ಗುರುವಾರ , ಮೇ 26, 2022
23 °C
ಕ್ರಿಕೆಟ್: ದ.ಆಫ್ರಿಕಾ ವಿರುದ್ಧ ಲಂಕಾಕ್ಕೆ ಭರ್ಜರಿ ಜಯ

ಕುಮಾರ ಸಂಗಕ್ಕಾರ ಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬೊ: ಕುಮಾರ ಸಂಗಕ್ಕಾರ (169) ಸಿಡಿಸಿದ ಭರ್ಜರಿ ಶತಕ ಹಾಗೂ ಬೌಲರ್‌ಗಳ ಸಮರ್ಥ ದಾಳಿಯ ನೆರವಿನಿಂದ ಶ್ರೀಲಂಕಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ  ಕ್ರಿಕೆಟ್ ಪಂದ್ಯದಲ್ಲಿ 180 ರನ್‌ಗಳ ಭಾರಿ ಗೆಲುವು ಪಡೆಯಿತು.ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಂಕಾ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 320 ರನ್ ಪೇರಿಸಿತು. ಬ್ಯಾಟಿಂಗ್‌ನಲ್ಲಿ ಪೂರ್ಣ ವೈಫಲ್ಯ ಅನುಭವಿಸಿದ ದಕ್ಷಿಣ ಆಫ್ರಿಕಾ 31.5 ಓವರ್‌ಗಳಲ್ಲಿ 140 ರನ್‌ಗಳಿಗೆ ಆಲೌಟಾಯಿತು.ತಿಸಾರ ಪೆರೇರಾ (31ಕ್ಕೆ 3), ರಂಗನಾ ಹೆರಾತ್ (25ಕ್ಕೆ 3) ಮತ್ತು ತಿಲಕರತ್ನೆ ದಿಲ್ಶಾನ್ (11ಕ್ಕೆ 2) ಶಿಸ್ತಿನ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿದರು. ಈ ಮೂಲಕ ಆತಿಥೇಯ ತಂಡ ಐದು ಪಂದ್ಯಗಳ ಸರಣಿಯಲ್ಲಿ 1-0 ರಲ್ಲಿ ಮುನ್ನಡೆ ಪಡೆಯಿತು.ಟಾಸ್ ಗೆದ್ದ ಎಬಿ ಡಿವಿಲಿಯರ್ಸ್ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿದರು. ಆದರೆ ಅವರ ಲೆಕ್ಕಾಚಾರ ತಲೆಕೆಗಾಯಿತು. ಸಂಗಕ್ಕಾರ ಭರ್ಜರಿ ಆಟ ಇದಕ್ಕೆ ಕಾರಣ. 137 ಎಸೆತಗಳನ್ನು ಎದುರಿಸಿದ ಈ ಎಡಗೈ ಬ್ಯಾಟ್ಸ್‌ಮನ್ 18 ಬೌಂಡರಿ ಹಾಗೂ ಆರು ಸಿಕ್ಸರ್‌ಗಳನ್ನು ಸಿಡಿಸಿದರು. ಇದರಿಂದ ಲಂಕಾ ತಂಡದ ಮೊತ್ತ 300 ರನ್‌ಗಳ ಗಡಿ ದಾಟಿತು.

ಸಂಗಕ್ಕಾರ ಮೂರು ಪ್ರಮುಖ ಜೊತೆಯಾಟಗಳಲ್ಲಿ ಭಾಗಿಯಾದರು. ಎರಡನೇ ವಿಕೆಟ್‌ಗೆ ಉಪುಲ್ ತರಂಗ (43) ಜೊತೆ 70 ರನ್‌ಗಳನ್ನು ಸೇರಿಸಿದ ಅವರು ಬಳಿಕ ಮಾಹೇಲ ಜಯವರ್ಧನೆ (42) ಅವರೊಂದಿಗೆ ಮೂರನೇ ವಿಕೆಟ್‌ಗೆ 74 ರನ್ ಕಲೆಹಾಕಿದರು.ಲಾಹಿರು ತಿರಿಮನ್ನೆ ಮತ್ತು ಸಂಗಕ್ಕಾರ ನಾಲ್ಕನೇ ವಿಕೆಟ್‌ಗೆ 123 ರನ್ ಸೇರಿಸಿದರು. ಇದರಲ್ಲಿ ತಿರಿಮನ್ನೆ ಅವರ ಕೊಡುಗೆ ಕೇವಲ 17 ಮಾತ್ರ. ಸಂಗಕ್ಕಾರ ಅಬ್ಬರ ಏನೆಂಬುದು ಇದರಿಂದ ತಿಳಿಯಬಹುದು.ಸವಾಲಿನ ಮೊತ್ತ ಬೆನ್ನಟ್ಟಿದ ಪ್ರವಾಸಿ ತಂಡ ಯಾವ ಹಂತದಲ್ಲೂ ಚೇತರಿಕೆಯ ಪ್ರದರ್ಶನ ನೀಡಲಿಲ್ಲ. ಕಾಲಿನ್ ಇನ್‌ಗ್ರಾಂ ಅವರನ್ನು ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಕಳೆದುಕೊಂಡಿತು. ಅಲ್ವಿರೊ ಪೀಟರ್‌ಸನ್ (29) ಮತ್ತು ಎಬಿ ಡಿವಿಲಿಯರ್ಸ್ (23) ಮರುಹೋರಾಟದ ಸೂಚನೆ ನೀಡಿದರಾದರೂ, ಲಂಕಾ ಬೌಲರ್‌ಗಳು ಅದಕ್ಕೆ ಅವಕಾಶ ನೀಡಲಿಲ್ಲ.ಸಂಕ್ಷಿಪ್ತ ಸ್ಕೋರ್:

ಶ್ರೀಲಂಕಾ: 50 ಓವರ್‌ಗಳಲ್ಲಿ 5 ವಿಕೆಟ್‌ಗೆ 320 (ಉಪುಲ್ ತರಂಗ 43, ಕುಮಾರ ಸಂಗಕ್ಕಾರ 169, ಮಾಹೇಲ ಜಯವರ್ಧನೆ 42, ಲಾಹಿರು ತಿರಿಮನ್ನೆ 17, ಮಾರ್ನ್ ಮಾರ್ಕೆಲ್ 34ಕ್ಕೆ 2) ದಕ್ಷಿಣ ಆಫ್ರಿಕಾ: 31.5 ಓವರ್‌ಗಳಲ್ಲಿ 140 (ಅಲ್ವಿರೊ ಪೀಟರ್‌ಸನ್ 29, ಎಬಿ ಡಿವಿಲಿಯರ್ಸ್ 23, ರಾಬಿನ್ ಪೀಟರ್‌ಸನ್ 29, ತಿಸಾರ ಪೆರೇರಾ 31ಕ್ಕೆ 3, ರಂಗನಾ ಹೆರಾತ್ 25ಕ್ಕೆ 3) ಫಲಿತಾಂಶ: ಶ್ರೀಲಂಕಾ ತಂಡಕ್ಕೆ 180 ರನ್ ಗೆಲುವು, ಪಂದ್ಯಶ್ರೇಷ್ಠ: ಕುಮಾರ ಸಂಗಕ್ಕಾರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.