ಕುರಿ ಪಾಲಿಗೆ ತೋಳವಾದ ನಾಯಿಗಳು

7

ಕುರಿ ಪಾಲಿಗೆ ತೋಳವಾದ ನಾಯಿಗಳು

Published:
Updated:

ಶಿರಾ: ತೋಳಗಳ ಬಾಯಿಯಿಂದ ಕುರಿಗಳ ರಕ್ಷಣೆಗೆಂದು ಸಾಕುತ್ತಿದ್ದ ನಾಯಿಗಳೇ ಈಚಿನ ವರ್ಷಗಳಲ್ಲಿ ಕುರಿಗಳನ್ನು ಭಕ್ಷಿಸುವ ನಾಡ ತೋಳಗಳಾಗಿ ಪರಿವರ್ತನೆ ಯಾಗಿರುವುದು ತಾಲ್ಲೂಕಿನ ಕುರಿ ಸಾಕಣೆದಾರರನ್ನು ಚಿಂತೆಗೀಡು ಮಾಡಿದೆ.ಪಶುಪಾಲನೆಯಲ್ಲಿ ನಾಯಿಗಳಿಗೂ ಮನುಷ್ಯರಷ್ಟೇ ಪ್ರಾಮುಖ್ಯತೆ ಪರಂಪರೆಯಿಂದಲೂ ಇದೆ. ಇದಕ್ಕೆ ಜನಪದ ಪುರಾಣದಲ್ಲೂ ಪುರಾವೆ ಸಿಗುತ್ತವೆ. ಪಶು ಸಂಪತ್ತಿನ ಒಡೆಯನಾಗಿದ್ದ ಪುರಾಣ ಪ್ರಸಿದ್ದ ಜುಂಜಪ್ಪ ಕೂಡ ತನ್ನ ಪಶು ಸಂಪತ್ತಿನ ರಕ್ಷಣೆಗೆ ನಾಯಿಯೊಂದನ್ನು ಸಾಕಿದ್ದ. ಆ ನಾಯಿಯ ಸಮಾದಿ ಇಂದಿಗೂ ತಾಲ್ಲೂಕಿನ ಕಳುವರಹಳ್ಳಿ ಬಳಿಯ ಜುಂಜಪ್ಪನ ದೇವಸ್ಥಾನ ಬಳಿ ಇದೆ.  ಕುರಿಗಳ ಸಾಕಣೆಯಲ್ಲಿ ನಾಯಿಗೆ ವಿಶೇಷ ಸ್ಥಾನವಿದೆ. ಅಡವಿಯಲ್ಲಿ ಮೇಯುವ ಕುರಿಗಳ ಮೇಲೆ ಕಿಂಚಿತ್ತೂ ಸದ್ದಿಲ್ಲದೆ ಎರಗುವ ತೋಳಗಳನ್ನು ತನ್ನ ವಿಶೇಷ ಗ್ರಹಣಶಕ್ತಿಯಿಂದಲೇ ಗ್ರಹಿಸುವ ನಾಯಿಗಳು ಅಂತಹ ತೋಳಗಳ ಬೆನ್ನಟ್ಟಿ ಮೈಲಿಗಟ್ಟಲೇ ಅಟ್ಟಿಸುವ ನಾಯಿಗಳ ಸಾಹಸ ಈಗಲೂ ಮೆಲುಕು ಹಾಕುತ್ತಾರೆ.ಈಗ ತೋಳಗಳ ಸಂಖ್ಯೆ ಕ್ಷೀಣಿಸಿದೆ. ಹೀಗಾಗಿ ಅವುಗಳ ದಾಳಿ ಕಡಿಮೆ. ಬೀದಿನಾಯಿಗಳ ಹಾವಳಿಯಿಂದ ಕುರಿಗಳನ್ನು ರಕ್ಷಿಸಿಕೊಳ್ಳುವುದೇ ಕಷ್ಟವಾಗಿದೆ ಎಂದು ಕುರಿಗಾಹಿ ಗುಡ್ಡದಹಟ್ಟಿ ನಾಗಣ್ಣ ಹೇಳುತ್ತಾರೆ.

ಈಚೆಗೆ ತಾಲ್ಲೂಕಿನ ಪಟ್ಟನಾಯಕನಹಳ್ಳಿ, ನಾದೂರು, ಶೀಗಲಹಳ್ಳಿ, ಉದ್ದರಾಮನಹಳ್ಳಿ, ಗೊಲ್ಲಹಳ್ಳಿ ಮತ್ತಿತತರ ಕಡೆ ನಾಯಿಗಳು ಕುರಿ ಮರಿಗಳನ್ನು ಸಾಯಿಸಿ ಅವುಗಳ ರಕ್ತ ಕುಡಿಯುವ ದಾಹ ಬೆಳೆಸಿಕೊಂಡಿದ್ದು, ಕಳೆದ ಒಂದು ತಿಂಗಳಿಂದೀಚೆಗೆ ಸುಮಾರು 50ಕ್ಕೂ ಹೆಚ್ಚು ಕುರಿಗಳನ್ನು ನಾಯಿಗಳು ತಿಂದುಹಾಕಿವೆ. ಇದರಿಂದ ಬಡ ಕುರಿಗಾಹಿಗಳಿಗೆ ನಷ್ಟವುಂಟಾಗಿದೆ.ಕಳೆದ ಮಂಗಳವಾರವಷ್ಟೇ ಉದ್ದರಾಮನಹಳ್ಳಿ-ಶೀಗಲಹಳ್ಳಿ ಮಧ್ಯೆ ಕುರಿಹಟ್ಟಿ ಇಟ್ಟುಕೊಂಡಿದ್ದ ನಾಗರಾಜು ಎಂಬುವರ ಮರಿಹಟ್ಟಿ ಮೇಲೆ ದಾಳಿ ನಡೆಸಿದ ನಾಯಿಗಳು ಎರಡು ದೊಡ್ಡ ಕುರಿ ಹಾಗೂ 13 ಕುರಿ ಮರಿಗಳನ್ನು ಕೊಂದು ರಕ್ತ ಕುಡಿದು ಮಾಯವಾಗಿವೆ. ಇದಕ್ಕೂ ಮುನ್ನ ನಾದೂರು ಕೆರೆಕೋಡಿ ಬಳಿ ಐದಾರು ಬೀದಿನಾಯಿಗಳು ಈರಣ್ಣ ಎಂಬುವರಿಗೆ ಸೇರಿದ 24 ಕುರಿಮರಿಗಳನ್ನು ಕೊಂದಿದ್ದವು. ಇದೇ ನಾಯಿಗಳು ಗೊಲ್ಲಹಳ್ಳಿಯಲ್ಲೂ 16 ಮರಿಗಳನ್ನು ಕಚ್ಚಿ ಸಾಯಿಸಿದ್ದವು ಎಂದು ಕುರಿಗಾಹಿ ತಿಪ್ಪಣ್ಣ ಹೇಳುತ್ತಿದ್ದಾರೆ.ಹೀಗೆ 10ಕ್ಕೂ ಹೆಚ್ಚು ಕುರಿಗಳನ್ನು ಒಮ್ಮೆಗೆ ತಿಂದು ಹಾಕಿದಾಗ ಮಾತ್ರ ಕುರಿಗಳ ಮಾಲೀಕರು ಪೊಲೀಸ್ ಠಾಣೆಗೆ ದೂರು ನೀಡುವುದನ್ನೋ ಇಲ್ಲ ಪಶು ಇಲಾಖೆ ಗಮನಕ್ಕೆ ತರುವ ಕೆಲಸವನ್ನು ಮಾಡಿದ್ದಾರೆ. ಆದರೆ ತಾಲ್ಲೂಕಿನ ಒಂದಲ್ಲ ಒಂದು ಕಡೆ ನಿತ್ಯ ನಾಯಿಗಳು ಒಂದು, ಎರಡು, ಮೂರು ಕುರಿಗಳನ್ನು ತಿಂದು ಹಾಕುವುದು ಮಾಮೂಲಿಯಾಗಿದೆ. ಒಂದೆರಡು ಎಂಬ ಕಾರಣಕ್ಕೆ ಜನ ದೂರು ನೀಡುತ್ತಿಲ್ಲ ಎಂದು ಕುರಿಗಾಹಿ ನಿಂಗಜ್ಜ ಹೇಳುತ್ತಾರೆ.ಮಾಂಸಹಾರಿ ದೇವರುಗಳಿಗೆ ಹರಿದು ಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಅಡವಿಯ ಬ್ಯಾಟೆಗಿಡ, ತಂಗ್ಟೆಗಿಡದ ಬುಡದಲ್ಲಿದ್ದ ಭೂತಪ್ಪ, ಮುತ್ತರಾಯ, ಕರಿಯಮ್ಮನಂತಹ ಮಾಂಸದ ಹೆಡೆಯ ದೇವರುಗಳಿಗೆ ಭಕ್ತರು ಬರುತ್ತಿದ್ದಾರೆ. ಇಂತಹ ದೇವರುಗಳ ಬಳಿಗೆ ಮಾಂಸಹಾರಿಗಳು ಕೋಳಿ, ಕುರಿಗಳನ್ನು ಹಿಡಿದು ಆಗಮಿಸಿ ದೇವರಿಗೆ ಬಲಿಕೊಟ್ಟು ಅಲ್ಲಿಯೇ ಬೇಯಿಸಿ ತಿಂದು ಮಿಕ್ಕಿದ್ದನ್ನು ಬಿಸಾಕಿ ಹೋಗುತ್ತಾರೆ.ಇಂತಹ ಮಾಂಸದ ತ್ಯಾಜ್ಯ ತಿನ್ನುವ ಬೀದಿನಾಯಿಗಳು ಹಿಂದಿನಂತೆ ಮಕ್ಕಳ ಮಲ, ಮುದ್ದೆ, ಹಳಸಿದ ಅನ್ನ ತಿನ್ನುವ ಗೋಜಿಗೆ ಹೋಗುತ್ತಿಲ್ಲ. ಸದಾ ಕೋಳಿ ಫಾರಂಗಳ ತ್ಯಾಜ್ಯ ಹಾಗೂ ಮಾಂಸಹಾರಿ ದೇವಸ್ಥಾನಗಳ ಸುತ್ತ ಠಳಾಯಿಸುವ ನಾಯಿಗಳು ಅಲ್ಲಿ ಮಾಂಸದ ತ್ಯಾಜ್ಯ ಸಿಗದಿದ್ದರೆ ನೇರ ಕುರಿ ಮರಿಗಳ ಕುತ್ತಿಗೆಗೆ ಬಾಯಿ ಹಾಕುತ್ತಿವೆ.

ಮುಂದಿನ ದಿನಗಳಲ್ಲಿ ಬೀದಿ ನಾಯಿಗಳು ಮನೆ ಅಂಗಳದಲ್ಲಿ ಆಡುವ ಮಕ್ಕಳು, ವೃದ್ಧರ ಮೇಲೂ ಸಾಮೂಹಿಕ ದಾಳಿ ಮಾಡುವ ಪ್ರವೃತ್ತಿ ಬೆಳೆಸಿಕೊಂಡರೆ ಅಚ್ಚರಿ ಇಲ್ಲ ಎಂದು ಸಾರ್ವಜನಿಕರು ಆತಂಕಗೊಂಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry