ಕುಮಾರಧಾರೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯನಿಗೆ ಅವಭೃತೋತ್ಸವ

7

ಕುಮಾರಧಾರೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯನಿಗೆ ಅವಭೃತೋತ್ಸವ

Published:
Updated:

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಚಂಪಾಷಷ್ಠಿ ಮಹೋತ್ಸವದ ಪ್ರಯುಕ್ತ ಮಾರ್ಗಶಿರ ಶುದ್ಧ ಸಪ್ತಮಿ ಬುಧವಾರ ಬೆಳಿಗ್ಗೆ ಕುಮಾರಧಾರ ನದಿಯಲ್ಲಿ ದೇವರಿಗೆ ನೌಕಾವಿಹಾರ ನಡೆಯಿತು. ಪಾವನ ತೀರ್ಥದಲ್ಲಿ ಸುಬ್ರಹ್ಮಣ್ಯ ದೇವರ ಅವಭೃತೋತ್ಸವ ನಡೆಯಿತು. ದೇವಳದ ಪ್ರಧಾನ ಅರ್ಚಕ ಕೇಶವ ಜೋಗಿತ್ತಾಯರು ಅವಭೃತದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.ಬೆಳಿಗ್ಗೆ ದೇವಳದ ದ್ವಾದಶಿ ಮಂಟಪದಲ್ಲಿ ಓಕುಳಿ ಪೂಜೆ ನಡೆಯಿತು. ಬಳಿಕ ದೇವರನ್ನು ಪಲ್ಲಕ್ಕಿಯಲ್ಲಿ ರಥಬೀದಿಗೆ ತಂದು, ಬಂಡಿ ರಥದಲ್ಲಿ ಅವಭೃತೋತ್ಸವ ಸವಾರಿ ನಡೆಯಿತು. ಬಿಲದ್ವಾರದ ಕಟ್ಟೆಯಲ್ಲಿ ಕಟ್ಟಪೂಜೆ ನೆರವೇರಿತು. ಬಳಿಕ ಕುಮಾರಧಾರ ನದಿಯ ಮತ್ಸ್ಯತೀರ್ಥದಲ್ಲಿ ತಳಿರು-ತೋರಣ, ಹೂವುಗಳಿಂದ ಸಿಂಗರಿಸಲ್ಪಟ್ಟ ತೆಪ್ಪದಲ್ಲಿ ಸುಬ್ರಹ್ಮಣ್ಯನ ನೌಕಾವಿಹಾರ ನಡೆಯಿತು. ಕುಮಾರಧಾರೆಯ ಜಳಕದಗುಂಡಿಯಲ್ಲಿ ವೈದಿಕರ ಮಂತ್ರ ಘೋಷದೊಂದಿಗೆ  ಅವಭೃತೋತ್ಸವ ಸಂಪನ್ನವಾಯಿತು.ದೇವರ ಜಳಕದ ಬಳಿಕ ಕುಮಾರಧಾರ ನದಿತೀರದ ಅವಭೃತಕಟ್ಟೆಯಲ್ಲಿ ವಿಶೇಷ ಕಟ್ಟೆಪೂಜೆ ನೆರವೇರಿತು. ನಂತರ ದೇವಳಕ್ಕೆ ಹೊರಟಾಗ ಭಕ್ತರು ಆರತಿ, ಹೂವು, ಹಣ್ಣುಕಾಯಿ ದೇವರಿಗೆ ಸಮರ್ಪಿಸಿದರು. ಬಳಿಕ ದೇವಳದ ಹೊರಾಂಗಣದಲ್ಲಿರುವ ದಶಮಿ ಮಂಟಪದಲ್ಲಿ ದೇವರಿಗೆ ಪೂಜೆ ಮತ್ತು ಒಳಾಂಗಣದಲ್ಲಿ ಸಮಾಪನ ಪೂಜೆ ಹಾಗೂ ವಸಂತಪೂಜೆ ನೆರವೇರಿತು. ಭಕ್ತರಿಗೆ ಫಲಾಹಾರ ಪ್ರಸಾದ ಮತ್ತು ಪಾನಕ ವಿತರಿಸಲಾಯಿತು.ಸಾವಿರಾರು ಭಕ್ತರು ಭಕ್ತಿ, ಶ್ರದ್ಧೆಯಿಂದ ದೇವರೊಂದಿಗೆ ಅವಭೃತ ಸ್ನಾನ ಮಾಡಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ, ಸದಸ್ಯರಾದ ತಳೂರು ಚಂದ್ರಶೇಖರ್, ಸುಬ್ರಹ್ಮಣ್ಯ ಭಟ್, ಕಿಶೋರ್ ಶಿರಾಡಿ, ಮೋನಪ್ಪ ಮಾನಾಡು, ಮೋಹನ್ ರಾಂ ಸುಳ್ಳಿ, ವನಜಾ.ವಿ.ಭಟ್, ಯಮುನಾ ಎಸ್ ರೈ, ಕಾರ್ಯ ನಿರ್ವಹಣಾಧಿಕಾರಿ ಎಚ್.ಎಂ.ಕಾಳಿ, ರವೀಂದ್ರ ಮೊದಲಾದವರು ಉಪಸ್ಥಿತರಿದ್ದರು.ಪಾನೀಯ ವಿತರಣೆ: ದೇವರು ಅವಭೃತ ಸ್ನಾನ ಮುಗಿಸಿ ಕುಮಾರಧಾರೆಯಿಂದ ದೇವಳಕ್ಕೆ ಆಗಮಿಸುವ ಸಂದರ್ಭದಲ್ಲಿ ಸ್ಥಳೀಯ ಭಕ್ತರು ಶರಬತ್ತು, ಪಾನಕ, ಮಜ್ಜಿಗೆ ಎಳನೀರನ್ನು ವಿತರಿಸಿದರು. ಹೋಟೇಲ್ ರಾಘವೇಂದ್ರ ಪ್ರಸಾದ್‌ನಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಹಣ್ಣುಗಳಿಂದ ತಯಾರಿಸಿದ ತಂಪು ಪಾನೀಯ ವಿತರಿಸಲಾಯಿತು. ಹೋಟೇಲ್ ಕುಮಾರಕೃಪ, ಕುಕ್ಕೆಶ್ರಿ ಅಟೋ ರಿಕ್ಷಾ ಚಾಲಕ- ಮಾಲಕ ಸಂಘ, ಖಾಸಗಿ ಟ್ಯಾಕ್ಸಿ ಮಾಲಕ ಚಾಲಕ ಸಂಘ, ಉದ್ಯಮಿಗಳಾದ ರವೀಂದ್ರ.ಕೆ ಸುಬ್ರಹ್ಮಣ್ಯ ಮತ್ತು ಶಶಿಧರ್, ಜಯಪ್ರಕಾಶ್ ಆರ್.ವಿ ಮೊದಲಾದವರು ತಂಪು ಪಾನೀಯ, ಪಾನಕ ವಿತರಿಸಿದರು.ಇದೇ 25ರಂದು ಮಾರ್ಗಶಿರ ಶುದ್ಧ ದ್ವಾದಶಿಯಂದು ಕೊಪ್ಪರಿಗೆ ಇಳಿಯುವುದರೊಂದಿಗೆ ವಾರ್ಷಿಕ ಚಂಪಾಷಷ್ಠಿ ಜಾತ್ರೆ ಮುಕ್ತಾಯಗೊಳ್ಳಲಿದೆ. ಆ ದಿವಸ ರಾತ್ರಿ ದೇವಳದ ಹೊರಾಂಗಣದಲ್ಲಿ ನೀರು ಬಂಡಿ ಉತ್ಸವ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry