ಕುಲಸಚಿವ ಹುದ್ದೆ:ಮೈಲಾರಪ್ಪ ನೇಮಕಕ್ಕೆ ವಿರೋಧ

7

ಕುಲಸಚಿವ ಹುದ್ದೆ:ಮೈಲಾರಪ್ಪ ನೇಮಕಕ್ಕೆ ವಿರೋಧ

Published:
Updated:

ಬೆಂಗಳೂರು:  ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ.ಸಿ.ಮೈಲಾರಪ್ಪ ಅವರನ್ನು ನೂತನ ಕುಲಸಚಿವರನ್ನಾಗಿ ನೇಮಕ ಮಾಡಲು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅನುಮತಿ ನೀಡಿರುವುದು ಶೈಕ್ಷಣಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.ಮೈಲಾರಪ್ಪ ಅವರು ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾಗಿದ್ದಾಗ ನಡೆದಿರುವ ಅವ್ಯವಹಾರಗಳಿಗೆ ಸಂಬಂಧಿಸಿದ ಪ್ರಕರಣ ಇತ್ಯರ್ಥವಾಗುವ ಮೊದಲೇ ಅವರಿಗೆ ಉಡುಗೊರೆ ರೂಪದಲ್ಲಿ ವಿಶ್ವವಿದ್ಯಾಲಯದ ಪ್ರಮುಖ ಸ್ಥಾನವಾದ ಕುಲಸಚಿವರ ಹುದ್ದೆಗೆ ನೇಮಕ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಕಲಾ ನಿಕಾಯದ ಡೀನ್ ಒಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.ಮಾಜಿ ಶಾಸಕರೊಬ್ಬರ ನೆರವಿನಿಂದ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಕುಲಸಚಿವ ಸ್ಥಾನಕ್ಕೇರಲು ಮೈಲಾರಪ್ಪ ಅವರು ಎರಡು ತಿಂಗಳಿಂದ ಲಾಬಿ ನಡೆಸಿದ್ದರು. ಒಂದೆರಡು ದಿನಗಳ ಹಿಂದೆಯಷ್ಟೇ ಇವರ ನೇಮಕಕ್ಕೆ ಸಂಬಂಧಿಸಿದ ಕಡತವನ್ನು ಸದಾನಂದಗೌಡ ಅವರು ಇತ್ಯರ್ಥಪಡಿಸಿ ಉನ್ನತ ಶಿಕ್ಷಣ ಇಲಾಖೆಗೆ ರವಾನಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.`ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದು ಸ್ಪರ್ಧೆ ಮಾಡಿದ್ದ ಮೈಲಾರಪ್ಪ ಅವರನ್ನು ಕುಲಸಚಿವರನ್ನಾಗಿ ನೇಮಕ ಮಾಡಿದರೆ ವಿಶ್ವವಿದ್ಯಾಲಯದ ಶೈಕ್ಷಣಿಕ ವಾತಾವರಣ ಯಾವ ರೀತಿ ಇರುತ್ತದೆ ಎಂಬ ಬಗ್ಗೆ ಹೆಚ್ಚಿಗೆ ವಿವರಿಸುವ ಅಗತ್ಯವಿಲ್ಲ. ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡು ಚುನಾವಣಾ ಕಣಕ್ಕೆ ಇಳಿದಿದ್ದ ವ್ಯಕ್ತಿ ಈಗ ಕುಲಸಚಿವರಾಗಲು ಹೊರಟಿರುವುದು ಆಶ್ಚರ್ಯವನ್ನುಂಟು ಮಾಡಿದೆ~ ಎಂದು ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.ರಂಗನಾಥ್ ಎತ್ತಂಗಡಿ: ಆಶ್ಚರ್ಯಕರ ಸಂಗತಿಯೆಂದರೆ, ಪ್ರಸ್ತುತ ಕುಲಸಚಿವರಾಗಿರುವ ಡಾ.ಆರ್.ಎಂ.ರಂಗನಾಥ್ ಅಧಿಕಾರ ಅವಧಿ ಇನ್ನೂ ಏಳು ತಿಂಗಳಿದೆ. 2012ರ ಮೇ ತಿಂಗಳಲ್ಲಿ ಅವರ ಅವಧಿ ಮುಕ್ತಾಯವಾಗಲಿದೆ. ಆದರೆ ಅವರನ್ನು ಎತ್ತಂಗಡಿ ಮಾಡಿ ತರಾತುರಿಯಲ್ಲಿ ಮೈಲಾರಪ್ಪ ಅವರನ್ನು ತರುತ್ತಿರುವುದು ವಿ.ವಿ ಪ್ರಾಧ್ಯಾಪಕ ವಲಯದಲ್ಲಿ ಅಸಮಾಧಾನವನ್ನುಂಟು ಮಾಡಿದೆ.ಹಿಂದೆ ಉನ್ನತ ಶಿಕ್ಷಣ ಸಚಿವರಾಗಿದ್ದ ಅರವಿಂದ ಲಿಂಬಾವಳಿ ಅವರು ಸಚಿವ ಸ್ಥಾನ ಕಳೆದುಕೊಳ್ಳುತ್ತಿದ್ದಂತೆಯೇ ಬೆಂಗಳೂರು ವಿ.ವಿ.ಯ ಆಡಳಿತ ಮತ್ತು ಪರೀಕ್ಷಾಂಗ ವಿಭಾಗದ ಕುಲಸಚಿವರ ಎತ್ತಂಗಡಿಯಾಗಿತ್ತು. ಆಗಲೂ ಸಹ ಅವಧಿ ಮುಗಿಯುವ ಮೊದಲೇ ಕೊಕ್ ನೀಡಿ ಬೇರೆಯವರನ್ನು ನೇಮಕ ಮಾಡಲಾಗಿತ್ತು. ಈ ರೀತಿ ಪದೇ ಪದೇ ಕುಲಸಚಿವರನ್ನು ಬದಲಾವಣೆ ಮಾಡುವುದರಿಂದ ಆಡಳಿತ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಪ್ರಾಧ್ಯಾಪಕರೊಬ್ಬರು ಬೇಸರದಿಂದ ನುಡಿದರು.ಮೈಲಾರಪ್ಪ ಪರ ಲಾಬಿ ಜೋರಾಗಿದ್ದು, ಕೆಲ ಸಿಂಡಿಕೇಟ್ ಸದಸ್ಯರು ಕೂಡ ಅವರನ್ನು ಕುಲಸಚಿವರನ್ನಾಗಿ ಮಾಡಲು ಯತ್ನಿಸಿದ್ದರು ಎಂದು ತಿಳಿದು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry