ಕುವೆಂಪುಗೆ ದೊರಕದ ನೊಬೆಲ್ ಕನ್ನಡ ಸಾಹಿತ್ಯಕ್ಕೇ ಅಪಮಾನ - ಹಂಪನಾ

7

ಕುವೆಂಪುಗೆ ದೊರಕದ ನೊಬೆಲ್ ಕನ್ನಡ ಸಾಹಿತ್ಯಕ್ಕೇ ಅಪಮಾನ - ಹಂಪನಾ

Published:
Updated:

ಬೆಂಗಳೂರು: `ಕನ್ನಡದ ಸಾಂಸ್ಕೃತಿಕ ನಾಯಕರಾಗಿದ್ದ ಕುವೆಂಪು ಅವರು ನೊಬೆಲ್ ಪ್ರಶಸ್ತಿಗೆ ಅರ್ಹವಾದ ಸಾಹಿತಿಯಾಗಿದ್ದರೂ ಅವರಿಗೆ ನೊಬೆಲ್ ಸಿಗದೇ ಹೋಗಿದ್ದು ಕನ್ನಡ ಸಾಹಿತ್ಯಕ್ಕೇ ಮಾಡಿದ ಅಪಮಾನ~ ಎಂದು ಹಿರಿಯ ವಿದ್ವಾಂಸ ಡಾ. ಹಂಪ ನಾಗರಾಜಯ್ಯ ಹೇಳಿದರು.ನಗರದಲ್ಲಿ ಇತ್ತೀಚೆಗೆ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಮತ್ತು ಕುವೆಂಪು ಸಿರಿಗನ್ನಡ ಪ್ರಶಸ್ತಿಗಳ ದತ್ತ ನಿಧಿಗಳ ಸಮರ್ಪಣೆ ಮಾಡಿ ಮಾತನಾಡಿದ ಅವರು, `ಕನ್ನಡಕ್ಕೆ ಮೊದಲ ಜ್ಞಾನಪೀಠ ತಂದು ಕೊಟ್ಟ ಕವಿ. ಕರ್ನಾಟಕದಲ್ಲಿ ಮೊದಲ ವಿಶ್ವವಿದ್ಯಾಲಯ ಆರಂಭಿಸಿದವರು ಮತ್ತು ಮೈಸೂರನ್ನು ಜಗತ್ತಿಗೆ ಪರಿಚಯಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರು. ಅವರ ಹೆಸರಿನಲ್ಲಿ ದತ್ತಿ ನಿಧಿಗಳನ್ನು ಸ್ಥಾಪಿಸಿರುವುದು ಅವರಿಗೆ ನೀಡಿದ ಗೌರವ~ ಎಂದು ನುಡಿದರು.ದತ್ತಿ ನಿಧಿಗಳನ್ನು ಸ್ವೀಕರಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಆರ್.ಕೆ.ನಲ್ಲೂರು ಪ್ರಸಾದ್, `ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ನಾನು ಮಾಡಿದ ಕೆಲಸಗಳು ತೃಪ್ತಿ ತಂದಿವೆ. ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ ಸಾಹಿತ್ಯ ಪರಿಷತ್ತಿಗೆ ಆರ್ಥಿಕ ಚೈತನ್ಯ ನೀಡಿದ್ದೇನೆ. ಇದು ನನ್ನ ಜೀವನದ ಸ್ಮರಣೀಯ ಕಾರ್ಯ~ ಎಂದು ಹೇಳಿದರು.ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ತು ಇದೇ ತಿಂಗಳ 20 ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಕುವೆಂಪು ಪ್ರತಿಮೆಯನ್ನು ಅನಾವರಣ ಮಾಡಲಿದೆ ಎಂದರು.ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ, `ಬಿಜೆಪಿ ಸರ್ಕಾರ ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನವನ್ನು ನೀಡಿದೆ. ಕನ್ನಡ ನಾಡಿಗೆ ಸಾಹಿತ್ಯ ಪರಿಷತ್ತು ಮಾಡಿರುವ ಕಾರ್ಯ ಶ್ಲಾಘನೀಯವಾದುದು~ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಕೆ.ರಾಮೇಗೌಡ, ಗೌರವ ಸಂಚಾಲಕರಾದ ಎಂ.ತಿಮ್ಮಯ್ಯ, ಮಾಯಣ್ಣ, ಎಂ.ಲಕ್ಷೀನರಸಿಂಹ ಹಾಗೂ ಕೋಶಾಧ್ಯಕ್ಷ ಎ.ಎಸ್.ನಾಗರಾಜ ಸ್ವಾಮಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry