ಶುಕ್ರವಾರ, ನವೆಂಬರ್ 22, 2019
23 °C
ಅರ್ಕಾವತಿ ಒಡಲಾಳ-5

ಕುಮುದ್ವತಿ ಪಾತ್ರದಲ್ಲೂ ಬೀಸಿದ ಬಿರುಗಾಳಿ...

Published:
Updated:

ಬೆಂಗಳೂರು: ಅರ್ಕಾವತಿ ನದಿಗೆ ಬಲ ತುಂಬಿದವರಲ್ಲಿ ಅವಳ ಸೋದರಿಯರಾದ ಕುಮುದ್ವತಿ ಮತ್ತು ವೃಷಭಾವತಿ ಅವರ ಪಾತ್ರವೂ ದೊಡ್ಡದಾಗಿದೆ. ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ `ಅಕ್ಕ'ನ ಜತೆಯಾಗುವ ಕುಮುದ್ವತಿ, ಜಲಾಶಯಕ್ಕೆ ಅಪಾರ ಪ್ರಮಾಣದ ನೀರನ್ನೂ ಜತೆಯಲ್ಲಿ ಕರೆತರುತ್ತಾಳೆ.ಶಿವಗಂಗೆ ಬೆಟ್ಟದ ಒಳಕಲ್ಲು ತೀರ್ಥ ಮತ್ತು ಕುಂಭತೀರ್ಥ ಎಂಬ ನೀರಿನ ಚಿಲುಮೆಗಳೇ ಕುಮುದ್ವತಿ ಉಗಮ ಸ್ಥಾನಗಳಾಗಿವೆ. ಈ ಚಿಲುಮೆಗಳು ಸಮುದ್ರ ಮಟ್ಟಕ್ಕಿಂತ 1,386 ಮೀಟರ್ ಎತ್ತರದಲ್ಲಿವೆ. ಮಳೆನೀರು ಬಸಿಯುವಂತೆ ನೋಡಿಕೊಳ್ಳುವ ಹಳ್ಳಗಳ ದೊಡ್ಡ ಜಾಲವೇ ಈ ನದಿಗೆ ಇದೆ. ಶಿವಗಂಗೆಯಿಂದ 11.25 ಕಿ.ಮೀ. ದೂರ ಈಶಾನ್ಯ ದಿಕ್ಕಿನತ್ತ ಹರಿದು ದೇವರಾಯನದುರ್ಗ ಸೇರುವ ಈ ನದಿ, ಅಲ್ಲಿಂದ ದಕ್ಷಿಣಾಭಿಮುಖವಾಗಿ 31.7 ಕಿ.ಮೀ. ದೂರದ ತಿಪ್ಪಗೊಂಡನಹಳ್ಳಿ ಸೇರುತ್ತದೆ.ತನ್ನ 43 ಕಿ.ಮೀ. ಉದ್ದದ ಜಾಡಿನಲ್ಲಿ ಕುಮುದ್ವತಿ 378 ಚದರ ಕಿ.ಮೀ. ವಿಸ್ತೀರ್ಣದ ಜಲಾಯನ ಪ್ರದೇಶವನ್ನು ಸೃಷ್ಟಿಸಿದೆ. ಒಟ್ಟಾರೆ 72 ಕಿರು ಜಲಾನಯನಗಳ ಸಂಗಮದಿಂದ ಈ ಪ್ರದೇಶ ಸೃಷ್ಟಿಯಾಗಿದೆ. ಮಹದೇವಪುರ, ಕೆಂಪಹಳ್ಳಿ, ಕಾವಲಪಾಳ್ಯ, ಹೇಮಾಪುರ, ಗುಂಡೇನಹಳ್ಳಿ, ಗಂಗಭೈರಪ್ಪನಪಾಳ್ಯ, ತ್ಯಾಮಗೊಂಡ್ಲು, ತೊರೆಹೊಸಪಾಳ್ಯ, ತೆಪ್ಪದಬೇಗೂರು, ತಾವರೆಕೆರೆ, ಶ್ರೀನಿವಾಸಪುರ, ಪಲ್ಲರಹಳ್ಳಿ, ಮೊಂಡಿಗೆರೆ, ಮಾಕನಕುಪ್ಪೆ ಈ ನದಿಯ ಮುಖ್ಯ ಜಲಾನಯನ ಪ್ರದೇಶಗಳಾಗಿವೆ.194 ಗ್ರಾಮಗಳ ವ್ಯಾಪ್ತಿ ಹೊಂದಿರುವ ಕುಮುದ್ವತಿ ತೆಕ್ಕೆಯಲ್ಲಿ 256 ಕೆರೆಗಳಿವೆ. ಕೃಷಿ, ಮೀನು ಸಾಕಾಣಿಕೆ, ಮಣ್ಣಿನ ಸವಕಳಿ ತಡೆಗಟ್ಟುವಿಕೆ ಮೊದಲಾದ ಉದ್ದೇಶಗಳಿಂದ ಅವುಗಳನ್ನು ನಿರ್ಮಿಸಲಾಗಿದೆ. ನೆಲದ ಮೇಲ್ಮೈನಿಂದ ತಗ್ಗಾದ ಪ್ರದೇಶದಲ್ಲಿ ಬೋಗುಣಿಯಂತೆ ಇರುವ ಈ ಕೆರೆಗಳು ನೀರನ್ನು ಶೇಖರಿಸಿ ಇಡುತ್ತಿದ್ದವು.ಕುಮುದ್ವತಿ ನದಿ ವಿಷಯವಾಗಿ ಭೂವಿಜ್ಞಾನಿ ಡಾ. ಎಲೆ ಲಿಂಗರಾಜು ವಿಶೇಷವಾದ ಅಧ್ಯಯನ ಮಾಡಿದ್ದಾರೆ. ಶಿವಗಂಗೆ ಬೆಟ್ಟದಿಂದ ತಿಪ್ಪಗೊಂಡನಹಳ್ಳಿ ಜಲಾಶಯದವರೆಗೆ ಅಲೆದಾಡಿರುವ ಅವರು, ನದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿದ್ದಾರೆ. ಅರ್ಕಾವತಿಗೆ ಕಂಟಕವಾಗಿರುವ ನಗರೀಕರಣ, ಗಣಿಗಾರಿಕೆ, ಒತ್ತುವರಿಯಂತಹ ಸಮಸ್ಯೆಗಳೇ ಕುಮುದ್ವತಿ ಅಸ್ತಿತ್ವಕ್ಕೂ ಗಂಡಾಂತರ ತಂದಿವೆ.ಇನ್ನು ವೃಷಭಾವತಿ ನದಿ ಕೊಚ್ಚೆ ಗುಂಡಿಯಾಗಿದೆ. ಬೆಂಗಳೂರಿನ ಬಸವನಗುಡಿಯಲ್ಲಿ ಜನಿಸುವ ಈ ತೊರೆ ಸಹ ಅರ್ಕಾವತಿಯನ್ನೇ ಸೇರುತ್ತಿತ್ತು. ನದಿ ಬತ್ತಿಸಿದ ನಮ್ಮ ಜನ ಅದರ ಪಾತ್ರವನ್ನೇ ಕೊಳಚೆ ನೀರು ಸಾಗಾಟದ ಮಹಾಚರಂಡಿ ಮಾಡಿಕೊಂಡಿದ್ದಾರೆ.ಭೂವಿಜ್ಞಾನಿಗಳಾದ ಎನ್.ನಾಗರಾಜ್, ಎಚ್. ಚಂದ್ರಶೇಖರ್ ಮತ್ತು ಕೆ.ಪಿ. ಮಂಗಲಾ ಅವರಿದ್ದ ತಂಡ ನದಿ ಹರಿಯುವ ಇಟ್ಟಮಡು, ರಾಮನಹಳ್ಳಿ ಮತ್ತು ಗೋಪಿಹಳ್ಳಿಗಳಲ್ಲಿ ಸಮೀಕ್ಷೆ ನಡೆಸಿದೆ. ರಾಸಾಯನಿಕವನ್ನೇ ಹೆಚ್ಚಾಗಿ ಹೊಂದಿದ ನೀರನ್ನು ಬಳಸಿದ ಪರಿಣಾಮ ಕೃಷಿಭೂಮಿ ತನ್ನ ಸತ್ವವನ್ನೇ ಕಳೆದುಕೊಂಡಿದೆ ಎಂಬುದನ್ನು ಸಮೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.ಕೊಳೆಯಾದ ನೀರನ್ನೇ ದನ-ಕರುಗಳಿಗೆ ಕುಡಿಸುವುದರಿಂದ ಹಾಲು ಸಹ ವಾಸನೆಯಿಂದ ಕೂಡಿದೆ ಎಂಬ ಆತಂಕಕಾರಿ ಸಂಗತಿಯನ್ನು ವೃಷಭಾವತಿ ವ್ಯಾಪ್ತಿಯ ಗ್ರಾಮಗಳ ಜನ ಹೊರಹಾಕುತ್ತಾರೆ.ನದಿಗೂ ಹರಿಯುವ ಹಕ್ಕಿದೆ:

ನದಿಗಳೇ ಕಣ್ಮರೆಯಾಗಲು ಆರಂಭಿಸಿದ ಮೇಲೆ ಎಚ್ಚೆತ್ತುಕೊಂಡಿರುವ ಹಲವು ಸಂಘಟನೆಗಳು ಅರ್ಕಾವತಿ ಮತ್ತು ಅದರ ಉಪ ನದಿಗಳ ಪಾತ್ರದುದ್ದಕ್ಕೂ ಜನಜಾಗೃತಿ ಉಂಟುಮಾಡುವ ಕಾಯಕ ಆರಂಭಿಸಿವೆ. ಅರ್ಕಾವತಿ ಮತ್ತು ಕುಮುದ್ವತಿ ನದಿ ಪುನಶ್ಚೇತನ ಸಮಿತಿ, ಸ್ವರಾಜ್, ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್, ನಾಗದಳ, ಜಲಚೇತನ, ರೈತ ಸಂಘ, ಸದ್ಗುರು ಯೋಗಿ ನಾರಾಯಣ ಟ್ರಸ್ಟ್ ಮೊದಲಾದ ಸಂಘಟನೆಗಳು ನದಿಗಳ ಪುನಶ್ಚೇತನಕ್ಕಾಗಿ ಶ್ರಮಿಸುತ್ತಿವೆ.ಅರ್ಕಾವತಿ ಪಾತ್ರದಲ್ಲಿ ನಡೆದಿರುವ ಜನಪರ ಚಳವಳಿಗೆ ಜಲತಜ್ಞ ರಾಜೇಂದ್ರ ಸಿಂಗ್ ಸಹ ಬಂದು ಬೆನ್ನು ತಟ್ಟಿದ್ದಾರೆ. ನದಿ ಪಾತ್ರದಲ್ಲಿಯೇ ನಿಂತು ಗ್ರಾಮಸ್ಥರಿಗೆ ಪಾಠ ಮಾಡಿದ್ದಾರೆ. ಜನ ಕಳೆದುಕೊಂಡಿದ್ದು ಏನು ಎಂಬುದನ್ನು ನೆನಪು ಮಾಡಿಕೊಟ್ಟಿದ್ದಾರೆ. ನದಿ ಜಾಡು ಹಿಡಿದು ದೊಡ್ಡಿ ಶಿವರಾಂ ಮತ್ತು ಅವರ ತಂಡ ಜನಾದೇಶ ಪಾದಯಾತ್ರೆ ನಡೆಸಿದೆ. ಇದರಿಂದ ಜನರಲ್ಲೂ ಸಾಕಷ್ಟು ಜಾಗೃತಿ ಮೂಡಿದೆ.ಮುಂಗಾರು ತೇರು, ನದಿಗೂ ಹರಿಯುವ ಹಕ್ಕಿದೆ ಮೊದಲಾದ ನದಿ ಉಳಿವಿನ ಜನಪರ ಹೋರಾಟಗಳು ಸಹ ನಡೆದಿವೆ. ಜನರ ಕೂಗು ಸಣ್ಣದಾಗಿಯಾದರೂ ದೃಢವಾಗಿ ಕೇಳಿಬಂದ ಪರಿಣಾಮ ಸರ್ಕಾರಕ್ಕೂ ಅದರ ಬಿಸಿ ಚೆನ್ನಾಗಿಯೇ ತಟ್ಟಿದೆ.

ಕೆರೆಕಟ್ಟಿಗೆನೂರಿನ ಕಲ್ಯಾಣಿಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸ್ವಯಂಸೇವಕರಿಂದ ಮರುಜೀವ

ನದಿ ಪಾತ್ರದ ಸ್ವಯಂಸೇವಕರು

ಬೆಂಗಳೂರು: ಕುಮುದ್ವತಿ ನದಿಗೆ ಪುನಶ್ಚೇತನ ನೀಡುವ ಕಾರ್ಯಕ್ಕೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಚಾಲನೆ ನೀಡಿದ್ದು `ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ' ಯೋಜನೆ ಅಡಿಯಲ್ಲಿ ಸ್ವಯಂಸೇವಕರು ಶ್ರಮದಾನ ಮಾಡುತ್ತಿದ್ದಾರೆ. ಭೂವಿಜ್ಞಾನಿ ಡಾ. ಎಲೆ ಲಿಂಗರಾಜು ಅವರ ಮಾರ್ಗದರ್ಶನಕ್ಕೆ ಟೊಂಕಕಟ್ಟಿ ನಿಂತಿದ್ದಾರೆ. 

ನೆಲಮಂಗಲ ತಾಲ್ಲೂಕಿನ ಕೆರೆಕಟ್ಟಿಗೆನೂರು, ಅರೆಬೊಮ್ಮನಹಳ್ಳಿ, ಟಿ.ಬೇಗೂರು, ಶ್ರೀನಿವಾಸಪುರದ ಹಳ್ಳಿಗಳಲ್ಲಿ ಕೆಲಸ ನಡೆಯುತ್ತಿದೆ. ಸ್ವಚ್ಛತಾ ಆಂದೋಲನ, ನದಿ ಪುನಶ್ಚೇತನ ಜಾಗೃತಿ ಶಿಬಿರ, ಇಂಗು ಗುಂಡಿ ಮತ್ತು ಕಿರು ಅಣೆಕಟ್ಟೆಗಳ ಸಮೀಕ್ಷೆ, ಪುಟ್ಟ ಕೊಳಗಳ ಶುದ್ಧೀಕರಣ, ಜಲ ಸಾಕ್ಷರತೆ ಸೇರಿದಂತೆ ಹಲವು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.

ಕೆರೆಕಟ್ಟಿಗೆನೂರು ಗ್ರಾಮದ ಕಲ್ಯಾಣಿಯೊಂದರಲ್ಲಿ ಬಿದ್ದ ಕಸದ ರಾಶಿಯನ್ನು ಸ್ವಯಂಸೇವಕರು ತೆಗೆದುಹಾಕಿದ್ದಾರೆ. ಹೂಳನ್ನು ಬಳಿದು ಚೆಲ್ಲಿದ್ದಾರೆ. ಕಣ್ಮುಚ್ಚಿ ಮಲಗಿಬಿಟ್ಟಿದ್ದ ಕಲ್ಯಾಣಿಯಲ್ಲಿ ಮತ್ತೆ ಜೀವಸೆಲೆ ಉಕ್ಕಿದೆ. ಸ್ವಯಂಸೇವಕರ ಮೊಗದಲ್ಲೂ ಹರ್ಷದ ಕಣ್ಣೀರ ಧಾರೆ. ಅಂದಹಾಗೆ, ಆ ಕಲ್ಯಾಣಿಯಲ್ಲಿ ಮತ್ತೆ ಮಂಜುಳ ನಿನಾದ ಕೇಳಿಬರುತ್ತಿದೆ. ನದಿಪಾತ್ರದಲ್ಲಿ ನಿಧಾನವಾಗಿ ಕತ್ತಲು ಕರಗಿ ಬೆಳಕು ಹರಿಯುತ್ತಿದೆ. ಕೆರೆಗಳು ಮತ್ತೆ ಜೀವಕಳೆ ಪಡೆಯುತ್ತಿವೆ.ಸೂಕ್ಷ್ಮ ಹಾಗೂ ಸಣ್ಣ ಜಲ ಸಂಗ್ರಹಗಳ ಜೋಡಿಸುವುದು, ರೈತರಲ್ಲಿ ಜಾಗೃತಿ ಮೂಡಿಸುವುದು, ಹಸಿರು ಹೆಚ್ಚಿಸುವುದು, ನೀರು ಮರುಪೂರಣ ಮಾಡುವುದು ಸೇರಿದಂತೆ ಹಲವು ಯೋಜನೆ ಹಾಕಿಕೊಳ್ಳಲಾಗಿದೆ. ಸ್ವಯಂಸೇವಕರ ಸತತ ಯತ್ನದಿಂದ ಮೂರು ವರ್ಷಗಳೊಳಗೆ ಕುಮುದ್ವತಿಯಲ್ಲಿ ನೀರಿನ ಅಭಾವ ಕಡಿಮೆಯಾಗಲಿದೆ ಎಂದು ಡಾ. ಲಿಂಗರಾಜು ವಿಶ್ವಾಸ ಹೇಳುತ್ತಾರೆ.ನೂರು ಹಳ್ಳಿಗಳಲ್ಲಿ 1,000 ಇಂಗುಗುಂಡಿ ನಿರ್ಮಿಸುವುದು, ಹಳ್ಳಿ-ಹಳ್ಳಿಗಳಲ್ಲಿ ನೀರಿನ ಸಂಗ್ರಹಕ್ಕೆ ಪುಟ್ಟ, ಪುಟ್ಟ ವ್ಯವಸ್ಥೆ ಮಾಡುವುದು, ಅತ್ತಿ, ಆಲದ ಮರ, ಗೋಣಿ, ಅಶ್ವತ್ಥ, ನೀರಾಲೆ, ಬಸಲೆಯಂತಹ 3000 ಸಸಿಗಳನ್ನು ನೆಡುವುದು ನಮ್ಮ ಗುರಿಯಾಗಿದೆ ಎಂದು ಅವರು ವಿವರಿಸುತ್ತಾರೆ.ಕುಮುದ್ವತಿ ತೀರದಲ್ಲಿ ಕೆರೆ-ಕಲ್ಯಾಣಿಗಳ ಸಂಖ್ಯೆ ಅಪಾರ. ಅವುಗಳಿಗೆ ಮರುಜೀವ ನೀಡುವ ಕೆಲಸವೂ ದೊಡ್ಡದು. ಅದಕ್ಕಾಗಿ ಸ್ವಯಂಸೇವಕರ ದೊಡ್ಡ ಪಡೆ ಟೊಂಕಕಟ್ಟಿ ನಿಂತಿದೆ. ಆದಾಗ್ಯೂ ಕೆಲಸ ಮಾಡುವ ಕೈಗಳು ಇನ್ನೂ ಬೇಕಿವೆ. ಸ್ವಯಂಸೇವಕರಾಗಲು ಆಸಕ್ತರಾದವರು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ: 99160 25348

(ನಾಳಿನ ಸಂಚಿಕೆ: ಪಾದಯಾತ್ರೆ ಸಾಧಿಸಿದ್ದೇನು? ಸರ್ಕಾರ ಮಾಡಿದ್ದೇನು?)

ಪ್ರತಿಕ್ರಿಯಿಸಿ (+)