ಬುಧವಾರ, ಅಕ್ಟೋಬರ್ 16, 2019
21 °C

ಕುಮಟಾದ ಕುಂಭೇಶ್ವರ

Published:
Updated:

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಮಧ್ಯವರ್ತಿ ತಾಲ್ಲೂಕು ಕುಮಟಾದ ಮೂಲ ಹೆಸರು `ಕುಂಭಾಪುರ~. ಶಿವನ ಸ್ವರೂಪವಾದ ಕುಂಭೇಶ್ವರ ಇಲ್ಲಿನ ಮುಖ್ಯ ದೇವರು.

ಕುಂಭಾಪುರ, ಕುಂಭೇಶ್ವರ ಎನ್ನುವ ಹೆಸರಿಗೆ ತನ್ನದೇ ಆದ ಪುಟ್ಟ ಐತಿಹ್ಯವೂ ಇದೆ.ಪ್ರಾಚೀನ ಕಾಲದಲ್ಲಿ  ತ್ರೈಗರ್ತಕ ದೇಶಕ್ಕೆ ಸೇರಿತ್ತು ಎನ್ನಲಾದ ಕುಮಟಾವನ್ನು ಕುಂಭಾಸುರ ಎನ್ನುವ ಅರಸ ಆಳುತ್ತಿದ್ದ. ಈತ ತಪಸ್ಸು ಮಾಡಿ ಬ್ರಹ್ಮನನ್ನು ಒಲಿಸಿ ವರ ಪಡೆದು ದೇವತೆಗಳನ್ನು ಪೀಡಿಸತೊಡಗಿದ. ಇವನ ಪೀಡನೆ ಸಹಿಸಲಾಗದ ದೇವತೆಗಳೆಲ್ಲ ಸೇರಿ ಆದಿಮಾಯೆಯಾದ ದೇವಿಯ ಬಳಿ ಹೋಗಿ ಮೊರೆಯಿಡುತ್ತಾರೆ.ಸರ್ವಶಕ್ತಳಾದ ದೇವಿ ಕುಂಭಾಸುರನನ್ನು ಕೊಂದು ಲಿಂಗದಲ್ಲಿ ಐಕ್ಯಳಾಗುತ್ತಾಳೆ. ಅಂದಿನಿಂದ `ಕುಂಭೇಶ್ವರ~ ಹೆಸರಿನಲ್ಲಿ  ಶಿವ ಈ ಊರಿನ ಆರಾಧ್ಯ ದೈವವಾದ. ಕುಮಟಾಕ್ಕೆ `ಕುಂಭಾಪುರ~ ಎನ್ನುವ ಹೆಸರು ಬಂದದ್ದು ಹೀಗೆ ಎಂಬ ಬಗ್ಗೆ ಮಾಹಿತಿ ದೊರೆಯುತ್ತವೆ.  ಅಘನಾಶಿನಿ ರಸ್ತೆಯಲ್ಲಿನ ಕುಂಭೇಶ್ವರ ದೇವಸ್ಥಾನದ ಗರ್ಭಗುಡಿಯೊಳಗಿನ ಶಿವಲಿಂಗ ಕುಂಭಾಕಾರದಲ್ಲಿ ಇರುವುದು ವಿಶೇಷ. ಮೂರಡಿ ಉದ್ದ- ಅಗಲದ ಪಾಣಿ ಪೀಠದ ಮೇಲೆ ಮೂರಡಿ ಸುತ್ತಳತೆ ಹಾಗೂ ಎತ್ತರದ ಲಿಂಗ ತ್ರೀ ತತ್ವದ ಮಹತ್ವ ಸೂಚಿಸುತ್ತದೆ. ದೇವಾಲಯದ ಎಡ ಭಾಗದ ಪರಿಸರದಲ್ಲಿರುವ ದತ್ತಾತ್ರೆಯ ಪಾದುಕೆಗೆ ನೂರಾರು ವರ್ಷಗಳ ಇತಿಹಾಸವಿದೆ.  ಕುಂಭೇಶ್ವರನ ಅಭಿಷೇಕದ ಜಲವನ್ನು ವೃಕ್ಷ ಮೂಲಕ್ಕೆ ಎರೆದರೆ ಆ ವೃಕ್ಷ ಫಲಭರಿತವಾಗುತ್ತದೆ ಎನ್ನವುದು ಭಕ್ತರ ನಂಬಿಕೆ.1873ರ ಹೊತ್ತಿಗೆ ಕುಂಭೇಶ್ವರ ದೇವಾಲಯದ ಜವಾಬ್ದಾರಿ ಹೊತ್ತಿದ್ದ ಸೂರಮ್ಮ ಎನ್ನುವಾಕೆ ನಂತರ ಅದನ್ನು ದಿ. ಗಣಪಯ್ಯ ನಾರಾಯಣ  ಭಟ್ಟ ಎನ್ನುವವರಿಗೆ ಒಪ್ಪಿಸಿದಳು ಎನ್ನುವ ಕೈಬರಹದ ಮಾಹಿತಿ ಲಭ್ಯವಾಗಿದೆ. ಯುಗಾದಿ, ಮಹಾಶಿವರಾತ್ರಿ ಹಾಗೂ ಶ್ರಾವಣ ಮಾಸದಲ್ಲಿ  ಕುಂಭೇಶ್ವರನಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ.

  

ಅಭಿಷೇಕಕ್ಕೆ ಬರೀ 80 ಪೈಸೆ

ಈ ದೇವಾಲಯದ ಇನ್ನೊಂದು ವಿಶೇಷ ಎಂದರೆ ಅಭಿಷೇಕ ಪ್ರಿಯ ಕುಂಭೇಶ್ವರನ ಅಭಿಷೇಕ ಸೇವೆಯ ದರ ಕೇವಲ ಎಂಬತ್ತು ಪೈಸೆ. ಇದರ ಹೊರತಾಗಿ ವಿವಿಧ ಧಾರ್ಮಿಕ ಪೂಜೆಗಳಿಗೂ ಅವಕಾಶವಿದೆ.

 

Post Comments (+)