ಸೋಮವಾರ, ಜನವರಿ 20, 2020
21 °C
ನಗರ ಸಂಚಾರ:

ಕುಲ್ಫಿ, ಜ್ಯೂಸ್‌ ಮಾರುವುದೇ ಇವರ ಕಾಯಕ

ಪ್ರಜಾವಾಣಿ ವಾರ್ತೆ/ ಪಿ.ಕೆ. ರವಿಕುಮಾರ್‌ Updated:

ಅಕ್ಷರ ಗಾತ್ರ : | |

ಕಾರವಾರ: ಉತ್ತರ ಪ್ರದೇಶದಿಂದ ಇಲ್ಲಿಗೆ ಬಂದಿರುವ ಅನೇಕ ಮಂದಿ ಕುಲ್ಫಿ, ಮೋಸಂಬಿ, ಫೈನಾಪಲ್‌ ಜ್ಯೂಸ್‌ ಮಾರಾಟ ಮಾಡುವ ಮೂಲಕ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ.ನಗರದಲ್ಲಿ ಹಲವು ಪ್ರವಾಸಿ ತಾಣಗಳಿವೆ. ರಾಷ್ಟ್ರೀಯ ಹೆದ್ದಾರಿ–17ಕ್ಕೆ ಹೊಂದಿಕೊಂಡಂತೆ ಇರುವ ರವೀಂದ್ರನಾಥ ಟ್ಯಾಗೋರ್‌ ಕಡಲತೀರ, ಚಾಪೆಲ್‌ ಯುದ್ಧ ನೌಕೆ ಸಂಗ್ರಹಾಲಯ, ಸಾಗರ ಮತ್ಸ್ಯಾಲಯ ಬಳಿಯಲ್ಲಿ ಸೈಕಲ್‌ ಏರಿ ಬಂದು ಇವರು ಕುಲ್ಫಿ ಮಾರುತ್ತಾರೆ.ಇನ್ನು ಕೆಲವರು ಪ್ರವಾಸಿ ತಾಣಗಳ ಮುಂದೆ ತಳ್ಳುವ ಗಾಡಿಯಲ್ಲಿ ಮೋಸಂಬಿ ಜ್ಯೂಸ್‌ ಮಾರಾಟದಲ್ಲಿ ನಿರತರಾಗಿದ್ದಾರೆ. ಹೀಗೆ ಸುಮಾರು 12–15 ಮಂದಿ ವ್ಯಾಪಾರ ಮಾಡಿಕೊಂಡಿದ್ದು, ನಗರದಲ್ಲಿ ಕೊಠಡಿಗಳನ್ನು ಬಾಡಿಗೆ ಪಡೆದು ಜೀವನ ಸಾಗಿಸುತ್ತಿದ್ದಾರೆ. ವಾರದ ರಜೆದಿನಗಳು ಬಂದರೆ ಅಥವಾ ಕಡಲತೀರದಲ್ಲಿರುವ ಮಯೂರ ವೇದಿಕೆಯಲ್ಲಿ ಕಾರ್ಯಕ್ರಮಗಳು ನಡೆದರೆ ಇವರಿಗೆ ಒಂದು ರೀತಿ ಹಬ್ಬ. ಕಾರಣ ಆ ದಿನಗಳಲ್ಲಿ ಕಡಲತೀರದಲ್ಲಿ ಹೆಚ್ಚಿನ ಜನರು ಜಮಾಯಿಸುವುದರಿಂದ ಇವರಿಗೆ ಒಳ್ಳೆಯ ವ್ಯಾಪಾರವಾಗಿ ಕೈಗೆ ಒಂದಷ್ಟು ಹಣ ಹೆಚ್ಚಿಗೆ ಸಿಗುತ್ತದೆ.ಸೈಕಲ್‌ ಮುಂಭಾಗಕ್ಕೆ ಘಂಟೆಯೊಂದನ್ನು ತಗಲು ಹಾಕಿಕೊಂಡಿದ್ದು, ಸೈಕಲ್‌ ಹಿಂಬದಿ ಡಬ್ಬಿಯೊಂದರಲ್ಲಿ ಕುಲ್ಫಿಯನ್ನು ತುಂಬಿಟ್ಟು ಕೊಂಡಿರುತ್ತಾರೆ. ಕುಲ್ಫಿ ಒಂದಕ್ಕೆ ಐದು ರೂಪಾಯಿಯಂತೆ ಮಾರಾಟ ಮಾಡುತ್ತಾರೆ.‘ಉತ್ತರ ಪ್ರದೇಶದ ಅರ್ದೋಯಿ ಜಿಲ್ಲೆಯ ರಾಘವಪುರ ಗ್ರಾಮದಿಂದ ನಾನು ಇಲ್ಲಿಗೆ ಬಂದಿದ್ದೇನೆ. ಇಲ್ಲಿ ಕುಲ್ಫಿ ಮಾರುವ ಮೂಲಕ ಬದುಕು ಸಾಗಿಸುತ್ತಿದ್ದೇನೆ. ಹಾಲು, ಕೋವಾ ಹಾಗೂ ಕಸ್ಟರ್‌ ಪೌಡರನ್ನು ಸೇರಿಸಿ ಕುಲ್ಫಿಯನ್ನು ನಾವೇ ತಯಾರಿಸುತ್ತೇವೆ. ಒಂದು ದಿನಕ್ಕೆ 200–300 ಕುಲ್ಫಿ ಮಾರಾಟ ಮಾಡುತ್ತೇನೆ’ ಎನ್ನುತ್ತಾರೆ ಯುವಕ ರಮೇಶ್‌.‘ತಳ್ಳುಗಾಡಿಯಲ್ಲಿನ ಈ ಜ್ಯೂಸ್‌ ಅಂಗಡಿ ನನ್ನ ಚಿಕ್ಕಪ್ಪನದು. ಇದನ್ನು ನಾನೇ ನೋಡಿಕೊಳ್ಳುತ್ತೇನೆ. ನಾನು ಇಲ್ಲಿಗೆ ಬಂದು ಮೂರು ತಿಂಗಳಾಯಿತು. ದಿನಕ್ಕೆ ₨ 300– 400 ರೂಪಾಯಿ ಆದಾಯ ಸಿಗುತ್ತದೆ’ ಎನ್ನುತ್ತಾರೆ ಉತ್ತರ ಪ್ರದೇಶದ ಲಖನೌದಿಂದ ಬಂದಿರುವ ಯುವಕ ಮನೀಷ್‌.

ಪ್ರತಿಕ್ರಿಯಿಸಿ (+)