ಬುಧವಾರ, ಆಗಸ್ಟ್ 21, 2019
27 °C

`ಕುವೆಂಪು,ರಾಜ್ ಮೇರುವ್ಯಕ್ತಿತ್ವದ ನಾಯಕರು'

Published:
Updated:

ಬೆಂಗಳೂರು: `ಕುವೆಂಪು ಹಾಗೂ ರಾಜ್‌ಕುಮಾರ್‌ರಂತಹ ಮೇರು ವ್ಯಕ್ತಿತ್ವದ ನಾಯಕರು ಕನ್ನಡದ ಅನನ್ಯತೆಯನ್ನು ಕಟ್ಟಿಕೊಟ್ಟಿರುವುದರಿಂದ ತೆಲಂಗಾಣ ಮಾದರಿಯ ಪ್ರತ್ಯೇಕತೆಯ ಕೂಗು ರಾಜ್ಯದಲ್ಲಿ ಏಳಲು ಸಾಧ್ಯವಿಲ್ಲ' ಎಂದು ವಿಮರ್ಶಕ ಡಾ.ಕೆ.ಮರುಳಸಿದ್ಧಪ್ಪ ಅಭಿಪ್ರಾಯಪಟ್ಟರು.ಕನ್ನಡ ಜನಶಕ್ತಿ ಕೇಂದ್ರವು ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬರಗೂರು ರಾಮಚಂದ್ರಪ್ಪ ಅವರ `ಜನಪದ ನಾಯಕ ಡಾ.ರಾಜ್‌ಕುಮಾರ್ ಜನರಿಗೆ ಕೊಟ್ಟಿದ್ದೇನು?' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.`ರಂಗಭೂಮಿ ಹಿನ್ನೆಲೆಯಿಂದ ಬಂದ ರಾಜ್‌ಕುಮಾರ್ ಅವರದ್ದು ದೈತ್ಯ ಪ್ರತಿಭೆ. ಅವರೆಂದೂ ಸ್ಟಾರ್ ನಟರಾಗಿರಲಿಲ್ಲ. ಬದಲಿಗೆ ಸಾಮಾನ್ಯ ಜನರ ಮನದಲ್ಲಿ ನೆಲೆ ನಿಂತ ಮಹಾನ್ ನಟರಾಗಿದ್ದರು. ಎಲ್ಲ ಜನಪ್ರಿಯ ವ್ಯಕ್ತಿಗಳಿಗೆ ಇರುವಂತೆ ರಾಜ್‌ಕುಮಾರ್ ಕುರಿತು ಹಲವು ಆಕ್ಷೇಪಗಳಿದ್ದವು. ಅದರಲ್ಲಿ ರಾಜ್‌ಕುಮಾರ್ ಇತರರನ್ನು ಬೆಳೆಯಲು ಬಿಡಲಿಲ್ಲವೆಂಬುದು ಕೂಡ ಸತ್ಯಕ್ಕೆ ದೂರವಾದ ಆಕ್ಷೇಪ' ಎಂದು ತಿಳಿಸಿದರು.`ಸರಳತೆ ಹಾಗೂ ಮುಗ್ಧತೆಯನ್ನು ಉಳಿಸಿಕೊಂಡು ಬದುಕಿದ ಅವರು ಮಾನವ ಸಂಬಂಧಗಳ ಶ್ರೇಷ್ಠತೆಯನ್ನು ಅರಿತು ನಡೆದವರು. ಅವರ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ಹಲವು ಘಟನೆಗಳನ್ನು ಈ ಪುಸ್ತಕದಲ್ಲಿ ದಾಖಲಿಸಿರುವುದು ವಿಶೇಷ' ಎಂದು ನುಡಿದರು.ಲೇಖಕ ಬರಗೂರು ರಾಮಚಂದ್ರಪ್ಪ, `ಜನರ ಅಭಿರುಚಿಯನ್ನು ಕೆಡಿಸದೇ ನಟನೆಯಲ್ಲಿ ಶ್ರೇಷ್ಠತೆ ಮೆರೆದ ಅವರು ಸಾಂಸ್ಕೃತಿಕ ಲೋಕದಲ್ಲಿದ್ದುಕೊಂಡು ಆ ಕ್ಷೇತ್ರವನ್ನು ಮೀರಿದ ಜನನಾಯಕ. ಎಲ್ಲ ಅವಮಾನಗಳನ್ನು ಸಹಿಸಿಕೊಂಡು ಅದರೆಡೆಗೆ ಮೌನ ಸಂಘರ್ಷವನ್ನು ತೋರ್ಪಡಿಸುತ್ತಲೇ ಜನಾನುರಾಗಿಯಾದರು. ಇಂತಹ ಸಾಧಕರ ಬಗ್ಗೆ ಬರೆಯುವುದು ಒಂದು ಸಾಮಾಜಿಕ ಜವಾಬ್ದಾರಿ ಎಂದು ಭಾವಿಸಿದ್ದೇನೆ' ಎಂದರು.ಸುಟ್ಟು ಬಿಡಿ : ಹೂಳಬೇಡಿ

`ಅಪ್ಪಾಜಿ ಸಾಯುವ ಮೂರು ತಿಂಗಳು ಮುನ್ನ `ನಾ ಸತ್ತರೆ ಹೂಳಬೇಡಿ, ಸುಟ್ಟುಬಿಡಿ. ನಾನೊಬ್ಬ ರೈತನ ಮಗ. ಹೂತ ಜಾಗದಲ್ಲಿ ಏನನ್ನು ಬೆಳೆಯಲು ಸಾಧ್ಯವಿಲ್ಲ. ಬೆಂಗಳೂರಿನಂತಹ ಊರಿನಲ್ಲಿ ಭೂಮಿಗೆ ಅಪಾರ ಬೆಲೆ. ಸಮಾಧಿಗೋಸ್ಕರ ಭೂಮಿಯನ್ನು ಹಾಳುಮಾಡುವುದು ತರವಲ್ಲ' ಎಂದಿದ್ದರು' ಎಂದು ನಟ ರಾಘವೇಂದ್ರ ರಾಜ್‌ಕುಮಾರ್ ನೆನಪಿಸಿಕೊಂಡರು.

`ಅಪ್ಪಾಜಿ ತೀರಿಕೊಂಡ ಸಂದರ್ಭದಲ್ಲಿ ಅವರು ಸಮಸ್ತ ಕನ್ನಡಿಗರ ಆಸ್ತಿ ಎಂದು ಸರ್ಕಾರ ಸಮಾಧಿ ಸ್ಥಾಪನೆಗೆ ಮುಂದಾಗಿತ್ತು. ಅಪ್ಪಾಜಿಯ ಸರಳತೆ ಹಾಗೂ ಶ್ರೇಷ್ಠ ಚಿಂತನೆಗೆ ಇದೊಂದು ಉದಾಹರಣೆಯಷ್ಟೆ. ಇಂದಿಗೂ ಅಪ್ಪಾಜಿಯ ಸಮಾಧಿ ಸ್ಥಳವನ್ನು ಸರ್ಕಾರ ಅಭಿವೃದ್ಧಿಪಡಿಸದೇ ಇರುವುದಕ್ಕೆ ಬೇಸರವಿಲ್ಲ. ಅದಕ್ಕಿಂತ ಹೆಚ್ಚಾಗಿ ರಸ್ತೆ, ಕುಡಿಯುವ ನೀರು ಸೇರಿದಂತೆ ನಾಗರಿಕರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿ' ಎಂದು ತಿಳಿಸಿದರು.`ಈ ಸಮಾಜಕ್ಕೆ ಅವರು ಏನನ್ನು ಕೊಟ್ಟಿದ್ದಾರೆ ಎಂಬುದು ಕೊಟ್ಟವರಿಗೂ ಹಾಗೂ ಪಡೆದುಕೊಂಡವರಿಗಷ್ಟೆ ಗೊತ್ತು. ಪ್ರಚಾರಕ್ಕಾಗಿ ಎಂದೂ ಯಾರಿಗೂ ಸಹಾಯ ಮಾಡಿದವರಲ್ಲ' ಎಂದರು.

Post Comments (+)