`ಕುಬಸದ ಬಸಪ್ಪಜ್ಜನಿಗೆ ಆರಾಧನೆ'

ಮಂಗಳವಾರ, ಜೂಲೈ 16, 2019
25 °C

`ಕುಬಸದ ಬಸಪ್ಪಜ್ಜನಿಗೆ ಆರಾಧನೆ'

Published:
Updated:

ಮಹಾಲಿಂಗಪುರ: ಕಾಯಕ ನಿಷ್ಠೆ, ದಾಸೋಹ ಪ್ರಜ್ಞೆ, ಶರಣ ಭಕ್ತಿ, ಆಧ್ಯಾತ್ಮಿಕ ಮನೋಭಾವ ಹಾಗೂ ಧಾರ್ಮಿಕ ಕ್ರಿಯೆಗಳ ಮೂಲಕ ಸಮಾಜದ ಕಟ್ಟ ಕಡೆಯ ಮನುಷ್ಯನನ್ನು ಮೇಲಕ್ಕೆತ್ತಿದ ಪವಾಡ ಪುರುಷನೆಂದೇ ನಂಬಿರುವ ಹಿರಿ ತಲೆಮಾರಿನ ಕುಬಸದ ಬಸಪ್ಪಜ್ಜನಿಗೆ ಇಲ್ಲಿಯ ಅವರ ಅನುಯಾಯಿಗಳು 63ನೇ ಪುಣ್ಯಾರಾಧನೆ ಮಾಡುತ್ತಿದ್ದಾರೆ. ಬದುಕಿದ್ದಾಗ ದಂತಕತೆಯಂತೆ ಜೀವಿಸಿದ್ದ ಕುಬಸದ ಬಸಪ್ಪಜ್ಜ ಆರೂಢ ಪರಂಪರೆಯ ಇನ್ನೊಂದು ದಂತಕತೆ ಸಿದ್ಧಾರೂಢ ಶ್ರಿಗಳ ಸಮಕಾಲೀನರು.1885ರಲ್ಲಿ ಮಹಾಲಿಂಗಪುರದ ಸಾಮಾನ್ಯ ನೇಕಾರ ಕುಟುಂಬದಲ್ಲಿ ಜನಿಸಿದ ಬಸಪ್ಪಜ್ಜ ಚಿಕ್ಕಂದಿನಲ್ಲಿಯ ತಮ್ಮ ವಿಶೇಷ ಆಸಕ್ತಿಗಳಾದ ದೇವರ ಅನ್ವೇಷಣೆ, ಧಾರ್ಮಿಕ ಆಚರಣೆಗಳ ಜೊತೆಗೆ ಆಧ್ಯಾತ್ಮಿಕ ಪ್ರವಚನಗಳನ್ನು ಕೇಳಿ ಅವುಗಳಿಂದ ಪ್ರಭಾವಿತರಾಗಿ ತಾವು ಕೇಳಿ ತಿಳಿದ ಉತ್ತಮ ಅಂಶಗಳೆಲ್ಲವನ್ನೂ ಹೀರಿಕೊಂಡು ಸಮಾಜದಲ್ಲಿ ಮೇಲ್ನೋಟಕ್ಕೆ ಕಾಣುವ ಕೊಳೆಗಳನ್ನು ತೊಳೆದರು. ಮಾನಸಿಕ ಕೊಳೆಯನ್ನು ಸ್ವಚ್ಛಗೊಳಿಸಲು ತಾವಿರುವ ಪ್ರದೇಶದಲ್ಲೇ ಅನೇಕ ಸಾಧು ಸತ್ಪುರುಷರ ಧಾರ್ಮಿಕ ಉಪನ್ಯಾಸಗಳನ್ನು ನಡೆಸತೊಡಗಿದರು.ವೃತ್ತಿಯಿಂದ ನೇಕಾರರಾಗಿದ್ದ

ಬಸಪ್ಪಜ್ಜ ಜಮಖಾನೆ, ಸೀರೆ, ರುಮಾಲು ಮತ್ತು ಧೋತರಗಳನ್ನು ನೇಯುವುದರಲ್ಲಿ ಸಿದ್ಧ ಹಸ್ತರಾಗಿದ್ದರು. ಇವರ ರುಮಾಲು ತಯಾರಿಕೆಯ ಕೌಶಲಕ್ಕೆ ಮಾರು ಹೋಗಿದ್ದ ಮುಧೋಳದ ಘೋರ್ಪಡೆ ಮಹಾರಾಜರು ಇವರ ನೇಯ್ಗೆಯ ಸ್ಥಳವಾಗಿದ್ದ ಮಹಾಲಿಂಗಪುರದ ಕೈಮಗ್ಗಕ್ಕೇ ಬಂದು ಭೇಟಿ ನೀಡಿದ್ದರು. ಇವರು ನೇಯ್ದ ಧೋತರವನ್ನು ಸೊಲ್ಲಾಪುರ ಸಂಸ್ಥಾನದ  ಮಹಾರಾಜರು ಬಳಸುತ್ತಿದ್ದರು. ತಮ್ಮ ಹಿಂಬಾಲಕರಿಗೆ ಕಾಯಕ ನಿಷ್ಠೆಯ ಕುರಿತು ಹೇಳುವ ಅವಕಾಶವೇ ಬಸಪ್ಪಜ್ಜನಿಗೆ ಬರುತ್ತಿರಲಿಲ್ಲ. ಎಲ್ಲರೂ ಇವರ ಬದುಕನ್ನೇ ಆದರ್ಶವೆಂದು ನಂಬಿಕೊಂಡಿದ್ದರು.ತಮ್ಮ ಕಾಲದಲ್ಲಿ ಬದುಕಿನ ಮೌಲ್ಯಗಳನ್ನು ಕಲಿಸಿದ ಹಾಗೂ ನೆಮ್ಮದಿಯ ಬದುಕನ್ನು ಹೇಗೆ ನಡೆಸಬೇಕು ಎಂಬುದನ್ನು ಅತ್ಯಂತ ಸರಳವಾಗಿ ತಮ್ಮ ಬದುಕಿನ ಮೂಲಕವೇ ಕಲಿಸಿದ ಈ ಗುರುವಿನ ಅನೇಕ ಅನುಯಾಯಿಗಳು 62 ವರ್ಷಗಳಿಂದ ಅವರ ಪುಣ್ಯಾರಾಧನೆ ನಡೆಸುತ್ತ ಬಂದಿದ್ದಾರೆ. ಇಂದಿಗೂ ಕುಬಸದ ಬಸಪ್ಪಜ್ಜನ ತತ್ವ ಸಿದ್ಧಾಂತ ಹಾಗೂ ಧಾರ್ಮಿಕ ಮನೋಭಾವಗಳನ್ನು ಗೌರವಿಸುತ್ತಿದ್ದಾರೆ. ಪ್ರತಿವರ್ಷ ಆಷಾಢ ಶುದ್ಧ ಪಂಚಮಿ ದಿನದಂದು ತಿಥಿಯ ಆಧಾರದ ಮೇಲೆ ಈ ಶರಣ ಹಾಗೂ ಕಾಯಕ ಜೀವಿಯ ಪುಣ್ಯಾರಾಧನೆಯನ್ನು ಅವರ ತತ್ವ ಪಾಲಕರು ಆಚರಿಸುತ್ತ ಬಂದಿದ್ದಾರೆ.ಈ ಬಾರಿ ಇದೇ 13ರಂದು ಮಹಾಲಿಂಗಪುರದ ಅವರ ಕರ್ಮಭೂಮಿಯಲ್ಲಿ ವಿವಿಧ ಧಾರ್ಮಿಕ ಆಚರಣೆಗಳು ಹಾಗೂ ಅಹೋರಾತ್ರಿ ಭಜನಾ ಕಾರ್ಯಕ್ರಮಗಳು ಜರುಗಲಿವೆ.ಸಂಸಾರದಲ್ಲಿದ್ದುಕೊಂಡೂ ಅಧ್ಯಾತ್ಮಕ್ಕಾಗಿ ಹಾಗೂ ಕಾಯಕ ನಿಷ್ಠೆ ಹೊಂದಿ ಸಮಾಜ ತಿದ್ದುವ ಶರಣನಾಗಿದ್ದ ಕುಬಸದ ಬಸಪ್ಪಜ್ಜ ಅವರನ್ನು 63 ಸುದೀರ್ಘ ವರ್ಷಗಳ ನಂತರವೂ ಯಾವ ಕೊರತೆ ಇಲ್ಲದಂತೆ ನೆನಪಿಸಿಕೊಳ್ಳುವ, ಆಧ್ಯಾತ್ಮ ಸಮ್ಮೇಳನ ಹಾಗೂ ಧಾರ್ಮಿಕ ಪ್ರವಚನಗಳನ್ನು ಏರ್ಪಡಿಸುವ ಮೂಲಕ ಜೀವಂತವಾಗಿರಿಸಿರುವುದು ಬಸಪ್ಪಜ್ಜ ಅಂದು ನಿಷ್ಕಾಮವಾಗಿ ಸಮಾಜಕ್ಕೆ ಒಳಿತನ್ನು ಮಾಡಿರುವುದರ ಫಲ.ದೇಹ ತೊರೆದ ನಂತರ ಇಂದಿಗೂ ಅವರ ಸಕಲ ಕಾರ್ಯಕ್ರಮಗಳನ್ನು ಇಲ್ಲಿಯ ಹಿರಿಯ ಜೀವಿ ನಾರಾಯಣ ಕಿರಗಿ ನಿರ್ವಹಿಸುತ್ತಿದ್ದಾರೆ. ಅವರೊಂದಿಗೆ ಪುರಸಭೆ ಸದಸ್ಯ ಸಂಗಪ್ಪ ಹಲ್ಲಿ, ರಾಮಣ್ಣ ಗಲಗಲಿ, ಈಶ್ವರ ಚಮಕೇರಿ, ಶಂಕರ ಹನಗಂಡಿ ಹಾಗೂ ಕುಬಸದ ಓಣಿಯ ಸಮಸ್ತ ನಾಗರಿಕರು ಸಹಕಾರ ನೀಡುತ್ತಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry