ಶನಿವಾರ, ಜುಲೈ 24, 2021
22 °C

ಕುರಿ ಸಾಕಣೆಯ ಯಶೋಗಾಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇ ಸಾಯದೊಂದಿಗೆ ಕುರಿಗಳನ್ನು ಸಾಕಿ     ಆರ್ಥಿಕವಾಗಿ ಸದೃಢರಾಗಬಹುದು ಎನ್ನುವುದಕ್ಕೆ ಶಿಡ್ಲಘಟ್ಟ ತಾಲ್ಲೂಕಿನ ಆನೂರು ಗ್ರಾಮದ ರೈತ ವೀರಕೆಂಪಣ್ಣ ಹೊಸ ಉದಾಹರಣೆ. ಮೂವತ್ತು ವರ್ಷಗಳ ಹಿಂದೆ ಎರಡು ಕುರಿಗಳನ್ನು ಸಾಕುವುದರೊಂದಿಗೆ ಆರಂಭವಾದ ಅವರ ಕುರಿ ಸಾಕಣೆ ಕಾಯುಕ ಬೆಳೆಯುತ್ತಾ ಬಂದು ಈಗ ಒಂದು ಸಾವಿರ ಕುರಿಗಳಿಗೆ ವಿಸ್ತರಿಸಿದೆ!ರೈತ ಕುಟುಂಬದಿಂದ ಬಂದ ಕೆಂಪಣ್ಣ ಅವರಿಗೆ ಇದ್ದದ್ದು 2 ಎಕರೆ ಜಮೀನು. ಅಷ್ಟರಲ್ಲಿ ಹೆಚ್ಚಿನ ಆದಾಯ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಂಡ ಅವರು 1978ರಲ್ಲಿ ಎರಡು ಕುರಿಗಳನ್ನು ತಂದು ಸಾಕಲು ಆರಂಭಿಸಿದರು. 1987ರಲ್ಲಿ ಬ್ಯಾಂಕುಗಳಲ್ಲಿ ಸಾಲ ಪಡೆದು ಆಸ್ಟ್ರೇಲಿಯಾ ಮೂಲದ ರಾಮ್‌ಬುಲೆ ತಳಿಯ ಕುರಿಗಳನ್ನು ಹರಿಯಾಣದಿಂದ ತಂದು ಕುರಿ ಸಾಕಲು ಆರಂಭಿಸಿದರು. ಇಂದು ಅವರ ಬಳಿ ಒಂದು ಸಾವಿರ ರಾಮ್‌ಬುಲೆ ಕುರಿಗಳಿವೆ. 2 ಎಕರೆ ಜಮೀನು ಹನ್ನೆರಡು ಎಕರೆಯಷ್ಟಾಗಿದೆ. ದೇಶಿ ತಳಿಗಳಾದ ಬನ್ನೂರು ಕುರಿ ಮತ್ತು ರಾಮ್‌ಬುಲೆ ತಳಿಗಳ ಸಂಕರಣದಿಂದ ಹೊಸ ಮಿಶ್ರ ತಳಿಯನ್ನು ಅಭಿವೃದ್ಧಿಪಡಿಸಿದ್ದಾರೆ. ದೇಶಿ ತಳಿಯ ಕುರಿಯೊಂದರಲ್ಲಿ ದಿನಕ್ಕೆ 80ರಿಂದ 100ಗ್ರಾಂ ಮಾಂಸ ಬೆಳೆಯುತ್ತದೆ. ರಾಮ್‌ಬುಲೆ ಕುರಿಯಲ್ಲಿ 100ರಿಂದ 300ಗ್ರಾಂ ಮಾಂಸ ಬೆಳೆಯುತ್ತದೆ. ಈ ಕುರಿಗಳನ್ನು ಸಾಕಿ ರೈತರು ಆರ್ಥಿಕವಾಗಿ ಸದೃಢರಾಗಬಹುದು ಎನ್ನುವುದು ಕೆಂಪಣ್ಣ ಅವರ ಅನುಭವ.ರಾಮ್‌ಬುಲೆ ಕುರಿಗಳನ್ನು ಬಯಲಿನಲ್ಲಿ ಮೇಯಲು ಬಿಡುವುದಿಲ್ಲ. ಅವುಗಳಿಗೆ ತಟ್ಟೆಗಳಲ್ಲಿ ಆಹಾರ ನೀಡುತ್ತಾರೆ. ಆಹಾರವನ್ನು ವ್ಯರ್ಥಮಾಡದೆ ತಿನ್ನುತ್ತವೆ. ಹುರುಳಿ ಹೊಟ್ಟು, ಶೇಂಗಾ ಕಡ್ಡಿ, ಮೆಕ್ಕೆ ಜೋಳ, ಅಲಸಂದಿ, ಸೆಣಬನ್ನು ಮಿಶ್ರಣ ಮಾಡಿ ಮೇವಾಗಿ ಬಳಸುತ್ತಾರೆ. ಒಂದು ಕುರಿಗೆ ದಿನಕ್ಕೆ ಮೂರು ಕೆ.ಜಿ ಆಹಾರ ನೀಡುತ್ತಾರೆ. ಹಿಂಡಿ, ಮೆಕ್ಕೆಜೋಳದ ನುಚ್ಚನ್ನು ತಿಂಡಿಯಾಗಿ ನೀಡುತ್ತಾರೆ.ವರ್ಷಕ್ಕೆ 400 ಕುರಿ ಮರಿಗಳು ಹುಟ್ಟುತ್ತವೆ. ಕುರಿಗಳ ಮಾರಾಟದಿಂದ ವಾರ್ಷಿಕ 15ಲಕ್ಷ ರೂ ಆದಾಯ ಬರುತ್ತಿದೆ. ಇದರಲ್ಲಿ ಶೇ 50ರಷ್ಷು ಹಣ ಕುರಿಗಳ ಸಾಕಣೆಗೆ ವೆಚ್ಚವಾಗುತ್ತದೆ. ವರ್ಷಕ್ಕೆ ನೂರು ಟ್ರ್ಯಾಕ್ಟರ್‌ಗಳಷ್ಟು ಕುರಿ ಗೊಬ್ಬರ ಸಿಗುತ್ತದೆ. ಮೂರು ತಿಂಗಳ ಕುರಿ ಮರಿಗಳನ್ನು ಅವರು ಮಾರಾಟ ಮಾಡುತ್ತಾರೆ. ಕುರಿಗಳಿಗೆ ರೋಗಗಳು ಬಾರದಂತೆ ವಿಶೇಷ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

 ಕೆಂಪಣ್ಣ ಅವರು ಏಳು ಎಕರೆಯಲ್ಲಿ ಕುರಿಗಳಿಗೆ ಬೇಕಾದ ಮೇವು ಬೆಳೆದುಕೊಳ್ಳುತ್ತಾರೆ. ಮಳೆಗಾಲದಲ್ಲಿ ಕುರಿಗಳಿಗೆ ಆಹಾರ ಪೂರೈಕೆಯಲ್ಲಿ ತೊಂದರೆಯಾಗಬಾರದು ಎನ್ನುವ ಕಾರಣದಿಂದ ರಸ ಮೇವು ತಯಾರಿಸಿ ಬಳಸುತ್ತಾರೆ. ಯಂತ್ರದಿಂದ ಮೇವು ಕಟಾವ್ ಮಾಡಿ ದೊಡ್ಡ ತೊಟ್ಟಿಗಳಲ್ಲಿ ಕೆಡದಂತೆ ಸಂಗ್ರಹಿಸಿ ಇಟ್ಟುಕೊಂಡು ಬಳಸುತ್ತಾರೆ.ಕುರಿ ಸಾಕಣೆಯ ಸಾಧನೆಗಾಗಿ ರಾಜ್ಯ ಸರ್ಕಾರ ಕೆಂಪಣ್ಣ ಅವರಿಗೆ ಕೃಷಿ ಪಂಡಿತ ಪ್ರಶಸ್ತಿ ನೀಡಿದೆ. ಭಾರತ ಸರ್ಕಾರದ ಜಗಜೀವನ್ ರಾಮ್ ಕಿಸಾನ್ ಪುರಸ್ಕಾರ, ‘ಪ್ರಗತಿಪರ ಸಂಶೋಧನಾ ರೈತ’ ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ.  ಕೆಂಪಣ್ಣ ಅವರ ಮೊಬೈಲ್ ನಂಬರ್: 9449730563.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.