ಮಂಗಳವಾರ, ಜೂನ್ 15, 2021
22 °C
ಸುದ್ದಿ ಹಿನ್ನೆಲೆ

ಕುಲಾಂತರಿ ಬೆಳೆಗಳ ಕ್ಷೇತ್ರ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಲಾಂತರಿ ಬೆಳೆಗಳಿಗೆ ಸಂಬಂಧಿಸಿದ ನಿಯಂತ್ರಣ ಸಂಸ್ಥೆಯು ಭತ್ತ, ಗೋಧಿ, ಮೆಕ್ಕೆಜೋಳ ಮತ್ತು ಹತ್ತಿ ಸೇರಿದಂತೆ 10 ವಿಧದ ಕುಲಾಂತರಿ ಆಹಾರ ಧಾನ್ಯಗಳ  ಕ್ಷೇತ್ರ ಪರೀಕ್ಷೆ ನಡೆಸಲು ಅವಕಾಶ ನೀಡಿದೆ. ಇದರಿಂದಾಗಿ ಮೊನ್ಸಾಂಟೊ ಇಂಡಿಯಾ ಲಿಮಿಟೆಡ್‌, ಈ ಕುಲಾಂತರಿ ಬೆಳೆಗಳ ಕ್ಷೇತ್ರ ಪರೀಕ್ಷೆಯನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಲು ಸಾಧ್ಯವಾಗಲಿದೆ. ಕೇಂದ್ರ ಪರಿಸರ ಸಚಿವೆಯಾಗಿದ್ದ  ಜಯಂತಿ ನಟರಾ­ಜನ್‌ ಅವರು  ಈ ಹಿಂದೆ ಇಂತಹ ಪರೀಕ್ಷೆಗೆ ಹಾಕಿದ್ದ ನಿರ್ಬಂಧವನ್ನು  ಹಾಲಿ ಪರಿಸರ ಸಚಿವ ವೀರಪ್ಪ ಮೊಯಿಲಿ ಅವರು ತೆಗೆದು ಹಾಕಿದ್ದ­ರಿಂದ 10 ಬೆಳೆಗಳ ಕ್ಷೇತ್ರ ಪರೀಕ್ಷೆ ಹಾದಿ ಈಗ ಸುಗಮವಾದಂತಾಗಿದೆ.ರೈತ ಸಂಘಟನೆಯ ಟೀಕೆ

ಕುಲಾಂತರಿ ಬೆಳೆಗಳಿಗೆ ಸಂಬಂಧಿಸಿದ ಸಲಹಾ ಸಮಿತಿಯ ನಿರ್ಧಾರವನ್ನು ಸಿಪಿಎಂಗೆ ಲಗತ್ತಾದ ರೈತ ಸಂಘಟನೆಯು ಟೀಕಿಸಿದೆ.

ಈ ಪ್ರಜಾಸತ್ತಾತ್ಮಕವಲ್ಲದ ಕ್ರಮ ತಡೆಗಟ್ಟಲು ಚುನಾವಣಾ ಆಯೋಗ ಮಧ್ಯ  ಪ್ರವೇಶಿಸಬೇಕು ಎಂದೂ ಸಂಘಟನೆಯು ಒತ್ತಾಯಿಸಿದೆ.

ಕುಲಾಂತರಿ ಆಹಾರ ಧಾನ್ಯ ತಳಿಗಳ ಬಗ್ಗೆ ಸಾಕಷ್ಟು ಆತಂಕ ವ್ಯಕ್ತವಾಗಿದ್ದರೂ ಅವಸರದ ತೀರ್ಮಾನಕ್ಕೆ ಬರಲಾಗಿದೆ. ಪರಿಸರ ಸಚಿವಾಲಯದ ನಿರ್ಧಾರವು ಪಾರದರ್ಶಕವಾಗಿಲ್ಲ ಎಂಬುದು ರೈತ ಸಂಘಟನೆಯ ಆಕ್ಷೇಪವಾಗಿದೆ.ಮೊಯಿಲಿ ಸಮರ್ಥನೆ

ಕುಲಾಂತರಿ ಬೆಳೆಗಳ ಕ್ಷೇತ್ರ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ನೀಡಿರುವ ಅನುಮತಿಯನ್ನು ಸುಪ್ರೀಂ­ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಕೋರ್ಟ್‌ ಇನ್ನೂ ಅಂತಿಮ ತೀರ್ಪು ಪ್ರಕಟಿಸದ ಹಿನ್ನೆಲೆ­ಯಲ್ಲಿ,  ಕುಲಾಂತರಿ ಬೆಳೆಗಳ ಮೌಲ್ಯ ನಿರ್ಧಾರ ಸಮಿತಿಯು ನೀಡಿದ್ದ ಅನುಮತಿಯನ್ನು ತಡೆಹಿಡಿಯಲಾಗಿತ್ತು.  ಸುಪ್ರೀಂಕೋರ್ಟ್‌ನಿಂದ ಯಾವುದೇ ನಿರ್ಬಂಧ ಇಲ್ಲದಿರುವುದರಿಂದ ಮತ್ತು ಕ್ಷೇತ್ರ ಪರೀಕ್ಷೆಯನ್ನು ಕೋರ್ಟ್‌ ನಿಷೇಧಿಸದ ಹಿನ್ನೆಲೆಯಲ್ಲಿ ಅನುಮತಿ ನೀಡಲಾಗಿದೆ ಎಂದು ಸಚಿವ ಮೊಯಿಲಿ ಸಮರ್ಥಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರಗಳು ಆಕ್ಷೇಪ ವ್ಯಕ್ತಪಡಿಸಿದರೆ ಮಾತ್ರ ಕ್ಷೇತ್ರ ಪರೀಕ್ಷೆ ನಡೆಯುವುದಿಲ್ಲ.ಪರ – ವಿರೋಧ

ಸಚಿವ ಮೊಯಿಲಿ ಅವರ ನಿರ್ಧಾ­ರವನ್ನು ಕುಲಾಂತರಿ ಬೆಳೆ ವಿರೋಧಿ­ಗಳು ಟೀಕಿಸಿದ್ದರೆ, ಕೃಷಿ ವಿಜ್ಞಾನಿಗಳು ಬೆಂಬಲಿಸಿದ್ದಾರೆ. ಕುಲಾಂತರಿ ತಂತ್ರಜ್ಞಾನದ ಲಾಭ ಪಡೆದುಕೊಳ್ಳುವ ನಿಟ್ಟಿನಲ್ಲಿ, ಬೆಳೆಗಳ ಕ್ಷೇತ್ರ ಪರೀಕ್ಷೆ ಮೇಲೆ ನಿರ್ಬಂಧ ವಿಧಿಸುವುದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂಬುದು ಬೆಂಬಲಿಗರ ನಿಲುವಾಗಿದೆ.ರಾಷ್ಟ್ರೀಯ ಜೈವಿಕ ತಂತ್ರಜ್ಞಾನ ನಿಯಂತ್ರಣ ಪ್ರಾಧಿಕಾರವು ಅಸ್ತಿತ್ವಕ್ಕೆ ಬರುವ ಮೊದಲು, ಕುಲಾಂತರಿ ಬೆಳೆಗಳ ಮೌಲ್ಯ ನಿರ್ಧಾರ ಸಮಿತಿಗೆ ಪೂರ್ಣಾವಧಿ ಅಧ್ಯಕ್ಷರ ನೇಮಕ­ವಾಗಬೇಕು ಎಂದು ಕೃಷಿ ವಿಜ್ಞಾನಿಗಳ ರಾಷ್ಟ್ರೀಯ ಅಕಾಡೆಮಿಯು ಸಲಹೆ ನೀಡಿದೆ. ಪ್ರಧಾನಿಗಳ ವೈಜ್ಞಾನಿಕ ಸಲಹಾ ಸಮಿತಿಯೂ ಇದೇ ಶಿಫಾರಸು ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.