ಕುರುಗೋಡು ಬಂದ್ ಯಶಸ್ವಿ

7

ಕುರುಗೋಡು ಬಂದ್ ಯಶಸ್ವಿ

Published:
Updated:

ಕುರುಗೋಡು: ಕಳ್ಳತನ ಪ್ರಕರಣ ಸಂಬಂಧ ವಿಚಾರಣೆಗೆ ಕರೆದುಕೊಂಡು ಬಂದಿದ್ದ ಶಿವಕುಮಾರ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ವಿಷ ಸೇವಿಸಿ ಬಳ್ಳಾರಿ ವಿಮ್ಸನಲ್ಲಿ ಮೃತಪಟ್ಟ ಘಟನೆ ಖಂಡಿಸಿ ಸೋಮವಾರ ಕರೆ ನೀಡಿದ್ದ ಕುರುಗೋಡು ಬಂದ್ ಯಶಸ್ವಿಯಾಯಿತು.ಪಟ್ಟಣದ ಮುಖ್ಯ ವೃತ್ತದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ವ್ಯಾಪಾರಿಗಳು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರು. ಬಂದ್ ಹಿನ್ನೆಲೆಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಮಧ್ಯಾಹ್ನದ ನಂತರ ವಾಹನ ಸಂಚಾರ ಮತ್ತು ವ್ಯಾಪಾರ ವಹಿವಾಟು ಎಂದಿನಂತೆ ಆರಮಭಗೊಂಡವು.ಕುರುಗೋಡು ಬಂದ್ ಕರೆ ನೀಡಿದ್ದ ವಿವಿಧ ಸಂಘಟನೆ ಮುಖಂಡರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಘಟನೆಗೆ ಕಾರಣರಾದ ನಿಜವಾದ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸಿದರು.ಸಿಪಿಐ(ಎಂ) ಮುಖಂಡ ವಿ.ಎಸ್. ಶಿವಶಂಕರ್, ಕುರುಗೋಡು ಪೊಲೀಸ್ ವೃತ್ತನಿರೀಕ್ಷಕರ ಕಚೇರಿ ವ್ಯಾಪ್ತಿ ಕುಡಿತಿನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಶಿವಕುಮಾರನನ್ನು ಬಂಧಿಸಿ ಕಾನೂನು ಬಾಹಿರವಾಗಿ ಠಾಣೆಗೆ ಕರೆತಂದಿರುವ ಸಿಪಿಐ ಎ.ಆರ್. ಕಲಾದಗಿಯನ್ನು ಅಮಾನತು ಮಾಡದೆ, ಪಿಎಸ್‌ಐ ಮತ್ತು ಎಎಸ್‌ಐಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತು ಗೊಳಿಸಿದ ಕ್ರಮ ಖಂಡಿಸಿದರು.ಕೂಡಲೇ ಸಿಪಿಐ ಎ.ಆರ್. ಕಲಾದಗಿಯನ್ನು ಸೇವೆಯಿಂದ ಅಮಾನತು ಮಾಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಮೃತ ಶಿವಕುಮಾರ್ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವ ಜತೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಕೆ.ಗಾದಿಲಿಂಗಪ್ಪ, ಇಲಾಖೆ ಮಾಡಿದ ತಪ್ಪನ್ನು ಮರೆಮಾಚಲು ಘಟನೆಯನ್ನು ಸಿಒಡಿಗೆ ವಹಿಸಿರುವ ಕ್ರಮವನ್ನು ಖಂಡಿಸಿದರು. ತಪ್ಪಿತಸ್ತ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಹಾಲಿ ಜಿಲ್ಲಾ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.ಎಚ್.ಎಂ.ವಿಶ್ವನಾಥಸ್ವಾಮಿ ಮತ್ತು ಮಹ್ಮದ್‌ಖಾನ್, ಅಂತರಾಷ್ಟ್ರೀಯ ಮಟ್ಟದಲ್ಲಿ ಕಳ್ಳಸಾಗಾಣಿಕೆ ಮಾಡಿದ ಕಳ್ಳರನ್ನು ಹಿಡಿಯುವ ಬದಲು ಅವರ ಮನೆಕಾಯುವ ಕೆಲಸ ಮಾಡುವ ಪೊಲೀಸರು ಚಿಕ್ಕಪುಟ್ಟ ಕಳ್ಳತನ ಮಾಡಿದ ಕಳ್ಳನನ್ನು ಹಿಡಿದು ಥಳಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಅಕ್ರಮ ಗಣಿ ಸಾಗಾಣಿಕೆ ಬಗ್ಗೆ ಟೀಕಿಸಿದರು.ಗ್ರಾ.ಪಂ. ಸದಸ್ಯರಾದ ವಿ. ನಾಗರಾಜ, ಟಿ. ಸಿದ್ದಪ್ಪ ಸಿರಿಗನ್ನಡ ಯುವಕ ಸಂಘದ ಕಾರ್ಯದರ್ಶಿ ಕೆ.ವಿರುಪಾಕ್ಷಿ ಮಾತನಾಡಿದರು.ಭೇಟಿ: ಸಹಾಯಕ ಆಯುಕ್ತ ಶಶಿಕಾಂತ್ ಸಿಂದಲ್ ಪ್ರತಿಭಟನಾ ನಿರತರನ್ನು ಭೇಟಿ ಮಾಡಿ ಮನವಿ ಪತ್ರ ಸ್ವೀಕರಿಸಿದರು. ಸಿಪಿಐ ಅಮಾನತಿಯ ಬಗ್ಗೆ ಕ್ರಮಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ಮಾತನಾಡುವ ಭರವಸೆ ನೀಡಿದರು.ಚಾನಾಳ್ ಆನಂದ, ಅಮೀನ್‌ಸಾಬ್, ಆಂಜನೇಯ, ವಿ. ಬಸವರಾಜ, ಎ. ಮಂಜುನಾಥ, ಸೋಮಯ್ಯ, ಗಾಳಿ ಬಸವರಾಜ, ಎಚ್. ಮಲ್ಲಪ್ಪ, ಕೆ. ಖಾಜಾ, ವಿ. ಗಂಗರಾಜ್, ವಿ. ಭೋಗಪ್ಪ, ವಿ. ಅಂಬಣ್ಣ, ತಿಮ್ಮಪ್ಪ, ಪಿ. ಸುಭಾನಿ, ವಿ. ಹೊನ್ನೂರ್‌ಸ್ವಾಮಿ, ಎನ್. ಮಾರೇಶ್, ಕೆ. ಬಾಲೇಸಾಬ್ ಇತರರಿದ್ದರು. ಬಂದ್ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಂದ ಹೆಚ್ಚಿನ ಸಿಬ್ಬಂದಿ ಕರೆಸಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry