂ ಜನರನ್ನು ಮೂರ್ಖರನ್ನಾಗಿಸುವ ತಂತ್ರ~ ಎಂದು ಬುಧವಾರಆರೋಪಿಸಿದೆ.

ಸರ್ಕಾರದ ಈ ಕ್ರಮವು `ಕುದುರೆ ಎದುರು ಚಕ್ಕಡಿಯನ್ನು ನಿಲ್ಲಿಸಿದಂತೆ. ತಿನ್ನಲು ಬ್ರೆಡ್ ಇಲ್ಲದಿದ್ದರೂ ಕೇಕ್ ಸಿಗುತ್ತದೆ ಎಂದು ಭ್ರಮೆಯಲ್ಲಿ ಕಾಯುವಂತೆ ಆಗಿದೆ~ ಎಂದು ತಂಡದ ಸದಸ್ಯೆ ಕಿರಣ್ ಬೇಡಿ ವ್ಯಂಗ್ಯವಾಡಿದ್ದಾರೆ.

ಸರ್ಕಾರವು ಲೋಕಪಾಲ್ ಮಸೂದೆಯನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದಾದರೆ, ಮೊದಲು ಚಳಿಗಾಲದ ಅಧಿವೇಶನದಲ್ಲಿ ಅದನ್ನು ಅಂಗೀಕರಿಸಬೇಕು. ಇದಕ್ಕೆ ಸಾಂವಿಧಾನಿಕ ಸ್ಥಾನಮಾನ ಕೊಡಬೇಕು ಎನ್ನುವುದು ವಿಳಂಬ ಅಥವಾ ಮಸೂದೆ ಅಂಗೀಕಾರವನ್ನು ಮುಂದೂಡುವ ತಂತ್ರ ಎಂದು ಬೇಡಿ ದೂರಿದ್ದಾರೆ.

ಲೋಕಪಾಲ ಮಸೂದೆಯನ್ನು ಚುನಾವಣಾ ಆಯೋಗಕ್ಕಿಂತ ಹೆಚ್ಚು ಪ್ರಬಲವನ್ನಾಗಿ ಮಾಡಲು ಸರ್ಕಾರ ಉದ್ದೇಶಿಸಿದೆ ಎಂದು ಮಂಗಳವಾರ ರಾತ್ರಿ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನಕ್ಕೆ ಬೇಡಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಮಸೂದೆಗೆ ಸಾಂವಿಧಾನಿಕ ಸ್ಥಾನಮಾನ ನೀಡುವ ಸಲುವಾಗಿ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗುತ್ತದೆ. ಅಲ್ಲದೆ ಲೋಕಪಾಲ್ ಮಸೂದೆಯನ್ನು ಇದೇ ಅಧಿವೇಶನದಲ್ಲಿ ಅಂಗೀಕರಿಸುವ ಸಾಧ್ಯತೆ ಇದೆ ಎಂದು ಸಚಿವರು ಹೇಳಿದ್ದರು.

`ಸಾಂವಿಧಾನಿಕ ಸ್ಥಾನಮಾನ ಪ್ರಸ್ತಾವವು ಮಸೂದೆಯನ್ನು ದುರ್ಬಲಗೊಳಿಸುವ ಹುನ್ನಾರವಾಗಿದೆ. ಈ ಸ್ಥಾನಮಾನ ನೀಡಬೇಕಾದರೆ ಮೂರನೇ ಎರಡರಷ್ಟು ಬಹುಮತ ಬೇಕಾಗುತ್ತದೆ. ಇದು ಕನಸಿನ ಮಾತು~ ಎಂಬುದು ಬೇಡಿ ತರ್ಕ.

 ಅವರ ಈ ಅನಿಸಿಕೆಗೆ ದನಿಗೂಡಿಸಿರುವ ಅಣ್ಣಾ ತಂಡದ ಇನ್ನೊಬ್ಬ ಸದಸ್ಯ ಪ್ರಶಾಂತ್ ಭೂಷಣ್, `ಮಸೂದೆಯನ್ನು ಸಾಂವಿಧಾನಿಕ ಅಧಿಕಾರವನ್ನಾಗಿ ಮಾಡಬಹುದು ಎಂದಾದರೆ ನಿಜಕ್ಕೂ ಅದೊಂದು ಮಹತ್ವದ ಸಾಧನೆಯಾಗುತ್ತದೆ. ಆದರೆ ಇದು ಮಸೂದೆಯನ್ನು ಶಾಸನಬದ್ಧ ಮಂಡಳಿಯನ್ನಾಗಿ ಮಾಡುವುದನ್ನು ತಡೆಯಕೂಡದು~ ಎಂದುಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry