ಬುಧವಾರ, ನವೆಂಬರ್ 20, 2019
20 °C

ಕುರುಡು ಕಾಂಚಾಣ ಕುಣಿಯುತಲಿತ್ತ...!

Published:
Updated:

ಬೆಳಗಾವಿ:  `ಕುರುಡು ಕಾಂಚಾಣ ಕುಣಿಯುತಲಿತ್ತ... ಕಾಲಿಗೆ ಬಿದ್ದವರ ತುಳಿಯುತಲಿತ್ತ..!' ಎಂಬ ವರಕವಿ ಬೇಂದ್ರೆ ಅವರ ಈ ಹಾಡು ಚುನಾವಣೆಯ ಈ ಸಂದರ್ಭದಲ್ಲಿ ಮತ್ತೆ ಮತ್ತೆ ಕಾಡುತ್ತದೆ.ಕಣದಲ್ಲಿರುವ ಅಭ್ಯರ್ಥಿಗಳು ತಾವು ಹೇಗಾದರೂ ಮಾಡಿ ಗೆಲ್ಲಲೇ ಬೇಕು ಎಂಬ ಉದ್ದೇಶದಿಂದ ಒಂದೆಡೆ ಮತದಾರರತ್ತ ಮನಸೋ ಇಚ್ಛೆ ಹಣ ತೂರಿದರೆ, ಇನ್ನೊಂದೆಡೆ ಮದ್ಯದ ಹೊಳೆಯನ್ನೇ ಹರಿಸುತ್ತಾರೆ.ಮದ್ಯ- ಹಣಗಳ ಹಂಚಿಕೆಯಿಂದ ಚುನಾವಣೆಯನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಚುನಾವಣಾ ಆಯೋಗವು ಚಾಪೆಯ ಕೆಳಗೆ ನುಸುಳಿದರೆ, ಇದಕ್ಕೆ ಸೆಡ್ಡು ಹೊಡೆಯುತ್ತಿರುವ ಅಭ್ಯರ್ಥಿಗಳು ರಂಗೋಲಿ ಕೆಳಗೆ ನುಸುಳಿ ತಮ್ಮ ಕೈಚಳಕ ತೋರಿಸುತ್ತಿದ್ದಾರೆ.ಮತದಾರರಿಗೆ ವಿಮೆ ಮಾಡಿಸುವುದು, ಮಹಿಳೆಯರಿಗೆ ಹೊಲಿಗೆ ಯಂತ್ರ, ಟೀಶರ್ಟ್ ವಿತರಣೆಯಂತಹ ಹಲವು ಪ್ರಕರಣಗಳು ಈಗಾಗಲೇ ಒಂದರ ಮೇಲೆ ಒಂದು ಬೆಳಕಿಗೆ ಬರುತ್ತಿವೆ. ಚುನಾವಣೆ ನಾಮಪತ್ರ ವಾಪಸ್ ಪಡೆಯುವ ಅವಧಿ ಮುಗಿದಿದ್ದು ಸಹಜವಾಗಿಯೇ ಪ್ರಚಾರ ಇನ್ನಷ್ಟು ಅಬ್ಬರ ಪಡೆದುಕೊಳ್ಳಲಿದೆ. ಮತದಾರರನ್ನು ಓಲೈಸಿಕೊಳ್ಳಲು ಹಲವು ಬಗೆಯ ಆಮಿಷಗಳನ್ನು ಒಡ್ಡಲಿದ್ದಾರೆ. ಇದಕ್ಕಾಗಿ ಈಗಾಗಲೇ ವಿವಿಧೆಡೆಗಳಿಂದ ಹಣ ಹಾಗೂ ಮದ್ಯದ ಬಾಟಲಿಗಳ ಸಾಗಾಟ ಶುರುವಾಗಿದ್ದು, ಅಲ್ಲಲ್ಲಿ ಪೊಲೀಸರ ಬಲೆಗೆ ಬೀಳುತ್ತಿವೆ.ಚುನಾವಣೆ ನೀತಿ ಸಂಹಿತೆ ಜಾರಿಯಾದ ಒಂದೆರಡು ದಿನಗಳಲ್ಲೇ ಜಿಲ್ಲೆಯ ಆಯಕಟ್ಟಿನ ಜಾಗಗಳಲ್ಲಿ ತಪಾಸಣಾ ಕೇಂದ್ರಗಳನ್ನು ನಿರ್ಮಿಸಲಾಗಿದೆ. ವಿಶೇಷವಾಗಿ ಗೋವಾ ಗಡಿ ಭಾಗವಾದ ಖಾನಾಪುರ, ಮಹಾರಾಷ್ಟ್ರ ಗಡಿ ಭಾಗಗಳಾದ ಚಿಕ್ಕೋಡಿ-ನಿಪ್ಪಾಣಿ, ಅಥಣಿ ತಾಲ್ಲೂಕುಗಳಲ್ಲಿ ಹೆಚ್ಚು ತಪಾಸಣಾ ಕೇಂದ್ರಗಳನ್ನು ನಿರ್ಮಿಸಿರುವ ಆಯೋಗವು, ಕಟ್ಟೆಚ್ಚರ ವಹಿಸುತ್ತಿದೆ. ಜೊತೆಗೆ ಜಿಲ್ಲೆಯ ವಿವಿಧೆಡೆ ಸಂಚರಿಸುವ ಫ್ಲೈಯಿಂಗ್ ಸ್ಕ್ವಾಡ್‌ಗಳು ಕಾರ್ಯಾಚರಣೆ ನಡೆಸುತ್ತಿವೆ.ಚುನಾವಣಾ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಹಣ- ಮದ್ಯ ಸಾಗಾಟದ ಕುರಿತು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಸಾರ್ವಜನಿಕರಿಂದ ನಿತ್ಯ ಹಲವು ದೂರುಗಳು ಜಿಲ್ಲೆಯ ವಿವಿಧೆಡೆಯಿಂದ ಬರುತ್ತಿವೆ. ಕಳೆದ 20 ದಿನಗಳಲ್ಲಿ ಸಹಾಯವಾಣಿಗೆ 2,000ಕ್ಕೂ ಹೆಚ್ಚು ಕರೆಗಳು ಬಂದಿದ್ದು, ಹೆಚ್ಚಿನ ಪಾಲು ದೂರಿನ ಕರೆಗಳೇ ಆಗಿವೆ.ಇದರ ನಡುವೆಯೂ ಅಧಿಕಾರಿಗಳ ಕಣ್ತಪ್ಪಿಸಿ ಹಣ- ಮದ್ಯದ ಸಾಗಾಟ ನಡೆಯುತ್ತದೆ.. ಅಭ್ಯರ್ಥಿಗಳು ತಮ್ಮ `ಶಿಷ್ಯ'ರ ಮೂಲಕ ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಮತದಾರರಿಗೆ ಹಣ- ಮದ್ಯ ಹಂಚುವ ಕೊನೆ ಕ್ಷಣದ ಕಸರತ್ತನ್ನು ಮಾಡಲು ಸಜ್ಜಾಗುತ್ತಿದ್ದಾರೆ.ಬಲೆಗೆ ಸಿಲುಕಿದ ಮೀನು: ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಲವು ಬಗೆಯ ಆಮಿಷವೊಡ್ಡಲು ಯತ್ನಿಸುತ್ತಿರುವಾಗ ಚುನಾವಣಾಧಿಕಾರಿಗಳ ಬಲೆಗೆ ಹಲವರು ಸಿಲುಕಿಕೊಂಡಿದ್ದಾರೆ.ಖಾನಾಪುರ ಕ್ಷೇತ್ರದಲ್ಲಿ ಮತದಾರರಿಗೆ ಅಪಘಾತ ಗುಂಪು ವಿಮೆ ಮಾಡಿಸಿದ ಕಾರ್ಡ್‌ಗಳನ್ನು ಪಕ್ಷೇತರ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಬೆಂಬಲಿಗರು ವಿತರಿಸುತ್ತಿರುವಾಗ ಚುನಾವಣಾಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳಗಾವಿಯ ಶಹಾಪುರದಲ್ಲಿ ಶಾಸಕ ಅಭಯ ಪಾಟೀಲರ ಹಿಂಬಾಲಕರು ಸೀರೆಗಳನ್ನು ಹಂಚುತ್ತಿರುವ ಕುರಿತು ದೂರು ದಾಖಲಾಗಿದೆ.ಏಪ್ರಿಲ್ 12ರಂದು ಚಿಕ್ಕೋಡಿ ತಾಲ್ಲೂಕಿನ ನಿಪ್ಪಾಣಿಯಲ್ಲಿ ಲೆಕ್ಕಪತ್ರ ಇಲ್ಲದ 27 ಲಕ್ಷ ರೂಪಾಯಿ ನಗದು ಹಾಗೂ 19 ಲಕ್ಷ ಮೌಲ್ಯದ ಬೆಳ್ಳಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಏಪ್ರಿಲ್ 15ರಂದು ಖಾನಾಪುರ ತಾಲ್ಲೂಕಿನಲ್ಲಿ ಲೆಕ್ಕಪತ್ರ ಇಲ್ಲದೇ ಸಾಗಿಸುತ್ತಿದ್ದ 7 ಲಕ್ಷ ನಗದು ಹಾಗೂ 4 ಲಕ್ಷ ಮೌಲ್ಯದ ಕಾರನ್ನು ಜಪ್ತಿ ಮಾಡಲಾಗಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಚಾರ ದಳದ ಅಧಿಕಾರಿಗಳು ದಾಖಲೆಗಳಿಲ್ಲದ 7.59 ಲಕ್ಷ ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.ಏಪ್ರಿಲ್ 18ರಂದು ಗೋಕಾಕ ತಾಲ್ಲೂಕಿನ ಮಾಲದಿನ್ನಿ ಕ್ರಾಸ್ ಬಳಿ ದಾಖಲೆ ಇಲ್ಲದೇ 11 ಲಕ್ಷ ನಗದು ಸಾಗಿಸುತ್ತಿದ್ದ ಸಾಂಗ್ಲಿ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅದೇ ರೀತಿ ಕಾಗದಪತ್ರವಿಲ್ಲದೇ ಬೆಳಗಾವಿಯಿಂದ ಕುಷ್ಟಗಿಗೆ ಒಯ್ಯುತ್ತಿದ್ದ 8.38 ಲಕ್ಷ ನಗದನ್ನು ಸವದತ್ತಿ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಮದ್ಯದ ಹೊಳೆ:  ಏಪ್ರಿಲ್ 10ರಂದು ಗೋವಾದಿಂದ ಅಕ್ರಮವಾಗಿ 500 ಬಾಕ್ಸ್‌ನಲ್ಲಿ ಸುಮಾರು 4,300 ಲೀಟರ್ ರಾಯಲ್ ಕ್ಲಾಸಿಕ್ ಮದ್ಯ ಸಾಗಿಸುತ್ತಿದ್ದಾಗ ಲಾಟರಿ ಮತ್ತು ಸಾರಾಯಿ ನಿಷೇಧ ದಳದ ಸಿಬ್ಬಂದಿ ದಾಳಿ ನಡೆಸಿ ವಶಪಡಿಸಿಕೊಂಡಿದ್ದರು.ಏಪ್ರಿಲ್ 12ರಂದು 27 ಲೀಟರ್ ಗೋವಾ ಮದ್ಯ, 51.84 ಲೀಟರ್ ಕಳ್ಳಬಟ್ಟಿ ಸಾರಾಯಿ, ಏಪ್ರಿಲ್ 14ರಂದು 381 ಲೀಟರ್ ಗೋವಾ ಮದ್ಯ, ಏಪ್ರಿಲ್ 18ರಂದು 42 ಲೀಟರ್ ಗೋವಾ ಮದ್ಯವನ್ನು ಅಬಕಾರಿ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಮಾರ್ಚ್ 20ರಿಂದ ಏಪ್ರಿಲ್ 18ರ ವರೆಗೆ ಅಕ್ರಮವಾಗಿ ಮದ್ಯ ಸಾಗಾಟ ನಡೆಸಿದ 65 ವ್ಯಕ್ತಿಗಳನ್ನು ಬಂಧಿಸಿ, 49,08 ಲೀಟರ್ ಗೋವಾ ಮದ್ಯ  ವಶಪಡಿಸಿಕೊಂಡಿದ್ದಾರೆ.ಚುನಾವಣೆ ಘೋಷಣೆಯಾದ ದಿನದಿಂದ ಮದ್ಯದ ಅಂಗಡಿಗಳಲ್ಲಿ ವ್ಯಾಪಾರ ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ಪರವಾನಿಗೆ ಪಡೆದ ಮದ್ಯದ ಅಂಗಡಿಯವರು ಮಾರ್ಚ್ ತಿಂಗಳಲ್ಲಿ 1,41,918 ಲೀಟರ್ ಮದ್ಯ ಖರೀದಿಸಿದ್ದರು. ಏಪ್ರಿಲ್ 1ರಿಂದ 15ರ ವರೆಗೆ 56,380 ಲೀಟರ್ ಮದ್ಯ  ಖರೀದಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳ ಕಚೇರಿ ಮೂಲಗಳು ತಿಳಿಸಿವೆ.ಚುನಾವಣೆಯ ಕಾವು ದಿನೇ ದಿನೇ ಏರುತ್ತಿದ್ದು, ಮತದಾನದ ದಿನ ಹತ್ತರ ಬರುತ್ತಿದ್ದಂತೆ ಹಣ ಹಾಗೂ ಮದ್ಯದ ಹೊಳೆಯ ಹರಿವಿನ ಪ್ರಮಾಣವೂ ಹೆಚ್ಚಲಿದೆ.

ಪ್ರತಿಕ್ರಿಯಿಸಿ (+)