ಕುವೆಂಪುರವರ ಪೂರ್ಣದೃಷ್ಟಿಯ ಪರಿಕಲ್ಪನೆ

7

ಕುವೆಂಪುರವರ ಪೂರ್ಣದೃಷ್ಟಿಯ ಪರಿಕಲ್ಪನೆ

Published:
Updated:

ಮನುಷ್ಯನ ಸಾಧನೆಯ ದಾರಿಗಳು ಅನೇಕ. ಸಿದ್ಧಿ ಬಹುಮುಖ. ಹಲವರಿಗೆ ಲೌಕಿಕ  ಬದುಕಿನ ಸಾಧನೆ ಸಿದ್ಧಿಗಳು ಮುಖ್ಯವೆನಿಸುತ್ತವೆ. ಅಂಥವರಿಗೆ ಸಂಪತ್ತಿನ ಗಳಿಕೆಯಿಂದ ಸೌಲಭ್ಯಗಳಿಂದ ಪಡೆಯಬಹುದಾದ ಸುಖ ನೆಮ್ಮದಿ  ಜೀವಿತದ ಸಾಧನೆಯಾಗಿರುತ್ತದೆ. ಇನ್ನು ಕೆಲವರು ಅಂತಸ್ತು, ಖ್ಯಾತಿ, ಅಧಿಕಾರಗಳಿಂದ ಸಮಾಜದಲ್ಲಿ ಪ್ರತಿಷ್ಠಿತರಾಗಿರುತ್ತಾರೆ.

ಅದೇ ಅವರ ಸಾಧನೆಯಾಗಿಬಿಡುತ್ತದೆ. ಇನ್ನೂ  ಕೆಲವರು  ಸಮಾಜಕ್ಕೆ  ಉಪಯುಕ್ತವಾಗುವ ಆವಿಷ್ಕಾರಗಳ  ಮೂಲಕ, ಸೇವೆ ಸುಧಾರಣೆಯ ಮೂಲಕ  ಸಾಧಕರಾಗಿರುತ್ತಾರೆ. ಇವೆಲ್ಲವೂ  ಲೌಕಿಕವಾಗಿ ಅವರವರ  ಪ್ರತಿಭೆ  ಸಾಮರ್ಥ್ಯದ  ಫಲಗಳೇ ಆಗಿ ಸಾಧನೆ ಸಿದ್ಧಿ ಎನ್ನಿಸಿಕೊಳ್ಳಬಹುದು.ಆದರೆ  ಮನುಷ್ಯ  ಸಾಂಸ್ಕೃತಿಕವಾಗಿ  ತನ್ನ  ಖಾಸಗಿ  ಬದುಕಿನಲ್ಲಿ ಪ್ರಾಪಂಚಿಕವಾದುದನ್ನು  ಮೀರಿ ಮನುಷ್ಯತ್ವದ ಅತೀತವನ್ನು ಸಾಧಿಸಲು ಯಾವಾಗಲೂ  ಪರಿಶ್ರಮಿಸುತ್ತಾ ಬಂದಿದ್ದಾನೆ. ಅಂಥ ಸಾಧಕರು, ಜೀವನದ  ಉನ್ಮಾರ್ಗದಲ್ಲಿ  ಸಾಧಿಸಿದ  ಮೌಲ್ಯಗಳು, ಮುಟ್ಟಿದ ಗುರಿ ಸಾಮಾಜಿಕರಿಗೆ ಮಾರ್ಗದರ್ಶನಗಳಾಗಿರುತ್ತವೆ.

ಉನ್ನತ ಮೌಲ್ಯಗಳನ್ನು ಜನ ಮನದಲ್ಲಿ  ಬಿತ್ತಿ  ಬೆಳೆದು  ಸಂಸ್ಕೃತಿಯನ್ನು  ರೂಪಿಸುತ್ತಿರುತ್ತಾರೆ. ಅಂಥ  ಉನ್ನತಿ ಅಲೌಕಿಕವಾದ ಅಧ್ಯಾತ್ಮದ  ಸಾಧನೆ ಸಿದ್ಧಿಗಳಾಗಿ ಸಾಂಸ್ಕೃತಿಕವಾಗಿ ಮಹತ್ವದ್ದಾಗಿರುತ್ತವೆ.ಭಾರತೀಯ ಸಂಸ್ಕೃತಿಯನ್ನು ಕಟ್ಟಿ ಬೆಳಸಿದ ಅನೇಕ ಋಷಿ, ಮುನಿಗಳು, ಪುರಾಣ  ಪುರುಷರು, ಸಾಧು ಸಂತರು, ದಾರ್ಶನಿಕರು, ಆಗಿಹೋಗಿದ್ದಾರೆ. ಅಂಥವರ  ಅಧ್ಯಾತ್ಮದ  ಸಾಧನೆ ಸಿದ್ಧಿಗಳು ಮನುಕುಲದ ಜೀವನ ಸಾಧನೆಗೆ ಯಾವಾಗಲು ಮಾರ್ಗದರ್ಶನಗಳಾಗಿವೆ.  

ಅಂಥವರ ಸಂಕಥನಗಳನ್ನು ಕಾವ್ಯಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಅವು ಕಾಲ ಕಾಲಕ್ಕೆ  ಪ್ರತಿಭಾವಂತ  ಕವಿ ದಾರ್ಶನಿಕರ ಮೂಲಕ ನಮಗೆ ದೊರಕುತ್ತಲೇ ಇರುತ್ತದೆ.* * * *ಕುವೆಂಪು ನಮ್ಮ ಕಾಲದ ಬಹು ಮುಖ್ಯ ದಾರ್ಶನಿಕ ಕವಿ. ಅವರ ` ಶ್ರಿ ರಾಮಾಯಣ ದರ್ಶನಂ~ ಒಂದು ದಾರ್ಶನಿಕ ಮಹಾಕಾವ್ಯ. ಪುರಾಣ  ಪುರುಷರನ್ನು `ಪೂರ್ಣದೃಷ್ಟಿ~ಯ ಪರಿಕಲ್ಪನೆಯಲ್ಲಿ ಪ್ರತಿಮಿಸಿದ್ದಾರೆ. ಉಪನಿಷತ್ತಿನ `ಪೂರ್ಣಮದಂ ....~ ಮಂತ್ರದ ಭಾವ ಕಾವ್ಯದ ರಸ ಸಿದ್ಧಿಯಾಗಿದೆ. ಕುವೆಂಪುರವರು ತಮ್ಮ  ಸೃಜನಶೀಲ ಶಕ್ತಿಯಿಂದ `ಸಕಲಾರಾಧನ ಸಾಧನ ಬೋಧನದನುಭವ ರಸ~ವನ್ನು  ಮೊಗೆದು ಕೊಟ್ಟವರು....

ಅಂಥ ರಸ ಸಿದ್ಧಿಯ ಆರಾಧಕರು. ಅವರ  ರಸಾನುಭೂತಿ  ನಿಸರ್ಗದ ಚೆಲುವಿನ ಚೈತನ್ಯದಿಂದ ಮೂಡಿಬಂದುದು.  ಸೃಜನಶೀಲ ಧ್ಯಾನ ಸ್ಥಿತಿಯಲ್ಲಿ, ಪ್ರಕೃತಿಯೊಂದಿಗೆ ಅನುಸಂಧಾನದಲ್ಲಿ ಉಂಟಾದ ತಾದಾತ್ಮ್ಯದಲ್ಲಿ  ರಸಾನುಭೂತಿಯ  ಸಿದ್ಧಿಪಡೆದು ಶಿಖರ ಸ್ಥಿತಿಯನ್ನು ತಲುಪಿದಾಗ ಉಂಟಾಗುವ ಸ್ಥಿತಿಯನ್ನು ಕುವೆಂಪು  `ಪೂರ್ಣದೃಷ್ಟಿ~ ಎಂದಿದ್ದಾರೆ.

