ಶನಿವಾರ, ಮೇ 8, 2021
20 °C

ಕುಲಪತಿ ವಿರುದ್ಧ ಸಚಿವ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು:  ವಿಶ್ವವಿದ್ಯಾನಿಲಯದ ಲಾಂಛನ ಬದ ಲಿಸಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎನ್.ಸಿ.ಶರ್ಮಾ ವಿರುದ್ಧ ಕಾನೂನು ಸಚಿವ ಸುರೇಶ್‌ಕುಮಾರ್ ಅಸಮಾಧಾನ ತೋಡಿಕೊಂಡಿದ್ದಾರೆ.



ಲಾಂಛನ ಬದಲಿಸಿರುವ ವಿಶ್ವವಿದ್ಯಾನಿಲಯದ ಕ್ರಮವನ್ನು ಖಂಡಿಸಿ ಹಾಗೂ ಹಳೆ ಲಾಂಛನವನ್ನೇ ಮುಂದುವರಿಸಬೇಕು ಎಂದು ಚಿಂತಕ ಕೆ.ದೊರೈರಾಜ್ ನೇತೃತ್ವದ ನಿಯೋಗ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.



ನಿಯೋಗದೊಂದಿಗೆ ಮಾತನಾಡಿದ ಸಚಿವರು, ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ತೀವ್ರ ಅಸಮಾಧಾನ ಹೊರ ಹಾಕಿದರು ಎಂದು ನಿಯೋಗದಲ್ಲಿದ್ದ ಸದಸ್ಯರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.



ಪ್ರತಿ ವಿಶ್ವವಿದ್ಯಾನಿಲಯಕ್ಕೆ ಕಾಲಕಾಲಕ್ಕೆ ನೇಮಕಗೊಳ್ಳುವ ಕುಲಪತಿಗಳು ಲಾಂಛನ ಬದಲಿಸುತ್ತಾ ಹೋದರೆ ವಿಶ್ವವಿದ್ಯಾನಿಲಯಗಳ ಗತಿ ಏನಾಗಬೇಡ. ಕುಲಪತಿಯ ಇಂಥ ನಡೆಯನ್ನು ಯಾವುದೇ ಕಾರಣಕ್ಕೂ ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೊಸ ಲಾಂಛನ ಅಳವಡಿಕೆಗೆ ವೈಯಕ್ತಿಕವಾಗಿ ತಮ್ಮ ಸಮ್ಮತ ಇಲ್ಲ ಎಂದು ತಿಳಿಸಿದ್ದಾರೆ.



ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಮೇಲೆ ಕುಲಪತಿ ದಾಖಲಿಸಿರುವ ದೂರು ವಾಪಸ್ ಪಡೆಯುವ ಬಗೆಗೂ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದರು ಎಂದು ಅವರು ಹೇಳಿದರು.



ರಾಷ್ಟ್ರಪತಿಗೆ ಪತ್ರ: ಮತ್ತೊಂದು ಬೆಳವಣಿಗೆಯಲ್ಲಿ ಕುಲಪತಿ ವಿರುದ್ಧ ಬಹಿರಂಗ ಧ್ವನಿ ಎತ್ತಲು ಭಯವಿದ್ದ ನೂರಾರು ವಿದ್ಯಾರ್ಥಿಗಳು ರಾಷ್ಟ್ರಪತಿ ಪ್ರತಿಭಾ ಪಾಟೀಲ್, ವಿ.ವಿ. ಕುಲಾಧಿಪತಿಯೂ ಆಗಿರುವ ರಾಜ್ಯಪಾಲರಿಗೆ ಪತ್ರ ಬರೆಯತೊಡಗಿದ್ದಾರೆ.



`ಹಳೆ ಲಾಂಛನವೇ ಚೆನ್ನಾಗಿತ್ತು. ಹೊಸ ಲಾಂಛನದ ಅಗತ್ಯತೆ ಇರಲಿಲ್ಲ. ಹೊಸ ಲಾಂಛನದ ಬದಲಿಗೆ ವಿ.ವಿ.ಗೆ ಸರ್ಕಾರ ಕೊಡಬೇಕಾದ ಭೂಮಿಯ ಕುರಿತು ಉತ್ಸುಕತೆ ತೋರಬೇಕಾಗಿತ್ತು. ಬೇರೆ ವಿ.ವಿ.ಗಳನ್ನು ನೋಡಿದಾಗ ಕಿರಿದಾದ ಕಾಲೇಜಿನಲ್ಲಿ ಕಲಿತಂಥ ಅನುಭವ ಆಗುತ್ತದೆ.



ವಿವಾದದ ಕಾರಣ ಜಿಲ್ಲೆಯಿಂದ ಹೊರಗೆ ವಿ.ವಿ. ಕುರಿತು ಒಳ್ಳೆಯ ಅಭಿಪ್ರಾಯ ಮೂಡಿಬರುತ್ತಿಲ್ಲ. ಇದೆಲ್ಲದರಿಂದ ಬೇಸತ್ತು ರಾಷ್ಟ್ರಪತಿಗೆ ಪತ್ರ ಬರೆಯಲು ನಿರ್ಧರಿಸಿದ್ದಾಗಿ~ ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿಯೊಬ್ಬರು `ಪ್ರಜಾವಾಣಿ~ಯೊಂದಿಗೆ ನೋವು ತೋಡಿಕೊಂಡರು.



ರಾಷ್ಟ್ರಪತಿಗೆ ಕಳುಹಿಸುವ ಪತ್ರ ಚಳವಳಿಯನ್ನು ಡಿವೈಎಫ್‌ಐ ಬೆಂಬಲಿಸಲಿದೆ. ಡಿವೈಎಫ್‌ಐ ಕಡೆಯಿಂದಲೂ ಈಗಾಗಲೇ ರಾಷ್ಟ್ರಪತಿಗೆ ಹಲವು ಯುವಕರು ಪತ್ರ ಬರೆದು ಲಾಂಛನ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಕೋರಲಾಗಿದೆ ಎಂದು ಸಂಘಟನೆ ಜಿಲ್ಲಾ ಕಾರ್ಯದರ್ಶಿ ಎಸ್.ರಾಘವೇಂದ್ರ ತಿಳಿಸಿದರು.



`ತಪ್ಪೊಪ್ಪಿಕೊಂಡ ವಿ.ವಿ~ 

ತುಮಕೂರು: 
ಬಿಇಡಿ ಸಂಸ್ಕೃತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ದೋಷಗಳ ಕುರಿತು ತಪ್ಪೊಪ್ಪಿಕೊಂಡಿರುವ ತುಮಕೂರು ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳು ಲಿಖಿತವಾಗಿ ಮನವಿ ಮಾಡಿದರೆ ಮರು ಪರೀಕ್ಷೆ ನಡೆಸಲು ಸಿದ್ಧ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.



ವಿ.ವಿ.ಯಲ್ಲಿ ಒಬ್ಬರೂ ಸಂಸ್ಕೃತ ಪ್ರಾಧ್ಯಾಕರು  ಇಲ್ಲ. ಹೀಗಾಗಿ ಬೇರೆ ವಿಶ್ವವಿದ್ಯಾನಿಲಯದ ಸಂಸ್ಕೃತ ಪ್ರಶ್ನೆ ಪತ್ರಿಕೆ ರಚಿಸುವ ಅಧ್ಯಾಪಕರಿಂದ ಪ್ರಶ್ನೆ ಪತ್ರಿಕೆ ರೂಪಿಸಲಾಗಿತ್ತು. ಅದನ್ನು ಪರೀಕ್ಷಾ ಮಂಡಳಿ ಅನುಮೋದಿಸಿತು. ಸಂಸ್ಕೃತ ಪತ್ರಿಕೆಯ ಮೌಲ್ಯಮಾಪನಕ್ಕೆ, ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲು ವಿ.ವಿ.ಯಲ್ಲಿ ಸಂಸ್ಕೃತ ಅಧ್ಯಾಪಕರೇ ಇಲ್ಲ.



ಇದರಿಂದಾಗಿ ಈ ಅಭಾಸ ಉಂಟಾಗಿದೆ. ಮಕ್ಕಳಿಗೆ ಅನ್ಯಾಯವಾಗಿದೆ. ಅದನ್ನು ಸರಿಪಡಿಸಲು ವಿ.ವಿ. ಸಿದ್ಧವಿದೆ. ಈ ಸಂಬಂಧ ವರದಿ ನೀಡುವಂತೆ ಪರೀಕ್ಷಾ ಮಂಡಳಿ ಅಧ್ಯಕ್ಷರಿಗೆ ಸೂಚನೆ ನೀಡಲಾಗಿದೆ ಎಂದು ವಿ.ವಿ. ಕುಲಸಚಿವ (ಪರೀಕ್ಷಾಂಗ) ಪ್ರಕಟಣೆಯಲ್ಲಿ ಹೇಳಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.