ಕುಲಪತಿ ಧೋರಣೆ ವಿರುದ್ಧ ಸಿಂಡಿಕೇಟ್ ಸದಸ್ಯರ ಆಕ್ರೋಶ

7

ಕುಲಪತಿ ಧೋರಣೆ ವಿರುದ್ಧ ಸಿಂಡಿಕೇಟ್ ಸದಸ್ಯರ ಆಕ್ರೋಶ

Published:
Updated:

ಬೆಂಗಳೂರು: `ನಿಯಮ ಬಾಹಿರವಾಗಿ ನೇಮಕ ಮಾಡಿಕೊಂಡಿರುವ ಅಧಿಕಾರಿಗಳು ತಮ್ಮ ಅಧಿಕಾರಾವಧಿ ಇರುವವರೆಗೆ ಮುಂದುವರೆಯುತ್ತಾರೆ ಎಂದು ಕುಲಪತಿ ಡಾ.ಎನ್.ಪ್ರಭುದೇವ್ ಹೇಳಿದ್ದಾರೆ. ಹೀಗೆ ಹೇಳಲು ವಿ.ವಿ. ಇವರ ವೈಯಕ್ತಿಕ ಆಸ್ತಿಯೇ?~ ಎಂದು ಬೆಂಗಳೂರು ವಿವಿಯ ಸಿಂಡಿಕೇಟ್ ಸದಸ್ಯರು ಪ್ರಶ್ನಿಸಿದರು.`ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಸಿಂಡಿಕೇಟ್ ಸದಸ್ಯರಾದ ಡಾ.ಕೆ.ವಿ. ಆಚಾರ್ಯ, ಸಿ.ಕೆ.ಜಗದೀಶ್ ಪ್ರಸಾದ್, ಡಿ.ಎಸ್.ಕೃಷ್ಣ, ಡಾ.ಕೆ.ಬಿ.ವೇದಮೂರ್ತಿ, ಡಾ.ಟಿ.ಎಚ್.ಶ್ರೀನಿವಾಸಯ್ಯ ಮೊದಲಾದವರು, `ಕುಲಪತಿಯವರ ಹೇಳಿಕೆಯಲ್ಲೇ ಸರ್ವಾಧಿಕಾರಿ ಧೋರಣೆ ಎದ್ದು ಕಾಣುತ್ತಿದೆ~ ಎಂದು ಟೀಕಿಸಿದರು.`ವಿ.ವಿ. ಕಾಯ್ದೆ ಪ್ರಕಾರ ನಿವೃತ್ತ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಅವಕಾಶ ಇಲ್ಲ. 2009ರಲ್ಲಿ ಸರ್ಕಾರದಿಂದ ನಾಮನಿರ್ದೇಶನಗೊಂಡ ಸದಸ್ಯರು ಇಲ್ಲದಿದ್ದಾಗ ನಡೆದ ಸಿಂಡಿಕೇಟ್ ಸಭೆಯಲ್ಲಿ ಒಂದು ವರ್ಷದ ಅವಧಿಗೆ  ಸೈಯದ್ ಜಮಾಲ್ ಮತ್ತಿತರರ ನೇಮಕಾತಿಗೆ ಅನುಮೋದನೆ ಪಡೆದುಕೊಳ್ಳಲಾಗಿದೆ. ಒಂದು ವರ್ಷದ ನಂತರವೂ ಆ ಅಧಿಕಾರಿಗಳನ್ನು ಮುಂದುವರೆಸಿಕೊಂಡು ಬರಲಾಗಿದೆ~ ಎಂದು ತಿಳಿಸಿದರು.`ನಿವೃತ್ತರನ್ನು ನೇಮಿಸಿಕೊಂಡಿರುವುದು ಮತ್ತು ಅವರಿಗೆ ಭಾರಿ ಮೊತ್ತದ ಹಣ ಪಾವತಿ ಮಾಡಿರುವುದಕ್ಕೆ ಸರ್ಕಾರಿ ಲೆಕ್ಕ ಪರಿಶೋಧಕರು ಆಕ್ಷೇಪಿಸಿದ್ದಾರೆ. ಪರೀಕ್ಷಾ ವಿಭಾಗದಲ್ಲಿ ಖರ್ಚು ಮಾಡಿರುವ ಕೋಟಿಗಟ್ಟಲೆ ಹಣಕ್ಕೆ ಲೆಕ್ಕ ಇಟ್ಟಿಲ್ಲ. ಕಡತಗಳನ್ನು ಕೊಡದೇ ಸತಾಯಿಸಲಾಗುತ್ತಿದೆ ಎಂದು ಲೆಕ್ಕ ಪರಿಶೋಧಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಷ್ಟಾದರೂ ಅವರನ್ನು ವಜಾ ಮಾಡಲು ಕುಲಪತಿಯವರು ಮುಂದಾಗಿಲ್ಲ. ಬದಲಿಗೆ ತಾವಿರುವವರೆಗೆ ಅವರು ಇರುತ್ತಾರೆ ಎಂದು ಹೇಳಿರುವುದು ನಾಚಿಕೆಗೇಡು~ ಎಂದು ಅವರು ಹೇಳಿದರು.`ವಿ.ವಿ.ಯ ಇಂದಿನ ಅವ್ಯವಸ್ಥೆ, ದುರಾಡಳಿತ, ಆರ್ಥಿಕ ಅವ್ಯವಹಾರಗಳಿಗೆ ಅಕ್ರಮವಾಗಿ ನೇಮಕಗೊಂಡಿರುವ ಅಧಿಕಾರಿಗಳೇ ಕಾರಣ. ತಕ್ಷಣ ಅವರನ್ನು ವಜಾ ಮಾಡಬೇಕು. ಅವರಿಗೆ ಪಾವತಿ ಮಾಡಿರುವ ಹಣವನ್ನು ವಸೂಲಿ ಮಾಡಬೇಕು. ಲೆಕ್ಕ ಪರಿಶೋಧಕರ ವರದಿಯನ್ನಾಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು~ ಎಂದು ಅವರು ಒತ್ತಾಯಿಸಿದರು.`ಮುಷ್ಕರ ಕೈಬಿಡಿ~


`ಸಂಘದ ಪದಾಧಿಕಾರಿಗಳು ಸೆಂಟ್ರಲ್ ಕಾಲೇಜಿನ ಆವರಣಕ್ಕೆ ಬರದೇ ಇರುವುದರಿಂದ ಬೇಡಿಕೆಗಳ ಬಗ್ಗೆ ನಾನೇ ನಿರ್ಧಾರ ತೆಗೆದುಕೊಂಡಿದ್ದೇನೆ. ಇನ್ನಾದರೂ ಮುಷ್ಕರ ಕೈ ಬಿಡಿ~ ಎಂದು ಕುಲಪತಿ ಡಾ.ಎನ್. ಪ್ರಭುದೇವ್ ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.`ಮುಷ್ಕರದಿಂದ ವಿ.ವಿ. ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ನನಗೆ ದೂರುಗಳು ಬಂದಿವೆ. ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಗಮನ ಕೇಂದ್ರೀಕರಿಸಬೇಕು. ಎಲ್ಲರೂ ವಿ.ವಿ.ಯಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣಗೊಳ್ಳಲು ಎಲ್ಲರೂ ಸಹಕರಿಸಬೇಕು~ ಎಂದು ಕೋರಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry