ಕುರುವತ್ತಿ ಬಸವಣ್ಣನ ಜಾತ್ರೋತ್ಸವ ಇಂದು

7

ಕುರುವತ್ತಿ ಬಸವಣ್ಣನ ಜಾತ್ರೋತ್ಸವ ಇಂದು

Published:
Updated:

ಹೂವಿನ ಹಡಗಲಿ: ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿಗೆ ಸೇರಿದ ಕುರುವತ್ತಿ ಗ್ರಾಮ ಹಡಗಲಿಯಿಂದ 36ಕಿ.ಮೀ.ದೂರದಲ್ಲಿ ನೈರುತ್ಯ ದಿಕ್ಕಿನಲ್ಲಿ ತುಂಗಾಭದ್ರಾ ತೀರದ ಮೇಲಿದೆ.ಹಡಗಲಿ ತಾಲ್ಲೂಕಿನ ದೊಡ್ಡಗ್ರಾಮ ಸುಮಾರು ಐದಾರು ಸಾವಿರ ಜನಸಂಖ್ಯೆ ಇರುವ ಒಂದು ಗ್ರಾಮ. ಗಡಿಯಾಗಿ ತುಂಗಾಭದ್ರಾ ನದಿ ಹರಿದಿದೆ.ತಾಲ್ಲೂಕಿನ ಕುರುವತ್ತಿಯು ಬಸವಣ್ಣದೇವರು ಮತ್ತು ಮಲ್ಲಿಕಾರ್ಜುನ ದೇವರಿಂದ ಪುಣ್ಯಕ್ಷೇತ್ರವಾಗಿದೆ. ನಂಬಿದ ಭಕ್ತರಿಗೆ ನೆಲೆಯಾಗಿ ಲೋಕ ಪ್ರಖ್ಯಾತವಾಗಿದೆ. ಕರ್ನಾಟಕ ರಾಜ್ಯದ ಸುಪ್ರಸಿದ್ದ ಜಾತ್ರೆಗಳಲ್ಲೊಂದು ಜಾತ್ರೆಯಾಗಿದೆ.ಯುಗಯುಗಾಂತರಗಳಿಂದ ಹಿಂದೆ ಕುರುವತ್ತಿಯ ಪ್ರದೇಶವನ್ನು ತ್ರಿಪುರ ದಹನ ಕ್ಷೇತ್ರವೆಂದು ಕರೆಯುತ್ತಿದ್ದರು. ಇದಕ್ಕೆ ಸಾಕ್ಷಿಯಾಗಿ ಕುರುವತ್ತಿಯ ಆಸುಪಾಸಿನಲ್ಲಿ ಮೂರು ಪುರಗಳ ಸ್ಮಾರಕ ಕ್ಷೇತ್ರಗಳಿವೆ. ಅವುಗಳೆಂದರೆ ಚೌಡಯ್ಯದಾನಪುರ(ಶಿವಪುರ), ನರಸೀಪುರ, ಚಂದ್ರಾಪುರ(ಚಂದಾಪುರ), ಎಂಬ ಪುಣ್ಯ ಕ್ಷೇತ್ರಗಳಿವೆ.ತಾರಾಕಾಸುರ ಒಬ್ಬರಾಕ್ಷಸ, ಷಣ್ಮುಖನಿಂದ ಹತನಾದ ತಾರಾಕಾಸುರನಿಗೆ ಮೂರು ಜನ ಮಕ್ಕಳು. ಹಿರಿಯವನು ತಾರಾಕ್ಷ ಎರಡನೆಯವನು ಕಮಲಾಕ್ಷ ಮೂರನೆಯವನು ವಿದ್ಯನ್ಮಾಲಿ.ತುಂಗಾಭದ್ರಾ ನದಿ ತೀರದಲ್ಲಿ ಸೋಮೇಶ್ವರಲಿಂಗ ಸ್ವಯಂಬುವಾಗಿ ಉದ್ಭವವಾದಾಗ, ಪುರಜನ ಈ ಈಶ್ವರನ ದರ್ಶನ ಪಡೆದು ಪುನೀತರಾದರು ಎಂಬ ಪ್ರತೀತಿಯಿದೆ. ಹೀಗೆ ದೇವರು ಈಶ್ವರನ ರೂಪದಲ್ಲಿ ಕುರುಹು ತೋರಿಸಿದನೆಂದು, ನದಿ ತೀರದ ವರ್ತಿಯಲ್ಲಿ ಲಿಂಗೋದ್ಭವವಾದ್ದರಿಂದ ವರತಿ, ವರ್ತಿ ಎಂದು ಕುರುಹಿನವರ್ತಿ, ಕುರುವರ್ತಿ, ಕುರುವತ್ತಿ ಎಂದು ಹೆಸರು ಬಂದಿದೆ ಎಂಬುದು ವಿದ್ವಾಂಸರು ಅಭಿಪ್ರಾಯ .ಧಾರ್ಮಿಕವಾಗಿ ಇಲ್ಲಿಯ ಮಲ್ಲಿಕಾರ್ಜುನ ದೇವರು ಮುಖ್ಯವಾಗಿ ಬಸವಣ್ಣನಿಂದ ಈ ಊರಿಗೆ ಈ ಊರಿನ ಸುತ್ತಮುತ್ತಲಿನ ಪ್ರದೇಶಕ್ಕೆ ಧಾರ್ಮಿಕ ಪರಂಪರೆಯನ್ನೇ ತಂದಿದೆ. ಕುರುವತ್ತಿಯ ದೇವಾಲಯಗಳಲ್ಲಿ ಸೋಮೇಶ್ವರ, ಕಲ್ಲೇಶ್ವರ, ಮಲ್ಲಿಕಾರ್ಜುನ, ದೇವಾಲಯಗಳು ಅತ್ಯಂತ ಪ್ರಮುಖ ದೇವಾಲಯಗಳು.ಮುಖ್ಯವಾಗಿ ಕುರುವತ್ತಿಯ ಸಮಗ್ರ ಬದುಕಿಗೆ ಜೀವಕಳೆಯನ್ನು ತಂದಿರುವ ದೇವರೆಂದರೆ, ಮಲ್ಲಿಕಾರ್ಜುನ ದೇವಾಲಯದ ಎದುರಿನಲ್ಲಿರುವ ಬಸವಣ್ಣ ದೇವರು. ಈ ಬಸವಣ್ಣನೇ ಸಮಸ್ತರ ಆರಾಧ್ಯದೈವವಾಗಿದ್ದಾನೆ.ಕುರುವತ್ತಿ ಬಸವಣ್ಣ ಅನೇಕರಿಗೆ ಮನೆದೇವರು ಅದರಲ್ಲಿಯೂ ವೀರಶೈವರಿಗೆ ಆರಾಧ್ಯ ದೈವ. ಜಾತ್ಯತೀತ ಹನ್ನೆರಡನೇ ಶತಮಾನದ ಉದ್ಧಾರಕನಾದ ಸಮಾಜ ಸುಧಾರಕ ಬಸವಣ್ಣನಂತೆ ಯಾವ ಕಾಲದಿಂದಲೂ ಕುರುವತ್ತಿಯ ಬಸವಣ್ಣ ಲೋಕವಿಖ್ಯಾತ.ಮಾಘ ಶುದ್ದ ರಥಸಪ್ತಮಿಯ ಶಿವರಾತ್ರಿಯಲ್ಲಿ ಕುರುವತ್ತಿ ಬಸವಣ್ಣನ ಜಾತ್ರೆ ಜರುಗುತ್ತದೆ. ಬಸವಣ್ಣನ ಜಾತ್ರೆಗೆ ಮೂರು ದಿನ ಮೊದಲೇ ಜನ ಬರಲಿಕ್ಕೆ ಮೊದಲು ಮಾಡುತ್ತಾರೆ. ಜಾತ್ರೆಗೆ ಜನರನ್ನು