ಕುಲಾಂತರಿ ತಳಿ ಬಳಕೆ ತ್ವರಿತ ಜಾರಿ

7

ಕುಲಾಂತರಿ ತಳಿ ಬಳಕೆ ತ್ವರಿತ ಜಾರಿ

Published:
Updated:

ನವದೆಹಲಿ: ದೇಶದ ಕೃಷಿ ಕ್ಷೇತ್ರಕ್ಕೆ ತಾಂತ್ರಿಕ ಆವಿಷ್ಕಾರಗಳ ಲಾಭ ದೊರಕಬೇಕಾದರೆ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ಕುಲಾಂತರಿ ತಳಿಗಳನ್ನು ವ್ಯಾಪಕವಾಗಿ ಬಳಕೆ ಮಾಡಬೇಕು ಎಂದು ಸರ್ಕಾರದ ವೈಜ್ಞಾನಿಕ ಸಲಹಾ ಮಂಡಲಿಯು ಶಿಫಾರಸು ಮಾಡಿದೆ.ಕುಲಾಂತರಿ ತಳಿಗಳ ಮೇಲ್ವಿಚಾರಣೆಗೆ ಅಗತ್ಯವಾದ ಭಾರತೀಯ ಜೈವಿಕ ತಂತ್ರಜ್ಞಾನ ನಿಯಂತ್ರಣ ಪ್ರಾಧಿಕಾರ ರಚನೆಯ ಮಸೂದೆಯು ಆದಷ್ಟು ತ್ವರಿತವಾಗಿ ಅಂಗೀಕಾರವಾಗುವಂತೆ ನೋಡಿಕೊಳ್ಳಬೇಕು ಎಂದು ಖ್ಯಾತ ವಿಜ್ಞಾನಿ ಸಿ.ಎನ್.ಆರ್. ರಾವ್ ನೇತೃತ್ವದ ಪ್ರಧಾನಿ ಅವರ ವೈಜ್ಞಾನಿಕ ಸಲಹಾ ಮಂಡಲಿಯು ಶಿಫಾರಸು ಮಾಡಿದೆ.ಪ್ರಧಾನಿ ಅವರ ವೈಜ್ಞಾನಿಕ ಸಲಹಾ ಮಂಡಲಿಯು ಕುಲಾಂತರಿ ತಳಿಯ ಹಿಂದಿರುವ ಲಾಬಿಗಳಿಗೆ ಮಣಿದು ಈ ತಳಿಯನ್ನು ಅಧಿಕೃತವಾಗಿ ಪ್ರಚಾರಕ್ಕೆ ತರಲು ನೆರವಾಗುತ್ತಿದೆ. ಯಾವುದೇ ವೈಜ್ಞಾನಿಕ ಮಾನದಂಡವನ್ನು ಅನುಸರಿಸುತ್ತಿಲ್ಲ ಎಂಬುದು ಕುಲಾಂತರಿ ತಳಿ ವಿರೋಧಿಗಳ ಆರೋಪವಾಗಿದೆ.ಈ ಮಾಸಾಂತ್ಯದಲ್ಲಿ ಸಭೆ ಸೇರಲಿರುವ ವೈಜ್ಞಾನಿಕ ಸಲಹಾ ಮಂಡಲಿ ಕುಲಾಂತರಿ ತಳಿಯನ್ನು ವ್ಯಾಪಕವಾಗಿ ಬಳಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಅಂತಿಮ ಶಿಫಾರಸನ್ನು ಪ್ರಧಾನಿ ಅವರಿಗೆ ಸಲ್ಲಿಸಲಿದೆ.ಇತರ ರಾಷ್ಟ್ರಗಳಲ್ಲಿ ಕುಲಾಂತರಿ ಮೆಕ್ಕೆ ಜೋಳ, ಸೋಯಾ, ಆಲೂಗಡ್ಡೆ, ಕಬ್ಬು, ಹತ್ತಿ ಮತ್ತು ಹುರುಳಿಯನ್ನು 40 ಕೋಟಿ ಎಕರೆ ಪ್ರದೇಶಗಳಲ್ಲಿ ಬೆಳೆಯಲಾಗಿದೆ. ಆದ್ದರಿಂದ ನಮ್ಮ ದೇಶದಲ್ಲೂ ಈ ಕುಲಾಂತರಿ ತಳಿಗಳನ್ನು ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಬಹುದಾಗಿದೆ ಎಂದು ಮಂಡಲಿ ಅಭಿಪ್ರಾಯಪಟ್ಟಿದೆ.ಕುಲಾಂತರಿ ತಳಿಯ ಬಗ್ಗೆ ಇರುವ ಶಂಕೆ ಮತ್ತು ಆಕ್ಷೇಪಗಳಿಗೆ ವೈಜ್ಞಾನಿಕ ಕಾರಣಗಳ ಮೂಲಕ ವಿವರಣೆಗಳನ್ನು ನೀಡಿ ವಿರೋಧವನ್ನು ತಗ್ಗಿಸಬೇಕು ಎಂದೂ ಸಲಹೆ ಮಾಡಲಾಗಿದೆ.   ಆಹಾರ ಉತ್ಪಾದನೆ ಹೆಚ್ಚಳಕ್ಕೆ ಕುಲಾಂತರಿ ತಳಿ ಕೃಷಿಗಿಂತ ಸುಸ್ಥಿರ ಜೈವಿಕ ಕೃಷಿಯೇ ಉತ್ತಮ ಎಂಬ ಅಂತರರಾಷ್ಟ್ರೀಯ ಮಟ್ಟದ ವರದಿಯ್ನು ಸಲಹಾ ಮಂಡಲಿ ಗಮನಕ್ಕೆ ತೆಗೆದುಕೊಂಡಿಲ್ಲ ಎಂಬುದು ಗ್ರೀನ್‌ಪೀಸ್ ಸಂಘಟನೆಯ ದೂರಾಗಿದೆ.ಭಾರತೀಯ ಜೈವಿಕ ತಂತ್ರಜ್ಞಾನ ನಿಯಂತ್ರಣ ಪ್ರಾಧಿಕಾರ ರಚನೆಯ ಮಸೂದೆಯು ಅನೇಕ ಸಂಸದರ ವಿರೋಧದಿಂದಾಗಿ ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಜೈವಿಕ ತಂತ್ರಜ್ಞಾನ ಇಲಾಖೆಯು ಸಿದ್ಧಪಡಿಸಿರುವ ಮಸೂದೆಯ ಬಗ್ಗೆ ಸಾಕಷ್ಟು ವಿವಾದಗಳು ಎದ್ದಿರುವುದರಿಂದ ಕೃಷಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು ಕುಲಾಂತರಿ ತಳಿಯ ಬಗ್ಗೆ ಎದ್ದಿರುವ ವಿರೋಧಗಳ ಹಿನ್ನೆಲೆಯಲ್ಲಿ ಮಸೂದೆಯನ್ನು ಪರಾಮರ್ಶಿಸಿದ್ದು, ಮಸೂದೆಯ ಬಗ್ಗೆ ಒಲವು ಹೊಂದಿಲ್ಲ.ಆದರೆ ಕುಲಾಂತರಿ ತಳಿಯ ಲಾಬಿ ಈಗ ಸಾಕಷ್ಟು ಚುರುಕಾಗಿದ್ದು, ಮಸೂದೆಯನ್ನು ಆದಷ್ಟು ಬೇಗ ಅಂಗೀಕರಿಸುವಂತೆ ಪ್ರಧಾನಿ ಅವರ ಮೇಲೆ ಒತ್ತಡ ಹೇರುತ್ತಿದೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry