ಬುಧವಾರ, ನವೆಂಬರ್ 20, 2019
27 °C

ಕುಬೇರರ ನಡುವೆ ಕುಚೇಲರೂ ಕಣಕ್ಕೆ

Published:
Updated:

ಹುಬ್ಬಳ್ಳಿ: ಬಯಲುಸೀಮೆಯ ನಾಡು ಬರದ ನಾಡು ಎಂದೆಲ್ಲ ಕರೆಯಿಸಿಕೊಳ್ಳುವ ಉತ್ತರ ಕರ್ನಾಟಕದ  ಪ್ರಮುಖ ಕ್ಷೇತ್ರವಾದ ಧಾರವಾಡ ಜಿಲ್ಲೆಯಲ್ಲಿ ಚುನಾವಣಾ ಕಣಕ್ಕೆ ನಿಂತಿರುವ ಅಭ್ಯರ್ಥಿಗಳ ಸಂಪತ್ತಿಗೆ ಮಾತ್ರ ಬರ ಬಂದಿಲ್ಲ. ಚುನಾವಣೆಯಿಂದ ಚುನಾವಣೆಗೆ ಅಭ್ಯರ್ಥಿಗಳ ಆಸ್ತಿ ದುಪ್ಪಟ್ಟಾಗಿವೆ.ಚುನಾವಣಾ ಕಣದಲ್ಲಿ ಶತಕೋಟಿ ಅಧಿಪತಿ, ಕೋಟ್ಯಧಿಪತಿ, ಲಕ್ಷಾಧೀಶರೇ ತುಂಬಿದ್ದಾರೆ. ಇಂತಹ ಕುಬೇರ ಅಭ್ಯರ್ಥಿಗಳ ನಡುವೆ ಅಲ್ಲೊಂದು ಇಲ್ಲೊಂದು  ಕುಚೇಲ ಅಭ್ಯರ್ಥಿಗಳೂ ಇದ್ದಾರೆ.ಜಿಲ್ಲೆಯ ಅಭ್ಯರ್ಥಿಗಳಲ್ಲಿ ಅತಿ ಹೆಚ್ಚಿನ ಆಸ್ತಿ ಘೋಷಣೆ ಮಾಡಿದವರಲ್ಲಿ ಕಲಘಟಗಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಂತೋಷ ಲಾಡ್. ಅವರ ಸ್ಥಿರಾಸ್ತಿ, ಚರಾಸ್ತಿ ಮೌಲ್ಯ ರೂ 205 ಕೋಟಿ.  ನಂತರದ ಸ್ಥಾನ ಧಾರವಾಡ ಪಶ್ಚಿಮ ಕ್ಷೇತ್ರದ ಅಭ್ಯರ್ಥಿ ಉದ್ಯಮಿ ಅರವಿಂದ ಬೆಲ್ಲದ ಅವರದ್ದು. ಅವರ ಆಸ್ತಿಯ ಮೌಲ್ಯ ರೂ 37.83 ಕೋಟಿ. ಮೂರನೆಯ ಸ್ಥಾನದಲ್ಲಿರುವವರು ಇದೇ ಮೊದಲ ಬಾರಿಗೆ ಕಣಕ್ಕಿಳಿದಿರುವ ಜೆಡಿಎಸ್ ಅಭ್ಯರ್ಥಿ ರಿಯಲ್ ಎಸ್ಟೇಟ್ ಉದ್ಯಮಿ ತಬ್ರೇಜ್ ಸಂಶಿ. ಅವರ  ಆಸ್ತಿ ರೂ36.48 ಕೋಟಿ. ಇನ್ನುಳಿದಂತೆ ಹಲವಾರು ಕೋಟ್ಯಧಿಪತಿ ಅಭ್ಯರ್ಥಿಗಳು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿದ್ದಾರೆ.ಶೆಟ್ಟರ್ ಆಸ್ತಿ ನಾಲ್ಕು ಪಟ್ಟು ಹೆಚ್ಚು:  ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಐದನೆ ಬಾರಿ ಶಾಸಕ ಸ್ಥಾನವನ್ನು ಅಲಂಕರಿಸಲು ಕಣಕ್ಕಿಳಿದಿರುವ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆಸ್ತಿ  2008ರಲ್ಲಿ ರೂ 1.18 ಕೋಟಿ.  ಪ್ರಸ್ತುತ 2013ರಲ್ಲಿ 5ನೇ ಬಾರಿ ಕಣಕ್ಕಿಳಿದಿರುವ ಶೆಟ್ಟರ್ ಸಲ್ಲಿಸಿದ ಅಫಿಡವಿತ್‌ನಲ್ಲಿ  ತಮ್ಮ ಒಟ್ಟಾರೆ ಆಸ್ತಿ ಮೌಲ್ಯ ರೂ4.44 ಕೋಟಿ ಎಂದು ಘೋಷಿಸಿದ್ದಾರೆ.ಇನ್ನು ಕಾಂಗ್ರೆಸ್‌ನಿಂದ ಇದೇ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಿರುವ ಡಾ.ಮಹೇಶ ನಾಲ್ವಾಡರ ಆಸ್ತಿ ರೂ4.75 ಕೋಟಿ. ಆದರೆ ಇವರೆಲ್ಲರಿಗಿಂತ ಹೆಚ್ಚಿನ ಆಸ್ತಿ ಜೆಡಿಎಸ್ ಅಭ್ಯರ್ಥಿ ತಬ್ರೇಜ್ ಸಂಶಿಯವರದ್ದು. ಅವರು ರೂ 36.48ಕೋಟಿ ಆಸ್ತಿ ಹೊಂದಿದ್ದಾರೆ.ಹು-ಧಾ ಪೂರ್ವದಲ್ಲಿ ಕುಬೇರರು ಕಾಣುತ್ತಿಲ್ಲ. ಆದರೂ ಪ್ರಮುಖ ಪಕ್ಷದವರು ಕೋಟ್ಯಧಿಪತಿಗಳೇ. ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ ಅಬ್ಬಯ್ಯ ಆಸ್ತಿ ರೂ 1.12 ಕೋಟಿ. ಜೆಡಿಎಸ್ ಅಭ್ಯರ್ಥಿ ಅಲ್ಕೋಡು ಹನುಮಂತಪ್ಪ ಆಸ್ತಿ ರೂ2 ಕೋಟಿ, ವೀರಭದ್ರಪ್ಪ ಹಾಲಹರವಿ ಆಸ್ತಿ ರೂ 95 ಲಕ್ಷ.ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಅಭ್ಯರ್ಥಿ ಅರವಿಂದ ಬೆಲ್ಲದರ ಆಸ್ತಿಯ ಮುಂದೆ ಇತರೆ ಅಭ್ಯರ್ಥಿಗಳ ಆಸ್ತಿ ಅಷ್ಟು ದೊಡ್ಡಮಟ್ಟದಲ್ಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಎಸ್.ಆರ್. ಮೋರೆ ಆಸ್ತಿ ರೂ 5.90 ಕೋಟಿ.ಧಾರವಾಡ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ  ವಿನಯ ಕುಲಕರ್ಣಿ (ಕಾಂಗ್ರೆಸ್) ರೂ4.06 ಕೋಟಿ ಒಡೆಯ. ಬಿಜೆಪಿಯ ಸೀಮಾ ಮಸೂತಿ ಆಸ್ತಿ ರೂ 47.50 ಲಕ್ಷ. ಕೆಜೆಪಿ ಅಭ್ಯರ್ಥಿ ತವನಪ್ಪ ಅಷ್ಟಗಿ,ಅಮೃತ ದೇಸಾಯಿ ಇವರೆಲ್ಲ ಲಕ್ಷಾಧಿಪತಿಗಳು.ನವಲಗುಂದ ಬಿಜೆಪಿ ಅಭ್ಯರ್ಥಿ ಶಂಕರ ಪಾಟೀಲ ಮುನೇನಕೊಪ್ಪ ಆಸ್ತಿ ರೂ 5 ಕೋಟಿ., ಕೆ.ಎನ್.ಗಡ್ಡಿ ಆಸ್ತಿ ರೂ 2 ಕೋಟಿ, ಜೆಡಿಎಸ್ ಅಭ್ಯರ್ಥಿ ಎನ್.ಎಚ್. ಕೋನರಡ್ಡಿ ಆಸ್ತಿ ರೂ 2 ಕೋಟಿ.  ಇವರೆಲ್ಲರ ನಡುವೆ ಕಣಕ್ಕಿಳಿದಿರುವ ಕೆಲವು ಪಕ್ಷೇತರ ಅಭ್ಯರ್ಥಿಗಳ ಆಸ್ತಿ ಕೂಡ ಲಕ್ಷ ಲಕ್ಷ. ಪಕ್ಷೇತರ ಅಭ್ಯರ್ಥಿ  ಮನೋಜ ಹಾನಗಲ್ ಆಸ್ತ ರೂ 50 ಲಕ್ಷ.  ಸೈಯ್ಯದ್ ತೋರಗಲ್ ರೂ 1.50 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.ಬಿಎಸ್‌ಪಿ ಅಭ್ಯರ್ಥಿ ಆಟೋ ಚಾಲಕ ವೃತ್ತಿ ಮಾಡುತ್ತಿರುವ ನಿಂಗಪ್ಪ ಪೀರಪ್ಪ ಮರಗಾನೂರ ಆಸ್ತಿ ರೂ 5 ಲಕ್ಷ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್  ಅಭ್ಯರ್ಥಿ ಅಜೀನಾಜ್ ಮೋಮಿನ್ ಆಸ್ತಿ ರೂ 41 ಸಾವಿರ ಇದೆ.ಇವರು ಕುಚೇಲ ಅಭ್ಯರ್ಥಿ

ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿನ ಘಟಾನುಘಟಿ ಅಭ್ಯರ್ಥಿಗಳ ನಡುವೆ  ಚಾಮುಂಡೇಶ್ವರಿ ನಗರದ ನಿವಾಸಿ ಬಳ್ಳಾರಿ ಸುಂಕಪ್ಪ ಬಾಬು (35) ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ವೃತ್ತಿಯಲ್ಲಿ ಮನೆಗಳಿಗೆ ಸುಣ್ಣಬಣ್ಣ ಬಳಿಸುವ ಕೆಲಸ ಮಾಡುತ್ತಿರುವ ಈ ಅಭ್ಯರ್ಥಿಗೆ ಆಸ್ತಿ-ಪಾಸ್ತಿ ಏನೂ ಇಲ್ಲ.ನಾಮಪತ್ರದಲ್ಲಿ ಘೋಷಿಸಿರುವಂತೆ ಇವರ ಕೈಯ್ಯಲ್ಲಿರುವ ನಗದು ರೂ 25 ಸಾವಿರ ಮಾತ್ರ. ಪತ್ನಿ ಸುನಿತಾ ಬಳಿ  30 ಗ್ರಾಂ ಬಂಗಾರವಿದೆ. ಹುಬ್ಬಳ್ಳಿ ಲ್ಯಾಮಿಂಗ್ಟನ್ ಸ್ಕೂಲ್‌ನಲ್ಲಿ 8ನೇ ತರಗತಿ ಓದಿರುವ ಇವರು ಸ್ನೇಹಿತರ ಸಹಾಯದಿಂದ ಚುನಾವಣಾ ವೆಚ್ಚವನ್ನು ಭರಿಸುವುದಾಗಿ ಹೇಳುತ್ತಾರೆ. ಇವರಿಗೆ ಬಿ.ಶ್ರೀರಾಮಲು ವ್ಯಕ್ತಿತ್ವ ಇಷ್ಟವಾಗಿರುವ ಕಾರಣ ಅವರ ಪಕ್ಷ ಸೇರಿದ್ದಾಗಿ `ಪ್ರಜಾವಾಣಿ'ಗೆ ತಿಳಿಸಿದರು.`ನಾನು  ಈ ಹಿಂದೆ ಬಿಜೆಪಿ, ಕಾಂಗ್ರೆಸ್ ಹೀಗೆ ಕೆಲ ಪಕ್ಷದಲ್ಲಿ ಸಣ್ಣಪುಟ್ಟ ಕೆಲಸ ಮಾಡಿದ್ದೇನೆ. ಆದರೆ ಶ್ರೀರಾಮಲು ಅವರಂತಹ ವ್ಯಕ್ತಿ ಅಪರೂಪ. ಅವರಿಗೆ ಕೂಡ ನಾನು ಕೆಲಸ ಮಾಡುವ ರೀತಿ ಇಷ್ಟವಾಗಿದ್ದು ನನಗೆ ಈಕ್ಷೇತ್ರದ ಟಿಕೆಟ್ ನೀಡಿದರು' ಎನ್ನುತ್ತಾರೆ.`ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸ್ಪರ್ಧಿಸಲು ಹಿಂಜರಿಕೆಯೇನೂ ಆಗುತ್ತಿಲ್ಲ. ನನಗೂ ಸಾಕಷ್ಟು ಜನಬೆಂಬಲವಿದೆ. ಸಾಕಷ್ಟು ಸಂಘಟನೆ ಕೂಡ ಮಾಡುತ್ತಿದ್ದೇನೆ' ಎನ್ನುವ ಅವರು `ಬಡವರಿಗೆ ಸಹಾಯ ಮಾಡುವವರು ಯಾರೂ ಇಲ್ಲ. ಅದಕ್ಕೆ ಕಣಕ್ಕಿಳಿದಿದ್ದೇನೆ' ಎನ್ನುತ್ತಾರೆ.ಕೋಟ್ಯದಿಪತಿ ಅಭ್ಯರ್ಥಿಗಳು

 ಸಂತೋಷ ಲಾಡ್ (ಕಾಂಗ್ರೆಸ್)  ರೂ 205 ಕೋಟಿ

 ಅರವಿಂದ ಬೆಲ್ಲದ (ಜೆಡಿಎಸ್) ರೂ 37.83 ಕೋಟಿ

 ತಬ್ರೇಜ್ ಸಂಶಿ (ಕಾಂಗ್ರೆಸ್) ರೂ 36.48ಕೋಟಿ 

ಎಸ್.ಆರ್.ಮೋರೆ (ಕಾಂಗ್ರೆಸ್)ರೂ 5.90ಕೋಟಿ

ಶಂಕರ ಪಾಟೀಲ ಮುನೇನಕೊಪ್ಪ (ಬಿಜೆಪಿ) ರೂ 5ಕೋಟಿ 

ಡಾ.ಮಹೇಶ ನಾಲ್ವಾಡ (ಕಾಂಗ್ರೆಸ್) ರೂ 4.75ಕೋಟಿ

 ಜಗದೀಶ ಶೆಟ್ಟರ್ (ಬಿಜೆಪಿ) ರೂ 4.44ಕೋಟಿ

 ವಿನಯ ಕುಲಕರ್ಣಿ (ಕಾಂಗ್ರೆಸ್) ರೂ 4.06 ಕೋಟಿ

 ನಾಗರಾಜ ತಿಗಡಿ (ಲೋಕಸತ್ತಾ) ರೂ 2.64 ಕೋಟಿ

 ಕೆ.ಎನ್.ಗಡ್ಡಿ (ಕಾಂಗ್ರೆಸ್) ರೂ 2 ಕೋಟಿ

 ಎನ್.ಎಚ್.ಕೋನರಡ್ಡಿ (ಜೆಡಿಎಸ್) ರೂ 2ಕೋಟಿ 

ಅಲ್ಕೋಡು ಹನುಮಂತಪ್ಪ (ಜೆಡಿಎಸ್) ರೂ 1.43 ಕೋಟಿ

 ಪ್ರಸಾದ ಅಬ್ಬಯ್ಯ (ಕಾಂಗ್ರೆಸ್) ರೂ 1.12 ಕೋಟಿ

ಪ್ರತಿಕ್ರಿಯಿಸಿ (+)