ಶನಿವಾರ, ಜೂನ್ 12, 2021
24 °C

ಕುಲಾಂತರಿ ತಳಿ ಬಳಕೆಯಿಂದ ಬದುಕು ಬರಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: `ಸರ್ಕಾರದ ರೈತ ವಿರೋಧಿ ನೀತಿಗಳಿಂದ ಅನ್ನದಾತರು ಕಾರ್ಪೋರೇಟ್ ಕಂಪೆನಿಗಳ  ಗುಲಾಮರಾಗುತ್ತಿದ್ದಾರೆ~ ಎಂದು ಹೋಮಿಯೊಪತಿ ತಜ್ಞ ಡಾ.ಖಾದರ್ ವಿಷಾದಿಸಿದರು.ನಗರದಲ್ಲಿ ಭಾನುವಾರ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದಿಂದ `ಅಂದು ಉಪ್ಪು; ಇಂದು ಬೀಜ~ ಘೋಷಣೆಯೊಂದಿಗೆ ಕುಲಾಂತರಿ ವಿರೋಧಿ ಆಂದೋಲನದ ಅಂಗವಾಗಿ ಹಮ್ಮಿಕೊಂಡಿದ್ದ ರೈತರ ಸಮಾವೇಶದಲ್ಲಿ ಅವರು, `ಆರೋಗ್ಯದಲ್ಲಿ ನಾಡತಳಿ ಆಹಾರದ ಮಹತ್ವ~ ಕುರಿತು ಮಾತನಾಡಿದರು.ಪ್ರತಿಯೊಬ್ಬರ ಆಹಾರ ಪದ್ಧತಿ ಬದಲಾಗಿದೆ. ಹೈಬ್ರಿಡ್ ತಳಿಗಳ ಬಳಕೆಯಿಂದ ಆರೋಗ್ಯ ಹದಗೆಡುತ್ತಿದೆ. ಕೊಳ್ಳುಬಾಕ ಸಂಸ್ಕೃತಿಯ ಬಹುರಾಷ್ಟ್ರೀಯ ಕಂಪೆನಿಗಳ ಮೋಸಕ್ಕೆ ರೈತರು ತುತ್ತಾಗುತ್ತಿದ್ದಾರೆ.ಸಾಂಪ್ರದಾಯಿಕ ತಳಿಗಳ ಮಹತ್ವದ ಬಗ್ಗೆ ಅರಿವು ಕಡಿಮೆಯಾಗಿದೆ. ಇದರ ಪರಿಣಾಮ ರೋಗರುಜಿನಗಳ ಸಂಖ್ಯೆಯೂ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.ಬೀಜ ಭವಿಷ್ಯದ ಸಂಕೇತ. ಆದರೆ, ಕುಲಾಂತರಿ ತಳಿಗಳ ಆಹಾರದ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಹೆಚ್ಚುತ್ತಿದೆ. ಮನುಷ್ಯರಲ್ಲಿರುವ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು ಈ ತಳಿಗಳು ಕಾರಣವಾಗುತ್ತಿವೆ. ಇಲ್ಲಿನ ಮಣ್ಣಿನ ಗುಣಕ್ಕೆ ಹೊಂದಿಕೊಳ್ಳದಿರುವ ತಳಿಗಳ ಅಭಿವೃದ್ಧಿಗೆ ಸರ್ಕಾರ ಸಬ್ಸಿಡಿ ಕೂಡ ನೀಡಲು ಹೊರಟಿರುವುದು ದುರಂತ. ಇದಕ್ಕೆ ತಾಳೆ ಬೆಳೆ ಸೂಕ್ತ ನಿದರ್ಶನ. ಆದರೆ, ನಾಡತಳಿ ಉಳಿಸುವ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿಲ್ಲ ಎಂದರು.ರಾಗಿ, ನವಣೆ, ಸಜ್ಜೆ ಬೆಳೆಯಲ್ಲಿ ಪೌಷ್ಟಿಕಾಂಶ ಹೆಚ್ಚಿದೆ. ದಿನನಿತ್ಯವೂ ಈ ಆಹಾರ ಪದಾರ್ಥ ಸೇವಿಸುವುದರಿಂದ ಯಾವುದೇ ಕಾಯಿಲೆ ಕಾಣಿಸಿಕೊಳ್ಳುವುದಿಲ್ಲ. ಕ್ರಿಮಿನಾಶಕದ ಬಳಕೆಯಿಂದ ಅರಿಸಿನದ ಸುಗಂಧ ಕಡಿಮೆಯಾಗಿದೆ. ಮೈಗೆ ಅರಿಸಿನ ಹಚ್ಚಿಕೊಂಡರೆ ತುರಿಕೆ ಕಾಣಿಸಿಕೊಳ್ಳುತ್ತದೆ ಎಂದು ಮಾರ್ಮಿಕವಾಗಿ ನುಡಿದರು.ಪ್ರಸ್ತುತ ರೈತರ ಮುಂದೆ ಸವಾಲು ಎದುರಾಗಿದೆ. ಹೀಗಾಗಿ, ಆಹಾರ ಭದ್ರತೆ ಬಗ್ಗೆ ಗಂಭೀರ ಚಿಂತನೆಗೆ ಇದು ಸಕಾಲ. ತಮಗೆ ಅಗತ್ಯವಿರುವಷ್ಟು ಆಹಾರವನ್ನು ತಾವೇ ಬೆಳೆದುಕೊಂಡು ದಿನನಿತ್ಯ ಬಳಸಿಕೊಳ್ಳುವ ಪದ್ಧತಿಗೆ ಮುಂದಾಗುವುದು ಒಳಿತು ಎಂದು ಸಲಹೆ ನೀಡಿದರು.ಪತ್ರಕರ್ತೆ ಎನ್. ಗಾಯತ್ರಿ ಮಾತನಾಡಿ, `ಬಿಟಿ ಹತ್ತಿಯಿಂದ ರೈತರ ಬದುಕು ಬರಡಾಗಿರುವುದು ಎಲ್ಲರಿಗೂ ಗೊತ್ತಿದೆ. ಈಗಲಾದರೂ, ರೈತರು ಕುಲಾಂತರಿ ತಳಿಗಳ ವಿರುದ್ಧ ಹೋರಾಟ ಮಾಡಬೇಕಿದೆ~ ಎಂದು ಹೇಳಿದರು.ಪ್ರಸ್ತುತ ಒಂದು ಹೆಕ್ಟೇರ್‌ನಲ್ಲಿ ಬಿಟಿ ಹತ್ತಿಯ ಇಳುವಳಿ 470 ಕೆಜಿ ದಾಟುವುದಿಲ್ಲ. ಇದನ್ನು ಕೇಂದ್ರ ಸರ್ಕಾರದ ಅಂಕಿ-ಅಂಶಗಳೇ ದೃಢಪಡಿಸಿವೆ. ಕೆಲವು ಕಂಪೆನಿಗಳು 72 ಕುಲಾಂತರಿ ತಳಿ ಅಭಿವೃದ್ಧಿಪಡಿಸಿದ್ದು, ರೈತರನ್ನು ಬಲಿಪಶು ಮಾಡಲು ಹೊರಟಿವೆ. ಇದಕ್ಕೆ ಸರ್ಕಾರ ಅವಕಾಶ ನೀಡಬಾರದು. ರೈತರು ಮತ್ತು ನಾಗರಿಕರು ಕೂಡ ಜಾಗೃತರಾಗಬೇಕು ಎಂದು ಕರೆ ನೀಡಿದರು.ಕೃಷಿ ವಿಜ್ಞಾನಿಗಳು ಮತ್ತು ಬಹುರಾಷ್ಟ್ರೀಯ ಕಂಪೆನಿಗಳ ಕುತಂತ್ರದಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಹೀಗಾಗಿ, ನಾಡತಳಿಗಳ ಅಸ್ತಿತ್ವ ಉಳಿಸಿಕೊಳ್ಳಲು ರೈತರು ಜಾಗೃತರಾಗಬೇಕಿದೆ ಎಂದರು.ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಂ. ಮಹೇಶ್‌ಪ್ರಭು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತುಮಕೂರು ವಿಜ್ಞಾನ ಕೇಂದ್ರದ ಕಾರ್ಯದರ್ಶಿ ರಾಮಕೃಷ್ಣಪ್ಪ, ಶಂಕರ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.