ಬುಧವಾರ, ಜೂನ್ 16, 2021
22 °C
ಮಂಜುನಾಥ ಭಂಡಾರಿ ನಾಮಪತ್ರ ಸಲ್ಲಿಕೆ

ಕುಮಾರ್ ಸ್ಪರ್ಧೆ ಮಾಧ್ಯಮ ಸೃಷ್ಟಿ: ಕಿಮ್ಮನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಮಾರ್ ಸ್ಪರ್ಧೆ ಮಾಧ್ಯಮ ಸೃಷ್ಟಿ: ಕಿಮ್ಮನೆ

ಶಿವಮೊಗ್ಗ:  ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿಯಾಗಿ ಎಐಸಿಸಿ ಸದಸ್ಯ ಮಂಜುನಾಥ್ ಭಂಡಾರಿ, ಸಾವಿರಾರು ಕಾರ್ಯಕರ್ತರೊಂದಿಗೆ ಜಿಲ್ಲಾ ಚುನಾವಣಾಧಿಕಾರಿ ವಿಪುಲ್ ಬನ್ಸಲ್ ಅವರಿಗೆ ಬುಧವಾರ ನಾಮಪತ್ರ ಸಲ್ಲಿಸಿದರು.ನಾಮಪತ್ರ ಸಲ್ಲಿಸುವ ಮುನ್ನ ಚುನಾವಣಾ ಆಯೋಗದ ನಿರ್ದೇಶನದಂತೆ ಘೋಷಣಾ ಪ್ರಮಾಣ ಪತ್ರವನ್ನು ಚುನಾವಣಾಧಿಕಾರಿ ಸಮ್ಮುಖದಲ್ಲಿ ಭಂಡಾರಿ ಓದಿ ಹೇಳಿ, ಸಹಿ ಹಾಕಿದರು.ನಾಮಪತ್ರ ಸಲ್ಲಿಸುವಾಗ ಶಾಸಕ ಕೆ.ಬಿ.ಪ್ರಸನ್ನಕುಮಾರ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಪ್ರಸನ್ನಕುಮಾರ, ಭಂಡಾರಿ ಪುತ್ರಿ ದೀಕ್ಷಾ ಭಂಡಾರಿ, ಕಾನೂನು ಸಲಹೆಗಾರ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.ನಾಮಪತ್ರಕ್ಕೆ ಸೂಚಕರಾಗಿ ಶಾಸಕ ಪ್ರಸನ್ನಕುಮಾರ್ ಸಹಿ ಹಾಕಿದರು. ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ, ಕಾಂಗ್ರೆಸ್ ಮುಖಂಡರು, ಸಾವಿರಾರು ಬೆಂಬಲಿಗರೊಂದಿಗೆ ನಗರದ ಖಾಸಗಿ ಬಸ್ ನಿಲ್ದಾಣದ ಅಶೋಕ ವೃತ್ತದಿಂದ ಮಂಜುನಾಥ್ ಭಂಡಾರಿ ಮೆರವಣಿಗೆಯಲ್ಲಿ ಸಾಗಿ, ನಾಮಪತ್ರ ಸಲ್ಲಿಸಲು ಆಗಮಿಸಿದರು. ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.ನಂತರ ಅಭ್ಯರ್ಥಿ ಮಂಜುನಾಥ ಭಂಡಾರಿ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ.

ಅಸಮಾಧಾನಗೊಂಡಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರನ್ನು ಸಮಾಧಾನ ಪಡಿಸುವ ಯತ್ನಗಳು ನಡೆಯುತ್ತಿವೆ ಎಂದರು.

ಮುಂದಿನ ದಿನಗಳಲ್ಲಿ ಕುಮಾರ್ ಬಂಗಾರಪ್ಪ ತಮ್ಮ ಪರವಾಗಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ ಎಂದ ಅವರು, ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದ್ದು, ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗ ಬೇಕೆಂಬ ಉದ್ದೇಶ ಮತದಾರರಲ್ಲಿದೆ ಎಂದು ಅಭಿಪ್ರಾಯಪಟ್ಟರು.ಎದುರಾಳಿ ಯಾರಾದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಮತದಾರರು ಪ್ರಜ್ಞಾವಂತ ರಾಗಿದ್ದು ಯಾರಿಗೆ ಮತ ನೀಡಬೇಕು ಎಂಬುವುದರ ಅರಿವು ಅವರಿಗಿದೆ. ತಾವು ಯಾರ ವಿರುದ್ಧವೂ ಆರೋಪ ಮಾಡುವುದಿಲ್ಲ ಎಂದು ತಿಳಿಸಿದರು.  ಮೋದಿ ಅಲೆ ಇಲ್ಲ: ನಂತರ ಪ್ರಚಾರ ಸಭೆ ಉದ್ದೇಶಿಸಿ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಬಿಜೆಪಿ ಮೋದಿ, ಮೋದಿ ಎಂದು ಹೇಳುವ ಮೂಲಕ ಇಡೀ ದೇಶವನ್ನು ಹಾದಿ ತಪ್ಪುಸುತ್ತಿದೆ ಎಂದು ಟೀಕಿಸಿದರು.ಬಿಜೆಪಿ ಆಡಳಿತದಲ್ಲಿದ್ದಾಗ ಕೇವಲ ರೆಸಾರ್ಟ್ ರಾಜಕಾರಣದಲ್ಲಿ ಮುಳುಗಿ, ಜನತೆಯನ್ನು ಕಡೆಗಣಿಸಿತ್ತು. ಭ್ರಷ್ಟಚಾರ, ಹಗರಣಗಳಲ್ಲಿ ತೊಡಗಿ ಇಡೀ ರಾಜ್ಯದ ಖಜಾನೆ ಕೊಳ್ಳೆಹೊಡೆದಿತ್ತು ಎಂದು ದೂರಿದರು.ಮೋದಿ ದೇಶಕ್ಕೆ ಕಂಟಕ: ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ. ಬಿಜೆಪಿ, ಮೋದಿ ಅಲೆಯಿದೆ ಎಂದು ಬಿಂಬಿಸುವ ಮೂಲಕ ಜನರಿಗೆ ದ್ರೋಹ ಮಾಡುತ್ತಿದೆ ಎಂದರು.ಮೋದಿ, ಇಡೀ ದೇಶಕ್ಕೆ ಕಂಟಕ. ಅವರನ್ನು ಯಾವುದೇ ಕಾರಣಕ್ಕೂ ಪ್ರಧಾನಿ ಮಾಡಬಾರದು. ಅಂತಹ ದೃಢನಿರ್ಧಾರಗಳನ್ನು ದೇಶದ ಜನತೆ ಕೈಗೊಳ್ಳಬೇಕು ಎಂದು ಹೇಳಿದರು.ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ಟಿಕೆಟ್ ಸಿಗದ ಕಾರಣ ಅಸಮಾಧಾನ ಗೊಂಡಿದ್ದಾರೆ. ಅವರನ್ನು ಸಮಾಧಾನಪಡಿಸುವ ಕೆಲಸ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ. ಮಂಜುನಾಥ ಭಂಡಾರಿ ಪರವಾಗಿ ಮತ ಪ್ರಚಾರಕ್ಕೆ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಲೋಕಸಭಾ ಚುನಾವಣೆಯಲ್ಲಿ ಶೇ 100ಕ್ಕೆ 100ರಷ್ಟು ಮಂಜುನಾಥ ಭಂಡಾರಿ ಅವರು ಗೆಲುವು ಸಾಧಿಸಲಿದ್ದಾರೆ. ಸಿನಿಮಾ ಭ್ರಮಾಲೋಕದ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್, ಗತವೈಭವದ ಭ್ರಮಾಲೋಕದಲ್ಲಿರುವ ಬಿಜೆಪಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮತದಾರರು ನಂಬುವುದಿಲ್ಲ ಎಂದರು.ಕುಮಾರ್ ಬಂಗಾರಪ್ಪ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿ ಯುತ್ತಾರೆ ಎಂದು ಅಧಿಕೃತವಾಗಿ ಎಲ್ಲಿಯೂ ಹೇಳಿಲ್ಲ. ಅವರು ಬಂಡಾಯ ಅಭ್ಯರ್ಥಿಯಾಗಲಿದ್ದಾರೆ ಎಂಬುದು ಮಾಧ್ಯಮಗಳ ಸೃಷ್ಟಿ ಎಂದರು.ಪ್ರಚಾರ ಸಭೆಯಲ್ಲಿ ಎ.ಐ.ಸಿ.ಸಿ. ಸದಸ್ಯೆ ಬಲ್ಕಿಷ್ ಬಾನು, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಕೆಪಿಸಿಸಿ ಉಪಾಧ್ಯಕ್ಷ ಕೆ.ಕರಿಯಣ್ಣ, ಶಾಸಕ ಕೆ.ಬಿ. ಪ್ರಸನ್ನಕುಮಾರ, ಮಾಜಿ ಶಾಸಕ ಎಚ್.ಎಸ್. ಶಾಂತವೀರಪ್ಪಗೌಡ, ನಗರಪಾಲಿಕೆ ಮೇಯರ್ ಖುರ್ಷಿದಾ ಬಾನು, ಜಿ.ಪಂ.ಸದಸ್ಯ ಕಲಗೋಡು ರತ್ನಾಕರ ಮತ್ತಿತರರು ಉಪಸ್ಥಿತರಿದ್ದರು.ಇಂದು ‘ಬಿ’ಫಾರಂ ಸಲ್ಲಿಕೆ

ಕಾಂಗ್ರೆಸ್‌ ಅಭ್ಯರ್ಥಿ ಮಂಜುನಾಥ ಭಂಡಾರಿ ಗುರುವಾರ ಬಿ.ಫಾರಂ ಸಲ್ಲಿಸುವರು ಎಂದು ಪಕ್ಷ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಪ್ರಸನ್ನಕುಮಾರ್‌ ತಿಳಿಸಿದರು.

ಪಕ್ಷ ನೀಡುವ ಬಿ.ಫಾರಂ ಬುಧವಾರ ಸಂಜೆ ಕೈ ಸೇರಿದೆ. ಇದರಿಂದಾಗಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಬಿ.ಫಾರಂ ಸಲ್ಲಿಸಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.*ಭಂಡಾರಿ ಕೋಟಿ ಸಂಪತ್ತಿನ ಒಡೆಯ; ಜತೆಗೆ ಸಾಲಗಾರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.