ಶುಕ್ರವಾರ, ನವೆಂಬರ್ 22, 2019
23 °C

ಕುಳಾಯಿ: ಮಕ್ಕಳ ಕಳ್ಳಸಾಗಣೆ ಜಾಲ- ಸಿಐಡಿ ದಾಳಿ

Published:
Updated:

ಸುರತ್ಕಲ್: ಮಕ್ಕಳನ್ನು ಕಳ್ಳಸಾಗಣೆ ಮಾಡಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಜಾಲವನ್ನು ಸಿಐಡಿ ಪೊಲೀಸರು ಮಂಗಳವಾರ ಭೇದಿಸಿದ್ದಾರೆ.ಕುಳಾಯಿಯ ಮನೆಯೊಂದಕ್ಕೆ ದಾಳಿ ನಡೆಸಿದ ಸಿಐಡಿ ಪೊಲೀಸರು ಮಹಿಳೆಯೊಬ್ಬಳನ್ನು ಬಂಧಿಸಿ, ಐವರು ಮಕ್ಕಳನ್ನು ರಕ್ಷಿಸಿದ್ದಾರೆ.ರಕ್ಷಿಸಲಾದ ಮಕ್ಕಳೆಲ್ಲ 14 ವರುಷದೊಳಗಿನವರು ಎನ್ನಲಾಗಿದೆ. ಹೆಚ್ಚಿನ ಮಕ್ಕಳು ತಂದೆ ತಾಯಿಯನ್ನು ಕಳೆದುಕೊಂಡಿರುವ ಅನಾಥರು ಎಂದು ತಿಳಿದುಬಂದಿದೆ. ಮಹಿಳೆಯು ಈ ಮಕ್ಕಳನ್ನು ಮನೆಯಲ್ಲಿ ಇಟ್ಟುಕೊಳ್ಳದೇ ಬೇರೆ ಬೇರೆ ಊರಿಗೆ ಕಳುಹಿಸಿ ದಂಧೆ ನಡೆಸುತ್ತಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಬೆಂಗಳೂರಿನಲ್ಲಿ ಅನುಮಾನಸ್ಪದವಾಗಿ ತಿರುಗುತ್ತಿದ್ದ ಬಾಲಕಿಯೊಬ್ಬಳನ್ನು ಮೈಸೂರಿನ ಒಡನಾಡಿ ಸ್ವಯಂ ಸೇವಾ ಸಂಸ್ಥೆ ಪತ್ತೆ ಹಚ್ಚಿತ್ತು. ಆಪ್ತ ಸಮಾಲೋಚನೆ ವೇಳೆ ಕೆಲವು ಆಘಾತಕಾರಿ ವಿವರಗಳನ್ನು ಬಾಲಕಿ ಹೊರಗೆಡಹಿದ್ದಳು. ವೇಶ್ಯಾವಾಟಿಕೆ ನಡೆಸುತ್ತಿದ್ದುದನ್ನು ಒಪ್ಪಿಕೊಂಡ್ದ್ದಿದ ಬಾಲಕಿ, ಸುರತ್ಕಲ್ ಬಳಿಯ ಕುಳಾಯಿ ನಿವಾಸಿ ತಾರಾ ಎಂಬಾಕೆ ತನ್ನನ್ನು ಈ ದಂಧೆಗೆ ದೂಡಿರುವುದಾಗಿ ತಿಳಿಸಿದ್ದಳು. ಅಲ್ಲದೆ ಇನ್ನೂ ನಾಲ್ವರು ಮಕ್ಕಳು ಈ ಕೆಲಸದಲ್ಲಿ ತೊಡಗಿರುವ ಬಗ್ಗೆಯೂ ಬಾಲಕಿ ಮಾಹಿತಿ ನೀಡಿದ್ದಳು. ಪ್ರಕರಣದ ಗಂಭೀರತೆ ಅರಿತ ಒಡನಾಡಿ ಸಂಸ್ಥೆ ಸಿಐಡಿ ಪೊಲೀಸರನ್ನೂ ಸಂಪರ್ಕಿಸಿತು.ಬಾಲಕಿ ನೀಡಿದ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಬೆಂಗಳೂರು ಸಿಐಡಿ ಪೊಲೀಸರು  ಕುಳಾಯಿಯ ಮನೆಗೆ ಮಂಗಳವಾರ ದಿಢೀರ್ ದಾಳಿ ನಡೆಸಿ ಮಹಿಳೆಯನ್ನು ವಶಕ್ಕೆ ಪಡೆದರು.  ಸಿಐಡಿ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದ ಬಳಿಕವಷ್ಟೇ ಈ ಬಗ್ಗೆ ಸುರತ್ಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದರು.ವಿಚಾರಣೆ ನಡೆಸಿದಾಗ ಮಹಿಳೆಯು ಜಿಲ್ಲೆಯ ಬೇರೆ ಬೇರೆ ಕಡೆಯೂ ಮಕ್ಕಳ ಮೂಲಕ ಇಂತಹ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲಿಂದಲೂ ಸಿಐಡಿ ಪೊಲೀಸರು ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಪೊಲೀಸ್ ವಶದಲ್ಲಿರುವ ತಾರಾ ಮಕ್ಕಳ ಮಾರಾಟವನ್ನೂ ನಡೆಸುತ್ತಿದ್ದಳು    ಎನ್ನಲಾಗಿದೆ.ಮೂಲತಃ ಮಳವಳ್ಳಿ ನಿವಾಸಿಯಾಗಿರುವ ತಾರಾ ಕೆಲ ವರುಷದ ಹಿಂದೆ ಕುಳಾಯಿಗೆ ಬಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಈಕೆಯ ಪತಿ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ದುಡಿಯುತ್ತಿದ್ದ. ತಾರಾಳ ಅಕ್ರಮ ಬಯಲಿಗೆಳೆದ ಬಾಲಕಿ ಕೂಡಾ ತಾರಾಳ ಸಂಬಂಧಿಯ ಮಗಳು. ತಂದೆ-ತಾಯಿಯರನ್ನು ಕಳೆದುಕೊಂಡ ಬಾಲಕಿಯನ್ನು ತಾರಾ ವೇಶ್ಯಾವಾಟಿಕೆಗೆ ದೂಡಿದ್ದಳು. ಮಂಗಳವಾರ ತಡರಾತ್ರಿವರೆಗೂ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸವಾಲೊಡ್ಡಿದ ತಾರಾ

ಪೊಲೀಸರು ತನ್ನನ್ನು ಬಂಧಿಸುತ್ತಿರುವಂತೆ ಪೊಲೀಸರಿಗೆ ತಿರುಗೇಟು ನೀಡಿದ ತಾರಾ `ಮಂಗಳೂರು ಮತ್ತು ಉಡುಪಿಯಲ್ಲಿ ಅವ್ಯಾಹತವಾಗಿ ಮಕ್ಕಳ ಕಳ್ಳಸಾಗಣೆಯಾಗುತ್ತಿದೆ. ಸಾಧ್ಯವಾದರೆ ಮೊದಲು ಇದನ್ನು ಭೇದಿಸಿ, ನೂರಾರು ಮಕ್ಕಳು ವೇಶ್ಯಾವಾಟಿಕೆ ಜಾಲಕ್ಕೆ ನಿತ್ಯ ಬಲಿಯಾಗುತ್ತಿದ್ದಾರೆ ಇದನ್ನು ಪತ್ತೆ ಹಚ್ಚಿ.ಅವರ ಮುಂದೆ ನಾನು ಮಾಡುತ್ತಿರುವುದು ಏನೂ ಅಲ್ಲ ಎಂದು ಸವಾಲೊಡ್ಡಿದ್ದಾಳೆ' ಎಂದು ತಿಳಿದುಬಂದಿದೆ.

ಪೊಲೀಸರ ಸಾಥ್?

ತಾರಾಳಿಗೆ ಸುರತ್ಕಲ್ ಠಾಣೆಯ ಇಬ್ಬರು ಪೊಲೀಸರ ಬೆಂಬಲ ಇದೆ ಎಂದು ಮಕ್ಕಳು ಆರೋಪಿಸಿದ್ದಾರೆ.  ಈ ಸಂದರ್ಭದಲ್ಲಿ ಸ್ಥಳಕ್ಕೆ  ಬಂದಿದ್ದ ಸುರತ್ಕಲ್‌ನ ಇಬ್ಬರು ಪೊಲೀಸರನ್ನು ಗುರುತಿಸಿದ ಮಕ್ಕಳು ಇವರು ನಮ್ಮ ಮನೆಗೆ ಆಗಾಗ ಬರುತ್ತಿದ್ದರು ಎಂದು ತಿಳಿಸಿದ್ದಾರೆ. ಹೀಗಾಗಿ ಇಲ್ಲಿನ ಪೊಲೀಸರ ಬೆಂಬಲ ತಾರಾಳಿಗೆ ಇತ್ತೆ ಎನ್ನುವುದು ಈಗ ಪ್ರಶ್ನೆಯಾಗಿದೆ. `ಮಕ್ಕಳು ಈ ಹಿಂದೆ ದಾಳಿದಿದ್ದನ್ನು ತಿಳಿಸಿದ್ದಾರೆ ಹೊರೆತು ಪೊಲೀಸರ ವಿರುದ್ಧ ಆರೋಪ ಮಾಡಿಲ್ಲ' ಎಂದು ಸ್ಥಳೀಯ ಎಸಿಪಿ ಅಲ್ಲಗಳೆದಿದ್ದಾರೆ.

ಪ್ರತಿಕ್ರಿಯಿಸಿ (+)