ಮಂಗಳವಾರ, ನವೆಂಬರ್ 19, 2019
27 °C

ಕುಬೇರರೇ ತುಂಬಿರುವ ಕಣದಲ್ಲಿ...

Published:
Updated:

`ಪ್ರಪಂಚದಲ್ಲಿ ಎಲ್ಲಕ್ಕಿಂತ ಅಪಾಯಕಾರಿಯಾದದ್ದು ಐಶ್ವರ್ಯ' ಎಂದು ಸಾಫೋಕ್ಲಿಸ್ ಹೇಳುತ್ತಾನೆ. `ಆಸ್ತಿ ಎನ್ನುವುದೇ ಒಂದು ಅಪರಾಧದಂತೆ ತೋರುತ್ತದೆ' ಎಂದು ಬಿಎಂಶ್ರೀ ಅವರು ಹೇಳುತ್ತಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ  ಜನಸೇವೆ ಮಾಡುವ ಕಂಕಣತೊಟ್ಟು ಚುನಾವಣಾ ಕಣಕ್ಕೆ ಇಳಿದಿರುವ ಉತ್ಸಾಹಿ ಅಭ್ಯರ್ಥಿಗಳು ಘೋಷಿಸಿಕೊಂಡಿರುವ ಆಸ್ತಿ ವಿವರಗಳನ್ನು  ಕಂಡಾಗ ದಿಗಿಲಾಗುತ್ತದೆ. ಕೋಟಿಕೋಟಿ ಆಸ್ತಿ ಇದೆ ಎಂದು ಜನಪ್ರತಿನಿಧಿಯೊಬ್ಬ ಘಂಟಾಘೋಷವಾಗಿ  ಹೇಳಿಕೊಳ್ಳುವಾಗ ಈ ದೇಶದಲ್ಲಿ ಸೂರೇ ಇಲ್ಲದೆ ಬೀದಿಬದಿಯಲ್ಲಿ ಮಲಗುವ ಜನರ ಚಿತ್ರ, ಒಂದು ಹೊತ್ತಿನ ಕೂಳಿಗೂ ದಿಕ್ಕಿಲ್ಲದೆ ಅಲೆಯುತ್ತಿರುವ ಬಡಜನರ ದೀನ ಮುಖದ ಮೇಲಿನ ನೋವಿನ ಗೆರೆ, ಕುಡಿಯುವ ನೀರಿಗೂ ಹಾಹಾಕಾರವಾಗಿ ಕಣ್ಣೀರುಗರೆಯುತ್ತಿರುವ ಗ್ರಾಮೀಣ ಜನರ ಚಿತ್ರ ಅವರ ಚಿತ್ತಪಟಲದ ಮುಂದೆ ಬಂದಿರಲು ಖಂಡಿತಾ ಸಾಧ್ಯವಿಲ್ಲ. ಐದು ವರ್ಷ `ಜನಸೇವೆ' ಮಾಡಿದ ಬಳಿಕವೂ ಸಾಮಾಜಿಕ ಅಸಮತೋಲನ, ಬಡತನ, ನಿರುದ್ಯೋಗ ಎಲ್ಲವೂ ಯಥಾಸ್ಥಿತಿಯಲ್ಲೇ ಇದೆ. ಆದರೆ ಜನಪ್ರತಿನಿಧಿಗಳ ಆಸ್ತಿ ಮಾತ್ರ ಕೊಳೆಯುವಷ್ಟು ಏರುತ್ತಿದೆ.ಕಣಕ್ಕಿಳಿದಿರುವ ಬಹುತೇಕ ಶಾಸಕರ ಚರಸ್ಥಿರ ಆಸ್ತಿ ದುಪ್ಪಟ್ಟಾಗಿರುವುದು ಒಂದು ವ್ಯಂಗ್ಯ. ಕರ್ನಾಟಕ ಎಲೆಕ್ಷನ್ ವಾಚ್ ಸಮೀಕ್ಷೆಯ ಪ್ರಕಾರ ಈ ಸಲದ ಚುನಾವಣೆಯಲ್ಲಿ ಹರಿಯುವ ಹಣದ ಪ್ರಮಾಣ ಆರುಸಾವಿರದಿಂದ ಏಳುಸಾವಿರ ಕೋಟಿ ರೂಪಾಯಿ.ಚುನಾವಣಾ ಆಯೋಗದ ಬಿಗಿ ಹಿಡಿತಕ್ಕೆ ಹೆದರಿದವರಾರು? ತಮ್ಮ ಆಸ್ತಿಯನ್ನು ಕಾಪಾಡಿಕೊಳ್ಳಲು ಅವರಿಗೆ ಸ್ಥಾನಮಾನದ ಅಗತ್ಯವಿರುತ್ತದೆ. ಆಸ್ತಿಯ ಆಸೆ ಮತ್ತು ಭ್ರಷ್ಟಾಚಾರ ಎರಡೂ ಕೈಕೈಹಿಡಿದೇ ಸಾಗುತ್ತಿದೆ.ಅತ್ಯಂತ ಕಿರಿಯ ವಯಸ್ಸಿನ ಶಾಸಕರೊಬ್ಬರ ಆಸ್ತಿ 900 ಕೋಟಿ ರೂಪಾಯಿ. 2004 ರಲ್ಲಿ ಹತ್ತುಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದ ಅಭ್ಯರ್ಥಿಯೊಬ್ಬರು ಈ ಬಾರಿ 20 ಪುಟಗಳಷ್ಟು ಆಸ್ತಿ ವಿವರ ನೀಡಿದ್ದಾರೆ. ಅವರ ಆಸ್ತಿ ಈಗ 241 ಕೋಟಿ ರೂಪಾಯಿ.ಮಾಜಿ ಮುಖ್ಯಮಂತ್ರಿಗಳ ಆಸ್ತಿ ದ್ವಿಗುಣಗೊಂಡಿದೆ. ಮತ್ತೊಬ್ಬ ಮಾಜಿ ಮುಖ್ಯಮಂತ್ರಿಯವರ ಪತ್ನಿ ಶತಕೋಟಿ ರೂಪಾಯಿ ಆಸ್ತಿ ಘೋಷಿಸಿದ್ದಾರೆ. ನಾವು ಒಪ್ಪಿಕೊಂಡ ಪ್ರಜಾಪ್ರಭುತ್ವ ತತ್ವದಲ್ಲಿ ದುಡ್ಡಿದ್ದವನೂ, ಕಡುಬಡವನೂ ಚುನಾವಣೆಯಲ್ಲಿ ಸ್ಪರ್ಧಿಸಿ, ಜನಪ್ರತಿನಿಧಿಯಾಗುವ ಸ್ವಾತಂತ್ರ್ಯ ಇದೆ.ಆದರೆ ಈ ರೀತಿಯ ಕುಬೇರರ ಸಾಮ್ರಾಜ್ಯದ ನಡುವೆ, ಎಲ್ಲ ನೀತಿನಿಯಮಗಳೂ ಮಣ್ಣುಪಾಲಾಗಿವೆ.

ಐಶ್ವರ್ಯವೇ ಇಂದು ಆಡಳಿತ ನಡೆಸುತ್ತಿದೆ. ಚುನಾವಣಾ ಆಯೋಗ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು 16 ಲಕ್ಷರೂಪಾಯಿಗಳಿಗೆ ಮಿತಿಗೊಳಿಸಿದೆ. ಆದರೆ ಅಭ್ಯರ್ಥಿಗಳು ಈಗಾಗಲೇ ಕೋಟಿಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದ್ದಾರೆ.ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಕೋಟ್ಯಂತರ ರೂಪಾಯಿಗಳನ್ನು ವಶಪಡಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿ.ಇಂತಹ ಕುಬೇರ ಅಭ್ಯರ್ಥಿಗಳು ಪಕ್ಷದ ಟಿಕೆಟ್‌ಗಳನ್ನೂ ಖರೀದಿಸುತ್ತಾರೆ ಎನ್ನುವುದೂ ಈಗ ಮತ್ತೊಂದು ಬೆಳವಣಿಗೆ. ರಾಷ್ಟ್ರೀಯ ಪಕ್ಷದ ಅಧ್ಯಕ್ಷರು ಹಾಗೂ ಮತ್ತೊಬ್ಬ ನಾಯಕರು ಟಿಕೆಟ್‌ಗಳನ್ನು ಮಾರಿಕೊಂಡಿದ್ದಾರೆ ಎಂದು ಮಾಜಿ ಸಚಿವರೊಬ್ಬರೇ ಆಪಾದನೆ ಮಾಡಿರುವುದನ್ನು ಗಮನಿಸಿದರೆ ಇವರೆಲ್ಲಾ ಮತದಾರರನ್ನೇ ಖರೀದಿಸುವ ಹುನ್ನಾರ ನಡೆಸಿರುವಂತೆ ತೋರುತ್ತದೆ.ದುಡ್ಡಿದ್ದರೆ ಮಾತ್ರ ಚುನಾವಣೆ ಎನ್ನುವ ಭ್ರಮೆಯನ್ನು ಇಂದಿನ ಚುನಾವಣೆ ಹುಟ್ಟುಹಾಕಿರುವುದೊಂದು ವಿಪರ್ಯಾಸ. ಪ್ರಾಮಾಣಿಕತೆಯೇ ಅರ್ಹತೆಯಾಗಬೇಕಿದ್ದ ಕಣ, ಕುಬೇರರ ತಾಣವಾಗಿರುವುದು ಪ್ರಜಾಪ್ರಭುತ್ವದ ಅಣಕ.

ಪ್ರತಿಕ್ರಿಯಿಸಿ (+)