ಮಂಗಳವಾರ, ಮೇ 18, 2021
22 °C
ವಾರದ ವಿನೋದ

ಕುರ್ಚಿಗಳ ಖಾಸ್‌ಬಾತ್!

ಬಿ.ಎನ್.ಮಲ್ಲೇಶ್ Updated:

ಅಕ್ಷರ ಗಾತ್ರ : | |

ಕುರ್ಚಿಗಳ ಖಾಸ್‌ಬಾತ್!

ವಿಧಾನಸಭೆ ಅಧಿವೇಶನದ ಕಲಾಪಗಳು ಮುಗಿದ ಬಳಿಕ ಸಂಜೆ ಶಾಸಕರು, ಮಂತ್ರಿಗಳು, ಸ್ಪೀಕರ್ ಕುರ್ಚಿಗಳೆಲ್ಲ ತಮ್ಮ ತಮ್ಮ ಸುಖ-ದುಃಖ ಹಂಚಿಕೊಳ್ಳಲು, ಹರಟೆ ಹೊಡೆಯಲು ಒಂದೆಡೆ ಸೇರಿದವು. ಎಲ್ಲ ಕುರ್ಚಿಗಳು ಬಂದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿಯೇ ನಾಪತ್ತೆ! ಸ್ಪೀಕರ್ ಕುರ್ಚಿಗೆ ಬೇಸರವಾಯಿತು `ಸಭೆಯಲ್ಲಿ ಲೀಡರ್ರೇ ಇಲ್ಲದಿದ್ರೆ ಹೇಗೆ? ಎಲ್ರೀ ನಿಮ್ ಸಿ.ಎಂ. ಕುರ್ಚಿ? ಎಂದು ಹೋಂ ಮಿನಿಸ್ಟರ್ ಕುರ್ಚಿಯನ್ನು ಪ್ರಶ್ನಿಸಿತು.ಹೋಂ ಕುರ್ಚಿ ಉತ್ತರಿಸುವ ಮೊದಲೇ ಮಧ್ಯ ಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಕುಮಾರಸ್ವಾಮಿಯವರ ಕುರ್ಚಿ `ಸಿ.ಎಂ. ಕುರ್ಚಿನಾ? ಇನ್ನೆಲ್ಲಿರುತ್ತೆ? ಅಲ್ಲೇ ಎಲ್ಲೋ ನಿದ್ದೆ ಮಾಡ್ತಿರಬೇಕು ನೋಡಿ' ಎಂದು ನಕ್ಕಿತು.ಹೋಂ ಕುರ್ಚಿಗೆ ಸಿಟ್ಟು ಬಂತು. `ಸಾಕು ಸುಮ್ನಿರ್ರೀ ಕಂಡಿದೀನಿ. ನಮ್ ಸಿಎಮ್ಮು ಮೊದಲು ನಿಮ್ಮ ದೇವೇಗೌಡ್ರ ಶಿಷ್ಯ ಅಲ್ವಾ? ಅವರ ನಿದ್ದೆ ಇವರಲ್ಲೂ ಸ್ವಲ್ಪ ಉಳ್ಕೊಂಡ್‌ಬಿಟ್ಟಿದೆ. ದೇವೇಗೌಡ್ರು ಆವಾಗಾವಾಗ ನಿದ್ದೆಯಿಂದ ಏಳ್ತಾರೆ, ಸಿದ್ದರಾಮಯ್ಯ ಆವಾಗಾವಾಗ ನಿದ್ದೆಗೆ ಜಾರ್ತಾರೆ, ಅಷ್ಟೆ ವ್ಯತ್ಯಾಸ' ಎಂದಾಗ ಎಲ್ಲ ಕುರ್ಚಿಗಳೂ ನಕ್ಕವು.ಹೋಂ ಕುರ್ಚಿಯ ಸಮರ್ಥನೆಯನ್ನು ಒಪ್ಪದ ಜೇಮ್ಸಬಾಂಡ್, ಕನ್ನಡ ಮಕ್ಕಳ ಪಕ್ಷದ ಶಾಸಕ ಅಶೋಕ್ ಖೇಣಿ ಅವರ ಕುರ್ಚಿ `ಯೂ ಸೀ... ಇಟ್ ಇಸ್ ನಾಟ್ ಕರೆಕ್ಟ್. ಗೌಡ್ರು ನಿದ್ದೇನೇ ಮಾಡಲ್ಲ, ಐ ನೋ ಹಿಮ್ ವೆರಿ ವೆಲ್. ಅವ್ರ ಜಸ್ಟ್ ನಿದ್ದೆ ಮಾಡೋ ತರ ಆ್ಯಕ್ಟ್ ಮಾಡ್ತಾರೆ. ಖೇಣಿ ಸಾಹೇಬ್ರಿಗೆ ಯಾವಾಗ, ಎಲ್ಲಿ ನೈಸಾಗಿ ಬತ್ತಿ ಇಡಬೇಕು ಅಂತ ಲೆಕ್ಕ ಹಾಕ್ತಾ ಇರ್ತಾರೆ...' ಎಂದಿತು.ಖೇಣಿ ಕುರ್ಚಿಯ ಇಂಗ್ಲೀಷ್ ಪ್ರೇಮವನ್ನು ಆಕ್ಷೇಪಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರ ಕುರ್ಚಿ `ಅಲ್ರೀ ನಿಮ್ ಖೇಣಿ ಸಾಹೇಬ್ರುದು ಕನ್ನಡ ಮಕ್ಕಳ ಪಕ್ಷ. ಆದ್ರೆ ಮಾತಾಡೋದೆಲ್ಲ ಇಂಗ್ಲೀಷೇ. ಮೊನ್ನೆ ಪ್ರಮಾಣ ವಚನಾನೂ ಇಂಗ್ಲೀಷಲ್ಲಿ ತಗೊಂಡ್ರು. ಇದು ಸರೀನಾ? ಸುಮ್ನೆ ಕನ್ನಡ ಮಕ್ಕಳ ಪಕ್ಷ ಅನ್ನೋ ಬದ್ಲು `ಇಂಗ್ಲೀಷ್ ಮಕ್ಕಳ ಪಕ್ಷ' ಅಂತ ಹೆಸರು ಬದಲಿಸ್ಕೊಳಿ' ಎಂದು ನಕ್ಕಿತು.ಖೇಣಿ ಕುರ್ಚಿಗೆ ಇರಿಸುಮುರಿಸಾದರೂ ತೋರ್ಪಡಿಸಿಕೊಳ್ಳದೆ `ನೋಡ್ರಿ, ಕನ್ನಡಿಗರು ಅಂದ್ರೆ ಕನ್ನಡ ಒಂದು ಬಿಟ್ಟು ಬೇರೆ ಎಲ್ಲ ಭಾಷೆನಲ್ಲು ಮಾತಾಡೋರು ಅಂತ ಅರ್ಥ. ನೀವು ಹಳೆ ಡಿಕ್ಷನರಿ ಇಟ್ಕಂಡು ಮಾತಾಡಿದ್ರೆ ನೋ ಯೂಸ್. ಈಗ ಮಾತಿಗೂ ಅರ್ಥಕ್ಕೂ ತುಂಬ ಡಿಫರೆನ್ಸ್ ಇದೆ ಗೊತ್ತಾ?' ಎಂದು ವಾದಿಸಿತು.`ಹೋಗ್ಲಿ ಬಿಡ್ರಪ್ಪ, ನಾವೇನಿದ್ರೂ ಕುರ್ಚಿಗಳು. ನಮ್ಮ ನಾಯಕರ ಜಗಳ ಕಟ್ಕಂಡು ನಮಗೇನಾಗ್ಬೇಕು? ಅವರು ನಮ್ ಮೇಲೆ ಕೂತ್ಕಂಡಾಗ ಅವರಿಗೆ ಮೆತ್ತಗೆ, ಹಿತ ಅನ್ನಿಸೋ ತರ, ಆರಾಮ ಅನ್ನಿಸೋ ತರ ನೋಡ್ಕಂಡ್ರೆ ಆಯ್ತು ಅಲ್ವಾ?' ಎಂದಿತು ಖಾಲಿ ಕುರ್ಚಿಯೊಂದು.`ಹೌದೌದು, ನಾವು ಹಂಗೆ ಆರಾಮ ಕೊಡ್ತಿರೋದ್ರಿಂದ್ಲೇ ನಮ್ಮ ಶಾಸಕರು, ಮಂತ್ರಿಗಳು ಕೂತ ಕೂತಲ್ಲೇ ನಿದ್ದೆ ಹೊಡೀತಿರೋದು...' ಎಂದಿತು ಇನ್ನೊಂದು ಕುರ್ಚಿ.`ಅಯ್ಯೋ ನೀವೊಳ್ಳೆ, ಯಡ್ಯೂರಪ್ಪ ಸಿ.ಎಂ. ಆಗಿದ್ದಾಗ ನಾನು ಅವರ ಕುರ್ಚಿಯಾಗಿದ್ದೆ. ಆಗ ಪಾಪ ಒಂದು ದಿನಾನೂ ಅವರು ಸರಿಯಾಗಿ ನಿದ್ದೆ ಮಾಡ್ಲಿಲ್ಲ. ನನಗೂ ನಿದ್ದೆ ಇಲ್ಲ. ಏಕಂದ್ರೆ ಆಗ ನನಗಿದ್ದುದು ಮೂರೇ ಕಾಲು. ಯಾವಾಗ ಯಾರು ಕಾಲು ಎಳೀತಾರೋ, ಯಾವಾಗ ಬೀಳಿಸ್ತಾರೋ ಅಂತ ಹೆದರ‌್ತಾನೇ ದಿನ ಕಳೆದೆ. ಕೊನೆಗೊಂದು ದಿನ ಇಬ್ರೂ ಬಿದ್ವಿ. ಈಗ ಸಿದ್ದರಾಮಯ್ಯನೋರ ಕುರ್ಚಿಗೆ ನಾಲ್ಕು ಮತ್ತೊಂದು ಕಾಲು. ಯಾರೂ ಅಲ್ಲಾಡ್ಸಕಾಗಲ್ಲ, ಹೆಂಗ್ ಬೇಕೋ ಹಂಗೆ ಮಲಗಬಹುದು' ಎಂದಿತು ಮುರುಕುಲು ಕುರ್ಚಿಯೊಂದು.`ಅಯ್ಯೋ ನಮ್ಮದೂ ಅದೇ ಪರಿಸ್ಥಿತಿ ಆಗಿತ್ತು ಬಿಡೋ ಮಾರಾಯ' ಎಂದು ನಕ್ಕವು ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಗಳಾಗಿದ್ದಾಗಿನ ಅವರ ಕುರ್ಚಿಗಳು. `ನಮ್ಮ ಕುರ್ಚಿಗಳನ್ನು ಯಡ್ಯೂರಪ್ಪ ಅವರೇ ಎಳೆದು ಬೀಳಿಸಿದ್ದು. ಸದ್ಯ ಸಿದ್ದರಾಮಯ್ಯ ಅವರ ಕುರ್ಚಿಗೆ ಅಂಥ ಪರಿಸ್ಥಿತಿ ಇಲ್ಲ' ಎಂದವು.`ಹೇಳೋಕಾಗಲ್ಲ, ನಮ್ ಕುಮಾರಸ್ವಾಮಿ ದಾಖಲೆಗಳನ್ನ ಒಂದೊಂದಾಗಿ ಬಿಚ್ಚಿ ಎಸೀತಾ ಇದ್ರೆ ಸಿ.ಎಂ. ಕುರ್ಚಿನೂ ಅಲ್ಲಾಡಿ ಹೋಗುತ್ತೆ ನೋಡ್ತಿರಿ' ಎಂದಿತು ಪ್ರತಿಪಕ್ಷ ನಾಯಕ ಕುಮಾರಸ್ವಾಮಿ ಅವರ ಕುರ್ಚಿ.`ಅಯ್ಯೋ ಕಂಡಿದೀನಿ ಬಿಡ್ರೀ, ನಮ್ ವಿಶ್ವನಾಥ್ ಸಾಹೇಬ್ರು ಹೇಳಿದ್ದು ಕೇಳಿಲ್ವಾ? ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ನಿಮ್ ಕುಮಾರಸ್ವಾಮಿಗೆ ಹೆದರಿಬಿಡ್ತಾರಾ? ನಮ್ ಸಿದ್ದರಾಮಯ್ಯ ಕಂಬಳಿ ಬೀಸಿದ್ರೆ ಸಾಕು, ಮಳೆ ಬರುತ್ತೆ. ನಿಮ್ ಕುಮಾರಸ್ವಾಮಿ ಹೆಗಲ ಮೇಲಿನ ಟವೆಲ್ ಬೀಸಿದ್ರೆ ಏನ್ ಬರುತ್ತೆ?' ಎಂದು ತಿರುಗೇಟು ನೀಡಿತು ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಅವರ ಕುರ್ಚಿ.`ಅದು ಮಳೆ ಬರ್ಸೋಕೆ ಇಟ್ಕಂಡಿರೋ ಟವೆಲ್ ಅಲ್ಲ ಕಣ್ರೀ... ಬಡವರ ಕಣ್ಣೀರು ಒರೆಸೋಕೆ ಇಟ್ಕಂಡಿರೋ ಟವೆಲ್ಲು. ನಮ್ ಕುಮಾರಸ್ವಾಮಿ ಬಡವರ ಕಣ್ಣೀರು ಒರೆಸ್ತಾರೆ, ಬಡವರ ಮನೆಗೆ ಹೋಗಿ ಮಲಗ್ತಾರೆ. ನೀವು ಬಡವರಿಗೆ ಅಗ್ಗದ ಮದ್ಯ ಕೊಟ್ಟು ಅವರು ಎಲ್ಲಿ ಬೇಕಲ್ಲಿ ಮಲಗಂಗೆ ಮಾಡ್ತಿದೀರಲ್ರಿ? ಅಗ್ಗದ ಮದ್ಯ ಕೊಡ್ತೀರಿ ಓಕೆ, ತಿನ್ನೋಕೆ ಸೈಡ್ಸ್ ಯಾರು ಕೊಡ್ತಾರೆ ಹೇಳಿ...' ಕುಮಾರಸ್ವಾಮಿ ಕುರ್ಚಿ ಜಗಳಕ್ಕೇ ಬಿದ್ದಿತು.ಈ ಮಾತಿಗೆ ಸಿಟ್ಟಿಗೆದ್ದ ಸಚಿವ ಅಂಬರೀಷ್ ಅವರ ಕುರ್ಚಿ `ರೀ ಸ್ವಾಮಿ ಯಾಕ್ರಿ ಸುಮ್ನೆ ಮಾತಾಡ್ತೀರಿ? ಶಾಸಕರು, ಮಂತ್ರಿಗಳು ಕೈಗೆ ಸಿಕ್ಕದ್ದನ್ನೆಲ್ಲ ತಿನ್ನೋಕೆ ಕಲಿತಿದ್ದೇ ನಿಮ್ಮ ಕಾಲದಲ್ಲಿ. ಹಣ, ಭೂಮಿ, ಗಣಿಮಣ್ಣು, ಕಬ್ಬಿಣ, ಸಿಮೆಂಟು, ಮರಳು, ಕಾಡು-ಸುಡುಗಾಡು, ಕೊನೆಗೆ ಗೊಬ್ಬರಾನೂ ಬಿಡ್ಲಿಲ್ಲಲ್ರೀ ನಿಮ್ಮೊರು? ಈಗಿನ್ನೂ ನಾವು ಸರ‌್ಕಾರ ಶುರು ಮಾಡಿದೀವಿ. ಸ್ವಲ್ಪ ಸಹಿಸ್ಕೊಳ್ರಿ' ಎಂದಿತು.ಯಡ್ಯೂರಪ್ಪ ಕುರ್ಚಿಗೂ ಸಿಟ್ಟು ಬಂತು `ಆಯ್ತಪ್ಪ, ಆರು ತಿಂಗಳು ಹನಿಮೂನ್ ಮಾಡಿ, ನಂತರ ಇದ್ದೇ ಇದೆಯಲ್ಲ ಕಿತ್ತಾಟ. ಅಲ್ರೀ ಅಷ್ಟು ಹೇಳ್ತೀರಲ್ಲ, ನಿಮ್ಮ ಕಾಗೋಡು ಸಾಹೇಬ್ರು ಯಾಕ್ರೀ ಸ್ಪೀಕರ್ ಸ್ಥಾನ ಬೇಡ, ಮಿನಿಸ್ಟ್ರೇ ಆಗ್ಬೇಕು ಅಂತ ಹಟ ಹಿಡಿದಿದ್ರು?' ಎಂದು ತಿರುಗೇಟು ನೀಡಿತು.ಆಗ ಸ್ಪೀಕರ್ ಕುರ್ಚಿ ಮಾತನಾಡಿ `ನೋಡಿ ನಮ್ ಸಾಹೇಬ್ರ ಬಗ್ಗೆ ಹಗುರವಾಗಿ ಮಾತಾಡಬೇಡ್ರಿ, ನಮ್ ಸಾಹೇಬ್ರಿಗೆ ನಲವತ್ತು ವರ್ಷಗಳಿಂದ ರಾಜಕೀಯದಲ್ಲಿ ಮಾತಾಡಿ ಮಾತಾಡಿ ಸಾಕಾಗಿದೆ. ಈಗ್ಲೂ ಸ್ಪೀಕರ್ ಆಗು ಅಂದ್ರೆ ಹೆಂಗೆ? ಅದ್ಕೆ ಬೇಡ ಅಂದ್ರಂತೆ. ಆಗ ಹೈಕಮಾಂಡು ಇಲ್ಲಿ ಮಾತಾಡದೆ ಇರೋರಿಗೆ ಸ್ಪೀಕರ್ ಅಂತಾರೆ ಸುಮ್ನೆ ಒಪ್ಕಳ್ರಿ ಅಂದಾಗ ಒಪ್ಕಂಡ್ರಂತೆ' ಎಂದು ಸುಮಜಾಯಿಷಿ ನೀಡಿತು. `ಪಾಪ ಅವರು ವಿಧಾನಸಭೇಲಿ ಸ್ಪೀಕರು. ಆದ್ರೆ ಮಾತಾಡಂಗಿಲ್ಲ. ಮನೇಲಿ ಅವರ ಶ್ರೀಮತಿಯವರೇ ಸ್ಪೀಕರು. ಅಲ್ಲೂ ಮಾತಾಡಂಗಿಲ್ಲ. ಟೋಟಲೀ ಅವರು ಎಲ್ಲೂ ಮಾತಾಡದ ಹಂಗೆ ಮಾಡಿಬಿಟ್ರಲ್ರಿ?' ಸಿ.ಟಿ.ರವಿ ಕುರ್ಚಿ ಸ್ಪೀಕರ್ ಕುರ್ಚಿಯ ಕಾಲೆಳೆಯಲು ನೋಡಿತು.`ಎಲ್ಲರ ಮನೇಲೂ ಅವರವರ ಹೆಂಡ್ತಿಯರೇ ಸ್ಪೀಕರು, ಅದನ್ನೇನ್ ಹೇಳ್ತಿ ಬಿಡಪ್ಪ' ಎಂದು ತಿಪ್ಪೆ ಸಾರಿಸಲು ನೋಡಿತು ಸಚಿವ ಶ್ರೀನಿವಾಸ ಪ್ರಸಾದ್ ಕುರ್ಚಿ.`ಅಲ್ರೀ, ನಿಮ್ ಶ್ರೀನಿವಾಸ್ ಪ್ರಸಾದ್ ಸಾಹೇಬ್ರು ಅಧಿವೇಶನದಲ್ಲಿ ಕಾವೇರಿಗೆ ದೇವೇಗೌಡ್ರು ಏನ್ ಕೊಡುಗೆ ಕೊಟ್ಟಿದ್ದಾರೆ ಅಂತ ಕೇಳಿದ್ರಂತೆ? ಯಾಕೆ ದೇವೇಗೌಡ್ರು ಏನೂ ಕೊಡುಗೆ ಕೊಟ್ಟೇ ಇಲ್ವಾ?' ಬಸವರಾಜ ಹೊರಟ್ಟಿ ಕುರ್ಚಿ ಆಕ್ಷೇಪಿಸಿತು.ಆಗ ನಿಧಾನವಾಗಿ ಆಕಳಿಸುತ್ತ ಅಲ್ಲಿಗೆ ಬಂದ ಮುಖ್ಯಮಂತ್ರಿ ಕುರ್ಚಿ `ಕೊಟ್ಟಿದಾರೆ ಕೊಟ್ಟಿದಾರೆ, ಕಾವೇರಿ ನದಿ ಮುಂದೆ ನಿಂತ್ಕಂಡು ಒಂಟಿ ಕಣ್ಣಲ್ಲಿ ಅತ್ತಿದಾರೆ...' ಎಂದು ಗೇಲಿ ಮಾಡಿತು.`ಮತ್ತದು ಕೊಡುಗೆ ಅಲ್ವಾ? ಕಾವೇರಿ ನೀರಿಗೆ ಗೌಡ್ರು ತಮ್ಮ ಎರಡು ಹನಿ ಕಣ್ಣೀರನ್ನಾದ್ರು ಸೇರ‌್ಸಿ ನೀರಿನ ಮಟ್ಟ ಹೆಚ್ಚಿಸಿದಾರೆ. ನೀವು ಅದನ್ನೂ ಮಾಡಲಿಲ್ಲಪ್ಪ' ಯಡ್ಯೂರಪ್ಪ ಕುರ್ಚಿ ನಗಲಾರಂಭಿಸಿದಾಗ ಸಿಟ್ಟಿಗೆದ್ದ ಕುಮಾರಸ್ವಾಮಿ ಕುರ್ಚಿ `ಹೌದು ಸ್ವಾಮಿ, ನಾವು ಕಾವೇರಿಗಾಗಿ ಕಣ್ಣೀರು ಹಾಕಿದೀವಿ, ನಿಮ್ಮ ಯಡ್ಯೂರಪ್ಪನೋರು ಮೂರು ಕಾಲಿನ ಕುರ್ಚಿಗೆ ಕಣ್ಣೀರು ಹಾಕಿದ್ರಲ್ರಿ?' ಎಂದಾಗ ವಾತಾವರಣ ಕಾವೇರಿತು. ಸ್ಪೀಕರ್ ಕುರ್ಚಿ ಸಭೆಯನ್ನು ನಾಳೆಗೆ ಮುಂದೂಡಿ ಮೇಲಕ್ಕೆದ್ದಿತು! 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.