ಬರಮಾಡಿಕೊಳ್ಳಲು ಕುರುವತ್ತಿಯ ಜನ ಊರಿನ ಗುಡಿ ಗುಂಡಾರಗಳನೆಲ್ಲಾ, ಮನೆ ಮಾರುಗಳನ್ನೆಲ್ಲಾ ಬಣ್ಣ-ಬಣ್ಣಗಳಿಂದ ಶುಚಿಗೊಳಿಸಿ, ಅಂಗಳವನ್ನು ರಂಗೋಲಿಯ ಎಳೆಗಳಿಂದ ಸಿಂಗರಿಸಿ, ತಳಿರು ತೋರಣಗಳಿಂದ ಅಲಂಕರಿಸಿರುತ್ತಾರೆ.ಬಸವಣ್ಣನ ಭಕ್ತರು ಇಡೀ ಕರ್ನಾಟಕದಲ್ಲೆಲ್ಲಾ ಇದ್ದಾರೆ. ದಾವಣಗೆರೆ, ಬಳ್ಳಾರಿ, ಹರಪನಹಳ್ಳಿ, ಹೂವಿನ ಹಡಗಲಿ, ಹೊಳಲು, ಹಿರೇಹಡಗಲಿ, ಧಾರವಾಡ, ಹಾವೇರಿ, ರಾಣೆಬೆನ್ನೂರು, ಚಿಕ್ಕಕುರುವತ್ತಿ, ಗುತ್ತಲ, ಹೊನ್ನತ್ತಿ, ಚಂದ್ರಪುರ, ಚೌಡಯ್ಯದಾನಪುರ, ಮೈಲಾರ, ಮಲ್ಲಾಪುರ, ಅನ್ವೇರಿ, ಮುಂಡರಗಿ, ಗದಗ ಹಾಗೂ ಇನ್ನೂ ಅನೇಕ ಊರುಗಳಿಂದ ಜನರು ಕುರುವತ್ತಿಗೆ ಆಗಮಿಸುತ್ತಾರೆ.ಜಾತ್ರೆಯ ವೇಳೆಯಲ್ಲಿ ಜಾತ್ರೆಗೆ ಆಗಮಿಸುವ ಎತ್ತಿನ ಗಾಡಿಗಳ ಸಾಲು, ತೆರೆದ ಗಾಡಿಗಳ ಸಾಲು, ಕಮಾನಿನ ಗಾಡಿಗಳು, ಒಂಟೆತ್ತಿನ ಗಾಡಿಗಳು, ದಂಡಿ ದಂಡಿಯಾಗಿ ಬರುವ ಚಕ್ಕಡಿ ಬಂಡಿಗಳು ಜೋಡೆತ್ತಿನ ಗಾಡಿಗಳು ಸಾಲು ಸಾಲಾಗಿ ರಸ್ತೆಯುದ್ದಕ್ಕೂ ಕಾಣುತ್ತವೆ.ರಥೋತ್ಸವದ ದಿನ ಮುಂಜಾವಿನಿಂದ ದೇವರಿಗೆ ಮಂಗಳಾರತಿ, ಹಣ್ಣುಕಾಯಿ, ಅಭಿಷೇಕಗಳು ಸಂಪ್ರದಾಯ ಬದ್ದವಾಗಿ ನಡೆಯುತ್ತಿರುತ್ತವೆ. ಮಕ್ಕಳಿಗೆ ಜವುಳ (ಚಂಡಿಕೆ, ಕೂದಲು) ತೆಗೆಸುವವರು ಮಂಗಳವಾದ್ಯಗಳೊಂದಿಗೆ ಸನ್ನಿಧಿಗೆ ಬಂದು ಜವುಳ ತೆಗೆಸಿ ಮಕ್ಕಳಿಗೆ ಒಳಿತಾಗಲೆಂದು ಹೆತ್ತವರು ಮತ್ತು ಹಿರಿಯರು ಪ್ರಾರ್ಥಿಸುತ್ತಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry