ಕುವೆಂಪು ಪ್ರತಿಮೆ ಅನಾವರಣ

7

ಕುವೆಂಪು ಪ್ರತಿಮೆ ಅನಾವರಣ

Published:
Updated:
ಕುವೆಂಪು ಪ್ರತಿಮೆ ಅನಾವರಣ

ಬೆಂಗಳೂರು: `ನಗರದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣ ಮಾಡಲು ಅಗತ್ಯವಿರುವ ಜಾಗ ಮತ್ತು ಅನುದಾನ ನೀಡಲಾಗುತ್ತದೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಗರದ ಶೇಷಾದ್ರಿ ರಸ್ತೆಯ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಷ್ಠಾಪಿಸಿರುವ ಕುವೆಂಪು ಅವರ ಆಳೆತ್ತರದ ಕಂಚಿನ ಪ್ರತಿಮೆಯನ್ನು ಸೋಮವಾರ ಅನಾವರಣಗೊಳಿಸಿ ಅವರು ಮಾತನಾಡಿದರು.`ಪಿಇಎಸ್ ಶಿಕ್ಷಣ ಸಂಸ್ಥೆ ಸಮೀಪ ಕನ್ನಡ ಭವನ ನಿರ್ಮಾಣಕ್ಕೆ ಅಗತ್ಯ ಜಾಗ ಇರುವುದಾಗಿ ಗೊತ್ತಾಗಿದೆ. ಆ ಜಾಗವನ್ನು ಕನ್ನಡ ಭವನ ನಿರ್ಮಾಣಕ್ಕೆ ನೀಡುವ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುತ್ತದೆ. ಭವನ ನಿರ್ಮಾಣಕ್ಕೆ ಅಗತ್ಯ ಅನುದಾನವನ್ನೂ ನೀಡಲಾಗುತ್ತದೆ~ ಎಂದು ಅವರು ಭರವಸೆ ನೀಡಿದರು.`ವಿಚಾರಗಳನ್ನು ಸರಿಯಾಗಿ ಅರ್ಥೈಸಿಕೊಂಡರೆ ಸಮಾಜದಲ್ಲಿ ಇರುವ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು. ಆದರೆ ಸಮಸ್ಯೆಗಳನ್ನು ಅರಿಯುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ದಾರ್ಶನಿಕ, ರಸಋಷಿ ಕುವೆಂಪು ಅವರು ನೀಡಿರುವ ವಿಶ್ವಮಾನವ ಸಂದೇಶವನ್ನು ಎಲ್ಲ ವಿದ್ಯಾರ್ಥಿಗಳು ಓದಬೇಕು. ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಅದ್ಭುತ ಸಮಾಜ ನಿರ್ಮಾಣ ಮಾಡಲು ಶ್ರಮಿಸಬೇಕು~ ಎಂದರು.ಮಾತೃಭಾಷೆ ಶಿಕ್ಷಣ: `ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕ ನಂತರವೂ ಭಾಷಾ ನೀತಿ ಮತ್ತು ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ. ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವ ಬಗ್ಗೆ ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗೆ ತರಬೇಕು~ ಎಂದು ಕವಿ ಡಾ.ಜಿ.ಎಸ್.ಶಿವರುದ್ರಪ್ಪ ಹೇಳಿದರು.`ಸ್ವಾತಂತ್ರ್ಯ ಉದ್ಯಾನದಲ್ಲಿ ಕುವೆಂಪು ಅವರ ಪ್ರತಿಮೆ ಪ್ರತಿಷ್ಠಾಪಿಸಿ ಬೆಂಗಳೂರು ಜನರ ಸಾಂಸ್ಕೃತಿ ಜೀವನಕ್ಕೆ ಕಳಸ ಮೂಡಿಸಲಾಗಿದೆ. ಕುವೆಂಪು ಅವರನ್ನು ನೆನೆಯುವುದು ಎಂದರೆ ಅವರು ಪ್ರೀತಿಸುತ್ತಿದ್ದ, ಆರಾಧಿಸುತ್ತಿದ್ದ ಸಹ್ಯಾದ್ರಿಯನ್ನು ಸ್ಮರಿಸುವುದು. ಅವರು ನಿಸರ್ಗದ ಮೌಲ್ಯವನ್ನು ಎತ್ತಿ ತೋರಿಸಿದರು.ಆದರೆ ಪ್ರಕೃತಿಯನ್ನು ಉಪಭೋಗದ ವಸ್ತು ಮಾಡಿಕೊಳ್ಳಲಾಗಿದೆ. ಆರ್ಥಿಕ ಬೆಳವಣಿಗೆ, ಅಭಿವೃದ್ಧಿ ಹೆಸರಿನಲ್ಲಿ ಪಶ್ಚಿಮ ಘಟ್ಟಗಳನ್ನು ಹಾಳು ಮಾಡಲಾಗುತ್ತಿದೆ. ಜೀವನದ ಮೂಲ ದ್ರವ್ಯವಾದ ಪರಿಸರವನ್ನು ರಕ್ಷಿಸಬೇಕಿದೆ~ ಎಂದು ಅವರು ಹೇಳಿದರು.`ಕುವೆಂಪು ಅವರ ವಿಶ್ವ ಮಾನವ ಸಂದೇಶದಲ್ಲಿ ಹೇಳಿರುವಂತೆ ನಾವು ವೈಚಾರಿಕ ಮತ್ತು ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು, ಇಲ್ಲದಿದ್ದರೆ ಕೇಡು ತಪ್ಪಿದಲ್ಲ~ ಎಂದರು. `ಕನ್ನಡ ಶಾಲೆಗಳಿಗೆ ಮೂಲ ಸೌಕರ್ಯ ಮತ್ತು ಉತ್ತಮ ಶಿಕ್ಷಕರನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಆಕರ್ಷಿಸಬಹುದು. ಹಲವು ಕನ್ನಡ ಶಾಲೆಗಳಲ್ಲಿ ಸೌಕರ್ಯಗಳಿಲ್ಲದಿರುವುದರಿಂದ ಸಮಸ್ಯೆಯಾಗುತ್ತಿದೆ~ ಎಂದು ವಿಧಾನಪರಿಷತ್ ಸದಸ್ಯ ಡಾ.ಎಂ.ಆರ್.ದೊರೆಸ್ವಾಮಿ ತಿಳಿಸಿದರು.ಪರಿಷತ್ತಿನ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಸಿ.ಕೆ.ರಾಮೇಗೌಡ ಅಧ್ಯಕ್ಷತೆ ವಹಿಸಿದ್ದರು. ಗೃಹ ಸಚಿವ ಆರ್.ಅಶೋಕ, ಶಾಸಕರಾದ ದಿನೇಶ್ ಗುಂಡೂರಾವ್, ಅಶ್ವತ್ಥನಾರಾಯಣ, ಮುನಿರಾಜು, ಉಪ ಮೇಯರ್ ಎಸ್.ಹರೀಶ್, ಪಾಲಿಕೆಯ ಆಡಳಿತ ಪಕ್ಷದ ನಾಯಕ ಬಿ.ಆರ್.ನಂಜುಂಡಪ್ಪ, ನಗರ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಕೆ.ರಾಮಮೂರ್ತಿ, ವಿರೋಧ ಪಕ್ಷದ ನಾಯಕ ಎಂ.ಉದಯ ಶಂಕರ್, ಜೆಡಿಎಸ್ ಗುಂಪಿನ ನಾಯಕ ಪದ್ಮನಾಭರೆಡ್ಡಿ, ಬಿಬಿಎಂಪಿ ಸದಸ್ಯ ವಿ.ಕೃಷ್ಣ ಮತ್ತು ಕುವೆಂಪು ಅವರ ಆಳೆತ್ತರದ ಪ್ರತಿಮೆ ನಿರ್ಮಿಸಿರುವ ಕಲಾವಿದ ಬಿ.ಡಿ.ಜಗದೀಶ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry