ಕುರುಡು ಗ್ರಾಮಭಾರತ?

7
ರೆಕ್ಕೆ ಬೇರು

ಕುರುಡು ಗ್ರಾಮಭಾರತ?

Published:
Updated:

ಅನೇಕ ಭಾರತೀಯರಿಗೆ ಗಾಢ ಬಣ್ಣ, ಘಾಟು ವಾಸನೆ, ಕಿವಿಯ ತಮಟೆ ಎಗರಿ ಹೋಗುವಂಥ ಸದ್ದು, ನವರಂಧ್ರಗಳಲ್ಲೂ ಬೆವರು ಕೀಳಿಸುವ ಖಾರ ಮಸಾಲೆ ಇತ್ಯಾದಿಗಳು ಇಷ್ಟ. ಕೊಂಚ ಸ್ಪ್ಯಾನಿಷ್ ಜನಾಂಗವೂ ಅಷ್ಟೆ. ಮೌನವಾಗಿ, ತಣ್ಣಗೆ ಬದುಕಿ ಗೊತ್ತೆ ಇಲ್ಲ.ಒಮ್ಮೆ ಸ್ಪೈನ್‌ನ ಕೆತಲೋನಿಯಾ ಪ್ರಾಂತ್ಯದ ಹಬ್ಬಕ್ಕೆ ಹೋಗಿದ್ದೆ. ಥೇಟು ಅಣ್ಣಮ್ಮನ ಕರಗ. ನಮ್ಮ ಹೋಳಿ, ದೀಪಾವಳಿ, ದಸರೆ, ಕಾರಬ್ಬ, ಕ್ರಿಸ್‌ಮಸ್, ರಂಜಾನ್, ಮೊಹರಂ ಎಲ್ಲ ಹಬ್ಬಗಳೂ ವರ್ಣಮಯ, ಸಂಗೀತಮಯ ಮತ್ತು ನೃತ್ಯಮಯ. ಹಬ್ಬ ಮುಗಿದ ಎಷ್ಟೋ ದಿನಗಳ ಮೇಲೂ-ಮನಸ್ಸಿನಲ್ಲಿ ಮತ್ತು ಬೀದಿಯಲ್ಲಿ ಆ ಹಬ್ಬದ ಕಮಟು ವಾಸನೆ, ಬಣ್ಣ ಮತ್ತು ಸದ್ದು ಅಳಿಯದೆ ಅಂಟಿಕೊಂಡಿರುತ್ತವೆ.

ಚುನಾವಣೆಗಳೂ ಹಾಗೆ. ಕೆಲವರ ಪಾಲಿಗೆ ಹಬ್ಬದಂತೆ. ಎಣ್ಣೆ-ಬಾಡೂಟಗಳು ಸೇರಿ ಅಮಲಿನ ಗಿರಗಿಟ್ಟೆಯಲ್ಲಿ ಪ್ರಜಾಪ್ರಭುತ್ವದ ಸಿಂಹಾಸನ ಗರಗರ ಸುತ್ತುತ್ತಿರುತ್ತದೆ. ಸದ್ದುಗಳದ್ದೇ ಸಾಮ್ರೋಜ್ಯ. ನಂಗಾನಾಚ್ ನೃತ್ಯ, ಅಪಭ್ರಂಶ ಹಾಡು, ಅಬ್ಬರದ ಪ್ರಚಾರ, ಭಾಷಣ, ಘೋಷಣೆ ಎಲ್ಲ ಕೂಡಿ ಸದ್ದಿನ ಮೇಲೆ ಸದ್ದು ಬಿದ್ದು ಗಬ್ಬೆದ್ದು ಹೋಗುತ್ತದೆ. ಕಣ್ಣುಗಳಿಗೆ ಮುಚ್ಚಳಗಳಿವೆ, ಆದರೆ ಕಿವಿಗಳಿಗಿಲ್ಲ. ಹತ್ತಿ, ಬೆರಳು ಕಿವಿಗೆ ಏನೇ ಗಿಡಿದರೂ ಆಳದಲ್ಲಿ ಚೂರಿಯಂತೆ ಚುಚ್ಚುವ ಸದ್ದು. ರಸ್ತೆ ತುಂಬಾ ನೇತಾಡುವ ವಿನೈಲ್ ವೀರರು. ಮುಗಿದ ಕೈ. ಅಮೂಲ್ಯ ಮತಕ್ಕಾಗಿ ಯಾಚನೆ. ಎಲ್ಲೆಡೆ ಸೇವಾಕಾಂಕ್ಷಿಗಳು. ಕಣ್ಣಿಗೂ, ಕಿವಿಗೂ ಘನಘೋರ ಶಿಕ್ಷೆ.ಸದ್ದುಗದ್ದಲ, ಜಾತ್ರೆ, ಹಬ್ಬ, ಗುಂಪು, ಮೆರವಣಿಗೆ, ಭಾರೀ ಬಹಿರಂಗ ಸಭೆ ನನ್ನ ಆರೋಗ್ಯಕ್ಕೆ ಆಗಿಬರುವುದಿಲ್ಲ. ಅವುಗಳಿಂದ ಸಾಧ್ಯವಾದಷ್ಟೂ ದೂರ ಉಳಿಯುತ್ತೇನೆ. ದೂರ ಉಳಿದು ಪರ್ಯಾಯವಾಗಿ ಯಾವುದರಲ್ಲಾದರೂ ತೊಡಗಿಸಿಕೊಂಡುಬಿಡುತ್ತೇನೆ. ಆ ಪರ್ಯಾಯ ಚಟುವಟಿಕೆ ಒಂದು ಗದ್ದಲಕ್ಕೆ ಪ್ರತಿಕ್ರಿಯೆಯಂತಿರುತ್ತದೆ. ಹೀಗೆ ಪ್ರತಿಕ್ರಿಯಿಸುವುದು ಸ್ವಾರಸ್ಯಕರ ಮತ್ತು ಅರ್ಥಪೂರ್ಣ. ಅಷ್ಟೇ ಅಲ್ಲ, ಪ್ರತಿಭಟನಾತ್ಮಕ ಕೂಡಾ, ನಿಮ್ಮ ಸುತ್ತ ಬೇಡವಾದ್ದು ನಡೆಯುತ್ತಿರುವಾಗ ಒಂದಿಲ್ಲೊಂದು ಬಗೆಯಲ್ಲಿ ನೀವು ನಿಮ್ಮ ಪ್ರತಿಭಟನೆಯನ್ನು ಅಥವಾ ಪ್ರತಿಕ್ರಿಯೆಯನ್ನು ನೀಡಲೇಬೇಕು. ಮತದಾನವನ್ನೇ ಮಾಡದ ಮಹಾನುಭಾವರಿಗೆ ಇದೆಲ್ಲ ವ್ಯರ್ಥವಾದ ಜವಾಬ್ದಾರಿ ಅನ್ನಿಸಬಹುದು. ಈ ಸಲದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಾನು ಏನು ಮಾಡಿದೆ ಎಂಬುದನ್ನು ಇಲ್ಲಿ ವಿನಯ ಮತ್ತು ಸಂಕೋಚದಿಂದ ವಿವರಿಸಲು ಯತ್ನಿಸುತ್ತೇನೆ.ನಮ್ಮ ನಾಗಮಂಗಲ ತಾಲ್ಲೂಕಿನಲ್ಲಿ ಸಂಪನ್ನ ರಾಜಕಾರಣ ಎಂಬುದು ಹೆಚ್.ಟಿ.ಕೃಷ್ಣಪ್ಪನವರ ಕಾಲಕ್ಕೆ ಮುಗಿದುಹೋಯಿತು. ಆ ನಂತರ ಬಂದವರೆಲ್ಲ ಒಬ್ಬರಿಗಿಂತ ಒಬ್ಬರು ಬ್ರಹ್ಮರಾಕ್ಷಸರು. ತಂತಮ್ಮ ಯೋಗ್ಯತಾನುಸಾರ ಹೆಂಡದ-ಹಣದ ಹೊಳೆ ಹರಿಸಲು ಸದಾ ಸನ್ನದ್ಧರಾಗಿರುತ್ತಾರೆ. ಎರಡೂ ಕಡೆ ಹಾರಿ, ಎರಡೂ ಕಡೆ ಹೀರುವ (ರೆಕ್ಕೆ-ಬೇರು?) ಜಾಣರನ್ನು ನಗುತ್ತಾ ನೋಡುತ್ತಿದ್ದೇನೆ. ತಪ್ಪಿಯೂ ಇಂಥವರಿಗೆ ಓಟು ಹಾಕಿ ಎಂದು ನಾನು ಭಾಷಣ ಮಾಡುವುದಿಲ್ಲ. ಯಾರಿಗಾದ್ರೂ ಓಟ್ ಹಾಕ್ಕೊಳ್ಳಿ-ನಿಮ್ಮ ಹಕ್ಕು. ಆದರೆ ಎಲ್ಲರೂ ಒಟ್ಟಾಗಿ ನಮ್ಮ ಊರಿನ ಕೆಲಸ ಮಾಡೋಣ ಅನ್ನುವುದೊಂದೇ ನನ್ನ ಮಾತು. ಈ ನನ್ನ ಮಾತು ಕೇಳಿಸಿಕೊಳ್ಳುತ್ತಾರೆ ಎಂಬ ಭ್ರಮೆ ಬೇರೆ. ಸ್ಪರ್ಧಿಸಿರುವ ಎಲ್ಲರೂ ಅಯೋಗ್ಯರೆಂದು ಗೊತ್ತಿದ್ದೂ ಇಂಥವರಿಗೆ ಓಟು ಹಾಕಿ ಎಂದು ಹೇಗೆ ಹೇಳುವುದು?ನಮ್ಮ ಹಳ್ಳಿಯ ಲೈಬ್ರರಿಯಲ್ಲಿ ಕುಳಿತಿದ್ದೆ. ಅದು ನನ್ನ ಪಾಲಿಗೆ ಶಾಂತಿಧಾಮ. ಅಲ್ಲಿಗೆ ಹಿರಿಯ ಲೇಖಕರೆಲ್ಲ ಬಂದು ಘನವಾದ ಪುಸ್ತಕಗಳನ್ನು ಕೊಟ್ಟಿದ್ದಾರೆ. ಅವರ ನೆನಪಾಗಿ ಮನಸ್ಸು ಮುದಗೊಳ್ಳುತ್ತಿತ್ತು. ಊರಿಗೆ ಹೋದಾಗೆಲ್ಲಾ ಅಲ್ಲಿ ಕುಳಿತು ಅಣ್ಣತಮ್ಮಂದಿರ ಜೊತೆ, ಅಕ್ಕತಂಗಿಯರ ಜೊತೆ ಹರಟುವುದು ಪ್ರಿಯವಾದ ಹವ್ಯಾಸ. ಹೊರಗೆ ಚುನಾವಣೆಯ ಪ್ರಚಾರ ಮುಗಿಲು ಮುಟ್ಟಿತ್ತು. ನಾವು ನಮ್ಮ ಪಾಡಿಗೆ ಸಾಹಿತ್ಯ, ಸಮಾಜ, ಕೃಷಿ ಅದೂ ಇದೂ ಮಾತನಾಡುತ್ತಿದ್ದೆವು. ವಯಸ್ಸಾದ ತಾಯಂದಿರ ಗುಂಪೊಂದು ಲೈಬ್ರರಿಗೆ ಬಂತು. ಕಣ್ಣೇ ಕಾಣ್ಸಲ್ಲ ಕಣಪ್ಪ. ದೃಷ್ಟಿ ಮಬ್ಬಾಗೈತೆ  ಅಂತ ತಡವರಿಸಿಕೊಂಡು ಬಂದು ಕುಳಿತರು. ಹೊರಗೆ ಅದೇ ಜೈಕಾರ, ಗದ್ದಲ..ಓಟು ಕೊಡಿ! ಓಟು ಕೊಡಿ!!ಜನಕ್ಕೆ ಅರೆಅಂಧತ್ವ ಬಂದಿದೆ. ಒಬ್ಬೊಬ್ಬರನ್ನು ಕೇಳುತ್ತಾ ಹೋದೆ. ಕೆಲವರಿಗೆ ಒಂದೇ ಕಣ್ಣು ಕಾಣಿಸುತ್ತಿದೆ. ಇನ್ನು ಕೆಲವರಿಗೆ ಎರಡೂ ಕಣ್ಣು ಮಂಜು. ಕೆಲವರಂತೂ ನಲವತ್ತು ಮುಟ್ಟಿಲ್ಲ, ಕಣ್ಣುಕಾಣುತ್ತಿಲ್ಲ. ಆರೈಕೆ ಇಲ್ಲದೆ ದೃಷ್ಟಿಮಾಂದ್ಯರಾಗಿದ್ದಾರೆ. ಗ್ರಾಮೀಣ ಭಾಗದ ಜನರ ಸಹನೆ ಮತ್ತು ಮೌಢ್ಯ ಅಪಾರ. ಹೊಟ್ಟೆಯೊಳಗೆ ಸಾವಿರ ಕಷ್ಟ ಇಟ್ಟುಕೊಂಡು ಹೇಗೋ ಇದ್ದುಬಿಡುತ್ತಾರೆ. ಅದರಲ್ಲೂ ಹೆಂಗಸರು. ಹೇಳಿಕೊಳ್ಳಲು ಇಷ್ಟವಿಲ್ಲ ಎಂದಲ್ಲ, ಕೇಳಿಸಿಕೊಳ್ಳುವವರಿಲ್ಲದೆ.ಹಳ್ಳಿಗಳಲ್ಲಿ ಏನೇನೋ ವಿಪರ್ಯಾಸಗಳಿವೆ. ವಿದ್ಯುತ್ ಇಲ್ಲದಿದ್ದರೂ ಕೇಬಲ್ ಟಿ.ವಿ ಬಂದಿರುತ್ತದೆ. ಶೌಚಾಲಯಗಳಿರುವುದಿಲ್ಲವಾದರೂ ಮೊಬೈಲ್ ಬಂದಿರುತ್ತದೆ. ಇದೆಲ್ಲದರ ಅಣಕದಂತೆ ಚುನಾವಣೆಗಳು, ಗ್ರಾಮೋದ್ಧಾರದ ಭಾಷಣಗಳು. ಇದು ನನ್ನ ಹಳ್ಳಿಯ ಚಿತ್ರಣ ಮಾತ್ರವಲ್ಲ-ಇಡೀ ಭಾರತದ ಗ್ರಾಮೀಣ ಚಿತ್ರಣ ಹೀಗೆಯೇ ಇದೆ. ಮಬ್ಬುಗಣ್ಣಿನೊಡನೆ ಜೀವನವಿಡೀ ಕಳೆದುಬಿಡುತ್ತಾರೆ. ಕುಂಟಿಕೊಂಡು, ತೆವಳಿಕೊಂಡು, ನರಳಿಕೊಂಡು, ಕೆಮ್ಮಿಕೊಂಡು...ಬೆಂಗಳೂರಿನ ಜಯನಗರದಲ್ಲಿ ಪ್ರಭಾ ಕಣ್ಣಿನ ಆಸ್ಪತ್ರೆ ಇದೆ. ಅಲ್ಲಿ ಡಾ. ಪ್ರವೀಣ್ ಆರ್. ಮೂರ್ತಿ ಎಂಬ ವೈದ್ಯರಿದ್ದಾರೆ. ನಾಲ್ಕು ತಲೆಮಾರುಗಳಿಂದ ನೇತ್ರ ವೈದ್ಯರ ಕುಟುಂಬವದು. ಇಂಥ ಆಸ್ಪತ್ರೆ, ಇಂಥ ವೈದ್ಯ ಸಮೂಹ ನಮ್ಮ ವ್ಯವಸ್ಥೆಗಿರುವ ಆಶಾಕಿರಣವೆನ್ನಬೇಕು. ಈ ಸಲದ ನಾಗತಿಹಳ್ಳಿ ಸಂಸ್ಕೃತಿ ಹಬ್ಬದ ಭಾಗವಾಗಿ ಒಂದು ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ನಡೆಸಿಕೊಡಲು ಸಾಧ್ಯವೇ ಎಂದು ಕೇಳಿದೆ. ಡಾ. ಪ್ರವೀಣ್ ಹೇಳಿದ ಮಾತು ಮೌಲಿಕವಾಗಿತ್ತು. ಬರೀ ಶಿಬಿರ ನಡೆಸಿ, ಔಷಧಿ ಹಂಚಿದರೆ ಅಪೂರ್ಣವಾಗುತ್ತದೆ. ಅರ್ಹರನ್ನು ಕರೆತಂದು ಉಚಿತ ಶಸ್ತ್ರ ಚಿಕಿತ್ಸೆ ಮಾಡಿ ಕಳುಹಿಸೋಣ. ಆಗ ಮಾತ್ರ ನಿಮ್ಮ ಉದ್ದೇಶ ಸಾರ್ಥಕವಾಗುತ್ತದೆ ಎಂದರು. ಪ್ರಭಾ ಕಣ್ಣಿನ ಆಸ್ಪತ್ರೆ ಸುಸಜ್ಜಿತವಾದ ಹೈಟೆಕ್ ಆಸ್ಪತ್ರೆ. ಇಂಥ ಕಡೆಯೂ ಯಾವುದೋ ಹಳ್ಳಿಯ ಅಮಾಯಕರಿಗೆ ಉಚಿತ ಶಸ್ತ್ರ ಚಿಕಿತ್ಸೆ ನೀಡುವ ವೈದ್ಯರಿದ್ದಾರೆ. ನಮ್ಮ ವರ್ತಮಾನದಲ್ಲಿ ನಂಬಿಕೆ ಕಳೆದುಕೊಳ್ಳಬಾರದು ಅನ್ನುವುದಕ್ಕೆ ಇದು ಸಾಕ್ಷಿ. ನಾನು ಇಂಥ ಅನೇಕ ವೈದ್ಯರನ್ನು ನೋಡಿದ್ದೇನೆ. ಅವರೆಲ್ಲ ನಮ್ಮ ಹಳ್ಳಿಗೆ ಬಂದಿದ್ದಾರೆ. ಸೇವೆ ಸಲ್ಲಿಸಿದ್ದಾರೆ.ಹೊರಗೆ ಚುನಾವಣೆಯ ಕಾವೇರುತ್ತಿತ್ತು. ನಾವು ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆಯೊಳಗೆ ನಮ್ಮ ಪಾಡಿಗೆ ಸಂಸ್ಕೃತಿ ಹಬ್ಬ ಆಚರಿಸುತ್ತಿದ್ದೆವು. ಇದು ಎಷ್ಟು ವಿರೋಧಾಭಾಸ ಮತ್ತು ವಿಪರ್ಯಾಸಗಳಿಂದ ಕೂಡಿರುತ್ತದೆ ಎಂದು ಕಲ್ಪಿಸಿಕೊಳ್ಳುವುದು ಕಷ್ಟ. ಸಂಸ್ಕೃತಿ ಹಬ್ಬದ ಶಿಬಿರ, ಉಪನ್ಯಾಸಗಳಲ್ಲಿ ಏನು ವ್ಯಕ್ತವಾಗುತ್ತಿರುತ್ತದೋ ಅದರ ವಿರುದ್ಧವಾದದ್ದು ಹೊರಗೆ ಘಟಿಸುತ್ತಿರುತ್ತದೆ. ಇಲ್ಲಿ ಭಾಷಣ ಕೇಳಿ ತಲೆದೂಗಿ ಆಚೆ ಹೋಗಿ ಕೆಂಪು ನೋಟಿಗೆ ಕೈಚಾಚುತ್ತಿರುತ್ತಾರೆ. ಆದ್ದರಿಂದ ವೃತ್ತಿ ರಾಜಕಾರಣಿಗಳು ನಮ್ಮನ್ನು, ನಮ್ಮ ಚಟುವಟಿಕೆಗಳನ್ನು ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲ. ಅದೇನೋ ಮೂರು ಮತ್ತೊಂದು ಜನ ಸೇರ್ಕಂಡು ನಾಟ್ಕ ಮಾಡ್ತವಂತೆ ಎಂಬ ತಿರಸ್ಕಾರಭಾವದಿಂದ ನಮ್ಮನ್ನು ನೋಡುತ್ತಾರೆ. ನಮ್ಮ ಯಾವ ಉಗ್ರ ಟೀಕೆಗಳೂ ಅವರ ಅಂಡಿಗೆ ನಾಟುವುದಿಲ್ಲ. ಅವರ ತಿರಸ್ಕಾರದಿಂದ ನಾವೂ ನಮ್ಮ ಉತ್ಸಾಹವನ್ನು ಕಳೆದುಕೊಳ್ಳುವುದಿಲ್ಲ.ಕೊನೆಗೆ ನಾನು ಒಬ್ಬನೇ ಆದರೂ ನನ್ನ ಹಾದಿಯನ್ನು ನಡೆದೇ ತೀರುತ್ತೇನೆ. ನಡೆಯುತ್ತಾ ಹೋದಂತೆ ಪಥಿಕರು ಜೊತೆಯಾದರು ಎಂಬ ಗಾಢನಂಬಿಕೆಯಲ್ಲಿ.ಅಂದು ಮನೋಜ್ಞ ದೃಶ್ಯ. ನೂರಿಪ್ಪತ್ತು ರೋಗಿಗಳು ಕ್ಯೂ ನಿಂತರು. ಶಿಬಿರಕ್ಕೆ ಡಾ. ಪ್ರವೀಣ್ ತಮ್ಮ ಸಿಬ್ಬಂದಿಯೊಂದಿಗೆ ನಮ್ಮ ಹಳ್ಳಿಗೆ ಖುದ್ದಾಗಿ ಬಂದಿದ್ದರು. ಅಭಿವ್ಯಕ್ತಿ ವೇದಿಕೆಯ ಸೋದರರು, ಸೋದರಿಯರು ಸ್ವಯಂ ಸೇವಕರಾಗಿ ನಿಂತರು. ಇಡೀ ದಿನ ಶಿಬಿರ. ಅನಂತರ ಒಬ್ಬಟ್ಟಿನ ಊಟ. ಇಪ್ಪತೈದು ಜನಕ್ಕೆ ಶಸ್ತ್ರ ಚಿಕಿತ್ಸೆ ಆಗಲೇಬೇಕಿತ್ತು. ತಮ್ಮ ಅತ್ಯಮೂಲ್ಯವಾದ ಕಣ್ಣು ಎಂಬ ಅಂಗವನ್ನು ಕಾಪಾಡಿಕೊಳ್ಳಬೇಕಾದ ಎಚ್ಚರವೇ ಇಲ್ಲದ ಜನರ ಮೌಢ್ಯಕ್ಕೆ ಡಾಕ್ಟರ್ ವಿಷಾದಪಟ್ಟರು. ಅವರನ್ನೆಲ್ಲಾ ಬೆಂಗಳೂರಿಗೆ ಬಂದು ಉಚಿತವಾಗಿ ಶಸ್ತ್ರಚಿಕಿತ್ಸೆ ಪಡೆಯಲು ಸೂಚಿಸಿದರು. ಆ ದಿನವನ್ನೆಂದೂ ನಾನು ಮರೆಯಲಾರೆ. ಧನ್ಯತೆಯ ಕ್ಷಣಗಳೆಂದರೆ ಅವು. ನಮ್ಮ ಹಳ್ಳಿಯ ಗ್ರಂಥಪಾಲಕ ಕಾಂತರಾಜು ಎಲ್ಲರನ್ನು ಹಳ್ಳಿಯಿಂದ ಕರೆತಂದ. ಡಾ.ಪ್ರವೀಣ್ ಅವರು ಶಸ್ತ್ರಚಿಕಿತ್ಸೆ ಮಾಡಿದ್ದಲ್ಲದೆ ಎರಡು ದಿನ ಆಸ್ಪತ್ರೆಯಲ್ಲಿರಿಸಿಕೊಂಡು ಉಚಿತ ಆಹಾರ, ವಸತಿ, ಔಷಧಿ ನೀಡಿ ಬೀಳ್ಕೊಟ್ಟರು. ಧನದಾಹಿ ಆಸ್ಪತ್ರೆಗಳ ನಡುವೆ ಇಂಥ ಆಸ್ಪತ್ರೆಗಳೂ ಇವೆ. ಇಂಥ ವೈದ್ಯರೂ ಇದ್ದಾರೆ. ನಾನು ಹಲವಾರು ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದೇನೆ. ರಕ್ತದಾನ ಮಾಡಿದ್ದೇನೆ. ಆದರೆ ಈ ಬಗೆಯ ಸಾಮೂಹಿಕ ನೇತ್ರ ಚಿಕಿತ್ಸೆಯ ಪುಣ್ಯಕಾರ್ಯದಲ್ಲಿ ಭಾಗವಹಿಸಲಾಗಿರಲಿಲ್ಲ. ನೇತ್ರದಾನ ಮಹಾದಾನ ಎನ್ನುವ ಮಾತಿದೆ. ಆ ಮಾತಿನ ಅರ್ಥ ತಿಳಿಯುವುದು ದೃಷ್ಟಿಹೀನರಾದಾಗಲೇ. ಯಶಸ್ವೀ ಶಸ್ತ್ರಚಿಕಿತ್ಸೆಯ ನಂತರ ನಗುತ್ತ ನಿಂತ ಅವರ ಚಿತ್ರ ನನ್ನ ನೆನಪಿನ ಕೋಶದಲ್ಲಿ ದಾಖಲಾಗಿದೆ.ಭಾವುಕತೆಯಿಂದಾಗಲೀ, ಅತಿ ಆದರ್ಶದ ಅಮಲಿನಲ್ಲಾಗಲೀ, ಪ್ರವಾದಿಯ ಉಪದೇಶಾತ್ಮಕ ನೆಲೆಯಲ್ಲಾಗಲೀ ನಾನು ಈ ಮಾತುಗಳನ್ನು ಬರೆಯುತ್ತಿಲ್ಲ. ನಮ್ಮ ಇಡೀ ವ್ಯವಸ್ಥೆ ದೃಷ್ಟಿದೋಷದಿಂದ ನರಳುತ್ತಿದೆ. ವಿಶೇಷವಾಗಿ ಗ್ರಾಮಭಾರತದ ಕಣ್ಣು ಮಂಜಾಗಿದೆ. ಗೆದ್ದ ಶಾಸಕರು ತಾಲ್ಲೂಕು ಕೇಂದ್ರಗಳಲ್ಲಿ ಈ ಮುಂಚೆ ಜನರ ಕೈಗೆ ಸಿಗುತ್ತಿದ್ದರು. ಈಗ ಬಹುತೇಕ ಮಂದಿ ಬೆಂಗಳೂರಿನಲ್ಲಿ ಮನೆ ಮಾಡಿಕೊಂಡಿದ್ದಾರೆ. ಹಳ್ಳಿಗಳಲ್ಲಿರುವ ಜನತೆ, ಹಳ್ಳಿ ಬಿಟ್ಟು ಬಂದಿರುವ ಯುವಕರು ಒಟ್ಟಾಗಿ ಕೆಲಸ ಮಾಡಿದರೆ ಕೊಂಚವಾದರೂ ಪರಿಹಾರ ಸಿಕ್ಕೀತು. ನಾವೆಲ್ಲಾ ಬದುಕನ್ನು ಹುಡುಕಿ ಬೆಂಗಳೂರಿಗೆ ಬಂದೆವು. ಅರ್ಥವೇನು? ಹಳ್ಳಿಯ ಋಣ ಮುಗಿಯಿತು ಎಂದೆ? ಅದು ಸರ್ವದಾ ತಪ್ಪು.ಸಮಯ ಸಿಕ್ಕಾಗೆಲ್ಲಾ ನಮ್ಮ ಹಳ್ಳಿಗಳ ಜನ, ಅವರ ಆರೋಗ್ಯ, ಬದುಕು, ಬವಣೆ, ನಮ್ಮ ಹಳ್ಳಿಯ ಕನ್ನಡ ಶಾಲೆ, ಅಲ್ಲಿನ ಮಕ್ಕಳು ಹೇಗಿವೆ ಎಂಬ ನಿಜವಾದ ಕಾಳಜಿಯಿಂದ ಗಮನಿಸಬೇಕು. ನೀವು ಹಳ್ಳಿಯ ಬಡಮಗುವಿನ ಕೈಲಿಡುವ ಒಂದು ಪುಸ್ತಕ ಮುಂದೆ ಅವನಿಗೆ ತೋರುಗಂಬವಾಗಬಹುದು. ಇಲ್ಲಿ ಏನೂ ಸಾಧ್ಯವಿಲ್ಲ-ಈ ದೇಶ ಉದ್ಧಾರವಾಗುವುದಿಲ್ಲ-ಎಂದು ಹಳಿಯುತ್ತಾ ಕೂರುವುದು ಸುಲಭ. ಆದರೆ ನಮಗೆಲ್ಲರಿಗೂ ಮಾಡಬಹುದಾದ ಮತ್ತು ಮಾಡಬೇಕಾದ ಜವಾಬ್ದಾರಿಗಳಿವೆ. ಇದನ್ನು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಮಾಡಿದಾಗ ಮಾತ್ರ ಹಳ್ಳಿಗಳಿಗೆ ಹೊಸ ಚಿಕಿತ್ಸೆ ಮಾಡಲು ಸಾಧ್ಯ.ಏಕೆಂದರೆ ಹಳ್ಳಿಗಳ ಬದುಕು ದುರ್ಭರವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಳಿ ಸಾವಿರಾರು ಯೋಜನೆಗಳಿರಬಹುದು. ಆದರೆ ಅವು ಸೋಮಾರಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಂದ ಹಳ್ಳಿಗಳನ್ನು ತಲಪುವುದೇ ಇಲ್ಲ. ಬಹಳಷ್ಟು ಯೋಜನೆಗಳ ಹಣ ಸರ್ಕಾರಕ್ಕೇ ವಾಪಸ್ಸಾಗುತ್ತದೆ. ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್‌ನಂಥ ವಿಕೇಂದ್ರೀಕರಣ ವ್ಯವಸ್ಥೆಯಿಂದ ಕೊಂಚ ಸುಧಾರಿಸಿದ್ದರೂ ಇಲ್ಲೂ ಕಮೀಶನ್ ಏಜೆಂಟರುಗಳ ಕಾಮಗಾರಿ. ಕೆರೆಗಳ ಹೂಳೆತ್ತಲು ಮಂಜೂರಾದ ಹಣದಿಂದ ಕೆರೆಯನ್ನೇ ಮುಚ್ಚಿ ನಿವೇಶನ ಮಾಡಿಕೊಳ್ಳುತ್ತಾರೆ. ಕುಡಿಯುವ ನೀರು, ಗ್ರಾಮ ನೈರ್ಮಲ್ಯ, ಪರ್ಯಾಯ ಇಂಧನ ಮೂಲ, ಸಾವಯವ ಕೃಷಿ, ಮಹಿಳಾ ಸಬಲೀಕರಣ, ಶಿಕ್ಷಣ, ಸಣ್ಣ ಕೈಗಾರಿಕೆಗಳು-ಹೀಗೆ ಅನೇಕ ಯೋಜನೆಗಳು ಕಾಗದದಲ್ಲಿರುತ್ತವೆ.ವಾರ್ಷಿಕ ಬಜೆಟ್ ಮುಗಿಯುವುದರೊಳಗೆ ಆ ಹಣವನ್ನು ಪೂರ್ಣ ಬಳಕೆ ಮಾಡುವ ಉತ್ಸಾಹವೇ ಅಧಿಕಾರಿಗಳಿಗಿರುವುದಿಲ್ಲ.

ಒಬ್ಬ ಬುದ್ಧಿಜೀವಿ ಮಿತ್ರರು ಸೆಮಿನಾರೊಂದರಲ್ಲಿ ಗಂಭೀರವಾಗಿ ಹೇಳುತ್ತಿದ್ದರು. ಯಾವುದೇ ರೀತಿಯ ತೆರಿಗೆ ನೀಡದ, ಲಾಭದಾಯಕವಾಗಿಲ್ಲದ ಹಳ್ಳಿಗಳಿಗೆ ಏಕೆ ಸೌಲಭ್ಯ ನೀಡಬೇಕು? ಹಳ್ಳಿಗಳನ್ನು ಮುಚ್ಚಿಬಿಡುವುದು ಲೇಸು. ಹಳ್ಳಿಗಳ ಬಗ್ಗೆ ರೊಮ್ಯಾಂಟಿಕ್ ಆಗಿ ಯೋಚಿಸುವುದನ್ನು ಬಿಟ್ಟುಬಿಡೋಣ. ಇನ್ನು ಮುಂದೆ ನಮ್ಮ ಗಮನ ನಗರಗಳ ಕಡೆಗೆ ಸೀಮಿತವಾಗಿರಲಿ ಎಂದು. ಇದು ಹೇಗಿದೆ ಎಂದರೆ ಗಾಯಗೊಂಡವರನ್ನು, ವಯಸ್ಸಾದವರನ್ನು ಗುಂಡಿಕ್ಕಿ ಕೊಂದುಬಿಡಿ ಎಂದಂತೆ. ಇಂಥ ಹೇಳಿಕೆಗಳು ಹೇಗೆ ನಿರ್ಲಜ್ಜವಾಗಿ ಅಭಿವ್ಯಕ್ತಗೊಳ್ಳುತ್ತವೆ ಎಂದು ಅಚ್ಚರಿಯಾಗುತ್ತದೆ. ಆಘಾತವಾಗುತ್ತದೆ.ಈಗ ಹಳ್ಳಿಗಳ ಕಡೆ ಮುಖಮಾಡಿ ನಿಲ್ಲುವವರಿಲ್ಲ. ನಿಂತವರಿಗೆ ಪ್ರೋತ್ಸಾಹವಿಲ್ಲ. ಅನುಮಾನದ ಹುತ್ತಗಳು ಬೆಳೆದು ನಿಂತಿವೆ. ಹಳ್ಳಿಗಳಲ್ಲಿ ರಾಜಕೀಯ ಪಕ್ಷದ ಕಾರ್ಯಕರ್ತರು, ಚೇಲಾಗಳು ಮಾತ್ರ ಕಾಣಸಿಗುತ್ತಾರೆ. ಆದರೆ ಇದು ನನ್ನ ಹಳ್ಳಿ, ನಾನಿದನ್ನು ಒಂದಿಂಚು ಬದಲಿಸಬಲ್ಲೆ ಎಂಬ ಮನಸ್ಸುಗಳು ಕಮರಿಹೋಗಿವೆ. ಹಳ್ಳಿಗಳನ್ನು ಬಿಟ್ಟು ಬಂದವರು ತಿರುಗಿ ಅತ್ತ ತಲೆ ಹಾಕುವುದಿಲ್ಲ. ಒಟ್ಟಿನಲ್ಲಿ ಗ್ರಾಮಭಾರತ ಯಾರಿಗೂ ಬೇಡವಾಗಿದೆ. ಅದರ ಕಣ್ಣು ಮಂಜಾಗಿದೆ. ಇತ್ತ ನಗರ ಜೀವನವನ್ನೂ ದುರ್ಭರ ಮಾಡಿಕೊಂಡು, ಅತ್ತ ಹಳ್ಳಿಗಳನ್ನು ನಾಶ ಮಾಡಿಕೊಳ್ಳುತ್ತಿರುವ ನಮಗೆ ನೆಮ್ಮದಿಯ ನೆಲೆ ಯಾವುದು?ಚುನಾವಣಾಪೂರ್ವದಲ್ಲಿ ತೆಗೆದ ನಮ್ಮ ಹಳ್ಳಿಗರ ಈ ಚಿತ್ರ, ಗ್ರಾಮಭಾರತದ ದಯನೀಯ, ದೃಷ್ಟಿಹೀನ ಸ್ಥಿತಿಯನ್ನು ಸೂಚಿಸುವಂತಿದೆಯಲ್ಲವೆ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry