ಕುದೇರು: ಬಡವರಿಗೆ ದೊರಕದ ಸೂರು

7

ಕುದೇರು: ಬಡವರಿಗೆ ದೊರಕದ ಸೂರು

Published:
Updated:

ಸಂತೇಮರಹಳ್ಳಿ: ಮೀಸಲಿಟ್ಟ ನಿವೇಶನದಲ್ಲಿ ಹೊಸ ಮನೆ ಕಟ್ಟಿಕೊಂಡು ಜೀವನ ನಡೆಸಬೇಕೆಂಬ ಸಮೀಪದ ಕುದೇರು ಗ್ರಾಮದ ಬಡಜನರ ಆಸೆ ಇಂದಿಗೂ ಈಡೇರಿಲ್ಲ.

ಕುದೇರು ಗ್ರಾಮದಲ್ಲಿ 7 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಇದರಲ್ಲಿ ಸುಮಾರು ಎರಡು ಸಾವಿರದಷ್ಟು ಪರಿಶಿಷ್ಟರು ಇದ್ದಾರೆ. ಅವರಲ್ಲಿ ಬಹಳಷ್ಟು ಮಂದಿಗೆ ವಾಸಿಸಲು ಯೋಗ್ಯವಾದ ಮನೆಗಳಿಲ್ಲ. ಒಂದೇ ಸೂರಿನಡಿ 3ರಿಂದ 4 ಕುಟುಂಬ ವಾಸ ಮಾಡುವಂಥ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ.ಬಡವರಿಗೆ ಸೂರು ಕಲ್ಪಿಸಲು 12 ವರ್ಷದ ಹಿಂದೆ ಪರಿಶಿಷ್ಟರ ಬಡಾವಣೆ ಸಮೀಪ ಗ್ರಾಮದ ಮುಖಂಡರೊಬ್ಬರಿಂದ ಜಮೀನು ಖರೀದಿಸಲಾಯಿತು. ಈ ಜಮೀನಿನಲ್ಲಿ ಮನೆ ನಿರ್ಮಾಣ ಮಾಡಬಹುದೆಂದು ಸರ್ಕಾರಕ್ಕೆ ಶಿಫಾರಸು ಮಾಡಲಾಯಿತು. ಆದರೆ, ಅಲ್ಲಿ ಮನೆ ಕಟ್ಟಲು ನಿವೇಶನ ಯೋಗ್ಯವಾಗಿಲ್ಲವೆಂದು ತಿರಸ್ಕರಿಸಲಾಯಿತು.ನಂತರ, 5 ವರ್ಷದ ಹಿಂದೆ ಗ್ರಾಮದ ಮುಖಂಡರಿಬ್ಬರಿಂದ ನಂಜನಗೂಡಿಗೆ ಹೋಗುವ ರಸ್ತೆಯ ರೇಷ್ಮೆ ತರಬೇತಿ ಕೇಂದ್ರದ ಪಕ್ಕದಲ್ಲಿ 8 ಎಕರೆ ಜಮೀನು ಖರೀದಿಸಲು ಗ್ರಾಮ ಪಂಚಾಯಿತಿಯಿಂದ ಉಪ ವಿಭಾಗಾಧಿಕಾರಿಗೆ ಶಿಫಾರಸು ಮಾಡಲಾಯಿತು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ನಿವೇಶನದ ಪಕ್ಕದಲ್ಲಿದ್ದ ರೇಷ್ಮೆ ಇಲಾಖೆಯ ಸುತ್ತುಗೋಡೆ ಒಡೆದು ರಸ್ತೆ ನಿರ್ಮಿಸಲಾಯಿತು. ಆದರೆ, ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಉದಾಸೀನತೆಯಿಂದ ನಿವೇಶನ ಹಂಚಿ ಸೂರು ಕಲ್ಪಿಸುವ ಕಾರ್ಯ ನೆನೆಗುದಿಗೆ ಬಿದ್ದಿದೆ.ಕ್ಷೇತ್ರದ ಶಾಸಕರು ಗ್ರಾಮದ ಜನರ ಸಮಸ್ಯೆ ಆಲಿಸಿ ತುರ್ತಾಗಿ ನಿವೇಶನ ಹಂಚುವಂತೆ ಅಧಿಕಾರಿಗಳಿಗೆ ಪತ್ರ ಬರೆದರು. ಶೀಘ್ರವೇ, ನಿವೇಶನ ಹಂಚಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ಕೂಡ ಸಿಕ್ಕಿತ್ತು. ಅಷ್ಟರಲ್ಲಿ ಶಾಸಕರು ಅನರ್ಹಗೊಂಡರು. ಯಥಾಪ್ರಕಾರ ನಿವೇಶನ ಹಂಚಿಕೆ ಪತ್ರ ಸರ್ಕಾರಿ ಕಡತದಲ್ಲಿ ದೂಳು ತಿನ್ನುತ್ತಿದೆ. ಇತ್ತ ಬಡವರು      ಗೋಳಿಡುವಂತಾಗಿದೆ.‘ಗ್ರಾಮದಲ್ಲಿರುವ ಬಡವರ ಕಷ್ಟ ಅರಿಯಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಸಮಯವಿಲ್ಲ. ನಿರ್ಲಕ್ಷ್ಯದ ಪರಿಣಾಮ ನಿವೇಶನ ಹಂಚಿಕೆ ನೆನೆಗುದಿಗೆ ಬಿದ್ದಿದೆ. ಕೂಡಲೇ, ಜಿಲ್ಲಾಧಿಕಾರಿ ಈ ನಿಟ್ಟಿನಲ್ಲಿ ಕ್ರಮಕೈಗೊಂಡು ನಿವೇಶನ ಹಂಚಿಕೆಗೆ ಆದೇಶ ನೀಡಬೇಕು. ಜತೆಗೆ, ಮನೆ ನಿರ್ಮಿಸಿಕೊಡಬೇಕು’ ಎಂದು ಒತ್ತಾಯಿಸುತ್ತಾರೆ ಗ್ರಾಮದ ಮುಖಂಡ ಕೆ.ಸಿ. ರೇವಣ್ಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry