ಸೋಮವಾರ, ನವೆಂಬರ್ 18, 2019
26 °C

ಕುರುಗೋಡು: ಅಲ್ಲಂ ಕುಟುಂಬಕ್ಕೆ ಮನ್ನಣೆ

Published:
Updated:

ಬಳ್ಳಾರಿ: ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ 2008ರಲ್ಲಿ ರದ್ದಾಗಿರುವ ಜಿಲ್ಲೆಯ  ಕುರುಗೋಡು ವಿಧಾನಸಭೆ ಕ್ಷೇತ್ರ, ಕಂಪ್ಲಿ ಮತ್ತು ಬಳ್ಳಾರಿ ಗ್ರಾಮೀಣ ಕ್ಷೇತ್ರಗಳಲ್ಲಿ ಹರಿದು ಹಂಚಿಹೋಗಿದ್ದು, ಕಾಂಗ್ರೆಸ್‌ನ, ಅದರಲ್ಲೂ ಅಲ್ಲಂ ಕುಟುಂಬದ ಅಚ್ಚುಮೆಚ್ಚಿನ ಹಾಗೂ ಪ್ರಬಲ ಕ್ಷೇತ್ರವಾಗಿತ್ತು.ಏಕೀಕರಣದ ನಂತರ ನಡೆದ 1957ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಅಲ್ಲಂ ಸುಮಂಗಳಮ್ಮ ಮೊದಲ ಶಾಸಕಿಯಾಗಿ ಆಯ್ಕೆಯಾಗಿದ್ದರೆ,  1962, 1967ರಲ್ಲಿ ನಡೆದ ಚುನಾವಣೆಗಳಲ್ಲಿ ಅವರ ಪತಿ ಅಲ್ಲಂ ಕರಿಬಸಪ್ಪ ಸತತವಾಗಿ ಆಯ್ಕೆಯಾಗಿದ್ದರು.1989, 1994 ಮತ್ತು 1999ರಲ್ಲಿ ನಡೆದ ಚುನಾವಣೆಗಳಲ್ಲಿ ಇವರ ಪುತ್ರ ಅಲ್ಲಂ ವೀರಭದ್ರಪ್ಪ ಸತತ ಮೂರು ಬಾರಿ ಜಯಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.ಕ್ಷೇತ್ರಕ್ಕೆ ನಡೆದ ಒಟ್ಟು 11 ಚುನಾವಣೆಗಳಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರನ್ನೂ ಒಳಗೊಂಡಂತೆ ಕಾಂಗ್ರೆಸ್ ಒಟ್ಟು 8 ಬಾರಿ ಜಯ ಗಳಿಸಿದ್ದು ವಿಶೇಷ. ತಲಾ ಒಮ್ಮೆ ಕಾಂಗ್ರೆಸ್ `ಐ', ರಾಷ್ಟ್ರೀಯ ಜನತಾ ಪಕ್ಷ ಹಾಗೂ ಜೆಡಿಎಸ್‌ನ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಶಾಸಕರಾಗಿ ಆಯ್ಕೆಯಾಗಿದ್ದರು.1957ರಲ್ಲಿ ಪಕ್ಷೇತರ ಅಭ್ಯರ್ಥಿ ಕವಿತಾಳ ದೊಡ್ಡಬಸಪ್ಪ ಅವರ ವಿರುದ್ಧ ಅಲ್ಲಂ ಸುಮಂಗಳಮ್ಮ 5386 ಮತಗಳ ಅಂತರದಲ್ಲಿ ಜಯಿಸಿದರೆ, 1962ರಲ್ಲಿ ಅಲ್ಲಂ ಕರಿಬಸಪ್ಪ ಅವರು ಪಕ್ಷೇತರ ಅಭ್ಯರ್ಥಿ ಹಂಪಾ ರೆಡ್ಡಿ ವಿರುದ್ಧ 7415 ಮತಗಳ ಅಂತರದಲ್ಲಿ, 1867ರಲ್ಲಿ ಸ್ವತಂತ್ರ ಪಕ್ಷದ ಸಿ.ಎಂ. ರೇವಣಸಿದ್ದಯ್ಯ ಅವರ ವಿರುದ್ಧ 10439 ಮತಗಳ ಅಂತರದಲ್ಲಿ ಜಯಿಸಿದ್ದರು.1972ರಲ್ಲಿ ಸಂಸ್ಥಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕರಿಬಸಪ್ಪ, ಕಾಂಗ್ರೆಸ್‌ನ ಎಚ್.ಲಿಂಗಾರೆಡ್ಡಿ ಅವರ ವಿರುದ್ಧ ಸೋತಿದ್ದರು. 1978ರಲ್ಲಿ ಕಾಂಗ್ರೆಸ್ `ಐ' ಪಕ್ಷದ ಎಂ.ರಾಮಪ್ಪ ಅವರು ಜನತಾ ಪಕ್ಷದ ಅಲ್ಲಂ ಕರಿಬಸಪ್ಪ, ಕಾಂಗ್ರೆಸ್‌ನ ಸೀತಾರಾಮ ರೆಡ್ಡಿ ಅವರ ವಿರುದ್ಧ ಜಯಿಸಿದ್ದರು.1983ರಲ್ಲಿ ಕಾಂಗ್ರೆಸ್‌ನ ಎಚ್.ನಾಗನಗೌಡ 22734 ಮತ ಗಳಿಸುವ ಮೂಲಕ ಸಮೀಪದ ಪ್ರತಿಸ್ಪರ್ಧಿಯಾಗಿದ್ದ ಪಕ್ಷೇತರ ಅಭ್ಯರ್ಥಿ ಎನ್.ರಾಜಶೇಖರಗೌಡ ವಿರುದ್ಧ 2159 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ದುರ್ಗಪ್ಪ ಹಾಗೂ ರಾಜಶೇಖರಗೌಡ ಸಹ ಕಣದಲ್ಲಿದ್ದರು.1985ರಲ್ಲಿ ರಾಷ್ಟ್ರೀಯ ಜನತಾ ಪಕ್ಷದ ಬಿ.ಶಿವರಾಮರೆಡ್ಡಿ ಅವರು ಕಾಂಗ್ರೆಸ್‌ನ ಎಚ್.ನಾಗನಗೌಡ ಅವರನ್ನು 5838 ಮತಗಳ ಅಂತರದಿಂದ ಸೋಲಿಸಿ, ಕ್ಷೇತ್ರದಿಂದ ಆಯ್ಕೆಯಾದ, `ಮೊದಲ ಕಾಂಗ್ರೆಸ್ಸೇತರ ಶಾಸಕ' ಎಂಬ ಕೀರ್ತಿಗೆ ಪಾತ್ರರಾದರು.ಅಲ್ಲಂ ವೀರಭದ್ರಪ್ಪ ದರ್ಬಾರ್: 1989ರಿಂದ ಸತತವಾಗಿ ಮೂರು ಬಾರಿ ಜಯಿಸುವ ಮೂಲಕ ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಅಲ್ಲಂ ವೀರಭದ್ರಪ್ಪ ಹ್ಯಾಟ್ರಿಕ್ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.1989ರಲ್ಲಿ ವೀರಭದ್ರಪ್ಪ (43189) ಜನತಾದಳದ ಬಿ.ಶಿವರಾಮರೆಡ್ಡಿ (28640) ವಿರುದ್ಧ 14549 ಮತಗಳ ಅಂತರದಲ್ಲಿ ಜಯಿಸುವ ಮೂಲಕ, ಕ್ಷೇತ್ರದಲ್ಲಿ ಹೆಚ್ಚು ಮತಗಳ ಅಂತರದಲ್ಲಿ ಜಯಿಸಿದ ಮೊದಲಿಗರು ಎಂಬ ಖ್ಯಾತಿಗೆ ಒಳಗಾದರು. ಇದೇ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ಈಶ್ವರಪ್ಪ ಅವರು 9199 ಮತ ಗಳಿಸಿದ್ದರು.1994ರಲ್ಲಿ ಎಸ್.ಬಂಗಾರಪ್ಪ ಅವರು ಸ್ಥಾಪಿಸಿದ್ದ `ಕರ್ನಾಟಕ ಕಾಂಗ್ರೆಸ್' ಪಕ್ಷದ  ಮುಂಡ್ಲೂರು ರಾಮಪ್ಪ (26400) ಅವರ ವಿರುದ್ಧ ಸ್ಪರ್ಧೆಗಿಳಿದಿದ್ದ ಕಾಂಗ್ರೆಸ್‌ನ ವೀರಭದ್ರಪ್ಪ (31341) ಅವರು 4941 ಮತಗಳ ಅಂತರದಲ್ಲಿ ಮರು ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ಜನತಾದಳದ ಶಿವರಾಮರೆಡ್ಡಿ (23297), ಬಿಜೆಪಿಯ ಎಸ್.ಲಕ್ಷ್ಮಿನಾರಾಯಣ (8456), ಪೋರನಗೌಡ (840), ಬಿ.ಗಂಗಾಧರಪ್ಪ, ಎಂ.ಜಯರಾಮಪ್ಪ, ವೈ.ನಾಗರೆಡ್ಡಿ, ಬಸವನಗೌಡ, ಸತ್ಯಪ್ರಸಾದ್ ಬಾಬು, ವಿ.ಸುಂಕಣ್ಣ ಸೇರಿದಂತೆ ಒಟ್ಟು 11 ಜನ ಕಣದಲ್ಲಿದ್ದದ್ದು ವಿಶೇಷವಾಗಿತ್ತು.1999ರ ಚುನಾವಣೆಯಲ್ಲಿ ಬಿಜೆಪಿ, ಜೆಡಿಯು ಮೈತ್ರಿಯೊಂದಿಗೆ ಕಣಕ್ಕಿಳಿದಿದ್ದ ಎನ್.ಆರ್. ಸೂರ್ಯನಾರಾಯಣ ರೆಡ್ಡಿ (42987) ಅವರು ತೀವ್ರ ಸ್ಪರ್ಧೆ ನೀಡಿದರೂ ಅಲ್ಲಂ ವೀರಭದ್ರಪ್ಪ (47395) ಸತತವಾಗಿ ಮೂರನೇ ಬಾರಿ ಗೆಲ್ಲುವ ಮೂಲಕ  ಹ್ಯಾಟ್ರಿಕ್ ಸಾಧನೆ ಮಾಡಿದರು.ಜೆಡಿಎಸ್‌ನಿಂದ ವೈ.ನೆಟ್ಟಕಲ್ಲಪ್ಪ (9038), ಬಿಎಸ್‌ಪಿಯಿಂದ ಚೇಳ್ಳಗುರ್ಕಿ ಅಂಜಿನಪ್ಪ (4027) ಮತ್ತು ಪಕ್ಷೇತರ ಅಭ್ಯರ್ಥಿ ಬಷೀರ್ ಅಹಮ್ಮದ್ (142) ಸ್ಪರ್ಧಿಸಿದ್ದರು.ಕ್ಷೇತ್ರಕ್ಕಾಗಿ 2004ರಲ್ಲಿ ನಡೆದ ಕೊನೆಯ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ ಎನ್.ಆರ್. ಸೂರ್ಯನಾರಾಯಣ ರೆಡ್ಡಿ (56517) ಅವರು 19271 ಮತಗಳ ಅಂತರದಲ್ಲಿ ಜಯಿಸಿ ದಾಖಲೆ ನಿರ್ಮಿಸಿದರು. ಬಿಜೆಪಿಯ ಕೆ.ಎ. ರಾಮಲಿಂಗಪ್ಪ (37246) ಅವರು ಕಾಂಗ್ರೆಸ್‌ನ ಅಲ್ಲಂ ವೀರಭದ್ರಪ್ಪ (29749) ಅವರನ್ನೂ ಹಿಂದಿಕ್ಕಿ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದರು.ಬಿಎಸ್‌ಪಿಯಿಂದ ಬಿ.ಶಿವಲಿಂಗ, ಜನತಾ ಪಕ್ಷದಿಂದ ಜೆ. ಬಸವರಾಜ್, ಪಕ್ಷೇತರರಾಗಿ ಅರುಣಕುಮಾರ್, ಪಿಪಿಐನಿಂದ ಉಷಾ ರಾಣಿ ಸ್ಪರ್ಧಿಸಿದ್ದರು. ಬಳ್ಳಾರಿ ನಗರದ ಕೆಲವು ಪ್ರದೇಶಗಳನ್ನೂ ಒಳಗೊಂಡಿದ್ದ ಈ ಕ್ಷೇತ್ರ 2008ರಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡು, ಕಂಪ್ಲಿ ಮತ್ತುಬಲ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಲೀನವಾಗಿದ್ದು, ಕುರುಗೋಡು ಹೋಬಳಿ ಇದೀಗ ಕಂಪ್ಲಿ ಕ್ಷೇತ್ರದಲ್ಲಿದೆ.ಕಂಪ್ಲಿ ಮತ್ತು ಬಳ್ಳಾರಿ ಗ್ರಾಮೀಣ ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, 2008ರ ಚುನಾವಣೆಯಲ್ಲಿ ಕಂಪ್ಲಿಯಿಂದ ಬಿಜೆಪಿಯ ಟಿ.ಎಚ್. ಸುರೇಶಬಾಬು, ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಬಿಜೆಪಿಯ ಬಿ.ಶ್ರೀರಾಮುಲು ವಿಜಯಶಾಲಿಯಾಗಿದ್ದರು.

ಪ್ರತಿಕ್ರಿಯಿಸಿ (+)