ಶುಕ್ರವಾರ, ಜೂನ್ 25, 2021
29 °C

ಕುಲಾಂತರಿ ಪರ ಲಾಬಿಗೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕುಲಾಂತರಿ ಕುರಿತ ಬಹುರಾಷ್ಟ್ರೀಯ ಕಂಪೆನಿಗಳ ಅಪಪ್ರಚಾರವನ್ನು ಬಯಲುಗೊಳಿಸಬೇಕು ಮತ್ತು `ಬ್ರೈ~ (ಬಿಆರ್‌ಎಐ) ಮಸೂದೆಯನ್ನು ಕೈ ಬಿಡಬೇಕು~ ಎಂದು ಕರ್ನಾಟಕ ಕುಲಾಂತರಿ ವಿರೋಧಿ ಆಂದೋಲನ-ಸೇಜ್ ಕರ್ನಾಟಕ ಒತ್ತಾಯಿಸಿತು.



ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪರಿಸರವಾದಿ ಡಾ.ಅ.ನ.ಯಲ್ಲಪ್ಪರೆಡ್ಡಿ, `ಬಿಟಿ ಬದನೆಯ ಮೇಲೆ ತಂದಿರುವ ತಾತ್ಕಾಲಿಕ ನಿಷೇಧವನ್ನು ತೆಗೆದು ಹಾಕಿ ವಿವಿಧ ರಾಜ್ಯಗಳಲ್ಲಿ ಕುಲಾಂತರಿ ಪ್ರಯೋಗಗಳಿಗೆ ಇರುವ ಅಡೆ ತಡೆಗಳನ್ನೆಲ್ಲಾ ತೆಗೆದು ಹಾಕಬೇಕೆಂದು ಬಹುರಾಷ್ಟ್ರೀಯ ಕಂಪೆನಿಗಳಿಂದ ಕೃಪಾಪೋಷಿತವಾಗಿರುವ ಕುಲಾಂತರಿ ಪರ ಶಕ್ತಿಗಳು ಲಾಬಿ ನಡೆಸುತ್ತಿವೆ~ ಎಂದು ಖಂಡಿಸಿದರು.



`ಎಲ್ಲ ನಿಯಂತ್ರಣ ಕಟ್ಟಳೆಗಳನ್ನು ಕಿತ್ತೆಸೆದು ಗುಟ್ಟಾಗಿ ಕೃಷಿಯಲ್ಲಿ ಕುಲಾಂತರಿ ತರಲು ಸಾಧ್ಯವಾಗಿಸುವಂತೆ ಬ್ರೈ ಮಸೂದೆಯನ್ನು ರಚಿಸಲಾಗುತ್ತಿದೆ. ಈ ಮಸೂದೆಯಲ್ಲಿನ ಪ್ರತಿ ಅಂಶವೂ ನೇರವಾಗಿ ಕಂಪೆನಿಗಳ ಪರವಾಗಿವೆ. ನಿಯಂತ್ರಣಗಳಿಂದ, ಕಟ್ಟಳೆಗಳಿಂದ ಜೈವಿಕ ತಂತ್ರಜ್ಞಾನದ ಬೆಳವಣಿಗೆ ಮತ್ತು ಕಾರ್ಯಾಚರಣೆಗೆ ಧಕ್ಕೆಯಾಗುತ್ತದೆ ಎಂದು ಕುಲಾಂತರಿ ಪರ ಲಾಬಿಗಳು ಹೇಳುತ್ತವೆ.



ಆದ್ದರಿಂದಲೇ ಬ್ರೈ ಮಸೂದೆಯಿಂದ ಈ ನಿಯಂತ್ರಣಗಳನ್ನು ನಿವಾರಿಸುವ ಮಾರ್ಗೋಪಾಯ ಸೂಚಿಸುತ್ತಾ ಕಂಪೆನಿಗಳ ಅನುಕೂಲಕ್ಕೆ ದಾರಿ ಸುಗಮಗೊಳಿಸಲಾಗುತ್ತಿದೆ~ ಎಂದು ವಿವರಿಸಿದರು.

`ಬ್ರೈ ಮಸೂದೆಯು ರಾಜ್ಯ ಸರ್ಕಾರಗಳಿಗೆ ಕೃಷಿಯಲ್ಲಿನ ಹಕ್ಕುಗಳನ್ನು ಕಸಿದುಕೊಳ್ಳುವ ನೇರ ಪ್ರಯತ್ನವಾಗಿದೆ. ಏಕ ಸದಸ್ಯ ಸಮಿತಿಯ ಮುಖಾಂತರ ಏಕಮುಖವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಟ್ಟಿದೆ~ ಎಂದರು.



`ಕೇಂದ್ರ ಸರ್ಕಾರವು ಎಲ್ಲವನ್ನೂ ಕಾರ್ಪೊರೇಟ್‌ಗೊಳಿಸುತ್ತಿದೆ. ವಿದೇಶಿ ಕಂಪೆನಿಗಳನ್ನು ಉಳಿಸಿಕೊಳ್ಳಲು ತನ್ನ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದೆ. ಎಲ್ಲವನ್ನೂ ವಿದೇಶಿಯರಿಗೆ ನೀಡಿದರೆ, ಕೊನೆಗೆ ನಾವೇ ಅದರ ಗ್ರಾಹಕರಾಗಿ ಹಣ ನೀಡಿ ಕೊಂಡುಕೊಳ್ಳಬೇಕಾಗುತ್ತದೆ~ ಎಂದು ಹೇಳಿದರು.



ಪ್ರಿಸ್ಟೀನ್ ಆಗ್ರಾನಿಕ್ಸ್‌ನ ನಿರ್ದೇಶಕ ಡಾ.ಕೆ.ಸಿ.ರಘು ಮಾತನಾಡಿ, `ಸಂಸ್ಥೆಯು ಕೃಷಿ ಮತ್ತು ಆಹಾರದಲ್ಲಿ ಕುಲಾಂತರಿಯನ್ನು ಬ್ರೈ (ಬಿಆರ್‌ಎಐ) ಮಸೂದೆಯನ್ನು ತೀವ್ರವಾಗಿ ವಿರೋಧಿಸಿ ಆಂದೋಲನದಲ್ಲಿ ತೊಡಗಿದೆ. ಅಂದು ಉಪ್ಪು ಇಂದು ಬೀಜ ಘೋಷ ವಾಕ್ಯದಡಿಯಲ್ಲಿ ರಾಜ್ಯವ್ಯಾಪಿ ಜಾಥಾ ನಡೆಸುತ್ತಿದೆ. ಮಾರ್ಚ್ 25 ಮತ್ತು 26 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ~ ಎಂದು ಹೇಳಿದರು.



`ರಾಜ್ಯದಲ್ಲಿ ಯಾವುದೇ ರೀತಿಯ ಕುಲಾಂತರಿ ಪ್ರಯೋಗಗಳಿಗೆ ಅವಕಾಶ ನೀಡಬಾರದು. ರೈತರಿಗೆ ಉತ್ತಮವಾದ ಬೀಜಗಳನ್ನು ಒದಗಿಸಬೇಕು~ ಎಂದು ಅವರು ಒತ್ತಾಯಿಸಿದರು.ಗೋಷ್ಠಿಯಲ್ಲಿ ಗ್ರೀನ್ ಪ್ರತಿಷ್ಠಾನದ ನಿರ್ದೇಶಕ ಕೆ.ಪಿ.ಸುರೇಶ್, ಸದಸ್ಯೆ ವಿ.ಗಾಯತ್ರಿ  ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.