ಕುಪ್ಪೂರು ಗದ್ದಿಗೆ ಮಠದಲ್ಲಿ ಕಳವು

7

ಕುಪ್ಪೂರು ಗದ್ದಿಗೆ ಮಠದಲ್ಲಿ ಕಳವು

Published:
Updated:

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಕುಪ್ಪೂರು ಗದ್ದಿಗೆ ಮಠದಲ್ಲಿ ಬುಧವಾರ ರಾತ್ರಿ ಕಾಣಿಕೆ ಹುಂಡಿ ಸೇರಿದಂತೆ ಲಕ್ಷಾಂತರ ಮೌಲ್ಯದ ಬೆಳ್ಳಿ ವಸ್ತುಗಳನ್ನು ಕಳವು ಮಾಡಲಾಗಿದೆ.ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಕುಪ್ಪೂರು ಗ್ರಾಮದಲ್ಲಿರುವ ಮರುಳ ಸಿದ್ದೇಶ್ವರಸ್ವಾಮಿ ಮಠದಲ್ಲಿ ಬುಧವಾರ ರಾತ್ರಿ ಕಳ್ಳತನ ನಡೆದಿದೆ. ಮಧ್ಯರಾತ್ರಿ ಮಠದ ಹೆಂಚು ತೆಗೆದು ಕೆಳಕ್ಕೆ ಇಳಿದಿರುವ ಕಳ್ಳರು ಗರ್ಭಗುಡಿ ಬೀಗವನ್ನು ಒಡೆದು ಅಲ್ಲಿದ್ದ ಬೆಳ್ಳಿವಸ್ತುಗಳನ್ನು ಕಳವು ಮಾಡಿದ್ದಾರೆ. ಗರ್ಭಗುಡಿ ಮುಂಭಾಗದಲ್ಲಿದ್ದ ಎರಡು ಹುಂಡಿಗಳನ್ನು ಸಹ ಕಳ್ಳರು ಕದ್ದೊಯ್ದಿದ್ದಾರೆ.ಗರ್ಭಗುಡಿಯಲ್ಲಿದ್ದ ಸುಮಾರು 22 ಬೆಳ್ಳಿ ಪೂಜಾ ಸಾಮಗ್ರಿಗಳಾದ ಬೆಳ್ಳಿ ಮುಕುಟ, ನಾಗಾಭರಣ, ಬೆಳ್ಳಿಗಿಂಡಿಗಳು, ಛತ್ರಿ, ಫಾಣಿಬಟ್ಟಲು, ಪಾದುಕೆ, ಕಳಶ, ಆರತಿ ಬಟ್ಟಲು, ರುದ್ರಾಕ್ಷಿ, ಬೆಳ್ಳಿ ಬಿಲ್ವಪತ್ರೆ, ಗಣಪತಿ, ಆಂಜನೇಯ, ರೇಣುಕ, ನಟರಾಜ ಮುಂತಾದ ಬೆಳ್ಳಿ ವಿಗ್ರಹಗಳನ್ನು ಕಳವು ಮಾಡಲಾಗಿದೆ. ಸುಮಾರು 15ರಿಂದ 20 ಕಿಲೋ ಬೆಳ್ಳಿ ಪದಾರ್ಥಗಳು ಕಳುವಾಗಿದೆ. ಹುಂಡಿಯ ನಗದೂ ಸೇರಿದಂತೆ ಸುಮಾರು ರೂ. 10 ಲಕ್ಷ ಮೌಲ್ಯದ ಆಭರಣ ಕಳುವಾಗಿದೆ ಎಂದು ಅಂದಾಜು ಮಾಡಲಾಗಿದೆ. ಕಳುವಾದ ದಿನ ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ತಿಪಟೂರಿಗೆ ತೆರಳಿದ್ದರು. ಕಳವು ನಡೆದ ರಾತ್ರಿ ವಿದ್ಯುತ್ ಇರಲಿಲ್ಲವೆಂದು ಸ್ವಾಮೀಜಿ ತಾಯಿ ದೇವಿರಮ್ಮ ತಿಳಿಸಿದ್ದಾರೆ.ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲಿಸಿದರು. ಕಳ್ಳರು ವಾಹನವೊಂದರಲ್ಲಿ ಬಂದಿರಬಹುದೆಂದು ಶಂಕಿಸಲಾಗಿದೆ. ಕೆಲವು ಬೆಳ್ಳಿ ಚೂರುಗಳು ಮಠದ ಸಮೀಪದ ಏರಿಯ ಗಿಡಗಂಟೆಗಳಲ್ಲಿ ಸಿಕ್ಕಿವೆ. ಸುದ್ದಿ ತಿಳಿದ ತಕ್ಷಣ ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸುತ್ತಿದ್ದರು.ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ.ಪಿ.ಎಸ್.ಹರ್ಷ, ಎಎಸ್‌ಪಿ ಡಾ. ಬೋರಲಿಂಗಯ್ಯ, ಸಿಪಿಐ ರವಿಪ್ರಸಾದ್, ಪಿಎಸ್‌ಐ ಶಿವಕುಮಾರ್ ಆಗಮಿಸಿದ್ದರು. ಶೆಟ್ಟಿಕೆರೆ ಜಿಲ್ಲಾ ಪಂಚಾಯಿತಿ ಸದಸ್ಯ ಪಂಚಾಕ್ಷರಿ, ತಾಲ್ಲೂಕು ಪಂಚಾಯಿತಿ ಸದಸ್ಯ ರಮೇಶ್‌ಕುಮಾರ್ ಹಾಗೂ ಜೆ.ಸಿ.ಪುರ ಸದಸ್ಯ ಎಂ.ಎಂ.ಜಗದೀಶ್ ಮುಂತಾದವರು ಭೇಟಿ ನೀಡಿದ್ದರು.ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹೊನ್ನವಳ್ಳಿ ಶಿವಾಚಾರ್ಯ ಸ್ವಾಮೀಜಿ, ತಿಪಟೂರಿನ ರುದ್ರಮುನಿ ಸ್ವಾಮೀಜಿ, ನೊಣವಿನಕೆರೆ ಹಾಗೂ ದೊಡ್ಡಗುಣಿ ಮಠಾಧ್ಯಕ್ಷರು ಆಗಮಿಸಿದ್ದರು.ಸರಣಿ ಕಳವು ಹೆಚ್ಚಳ

ಕುಪ್ಪೂರು ಮಠದಲ್ಲಿ ನಡೆದ ಕಳ್ಳತನ ಪ್ರಕರಣ ಬೆಳಕಿಗೆ ಬಂದ ನಂತರ ತಾಲ್ಲೂಕಿನಲ್ಲಿ ಇನ್ನೂ ಹಲವು ಸರಣಿ ಕಳ್ಳತನ ನಡೆದ ಬಗ್ಗೆ ವರದಿಯಾಗಿದೆ. ಮಂಗಳವಾರ ರಾತ್ರಿ ಪಟ್ಟಣದ ಶೆಟ್ಟಿಕೆರೆ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ದೇವಸ್ಥಾನ ಹಾಗೂ ಕುಪ್ಪೂರು ಸಮೀಪದ ಕುರುಬರಹಳ್ಳಿ ಆಂಜನೇಯಸ್ವಾಮಿ ದೇವಾಲಯದ ಬೀಗ ಒಡೆದು ಹುಂಡಿಯನ್ನು ಕಳವು ಮಾಡಲಾಗಿದೆ. ಕಳೆದ ಒಂದು ವಾರದ ಹಿಂದೆ ಕುಪ್ಪೂರು ತಮ್ಮಡಿಹಳ್ಳಿ ದೇವಸ್ಥಾನದಲ್ಲಿದ್ದ  8 ಸಣ್ಣ ಬೆಳ್ಳಿ ಛತ್ರಿಗಳು ಕಳುವಾಗಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry