ಕುನ್ನೂರಿನಲ್ಲಿ ಆಕ್ರೋಶಭರಿತ ಮೌನ

7

ಕುನ್ನೂರಿನಲ್ಲಿ ಆಕ್ರೋಶಭರಿತ ಮೌನ

Published:
Updated:
ಕುನ್ನೂರಿನಲ್ಲಿ ಆಕ್ರೋಶಭರಿತ ಮೌನ

ಚಿಕ್ಕೋಡಿ: ಒಂಬತ್ತು ವರ್ಷದ ಬಾಲಕಿಯೊಬ್ಬಳ ಮೇಲೆ ಯುವಕನೊಬ್ಬ ಅತ್ಯಾಚಾರ ಯತ್ನ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹಿನ್ನೆಲೆಯಲ್ಲಿ ತಾಲ್ಲೂಕಿನ ಕುನ್ನೂರ ಗ್ರಾಮದಲ್ಲಿ ಗುರುವಾರವೂ ಬಿಗುವಿನ ವಾತಾವರಣ ನೆಲೆಸಿದ್ದು, ಶಾಸಕ ಕಾಕಾಸಾಹೇಬ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ ಅವರು ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಗುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

 

ಕುನ್ನೂರ ಗ್ರಾಮದ ಒಂಬತ್ತು ವರ್ಷದ ಬಾಲಕಿಯೊಬ್ಬಳು ಶಾಲೆಯಿಂದ ಬರುತ್ತಿರುವಾಗ ಅದೇ ಗ್ರಾಮದ ನವಾಜ್  ಬಾಬಾಸಾಬ ಡಾಂಗೆ ಎಂಬ ಯುವಕ ಆ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಲು ಯತ್ನ ನಡೆಸಿದಾಗ ಬಾಲಕಿ ನಿರಾಕರಿಸಿದ ಹಿನ್ನೆಲೆಯಲ್ಲಿ ಚೂರಿಯಿಂದ ಇರಿದು ಗಂಭೀರವಾಗಿ ಗಾಯಪಡಿಸಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. 

 

ಈ ಘಟನೆಯಿಂದ ಕೆರಳಿದ ಗ್ರಾಮಸ್ಥರು ಆ ಯುವಕನ ದ್ವಿಚಕ್ರವಾಹನಕ್ಕೆ ಬೆಂಕಿ ಹಚ್ಚಿದ್ದಲ್ಲದೇ, ಆತನ ಮನೆಯ ಮೇಲೆ ಕಲ್ಲು ತೂರಾಟ ನಡೆಸಿ, ಮನೆಯೊಳಗಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಬುಧವಾರ ಮಧ್ಯಾಹ್ನದಿಂದ ಗ್ರಾಮದಲ್ಲಿ ಅಘೋಷಿತ ಬಂದ್ ವಾತಾವರಣ ನೆಲೆಸಿದೆ. ಗಾಯಾಳು ಬಾಲಕಿಗೆ ಕೊಲ್ಹಾಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಕೆ ಕಂಡು ಬಂದಿದೆ ಎಂದು ತಿಳಿದಿದೆ.  ಗುರುವಾರ ನಡೆದ ಗ್ರಾಮಸ್ಥರ ಸಭೆಯಲ್ಲಿ ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗಿದೆ. ತಪ್ಪಿತಸ್ಥ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು. ಆತನಿಗೆ ಜಾಮೀನು ಅಥವಾ ಇತರೆ ಯಾವುದೇ ಸಹಕಾರವನ್ನು ಗ್ರಾಮಸ್ಥರು ನೀಡಬಾರದು ಎಂದು ನಿರ್ಧರಿಸಲಾಯಿತು.ಸಭೆ ನಡೆಯುತ್ತಿರುವಾಗಲೇ ಗ್ರಾಮಕ್ಕೆ ಬಂದ ಶಾಸಕ ಕಾಕಾಸಾಹೇಬ ಪಾಟೀಲ, ಸಿಪಿಐ ಕರುಣಾಕರಶೆಟ್ಟಿ ಅವರು ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಗುವಂತೆ ಮನವಿ ಮಾಡಿಕೊಂಡರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ ಅವರೂ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯ ತಪ್ಪಿತಸ್ಥ ಆರೋಪಿ ವಿರುದ್ದ ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದರು. ಗುರುವಾರ ಸಂಜೆಯಿಂದ ಗ್ರಾಮ ಸಹಜ ಸ್ಥಿತಿಯತ್ತ ಮರಳುತ್ತಿದೆಯಾದರೂ ಬೂದಿ ಮುಚ್ಚಿದ ಕೆಂಡದಂತಿದೆ. ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry