ಕುರ್ಚಿಗಾಗಿ ಕಾದಾಡಿದ ಇಬ್ಬರಿಗೆ ಕೋರ್ಟ್ ಆದೇಶದಿಂದ ಸಂಕಟ

7

ಕುರ್ಚಿಗಾಗಿ ಕಾದಾಡಿದ ಇಬ್ಬರಿಗೆ ಕೋರ್ಟ್ ಆದೇಶದಿಂದ ಸಂಕಟ

Published:
Updated:

ಬೆಂಗಳೂರು: ಅವರಿಗೂ ಅದೇ `ಕುರ್ಚಿ~ ಬೇಕು, ಇವರಿಗೂ ಅದೇ ಬೇಕು. ಅದನ್ನು ಪಡೆಯಲು ಮಹಿಳೆಯರಿಬ್ಬರು ಕಾದಾಟ ನಡೆಸಿ, ಶಾಸಕರಿಂದಲೂ ಶಿಫಾರಸು ಮಾಡಿಸಿದ್ದ ಕಾರಣ, ಈಗ ಊರನ್ನೇ ಬಿಟ್ಟು ಹೋಗಬೇಕಾದ ಅಪರೂಪದ ಆದೇಶವೊಂದು ಹೈಕೋರ್ಟ್‌ನಿಂದ ಗುರುವಾರ ಹೊರಬಿದ್ದಿದೆ.

ಮಂಡ್ಯದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿಗೃಹದಲ್ಲೇ ತಮಗೆ ವಾರ್ಡನ್ ಹುದ್ದೆ ಬೇಕು ಎಂದು ಕಾದಾಟ ನಡೆಸಿದ್ದ ಎಚ್.ಎಲ್.ಶಿವಲಿಂಗಮ್ಮ ಮತ್ತು ಭಾಗ್ಯ ಲಕ್ಷ್ಮಿ ಅವರ ನಡುವಿನ ವಿವಾದ ಇದು.

ಇದೇ ವಸತಿಗೃಹದಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ಶಿವಲಿಂಗಮ್ಮನವರು ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು ಅವರಿಂದ ಶಿಫಾರಸು ಮಾಡಿಸಿದ್ದರೆ, ಭಾಗ್ಯಲಕ್ಷ್ಮಿ ಅವರು ಮೂಡಿಗೆರೆ ಶಾಸಕ ಕುಮಾರಸ್ವಾಮಿ ಅವರಿಂದ ಶಿಫಾರಸು ಮಾಡಿಸಿದ್ದರು.

ಶಿವಲಿಂಗಮ್ಮ ಶಿಫಾರಸು ಮಾಡಿಸಿದ ಕಾರಣ, ಭಾಗ್ಯಲಕ್ಷ್ಮಿ ಅವರನ್ನು ಮಂಡ್ಯದಲ್ಲಿನ ಬಾಲಕರ ವಸತಿಗೃಹಕ್ಕೆ ವರ್ಗಾವಣೆ ಮಾಡಲಾಗಿತ್ತು. ಭಾಗ್ಯಲಕ್ಷ್ಮಿ ಶಿಫಾ ರಸು ತಂದ ನಂತರ ಶಿವಲಿಂಗಮ್ಮ ಅವರನ್ನು ಈ ವಸತಿಗೃಹಕ್ಕೆ ವರ್ಗಾವಣೆ ಮಾಡಲಾಯಿತು. ಇದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು.

ಒಂದೇ ಊರಾದರು ಕೂಡ ಬೇರೊಂದು ವಸತಿಗೃಹದಲ್ಲಿ ಕೆಲಸ ನಿರ್ವಹಿಸಲು ಇಚ್ಛಿಸದೆ ಇಷ್ಟೆಲ್ಲ ಜಟಾಪಟಿ ನಡೆಸಿರುವ ಈ ವಾರ್ಡನ್‌ಗಳ ಕ್ರಮಕ್ಕೆ ನ್ಯಾಯಮೂರ್ತಿಗಳಾದ ಕೆ.ಎಲ್.ಮಂಜುನಾಥ ಹಾಗೂ ಬಿ.ಮನೋಹರ ಅವರನ್ನು ಒಳಗೊಂಡ ವಿಭಾಗೀಯ ಪೀಠ ಅತೃಪ್ತಿ ಸೂಚಿಸಿತು.

`ಒಂದೇ ಕಡೆ ಮುಂದುವರಿಯಲು ಜನಪ್ರತಿನಿಧಿಗಳಿಂದ ಶಿಫಾರಸು ಮಾಡುವಂತಹ ಕ್ರಮಕ್ಕೆ ಕಡಿವಾಣ ಹಾಕುವ ಅಗತ್ಯ ಇದೆ. ಇವರು ಹಲವು ವರ್ಷಗಳಿಂದ ಒಂದೇ ಕಡೆ ಕೆಲಸ ನಿರ್ವಹಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ~ ಎಂದ ನ್ಯಾಯಮೂರ್ತಿಗಳು ಅವರಿಗೆ ಮಂಡ್ಯ ಬಿಟ್ಟು ಬೇರೆಡೆ ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಆದೇಶಿಸಿದ್ದಾರೆ.

ಸರ್ಕಾರದಿಂದ ಅರ್ಜಿ ಹಿಂದಕ್ಕೆ

ಶಾಸಕರ ಭವನದ ಎದುರು ಬಹುಮಹಡಿಗಳ ಕಾರು ಪಾರ್ಕಿಂಗ್ ನಿರ್ಮಾಣಕ್ಕೆ ಹೈಕೋರ್ಟ್ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ಸರ್ಕಾರ ಗುರುವಾರ ಹಿಂದಕ್ಕೆ ಪಡೆದಿದೆ.

ಈ ಜಾಗವು ಕಬ್ಬನ್ ಉದ್ಯಾನಕ್ಕೆ ಸೇರಿದೆ ಎಂಬ ಕಾರಣದಿಂದ ಕೋರ್ಟ್ ಅನುಮತಿಯನ್ನು ಸರ್ಕಾರ ಬಯಸಿತ್ತು. ಆದರೆ ಜಾಗವು ಉದ್ಯಾನಕ್ಕೆ ಸೇರಿಲ್ಲ ಎಂದು ತಜ್ಞರು ತಿಳಿಸಿರುವ ಹಿನ್ನೆಲೆಯಲ್ಲಿ ಅರ್ಜಿಯನ್ನು ಹಿಂದಕ್ಕೆ ಪಡೆದಿರುವುದಾಗಿ ಸರ್ಕಾರ ಕೋರ್ಟ್‌ಗೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry