ಮಂಗಳವಾರ, ನವೆಂಬರ್ 19, 2019
29 °C
ಕೃತಿ ಚೌರ್ಯ, ಅಕ್ರಮ, ಸ್ವಜನ ಪಕ್ಷಪಾತ

ಕುಲಪತಿ ರಂಗಪ್ಪ, ರಾಜ್ಯಪಾಲರಿಗೆ ನೋಟಿಸ್

Published:
Updated:

ಬೆಂಗಳೂರು: ಕೃತಿಚೌರ್ಯ, ಪುತ್ರನಿಗೆ ಎಂ.ಎಸ್ಸಿ ಸೀಟು ಕೊಡಿಸಲು ನಿಯಮ ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಪ್ರೊ. ಕೆ.ಸಿ. ರಂಗಪ್ಪ ಅವರನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಸ್ಥಾನದಿಂದ ವಜಾ ಮಾಡಬೇಕು ಎಂದು ಕೋರಿ ಮೈಸೂರಿನ ಕೆ.ಎಸ್. ಶಿವರಾಮ್ ಮತ್ತು ಇತರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವಿ. ಶೈಲೇಂದ್ರ ಕುಮಾರ್ ಅವರು, ಪ್ರೊ. ರಂಗಪ್ಪ, ವಿ.ವಿ. ಕುಲಾಧಿಪತಿ ಎಚ್.ಆರ್. ಭಾರದ್ವಾಜ್, ರಾಜ್ಯ ಸರ್ಕಾರ, ವಿಶ್ವವಿದ್ಯಾಲಯಗಳ ಅನುದಾನ ಆಯೋಗಕ್ಕೆ ತುರ್ತು ನೋಟಿಸ್ ಜಾರಿಗೆ ಶುಕ್ರವಾರ ಆದೇಶಿಸಿದ್ದಾರೆ.ಪುತ್ರ ಆರ್. ಶೋಭಿತ್ ಅವರಿಗೆ ಎಂಎಸ್ಸಿ ಸೀಟು ಕೊಡಿಸುವಾಗ ಪ್ರೊ. ರಂಗಪ್ಪ ಅವರು ನಿಯಮ ತಿರುಚಿದ್ದಾರೆ. ಮೈಸೂರು ವಿ.ವಿ. ವ್ಯಾಪ್ತಿಯ ಯುವರಾಜ ಕಾಲೇಜು ಐದು ವರ್ಷಗಳ ಎಂಎಸ್ಸಿ ಕೋರ್ಸಿಗೆ 2006ರಲ್ಲಿ ಅರ್ಜಿ ಆಹ್ವಾನಿಸಿತ್ತು. ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕನಿಷ್ಠ ಸರಾಸರಿ ಶೇಕಡ 55ರಷ್ಟು ಅಂಕ ಪಡೆದಿರಬೇಕು ಎಂದು ಅರ್ಜಿಯಲ್ಲಿ ಸ್ಪಷ್ಟಪಡಿಸಲಾಗಿತ್ತು. ಶೋಭಿತ್ ಅವರಿಗೆ ಆಗ ಅಗತ್ಯ ಅರ್ಹತೆ ಇರಲಿಲ್ಲ. ಆದರೆ ಈ ಕೋರ್ಸ್‌ಗೆ ಪ್ರವೇಶ ನೀಡುವ ಮಂಡಳಿಯ ಸದಸ್ಯರಾಗಿದ್ದ ಪ್ರೊ. ರಂಗಪ್ಪ ಅವರು ಪುತ್ರನಿಗೆ ಪ್ರವೇಶ ಕಲ್ಪಿಸಿದ್ದಾರೆ. ಇಲ್ಲಿ ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ ಉಲ್ಲಂಘಿಸಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.ಈ ಕುರಿತು ತನಿಖೆಗೆ ಪ್ರೊ. ಶಿವರಾಮ ಕಾಡನಕುಪ್ಪೆ ನೇತೃತ್ವದಲ್ಲಿ ಸಮಿತಿಯೊಂದನ್ನು ನೇಮಕ ಮಾಡಲಾಯಿತು. ಸಮಿತಿ ನೀಡಿದ ವರದಿಯನ್ನು ಒಪ್ಪದ ವಿ.ವಿ. ಸಿಂಡಿಕೇಟ್, ಕುಲಸಚಿವ (ಮೌಲ್ಯಮಾಪನ) ಬಿ. ರಾಮು ಅವರ ನೇತೃತ್ವದಲ್ಲಿ ಉಪ-ಸಮಿತಿಯೊಂದನ್ನು ನೇಮಕ ಮಾಡಿ, ಅದೇ ಪ್ರಕರಣ ಕುರಿತು ತನಿಖೆ ನಡೆಸುವಂತೆ ಸೂಚಿಸಿದೆ.ಜಿ.ವಿಜಯಲಕ್ಷ್ಮಿ, ಎಂ. ಆದಿನಾರಾಯಣ ಮತ್ತು ಪಿ. ಜಯಪ್ರಕಾಶ್ ರಾವ್ ಎಂಬುವವರು 2008ರಲ್ಲಿ `ಇಂಡಿಯನ್ ಜರ್ನಲ್ ಆಫ್ ಬಯೋಕೆಮಿಸ್ಟ್ರಿ ಅಂಡ್ ಬಯೋಫಿಸಿಕ್ಸ್' ನಿಯತಕಾಲಿಕೆಯಲ್ಲಿ ಬರೆದ ಲೇಖನವನ್ನು ಪ್ರೊ. ರಂಗಪ್ಪ ಅವರು ಕೃತಿಚೌರ್ಯ ಮಾಡಿದ್ದಾರೆ ಎಂದೂ ಆರೋಪ ಮಾಡಲಾಗಿದೆ.ಕವಿತಾ ಎನ್ನುವ ಸಂಶೋಧನಾ ವಿದ್ಯಾರ್ಥಿನಿಯೊಬ್ಬರಿಗೆ, ನಿಯಮಗಳನ್ನು ಉಲ್ಲಂಘಿಸಿ ಪಿಎಚ್‌ಡಿ ಪದವಿ ನೀಡಿದ ಆರೋಪ ಪ್ರೊ. ರಂಗಪ್ಪ ವಿರುದ್ಧ ಇದೆ. ಪ್ರೊ. ರಂಗಪ್ಪ ಅವರು ಮೈಸೂರು ವಿ.ವಿ.ಯ ರಸಾಯನ ವಿಜ್ಞಾನ ವಿಭಾಗದಲ್ಲಿ ಹಿಂದೆ ಪ್ರಾಧ್ಯಾಪಕರಾಗಿದ್ದರು. ಮೈಸೂರು ವಿ.ವಿ.ಯ ಕುಲಸಚಿವರ (ಮೌಲ್ಯಮಾಪನ) ಮತ್ತು ಸಿಐಡಿಯ ಡಿಐಜಿ ನೀಡಿದ ವರದಿ ಆಧರಿಸಿ, ವಿ.ವಿ.ಯ ಕುಲಸಚಿವರಿಗೆ 2007ರ ನವೆಂಬರ್‌ನಲ್ಲಿ ಪತ್ರ ಬರೆದಿದ್ದ ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿಯವರು, ರಂಗಪ್ಪ ಅವರ ವಿರುದ್ಧ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದರು.ಆದರೆ ಪ್ರೊ. ರಂಗಪ್ಪ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ವ್ಯಕ್ತಿಯೊಬ್ಬರ ಪ್ರಾಮಾಣಿಕತೆ ಕುರಿತು ಸಂಶಯ ಇದ್ದಲ್ಲಿ, ಅವರನ್ನು `ಡಿ' ವೃಂದದ ಹುದ್ದೆಗಳಿಗೂ ನೇಮಕ ಮಾಡಿಕೊಳ್ಳಲಾಗದು. ಅಂಥದ್ದರಲ್ಲಿ, ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಪ್ರೊ. ರಂಗಪ್ಪ ಅವರನ್ನು ಕುಲಪತಿ ಹುದ್ದೆಗೆ ನೇಮಕ ಮಾಡಿರುವುದು ಸರಿಯಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.ಪ್ರೊ. ರಂಗಪ್ಪ ಅವರನ್ನು ಕುಲಸಚಿವರನ್ನಾಗಿ ನೇಮಕ ಮಾಡುವ ಸಂದರ್ಭದಲ್ಲಿ ರಚಿಸಲಾಗಿದ್ದ ಶೋಧನಾ ಸಮಿತಿಯ ಸದಸ್ಯರಾದ ಡಾ.ಎಚ್.ಪಿ. ಖಿಂಚ, ಡಾ.ಜಿ. ತಿಮ್ಮಯ್ಯ, ಪ್ರೊ.ಎನ್.ಆರ್. ಶೆಟ್ಟಿ ಮತ್ತು ಡಾ.ಎಂ.ಎಸ್. ತಿಮ್ಮಪ್ಪ ಅವರಿಗೂ ನೋಟಿಸ್ ಜಾರಿಗೆ ಆದೇಶ ನೀಡಲಾಗಿದೆ. ವಿಚಾರಣೆ ಮುಂದೂಡಲಾಗಿದೆ.

ಪ್ರತಿಕ್ರಿಯಿಸಿ (+)