ಕುಮ್ಮಟದುರ್ಗಕ್ಕೆ ಬೇಕು ಕಾಯಕಲ್ಪ

ಕೊಪ್ಪಳ: ತಾಲ್ಲೂಕಿನ ಬೂದಗುಂಪಾ ಸಮೀಪದ ಕುಮ್ಮಟದುರ್ಗದ ಕೋಟೆಗೆ ಕಾಯಕಲ್ಪ ಬೇಕಾಗಿದೆ. ಕ್ರಿ.ಶ. 1287ರ ಅವಧಿಯಲ್ಲಿ ಕುಮ್ಮಟದ ಅರಸರ ಆಡಳಿತ ಕೇಂದ್ರವಾಗಿದ್ದ ಕುಮ್ಮಟದುರ್ಗದ ಕೋಟೆಗೆ ಇದೀಗ ಕಾಳಜಿ ವಹಿಸುವವರು ಇಲ್ಲವಾಗಿದೆ. ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಡಳಿತಕ್ಕೆ ಒಳ-ಪಟ್ಟ ಈ ಪ್ರದೇಶವನ್ನು ಅದ್ಭುತ ಪ್ರವಾಸಿ ತಾಣವನ್ನಾಗಿಸುವ ಎಲ್ಲ ಸಾಧ್ಯತೆಗಳಿದ್ದರೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಮಾತ್ರವಲ್ಲ ಬೆಟ್ಟದ ಅನತಿ ದೂರದಲ್ಲಿಯೇ ಗ್ರಾನೈಟ್ ಗಣಿಕಾರಿಕೆ ಆರಂಭವಾಗುವ ಆತಂಕವೂ ಎದುರಾಗಿದೆ.
ಸುಮಾರು ಎರಡೂವರೆ ಕಿ.ಮೀ. ಉದ್ದವಿರುವ ಮೂರು ಸುತ್ತಿನ ಕೋಟೆ ಶಿಥಿಲವಾಗಿದೆ. ಅಲ್ಲಲ್ಲಿ ಕಲ್ಲುಗಳು ಉದುರಿಬಿದ್ದಿವೆ. ಆಗಾಗ ಪೂಜೆ ಪುನಸ್ಕಾರ, ಜಾತ್ರೆಗೆ ಹೋಗುವ ಜನರು ಈ ಕಲ್ಲು ಮುಳ್ಳಿನ ಹಾದಿಯಲ್ಲೇ ಕ್ರಮಿಸಬೇಕಿದೆ.
ಶೌರ್ಯ, ಸಾಹಸ, ಪರನಾರಿ ಸಹೋದರತ್ವದಿಂದ ನಾಡಿನಾದ್ಯಂತ ಜನಜನಿತವಾಗಿರುವ ಇಲ್ಲಿ ಆಳ್ವಿಕೆ ಮಾಡಿದ್ದ ಕುಮಾರರಾಮನ ಕನ್ನಡ ಕಾವ್ಯ, ಕಥೆಗಳಲ್ಲಿ ಹೆಸರಾಗಿದ್ದಾನೆ. ಕೋಟೆಯ ಮೇಲ್ಭಾಗ ಅವನ ಹೆಸರಿನ ಗುಡಿಯಿದೆ. ಸುತ್ತ ಸಣ್ಣ ಪುಟ್ಟ ಗುಡಿಗಳು, ಆಂಜನೇಯನ ಮೂರ್ತಿ, ಬಸದಿ, ದೇವಸ್ಥಾನದ ಕುರುಹುಗಳೂ ಇವೆ. ಬೆಟ್ಟದ ಸುತ್ತ ಕಣ್ಣು ಹಾಯಿಸಿದರೆ ಸಂಪೂರ್ಣ ಭಗ್ನಗೊಂಡ ನಂದಿ, ತೀರ್ಥಂಕರರ ಮೂರ್ತಿ, ಈಶ್ವರನ ಗುಡಿಯ ಕುರುಹು, ವೀರಗಲ್ಲುಗಳು ಹಾಳಾಗಿ ಬಿದ್ದುಕೊಂಡಿವೆ. ಇಲ್ಲಿಯೇ ಸಮೀಪ ಕುಮಾರರಾಮನ ಸೀಮೆ ಹೆಸರಿನ ಊರು ಇದೆ. ಆದರೆ, ಸಂಪೂರ್ಣ ಪಾಳುಬಿದ್ದು ಕೇವಲ ತಳಪಾಯಗಳಷ್ಟೇ ಇವೆ. ಎಲ್ಲವೂ ಪೊದೆಗಳಿಂದ ಮುಚ್ಚಿಹೋಗಿದೆ. ಮತ್ತೊಮ್ಮೆ ಇಲ್ಲಿ ಊರು ಸ್ಥಾಪಿಸಬೇಕು ಎಂದು ಕುಮ್ಮಟದುರ್ಗ ರಕ್ಷಣಾ ಸಮಿತಿಯವರು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.
ಕಳೆದ ವರ್ಷ ಮೇ 22ರಂದು ಇಲ್ಲಿನ ಗುಡಿಯಲ್ಲಿದ್ದ ಕುಮಾರರಾಮನ ಮೂರ್ತಿಯನ್ನು ಕಳವು ಮಾಡಲಾಗಿತ್ತು. ಗುಡಿ, ಕೋಟೆಯ ಆಸುಪಾಸಿನ ಭಾಗಗಳು ನಿರಂತರವಾಗಿ ನಿಧಿಗಳ್ಳರ ಕಾಟದಿಂದ ನಲುಗಿದೆ. ಕೋಟೆ ಪೂರ್ತಿ ಅವಶೇಷವಾಗಿಬಿಡುವ ಮುನ್ನ ಸೂಕ್ತ ರಕ್ಷಣೆ, ನಶಿಸಿ ಹೋದ ಭಾಗಗಳ ಪುನರ್ನಿರ್ಮಾಣ, ನವೀಕರಣ ಕೈಗೊಳ್ಳಬೇಕು ಎಂದು ರಕ್ಷಣಾ ಸಮಿತಿಯ ಮುಖಂಡ ಹನುಮಂತಪ್ಪ ಮನವಿ ಮಾಡಿದ್ದಾರೆ.
ಈ ಪ್ರದೇಶದಲ್ಲಿ ಯಾವುದೇ ಕಲ್ಲು ಗಣಿಗಾರಿಕೆ ಮಾಡದಂತೆ ಜಿಲ್ಲಾಧಿಕಾರಿಗೆ ಕೋರಿದ್ದೇವೆ. ಆದ್ದರಿಂದ ಇಲ್ಲಿ ಅಂಥ ಸಮಸ್ಯೆಯಿಲ್ಲ. ಆದರೆ, ಇಲ್ಲಿಗೆ ಪ್ರವೇಶಿಸುವ ಮಾರ್ಗದಲ್ಲಿರುವ ಜಬ್ಬಲಗುಡ್ಡದಲ್ಲಿ ಗ್ರಾನೈಟ್ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ ಎಂಬ ಸುದ್ದಿಯಿದೆ. ಗುತ್ತಿಗೆ ವಹಿಸಿಕೊಂಡವರು ಸುತ್ತಮುತ್ತಲಿನ ರೈತರಿಗೆ ಒಂದಿಷ್ಟು ಹಣ ನೀಡಿದ್ದಾರೆ. ಇಲ್ಲಿಯೂ ಗಣಿಗಾರಿಕೆ ಬರದಂತೆ ತಡೆಯಬೇಕು. ಹಾಗಾದಾಗ ಇಲ್ಲಿನ ಇತಿಹಾಸ, ಪರಂಪರೆ ಉಳಿಸಬಹುದು ಎಂದು ಹನುಮಂತಪ್ಪ ಅಭಿಪ್ರಾಯಪಟ್ಟರು.
ಕುಮ್ಮಟದುರ್ಗದ ಕಥೆ
ಕಲ್ಯಾಣ ಚಾಲುಕ್ಯರ ಪತನದ ನಂತರ ಗಂಗಾವತಿ ತಾಲ್ಲೂಕು (ಅಂದು ನೀಲಾವತಿ ಪಟ್ಟಣವಾಗಿತ್ತು) ಕೆಲಕಾಲ ಕುಮ್ಮಟದ ಅರಸ ಕಂಪಿಲರಾಯ ಹಾಗೂ ಅವನ ಮಗ ಕುಮಾರ ರಾಮನ ಆಡಳಿತಕ್ಕೆ ಒಳಗಾಗಿತ್ತು. 1327ರಲ್ಲಿ ದೆಹಲಿ ಸುಲ್ತಾನ ಮಹಮದ್ ಬಿನ್ ತುಘಲಕ್ನ ದಾಳಿಯ ಸಂದರ್ಭ ಕಂಪಿಲರಾಯ ಮತ್ತು ಕುಮಾರರಾಮ ಹೋರಾಡುತ್ತಲೇ ವೀರಮರಣವನ್ನಪ್ಪಿದರು. ಈಗಲೂ ಕುಮ್ಮಟದುರ್ಗದಲ್ಲಿ ಕುಮಾರರಾಮನ ಬಲಿದಾನದ ಸ್ಮರಣಾರ್ಥ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.