ವಸ್ತುವೊಂದನ್ನು  ವೀಕ್ಷಿಸುತ್ತಾ ಪರಿಭಾವನೆಯಲ್ಲಿ ತಾನೇ ಅದಾಗುವುದು. ಅಖಂಡ  ಸೃಷ್ಟಿ ಚೈತನ್ಯವೇ ಅವಿನಾಭಾವದ ಶಿಖರ ಸ್ಥಿತಿಯಲ್ಲಿ ಅಭಿನ್ನವಾಗಿರುವುದು. ಅಂಥ ಸ್ಥಿತಿ ಸೃಜನಶೀಲತೆಯ ಉನ್ಮತ್ತ ಪರಾಕಾಷ್ಠೆಯಲ್ಲಿ ಕಾವ್ಯದಲ್ಲಿ ಪ್ರತಿಮಾರೂಪದಲ್ಲಿ ಅಭಿವ್ಯಕ್ತವಾಗುತ್ತದೆ.ಕುವೆಂಪು ಮುಟ್ಟುವ ಇಂಥ ಸ್ಥಿತಿಯನ್ನೇ `ಅದ್ವೈತ~ ಎಂದು ಪೂರ್ವಸೂರಿಗಳು ಕರೆದದ್ದು. ಉಪನಿಷತ್ತಿನ `ಪೂರ್ಣಮದು; ಪೂರ್ಣಮಿದು; ಪೂರ್ಣದಿಂಬಂದುದೈ~ ಆಗಿದೆ. ಇಂಥ ಅಭೂತಪೂರ್ವ ಪ್ರತಿಮಾ  `ರಸ ಸ್ಥಿತಿ~ಯನ್ನೇ  ಕುವೆಂಪುರವರು `ಪೂರ್ಣ ದೃಷ್ಟಿ~ ಎಂದು  ಕಾವ್ಯದಲ್ಲಿ ಪ್ರತಿಮಿಸಿದ್ದಾರೆ. 

ಉಪನಿಷತ್ ಕವಿಯಾಗಿ  ಗೌತಮಬುದ್ಧನ `ಶೂನ್ಯ~ದ ಪರಿಭಾವನೆಯನ್ನು,  ಅಲ್ಲಮನು ವಿಸ್ತರಿಸಿದ ಶೂನ್ಯತ್ವದ ಅನುಭಾವವನ್ನೂ ಕುವೆಂಪು ಅವರು `ಪೂರ್ಣತ್ವ~ದ  ಪರಿಕಲ್ಪನೆಯಲ್ಲಿ ವಿಸ್ತರಿಸಿದ್ದಾರೆ. ಕುವೆಂಪುರವರಿಗೆ ಪ್ರಕೃತಿ ಚೈತನ್ಯಶೀಲವಾದುದು. ಚೇತೋಹಾರಿಯಾದ ಆರಾಧನೆಯ ವಸ್ತುವಿಶೇಷವಾಗಿದೆ. ಪ್ರಕೃತಿಯನ್ನು ಕಂಡು ಉನ್ಮತ್ತರಾಗುತ್ತಿದ್ದರು. ತನ್ಮಯಸ್ಥಿತಿಯಲ್ಲಿ ಅನುಭವ ಸಮಗ್ರವಾಗಿ ವ್ಯಕ್ತಿತ್ವವನ್ನು ಆವರಿಸಿಕೊಳ್ಳುತ್ತಿತ್ತು.

ಆ ತಲ್ಲೆನತೆಯಲ್ಲಿ ಶಾಂತ  ಸ್ಥಿತಿಯನ್ನು ತಲುಪಿ  ನಿಸರ್ಗಾನುಭವ, ಪೂರ್ಣತ್ವದ ನೆಲೆಯಲ್ಲಿ ನಿಂತು `ಪ್ರಕೃತಿ ಉಪಾಸನೆ~ ಪರಿಪೂರ್ಣವೆನಿಸುತ್ತಿತ್ತು. ಇಂಥಹ ಅನುಭವ ವಿಶೇಷವನ್ನು `ರಾಮಾಯಣದರ್ಶನ~  ಮಹಾಕಾವ್ಯದಲ್ಲಿ ಕಂಡರಿಸಿದ್ದಾರೆ.ನಮ್ಮ ಸಾಂಸ್ಕೃತಿಕ ಸಂದರ್ಭದಲ್ಲಿ ವ್ಯಕ್ತಿಯ ಉದ್ಧಾರ ಅವರವರ ಆಧ್ಯಾತ್ಮಕ್ಕೆ ತಕ್ಕಂತೆ  ತಾನು ಪರಿಭಾವಿಸುವ ಚೈತನ್ಯದೊಂದಿಗೆ ಒಂದಾಗುವುದು. ಪರಿಭಾವಿಸುವ  ಚೈತನ್ಯವೇ  ಆಗಿಬಿಡುವುದು. ಕವಿಗಾದರೋ ರಸಾವೇಶದ ಅನುಭೂತಿಯಲ್ಲಿ ಹಾಗೆ ಏಕತ್ವವಾಗುವುದು ತಾನು ಸೃಷ್ಟಿಸುವ ಪಾತ್ರ - ಸನ್ನಿವೇಶಗಳಲ್ಲಿ.ಮಹಾಕವಿ ಕುವೆಂಪುರವರು ರಸಾನುಭೂತಿಯನ್ನು ಪ್ರಕಟಗೊಳಿಸುವ ಮೂಲದ್ರವ್ಯವೇ ಪ್ರಕೃತಿ. ಭಾವ ಮತ್ತು ಚಿಂತನೆಗಳು ವಸ್ತು ವಿಶೇಷತೆಯಲ್ಲಿ ಲೀನವಾಗಿ ಕವಿ ದರ್ಶನವಾಗಿ ಮಾರ್ಪಡುವುದು. ಈ ಪ್ರಕ್ರಿಯೆಯಲ್ಲಿ ಉಂಟಾಗುವ ಪ್ರಶಾಂತ ಸಂದರ್ಭವೇ ಪೂರ್ಣತ್ವಕ್ಕೆ  ಕೊಂಡೊಯ್ಯುವುದು. ಇಂಥ  ರಸ  ಸಂದರ್ಭಗಳು ಭಾವ  ಸತ್ಯದಿಂದ  ಪ್ರತಿಮಿಸಲ್ಪಟ್ಟಿವೆ.

             

* * * *

ರಸಸಿದ್ಧಿಯ  ಸನ್ನಿವೇಶಗಳನ್ನು ಕವಿ ಪರಿಭಾವಿಸುವ ಸಂದರ್ಭಗಳಲ್ಲಿ:

 `ವಿಭಾವಾನುಭಾವಗಳ ಸಂಯೋಗ . . .~ದಿಂದುಂಟಾಗುವ ರಸಸ್ಥಿತಿಯನ್ನು ಕುರಿತು:

            . . . .  ರಸಜೀವನಕೆ ಮಿಗಿಲ್ ತಪಮಿಹುದೆ?

            ರಸಸಿದ್ಧಿಗಿಂ ಮಿಗಿಲೆ ಸಿದ್ಧಿ?  ಪೊಣ್ಮಿದೆ ಸೃಷ್ಟಿ

            ರಸದಿಂದೆ; ಬಾಳುತಿದೆ ರಸದಲ್ಲಿ: ರಸದೆಡೆಗೆತಾಂ

            ಪರಿಯುತಿದೆ; ಪೊಂದುವುದು ರಸದೊಳೈಕ್ಯತೆವೆತ್ತು

            ತುದಿಗೆ. ರಸಸಾಧನಂಗೆಯ್ಯದಿರುವುದೆ ಮೃತ್ಯು.

            ಆನಂದರೂಪಮಮೃತಂ ರಸಂ !

            (ಶ್ರಿ ರಾಮಾಯಣ ದರ್ಶನಂ ಪುಟ 44)

ಎಂದು ಹೇಳುವ ಕುವೆಂಪುರವರಿಗೆ  `ಆನಂದರೂಪಮಮೃತಂ ರಸಂ~

ಎಂಬುದನ್ನು ಸಾಕ್ಷಾತ್ಕರಿಸುವುದೇ ಪೂರ್ಣದೃಷ್ಟಿಯ ಪರಿಕಲ್ಪನೆಯಾಗಿದೆ.

ಪ್ರಕೃತಿ ವಿಷಯವಾದ ಕವಿಯ ದೃಷ್ಟಿ `ಪೂರ್ಣದೃಷ್ಟಿ~ಯಾಗಿ ದರ್ಶನಕ್ಕೇರುತ್ತದೆ. ದ್ರಷ್ಟಾರನಾದ ರಸ ಋಷಿಗೆ: ಅಲ್ಪದರಲ್ಲಿ ಪ್ರಾರಂಭವಾಗಿ, ಬೇರೆ ಬೇರೆ ಭೂಮಿಕೆಗಳಲ್ಲಿ ರಸಗ್ರಾಹಿಯಾಗಿ ಚರಿಸಿ ಕೊನೆಗೆ ಆ ಭೂಮದಲ್ಲಿ  ಸಿದ್ಧಿಪಡೆಯುತ್ತದೆ.

ಪ್ರಕೃತಿ ದರ್ಶನ ಪರವಾದ  ಪೂರ್ಣದೃಷ್ಟಿಯ  ಶ್ರಿರಾಮನ ರಸಾವೇಷ ಸ್ಥಿತಿಯನ್ನು `ಕುಣಿದಳುರಿಯ ಉರ್ವಶಿ~  ಭಾಗದ ಅಂತ್ಯದಲ್ಲಿ: ಮಂದಾಕಿನಿ ನದಿಯ ತಿಳಿನೀರಲ್ಲಿ ಮೀಯಲು ಇಳಿದ ಶ್ರಿರಾಮ   `ದೃಶ್ಯಸೌಂದರ್ಯದಿಂದಾತ್ಮದರ್ಶನಕೇರ್ದ~ ಬಗೆ ಹೀಗೆ:

        ಜಲಗದ್ಗದ ಶ್ರುತಿಗೆ ಉಪನಿಷತ್ತಿನ ಶ್ರುತಿಯ

         ಮಂತ್ರಘೋಷಂ ಬೆರಸಿ ನೀರಾಡಿದನ್,

                                -ಬರಪಮೆನೆ,

         ಬೆಳ್ವಕ್ಕಿಪಂತಿ, ನೋಡಿದನು ರಸವಶನಾಗುತಾ

         ದಾಶರಥಿ. ನೋಡುತಿರೆ, ತಾನೆ ಹೊಳೆಯಾದಂತೆ,

         ತಾನಡವಿಯಾದಂತೆ, ತಾನೆ ಗಿರಿಯಾದಂತೆ,

         ತಾನೆ ಬಾನಾದಂತೆ, ತಾನೆಲ್ಲಮಾದಂತೆ

         ಮೇಣೆಲ್ಲಮುಂ ತನ್ನೊಳಧ್ಯಾತ್ಮಮಾದಂತೆ

         ಭೂಮಾನುಭೂತಿಯಿಂ ಮೈಮರೆದನಾ ರಸಸಿದ್ಧಿ

         ಪೇಳ್, ರಾಮನಧ್ಯಾತ್ಮಮಂ ಸಕಲಲೋಕಕೆ ಸಾರ್ವ

         ಭವ್ಯ ಭಗವತ್ ಸಾಕ್ಷಿಯೈಸಲೆ ಕಿರೀಟೋನ್ನತಂ!

                              (ಪುಟ: 162, 63)

ಪ್ರತಿಕೃತಿ  ದೃಷ್ಟಿಗೆ  ಅಸಾಧ್ಯವಾದುದು  ಪ್ರತಿಮಾವಿಧಾನದ ಕವಿ ಕಲ್ಪನೆಯಲ್ಲಿ ಪೂರ್ಣ ದೃಷ್ಟಿಯಾಗಿ ಮಾರ್ಪಡುತ್ತದೆ. ಕವಿ ಕುವೆಂಪು ಅವರಿಗೆ ವೇದ-ಶಾಸ್ತ್ರ- ಕಲೆಗಳಿಂದ ಮುಪ್ಪರಿಗೊಂಡ ಸಂಗಮ ಸ್ಥಿತಿಯಲ್ಲಿ ಸಮಸ್ತವೂ ರಸಮಯವಾಗಿ  ಪೂರ್ಣತ್ವಕ್ಕೆ  ಸಂದುಬಿಡುತ್ತವೆ.` ರಸಮಲ್ತೆ ರುದ್ರ ದೃಷ್ಟಿಗೆ ರೌದ್ರಮುಂ~  ಎಂಬ ಭಾಗದಲ್ಲಿ ದಶಗ್ರೀವ

ಸೋದರ ಶಿರಂ ಧರೆಗುರುಳುವ ದೃಶ್ಯವನ್ನು:

ಕುಂಭಕರ್ಣಂಗಾದುದನುಭವಂ ಲೋಕಾತಿಗಂ:

              ತಿರೆ ನುಗ್ಗಿತಾಗಸಕೆ. ತತ್ತರಿಸಿ

ರವಿಯಬಿಂಬಂ ತಾಗಿದುದು ಶಶಿಯಬಿಂಬಕ್ಕೆ.

                       ಇತ್ತಲಿದೋ ಕಾಣ್:

ಮೈಥಿಲೀ ಧವಂ ದೆತ್ತಣಾವೇಶಮೋ?

ಸಮಾಧಿಸ್ಥನಂತೆ ನಿಷ್ಪಂದ ತನು ನಿರ್ನಿಮೇಷಂ

ನಿಂದನಂತರ್ಮುಖಿ, ಅಲೋಕಸಾಮಾನ್ಯಮಂ

ಅನುಭವಿಸುತಂತಸ್ಥ ಸರ್ವತ್ವಮಂ. ವ್ಯಷ್ಟಿಯೋರ್

ಸತ್ವ ಸರ್ವಸ್ವಮಂ ಪಿಳಿದು ಪೀರ್ದುದೋ ವಿರಾಟ್

ಪೂರ್ಣತ್ವಮೆನೆ, ಶೂನ್ಯಸಂಸಾರನೊಯ್ಯನೆಯೆ

ಬಿಲ್ಲಮೇಲೊರಗಿ ....... (ಪುಟ 704-705)

ಪೂರ್ಣತ್ವದ  ಶೂನ್ಯಸಂಸಾರವನ್ನು  ಕವಿ  ಕಾಣಿಸುವ  ದರ್ಶನಾನುಭಾವ  ಇದಾಗಿದೆ.

    

 `ಮಂಥರೆಯ ಮಗುವನಾಡಿಪ ಕೆಲಸ~ದಲ್ಲಿ;  `ಸೇತು ಬಂಧನ

ಬೃಹದ್ದರ್ಶನ~ ದಲ್ಲಿ-   `ರಾಮ ರಾವಣ ದೃಷ್ಟಿಯುದ್ಧ~ದಲ್ಲಿ

`ರಾವಣನಿಗೆ ರಾಮ ಸೆರೆ ಸಿಕ್ಕಿದ~ ಸಂದರ್ಭ;  `ಹನುಮನ ವಿರಾಟ್

ರೂಪ ದರ್ಶನ~  ಇತ್ಯಾದಿ  ಸನ್ನಿವೇಶಗಳಲ್ಲಿ  ಕುವೆಂಪುರವರ

ಭಾವ ಕೋಶದಿಂದ ಪುಟಿದೆದ್ದ ರಸಾವೇಷದ ಪೂರ್ಣತ್ವ ಇಡೀ

ಕಾವ್ಯ ತುಂಬೆಲ್ಲಾ ಪ್ರತಿಮೆಗೊಂಡಿರುವುದನ್ನು ಕಾಣಬಹುದು.

ಕುವೆಂಪುರವರ  ಸಾಹಿತ್ಯ ಸೃಷ್ಟಿಯಲ್ಲಿ: ಪ್ರಕೃತಿಯಲ್ಲಾಗಲಿ, ಜೀವನದಲ್ಲಾಗಲಿ  ಚೈತನ್ಯ -   ಜಡ; ಸಣ್ಣದು-ದೊಡ್ಡದು; ಮೇಲು -  ಕೀಳು; ಬಡವ-ಬಲ್ಲಿದ; ಎಲ್ಲರನ್ನೂ ಉದ್ಧಾರದ ಕಡೆಗೆ ಕೊಂಡೊಯ್ಯುವುದೇ ಮುಖ್ಯ.

ಹಾಗಾಗಿ ಎಲ್ಲ ಪಾತ್ರಗಳನ್ನು ಅವರ ಕಲ್ಪನೆಯ ಮೂಸೆಯಲ್ಲಿ ಅದ್ದಿ `ರಸಸಿದ್ಧಿ~ಗೆ ಕೊಂಡೊಯ್ದು ಅವರವರ ಅರಿವಿಗೆ ತಕ್ಕಂತೆ  ಪೂರ್ಣತ್ವವನ್ನು  ಪ್ರಕಟಿಸುವ  ಸಂದರ್ಭಗಳಲ್ಲಿ ರಸ  ಸನ್ನಿವೇಶಗಳು ಆಕಾರ ತಳೆಯುವ  `ಕಾವ್ಯಶಿಲ್ಪ~  ಅವರ  ಪ್ರೌಢ  ಭಾಷೆಯ ಸೃಷ್ಟಿ ವಿಶೇಷಗಳು.  

 

 ಕುವೆಂಪು ಅವರು  ಅದ್ವೈತದ ರಸ  ಸಮಾಧಿ ಸ್ಥಿತಿಯನ್ನು  ಕುರಿತು  ಒಂದು ಕವಿತೆಯಲ್ಲಿ :

                         

             ಹಸುರತ್ತಲ್! ಹಸುರಿತ್ತಲ್!

                ಹಸುರೆತ್ತಲ್ ಕಡಲಿನಲಿ

                ಹಸುರ್ಗಟ್ಟಿತು ಕವಿಯಾತ್ಮಂ

                ಹಸುರ್‌ನೆತ್ತರ್ ಒಡಲಿನಲಿ             

        

ಎಂಬುದಾಗಿ ಭಾವಾವೇಶದ ರಸ ಸಿದ್ಧಿಯನ್ನು  ಕಾವ್ಯ ಸೌಂದರ್ಯವಾಗಿ

ಕಂಡರಿಸುವ ರೀತಿಯನ್ನು ನೋಡಿದರೆ, ಅವರಿಗೆ ಪ್ರಕೃತಿ ಸೌಂದರ್ಯವೇ

ಕಾವ್ಯ ಸೌಂದರ್ಯವಾಗಿ ಪರಿವರ್ತಿತಗೊಳ್ಳುವುದು. ಅವರು ಪರಿಭಾವಿಸಿದ

ಕಾವ್ಯ ಮೀಮಾಂಸೆಯ ರಸಾನುಭೂತಿ ಅಗಿರುವುದು.ಈ ರೀತಿ ಅದ್ವೈತ ರಸ ಸಿದ್ಧಿಯನ್ನು ಅವರು ತಮ್ಮ ಮಹಾಕಾವ್ಯದ ಎಲ್ಲಾ  ಪಾತ್ರಗಳಲ್ಲೂ ಪ್ರತಿಪಾದಿಸುತ್ತಾರೆ. ಅವರಿಗೆ ನಾಯಕ ನಾಯಕಿಯರು ಮಾತ್ರವಲ್ಲಾ, ಅಂಥವರ ಶ್ರೇಷ್ಠತೆಯನ್ನು ಪ್ರಚುರಪಡಿಸುವ ವಿರೋಧಿಗಳು ಕೂಡ ಉದ್ಧಾರದ ಹಾದಿ ಹಿಡಿದವರೇ.ಹೀಗಾಗಿ ಸರ್ವರುದ್ಧಾರವನ್ನು ತಮ್ಮ ಪೂರ್ಣತ್ವದ ಪರಿಕಲ್ಪನೆಯಲ್ಲಿ ಕಟೆದು ನಿಲ್ಲಿಸುತ್ತಾರೆ. ಅದಕ್ಕಾಗಿ ಪ್ರಕೃತಿಯ ಸೌಂದರ್ಯದ ರಸ ಸಿದ್ಧಿಯಲ್ಲಿ ಅವರನ್ನೆಲ್ಲಾ ಅದ್ದಿ ಉದ್ಧಾರಗೈಯುವ ಅವರ ಕಾವ್ಯದ ಉದ್ದೇಶ ಗುರಿ ಮುಟ್ಟುವುದೇ ಪೂರ್ಣದೃಷ್ಟಿಯಲ್ಲಿ   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry