ಕುಳ್ಳ ವ್ಯಕ್ತಿಯನ್ನೂ ಬಿಡದ ಅಧಿಕಾರಿಗಳು!

7
ಗಂಗಾ ಕಲ್ಯಾಣ ಯೋಜನೆ: ಸಿಗದ ಸೌಲಭ್ಯ

ಕುಳ್ಳ ವ್ಯಕ್ತಿಯನ್ನೂ ಬಿಡದ ಅಧಿಕಾರಿಗಳು!

Published:
Updated:

ಯಾದಗಿರಿ: ಸರ್ಕಾರವು ಸಾರ್ವಜನಿಕರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲರ ಸೇರಿದಂತೆ ವಿವಿಧ ವರ್ಗಗಳಿಗೆ ಸಂಬಂಧಿಸಿದಂತೆ ಅನೇಕ ಯೋಜನೆಗಳು ಜಾರಿಗೆ ಬರುತ್ತಿವೆ. ಆದರೆ ಅಂತಹ ಯೋಜನೆಗಳು ಎಷ್ಟು ಫಲಾನುಭವಿಗಳಿಗೆ ತಲುಪುತ್ತಿವೆ ಎಂಬುದು ಮಾತ್ರ ಯಾರ ಗಮನಕ್ಕೂ ಬರುತ್ತಿಲ್ಲ. ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಲೂ ಇಲ್ಲ.ಅಂಗವಿಕಲರು, ವೃದ್ಧರೂ ಹಲವಾರು ಬಾರಿ ಕಚೇರಿಗಳಿಗೆ ಅಲೆದರೂ ಅಧಿಕಾರಿಗಳು ಮಾತ್ರ ಗಮನ ನೀಡುತ್ತಿಲ್ಲ. ಇದಕ್ಕೊಂದು ಉದಾಹರಣೆ ಎಂಬಂತಿದೆ ಕುಳ್ಳ ಶರಣಪ್ಪ ಅವರ ಗೋಳಿನ ಕತೆ.ಕುಳ್ಳನಾಗಿರುವ ಶರಣಪ್ಪ ಕಳೆದ ಮೂರ‌್ನಾಲ್ಕು ವರ್ಷಗಳಿಂದ ಗಂಗಾ ಕಲ್ಯಾಣ ಯೋಜನೆಗಾಗಿ ಅರ್ಜಿ ಹಿಡಿದು ಅಲೆಯುತ್ತಿದ್ದಾರೆ. ಆದರೆ ಯಾವ ಅಧಿಕಾರಿಗಳೂ ಅವರಿಗೆ ಸ್ಪಂದಿಸುತ್ತಿಲ್ಲ. ಕೇವಲ ಮೂರುವರೆ ಅಡಿ ಎತ್ತರವಿರುವ ಸಮೀಪದ ವಡಗೇರಾ ಗ್ರಾಮದ ಶರಣಪ್ಪ, ಕೃಷಿ ಚಟುವಟಿಕೆಯನ್ನೇ ಅವಲಂಬಿಸಿದ್ದಾರೆ.ವಡಗೇರಾದ ರಂಗಪ್ಪ ದಾಸರ ಅವರ ಹಿರಿಯ ಮಗನೇ ಶರಣಪ್ಪ. ಜನಿಸಿದಾಗ ಎಲ್ಲ ಮಕ್ಕಳಂತೆ ಇದ್ದ ಶರಣಪ್ಪನ ದೇಹದ ಬೆಳವಣಿಗೆ ಮಾತ್ರ ಆಗಲಿಲ್ಲ. ದೈಹಿಕವಾಗಿ ಕುಬ್ಜನಾಗಿದ್ದರೂ, ಏಳನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ, ತಂದೆಯ ಜೊತೆ ಕೃಷಿ ಕಾರ್ಯದಲ್ಲಿ ತೊಡಗಿದರು.ಇರುವ ನಾಲ್ಕು ಎಕರೆ ಒಣ ಭೂಮಿಯಲ್ಲಿ ಸರ್ಕಾರದ ಗಂಗಾ ಕಲ್ಯಾಣ ಯೋಜನೆಯಡಿ ಒಂದು ಕೊಳವೆಬಾವಿ ಹಾಕಿಕೊಂಡು  ಶೇಂಗಾ, ತೊಗರಿ, ಹತ್ತಿ ಇತ್ಯಾದಿ ಬೆಳೆಗಳನ್ನು ಬೆಳೆಯಬಹುದು. ಆರ್ಥಿಕವಾಗಿ ಅಭಿವೃದ್ದಿ ಹೊಂದಬಹುದು ಎಂಬ ಕನಸನ್ನು ಶರಣಪ್ಪ ಕಂಡಿದ್ದರು.ಅದಕ್ಕಾಗಿ ಗಂಗಾ ಕಲ್ಯಾಣ ಯೋಜನೆಯಡಿ ಅರ್ಜಿಯನ್ನೂ ಸಲ್ಲಿಸಿದರು.

“ಕಳೆದ ಮೂರ‌್ನಾಲ್ಕು ವರ್ಷಗಳಿಂದ ಅರ್ಜಿ ಹಾಕುತ್ತಿದ್ದೇನೆ. ಸ್ಥಳೀಯ ಶಾಸಕರನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಂಡಿದ್ದೇನೆ. ಶಾಸಕರಿಂದ ಭರವಸೆಯನ್ನು ಪಡೆದೆ. ಆದರೆ ಇಲ್ಲಿಯವರೆಗೂ ಆ ಭರವಸೆ ಈಡೇರಿಲ್ಲ. ನಿತ್ಯ ಕಚೇರಿಗೆ ಅಲೆಯುವುದು ತಪ್ಪಿಲ್ಲ” ಎಂದು ಶರಣಪ್ಪ ನೊಂದು ಹೇಳುತ್ತಾರೆ.“ನನಗೆ ಮದುವೆಯಾಗಿದೆ. ನನ್ನ ತಂದೆಗೆ ವಯಸ್ಸಾಗಿದೆ. ಅವರಿಗೆ ಹೊಲದಲ್ಲಿ ದುಡಿಯಲು ಆಗುತ್ತಿಲ್ಲ. ಗಂಗಾ ಕಲ್ಯಾಣ ಯೋಜನೆ ಅಡಿ ಹೊಲಕ್ಕೆ ಕೊಳವೆ ಬಾವಿ ಹಾಕಿಕೊಟ್ಟರೆ ಅನುಕೂಲವಾಗುತ್ತದೆ. ಆದರೆ ಯಾರೂ ನನ್ನ ಸಮಸ್ಯೆಗೆ ಸ್ಪಂದಿಸುತ್ತಿಲ್ಲ” ಎಂದು ಹೇಳುತ್ತಾರೆ.ಗಂಗಾ ಕಲ್ಯಾಣ ಯೋಜನೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲರಿಗೂ ಮೀಸಲಾತಿ ಇರುತ್ತದೆ. ಆದರೆ ಶರಣಪ್ಪ ದೈಹಿಕವಾಗಿ ಅಂಗವಿಕಲರಾಗಿದ್ದು, ಅರ್ಜಿ ಹಿಡಿದುಕೊಂಡು ಅಲೆಯುವಂತಾಗಿದೆ. ಅಧಿಕಾರಿಗಳಾಗಲಿ, ಚುನಾಯಿತ ಪ್ರತಿನಿಧಿಗಳಾಗಲಿ ಸ್ದಂದಿಸುತ್ತಿಲ್ಲ. ಅನುಕಂಪ ತೋರಿಸಬೇಡಿ, ಅವಕಾಶ ಮಾಡಿಕೊಡಿ ಎಂದರೂ ಯಾರೂ ಕೇಳದೇ ಇರುವುದು ಅತ್ಯಂತ ನೋವಿನ ಸಂಗತಿ ಎನ್ನುತ್ತಾರೆ ಕರವೇ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಇಟಗಿ.ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕಾದರೆ ಸರ್ಕಾರದ ಅಧಿಕಾರಿಗಳು ಪ್ರಾಂಜಲ ಮನಸ್ಸಿನಿಂದ ಕೆಲಸವನ್ನು ಮಾಡಬೇಕು. ಅವರಿಗೆ ಚುನಾಯಿತ ಪ್ರತಿನಿಧಿಗಳು ಸಹಕರಿಸಬೇಕು. ಅದರಲ್ಲಿಯೂ ಅಂಗವಿಕಲರ ಬಗ್ಗೆ ಸ್ವಲ್ಪವಾದರೂ ಮಾನವೀಯತೆಯನ್ನು ಅಧಿಕಾರಿಗಳು ತೋರಿಸಬೇಕು ಎಂದು ಒತ್ತಾಯಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry