ಭಾನುವಾರ, ಮೇ 9, 2021
27 °C
ತೆರೆದ ಮ್ಯಾನ್‌ಹೋಲ್ ಧಿಕಟ್ಟಿಕೊಂಡ ಚರಂಡಿ

ಕುರೂಪವಾದ `ಸುಂದರ ನಗರ'!

ಪ್ರಜಾವಾಣಿ ವಾರ್ತೆ/ಅಮರೇಶ ನಾಯಕ Updated:

ಅಕ್ಷರ ಗಾತ್ರ : | |

ಕುರೂಪವಾದ `ಸುಂದರ ನಗರ'!

ಗುಲ್ಬರ್ಗ: ತೆರೆದ ಮ್ಯಾನ್‌ಹೋಲ್ ಹಾಗೂ ಚರಂಡಿಯಿಂದ ಹೊರ ಸೂಸುತ್ತಿರುವ ಹೊಲಸು ಹಾಗೂ ಕುಡಿಯುವ ನೀರಿಗೆ ಸೇರುತ್ತಿರುವ ಕಲ್ಮಷ

-ಇದು ಮಹಾನಗರ ಪಾಲಿಕೆ ವಾರ್ಡ್ 45ರ ವ್ಯಾಪ್ತಿಯಲ್ಲಿರುವ `ಸುಂದರ ನಗರ'ದ ಕುರೂಪ ದೃಶ್ಯಗಳು.ಹಲವು ವರ್ಷಗಳಲ್ಲಿ ಸುಂದರ ನಗರದ ಸ್ಥಿತಿ ಅಲ್ಪ ಸ್ವಲ್ಪ ಬದಲಾವಣೆಯಾಗಿದೆ. ಸಾಕಷ್ಟು ಅನುದಾನ ಬಂದರೂ ನಿರೀಕ್ಷಿತ ಸುಧಾರಣೆಯಾಗಿಲ್ಲ.

ಚರಂಡಿ ಅವ್ಯವಸ್ಥೆ: ಇಲ್ಲಿರುವ ಬಹುತೇಕ ಚರಂಡಿಗಳಲ್ಲಿ ಕಸ ಕಡ್ಡಿ ಕಲ್ಲು ತುಂಬಿಕೊಂಡಿದೆ. ಮುಳ್ಳು ಕಂಟಿ ಬೆಳೆದು ನೀರು ಮುಂದೆ ಚಲಿಸದೆ ನಿಂತಿರುವುದು ವಿವಿಧ ರೋಗಗಳಿಗೆ ಆಹ್ವಾನ ನೀಡಿದಂತಾಗಿದೆ. ಕೆಲವೆಡೆ ಚರಂಡಿ ನಿರ್ಮಿಸಿಲ್ಲ.ಕಾಲೋನಿಯ ಢೋರ ಗಲ್ಲಿಯಲ್ಲಿ ಮ್ಯಾನ್‌ಹೋಲ್‌ನಿಂದ ನೀರು ಹೊರ ಬಂದು ದುರ್ನಾತ ಹರಡಿದ್ದು, ಶಾಲೆಗೆ   ಹೋಗುವ ಮಕ್ಕಳಿಗೆ, ಮನೆಯಲ್ಲಿರುವ ಮಹಿಳೆಯರಿಗೆ ತುಂಬಾ ತೊಂದರೆಯಾಗುತ್ತಿದೆ. ವಾಸನೆ ತಾಳದೆ  ಸುತ್ತಮುತ್ತಲಿನ ನಿವಾಸಿಗಳು ಮಾನಸಿಕ ಯಾತನೆ ಅನುಭವಿಸುವುದು ಇಲ್ಲಿ ಸಾಮಾನ್ಯ. ಮಳೆಗಾಲದಲ್ಲಿ ಮತ್ತಷ್ಟು ಗಲೀಜು ಆವರಿಸಿ, ಕಾಲರಾ, ವಾಂತಿ ಭೇದಿಯಂತಹ ರೋಗಗಳು ಕಾಣಿಸಿಕೊಳ್ಳುತ್ತವೆ.ಕುಡಿಯುವ ನೀರಿಗೆ ಪರದಾಟ: ಇಲ್ಲಿ ಕುಡಿಯುವ ನೀರು ತುಂಬಿಕೊಳ್ಳಬೇಕಾದರೆ ಬೀದಿಯಲ್ಲಿರುವ ನಲ್ಲಿಗಳಿಗೆ ಪಾಳಿ ಹಚ್ಚಬೇಕು.ವಿದ್ಯುತ್ ವ್ಯತ್ಯಯದಿಂದ ಸರಿಯಾಗಿ ನೀರು ಸರಬರಾಜು ಆಗುವುದಿಲ್ಲ. ನೀರು ಸರಬರಾಜು ಮಾಡುವ ಪೈಪ್‌ಗಳು ಅಲ್ಲಲ್ಲಿ ಒಡೆದು ಹೋಗಿದ್ದು, ಅದರಲ್ಲಿ ಚರಂಡಿ ನೀರು ಸೇರುತ್ತಿದೆ. ಇತ್ತ ಕುಡಿಯಲು ಆಗದೆ, ಬಿಡಲೂ ಆಗದಂತಾಗಿದೆ ನಿವಾಸಿಗಳ ಸ್ಥಿತಿ.ಸಿಮೆಂಟ್ ಕಾಂಕ್ರೀಟ್ ರಸ್ತೆ: ಕಾಲೋನಿಯಲ್ಲಿ ಕೆಲವು ಕಡೆ ರಸ್ತೆಗೆ ಸಿಮೆಂಟ್ ಕಾಂಕ್ರೀಟ್ ಹಾಕಲಾಗಿದೆ. ಇನ್ನುಳಿದ ಭಾಗದಲ್ಲಿ ರಸ್ತೆ ಕಾಮಗಾರಿ ಮಾಡಬೇಕಾಗಿದೆ.ತಗ್ಗು ದಿಬ್ಬಗಳಿಂದ ಕೂಡಿದ ರಸ್ತೆಯಲ್ಲಿ ಮಕ್ಕಳು, ವಯಸ್ಸಾದವರು ತಿರುಗಾಡುವುದು ಕಷ್ಟವಾಗುತ್ತಿದೆ.ಶೌಚಾಲಯ ವ್ಯವಸ್ಥೆ ಇಲ್ಲದಿರುವುದರಿಂದ ಮಕ್ಕಳು, ಮಹಿಳೆಯರು ರಾತ್ರಿ ಸಮಯದಲ್ಲಿ ಶೌಚಕ್ಕೆ ಬಯಲು ಪ್ರದೇಶದ ಮುಳ್ಳು ಕಂಟಿಗಳನ್ನು ಆಶ್ರಯಸಬೇಕಾಗಿದೆ. ಇದು ದೊಡ್ಡ ನಗರವಾದರೂ ಕಾಲೊನಿಯಲ್ಲಿ ಸರಿಯಾಗಿ ವಿದ್ಯುತ್ ಸೌಲಭ್ಯವಿಲ್ಲ.`ಈಗ ಮಳೆಗಾಲ ಶುರುವಾಗಿರುವುದರಿಂದ ಚರಂಡಿಯಲ್ಲಿನ ನೀರು ತುಂಬಿ ತುಳುಕುತ್ತಿದ್ದು, ಆ ನೀರೆಲ್ಲ ತಗ್ಗು ಪ್ರದೇಶವಿರುವ ಮನೆಗಳಿಗೆ ನುಗ್ಗುತ್ತದೆ. ಹೊಲಸು ನೀರನ್ನು ಹೊರಗಡೆ ಚೆಲ್ಲಬೇಕು, ಮತ್ತೆ ಮಳೆ ಬಂದರೆ ಇದೇ ಸಮಸ್ಯೆ' ಎಂದು ನಿವಾಸಿಗಳು ದೂರಿದ್ದಾರೆ.`ಇಲ್ಲಿಯ ಚರಂಡಿಗಳಲ್ಲಿ ಕಸ ಕಡ್ಡಿ, ಪ್ಲಾಸ್ಟಿಕ್ ಮತ್ತಿತರರ ವಸ್ತುಗಳನ್ನು ಬಿಸಾಡಲಾಗಿದೆ. ಆದ್ದರಿಂದ ನೀರು ಮುಂದೆ ಸಾಗದೆ ಅಲ್ಲಿಯೇ ನಿಂತು ಗಬ್ಬು ವಾಸನೆ ಬರುತ್ತದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಕಾಡುತ್ತಿದೆ' ಎನ್ನುತ್ತಾರೆ ನಿವಾಸಿ ನಾರಾಯಣ ಜೋಶಿ.`ಬಡಾವಣೆ ಸಮಸ್ಯೆ ಬಗ್ಗೆ ಮಹಾನಗರ ಪಾಲಿಕೆ ಸದಸ್ಯರಿಗೆ ಹಲವು ಬಾರಿ ದೂರು ನೀಡಲಾಗಿದೆ. ಆದರೆ ಸಮಸ್ಯೆಗಳನ್ನು ನಿವಾರಿಸುವಲ್ಲಿ ವಿಳಂಬವಾಗುತ್ತಿದೆ. ಸಮಸ್ಯೆ ನಿವಾರಣೆಗೆ ಪಾಲಿಕೆ ಮುಂದಾಗಬೇಕು' ಎಂದು  ಢೋರ ಸಮಾಜದ ಕಾರ್ಯದರ್ಶಿ ಗಣೇಶ ಶಿವಾಜಿ ಇಂಗಳೆ ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.