ಕುರುಡುಮಲೆ ಗಣೇಶ ಸೋಮೇಶ

7

ಕುರುಡುಮಲೆ ಗಣೇಶ ಸೋಮೇಶ

Published:
Updated:

ಪುರಾಣ ಪ್ರಸಿದ್ಧ ಕುರುಡುಮಲೆ ಕ್ಷೇತ್ರ ಕೋಲಾರ ಜಿಲ್ಲೆ ಮುಳಬಾಗಿಲಿನಿಂದ 10ಕಿ.ಮೀ ದೂರದ ಬೆಟ್ಟದಲ್ಲಿದೆ. ಚೋಳರ ಕಾಲದ ದೇಗುಲಗಳಿರುವ ಈ ಸ್ಥಳ ಕುರುಡುಮಲೆ ಗಣಪನ ಸನ್ನಿಧಿಯೆಂದೇ ಪ್ರಸಿದ್ಧಿ.

ಗೌರಿ- ಗಣೇಶ ಹಬ್ಬದ ಸಂದರ್ಭದಲ್ಲಂತೂ ಇಲ್ಲಿ ಜನಜಾತ್ರೆ. ಗಣೇಶ ಚೌತಿ ಮರುದಿನ ಇಲ್ಲಿನ ಗಣೇಶನಿಗೆ ಅದ್ದೂರಿ ಬ್ರಹ್ಮ ರಥೋತ್ಸವ. ಗಣಪತಿ ಮತ್ತು ಸೋಮೇಶ್ವರ ದೇಗುಲಗಳು ಕುರುಡುಮಲೆಯ ಮುಖ್ಯ ಆಕರ್ಷಣೆ.

ತ್ರಿಮೂರ್ತಿಗಳು ತ್ರಿಪುರಾಸುರ ಸಂಹಾರಕ್ಕಾಗಿ ಇಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿದರು ಹಾಗೂ ತ್ರೇತಾ ಯುಗ, ದ್ವಾಪರ ಯುಗಗಳಲ್ಲಿ ದೇವಾನುದೇವತೆಗಳೂ ಇಲ್ಲಿನ ವಿನಾಯಕ ಮೂರ್ತಿಯನ್ನು ಪೂಜಿಸಿದರೆಂದು ಸ್ಥಳ ಪುರಾಣದಲ್ಲಿದೆ.ಕುರುಡುಮಲೆ ಬಯಲು ಗಣಪನಿಗೆ ವಿಜಯನಗರ ಅರಸರ ಕಾಲದಲ್ಲಿ ಈಗಿನ ದೇವಾಲಯ ನಿರ್ಮಿಸಲಾಯಿತು. ಮುಂದೆ ಮೈಸೂರು ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರು ದೇಗಲವನ್ನು ಅಭಿವೃದ್ಧಿಪಡಿಸಿದರು.

ಇಲ್ಲಿನ ಗಣಪ ಸುಮಾರು 15 ಅಡಿ ಎತ್ತರದ ಸುಂದರ ಕಪ್ಪು ಶಿಲೆಯಲ್ಲಿ ನಿರ್ಮಾಣಗೊಂಡಿದ್ದಾನೆ. ದೇವಾಲಯದ ಪ್ರಾಕಾರದಲ್ಲಿ ಆರು ಅಡಿ ಎತ್ತರದ ಸುಬ್ರಹ್ಮಣ್ಯ ಮೂರ್ತಿಯೂ ಇದೆ. ಗಣಪತಿ ವಾಹನ ಮೂಷಕ ಶಿಲಾಮೂರ್ತಿಗೂ ನಿತ್ಯ ಪೂಜೆ ಇಲ್ಲಿನ ವಿಶೇಷ.ಚೋಳರ ಕಾಲಕ್ಕೆ ಸೇರಿದ ಕುರುಡುಮಲೆ ಸೋಮೇಶ್ವರ ದೇವಾಲಯದ ವಾಸ್ತು ಶಿಲ್ಪ ಬೇಲೂರು ಹಳೇಬೀಡು ದೇವಾಲಯಗಳಿಗೆ ಹೋಲಿಸಬಹುದಾದಷ್ಟು ಕಲಾತ್ಮಕ. ಇದರ ಮುಖ್ಯ ದ್ವಾರದ ಬಲಭಾಗದಲ್ಲಿ ಪಂಜರದಲ್ಲಿರುವ ಬಯಲು ಗಣಪನನ್ನು ನೋಡಬಹುದು.

ಗರ್ಭಗುಡಿ, ನವರಂಗ, ಮುಖಮಂಟಪ, ಸುಖನಾಸಿಗಳಿರುವ ವಿಶಾಲ ದೇವಾಲಯದ ಒಳಪ್ರಕಾರದಲ್ಲಿ ಅಷ್ಟಮೂಲೆಗಳಿರುವ ಶಿಲಾ ಸ್ತಂಭಗಳ ಮೇಲಿನ ಚೋಳರಾಜ, ಜಕಣಾಚಾರಿ ಹಾಗೂ ದೇವರುಗಳ ಉಬ್ಬುಚಿತ್ರಗಳು ಮತ್ತೆ ಮತ್ತೆ ನೋಡಬೇಕೆನಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry