ಕುಮಟಾ: ಪ್ರತಿಭಟನೆಗೆ ಮಣಿದು ರಸ್ತೆ ದುರಸ್ತಿ ಭರವಸೆ

7

ಕುಮಟಾ: ಪ್ರತಿಭಟನೆಗೆ ಮಣಿದು ರಸ್ತೆ ದುರಸ್ತಿ ಭರವಸೆ

Published:
Updated:

ಕುಮಟಾ: ಕುಮಟಾದಿಂದ ಅಘನಾಶಿನಿ ವರೆಗಿನ ಸುಮಾರು 15 ಕಿ.ಮೀ. ರಸ್ತೆ ತೀರಾ ಹಾಳಾಗಿದ್ದು ಸಂಚಾರಕ್ಕೆ ನಡೆಸಲು ಪರದಾಡುತ್ತಿರುವುದನ್ನು ಪ್ರತಿಭಟಿಸಿ ರಾಜ್ಯ ಕಾಂಗ್ರೆಸ್ ಸೇವಾದಳ ಪದಧಿಕಾರಿ ಆರ್ ಎಚ್ ನಾಯ್ಕ ನೇತೃತ್ವದಲ್ಲಿ ಈಚೆಗೆ  ಬಾಡದಲ್ಲಿ ಸಾರ್ವಜನಿಕರ ವತಿಯಿಂದ ರಸ್ತೆ ತಡೆ ನಡೆಸಲಾಯಿತು. ರಸ್ತೆಯ ಎರಡು ಕಡೆ ವಾಹನಗಳನ್ನು ತಡೆದು ನಿಲ್ಲಿಸಿ ಲೋಕೋಪಯೋಗಿ ಇಲಾಖೆ  ಅಧಿಕಾರಿ ಸ್ಥಳಕ್ಕೆ ಬರುವರೆಗೂ ಪ್ರತಿಭಟನೆ ನಡೆಸಲಾಯಿತು. ಊರಿನ ನೂರಾರು ನಾಗರಿಕರು, ಎಲ್ಲ ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ` ಕುಮಟಾ ತಾಲ್ಲೂಕಿನಲ್ಲಿ ಸಾರಿಗೆ ಇಲಾಖೆಗೆ ಅತಿ ಹೆಚ್ಚು ಆದಾಯ ಸಂಗ್ರಹವಾಗುವ ಕುಮಟಾ- ಅಘನಾಶಿನಿ ಮಾರ್ಗದ ರಸ್ತೆ ಹಾಳಾಗಿದ್ದು, ನಿತ್ಯ  ನೂರಾರು ಜನರು ಸಂಚಾರಕ್ಕಾಗಿ ಪರದಾಡುವಂತಾಗಿದೆ. ಸಂಚಾರದ ಅಗತ್ಯಕ್ಕೆ ತಕ್ಕಂತೆ ಇಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ರೀತಿಯಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ~ ಎಂದು  ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎ.ಪಾಟೀಲ ಅವರಿಗೆ ಆರ್. ಎಚ್. ನಾಯ್ಕ ಸಾರ್ವಜನಿಕರ ಪರವಾಗಿ ಮನವಿ ನೀಡಿದರು.ಮನವಿ ಸ್ವೀಕರಿಸಿದ ಪಾಟೀಲ, `ಕುಮಟಾ-ಅಘನಾಶಿನಿ ರಸ್ತೆಯ ಆರಂಭದ ಎರಡೂವರೆ ಕಿ.ಮೀ.ಗೆ ಡಾಂಬರು ಕಾಮಗಾರಿ ಆಗಲೇ ಮಂಜೂರಾಗಿದ್ದು, ಕೆಲ ದಿವಸಗಳಲ್ಲಿ ಕಾಮಗಾರಿ ನಡೆಯಲಿದೆ. ಉಳಿದ  ಹಾಳಾದ ಭಾಗವನ್ನು ಸದ್ಯವೇ ತಾತ್ಕಾಲಿಕವಾಗಿ ದುರಸ್ತಿ ಮಾಡಿಕೊಡಲಾಗುವುದು~ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ  ಜಿ.ಪಂ.ಸದಸ್ಯೆ ಲಲಿತಾ ಪಟಗಾರ, ತಾ.ಪಂ. ಸದಸ್ಯೆ ವೀಣಾ ಭಟ್ಟ, ಸ್ಥಳೀಯರಾದ ವಿ.ಟಿ. ನಾಯ್ಕ, ಡಿ.ಎಚ್.ಪಟಗಾರ, ವಿ.ಎಲ್.ನಾಯ್ಕ, ಬಾಬು ನಾಯ್ಕ, ಜಗನ್ನಾಥ ನಾಯ್ಕ, ಜನಾರ್ದನ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ, ಪಂಚಾಯಿತಿ ಅಧ್ಯಕ್ಷರಾದ  ನಿರ್ಮಲಾ ನಾಯ್ಕ, ಈಶ್ವರ ಪಟಗಾರ ಹಾಗೂ ಆರ್.ಬಿ.ನಾಯ್ಕ, ಪರಮೇಶ್ವರ ನಾಯ್ಕ  ಮೊದಲಾದವರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry