ಶುಕ್ರವಾರ, ಡಿಸೆಂಬರ್ 6, 2019
26 °C

ಕುವೆಂಪು ಮಂತ್ರ ಮಾಂಗಲ್ಯಕ್ಕೆ ಹೊಸ ಕಾಯಕಲ್ಪ

Published:
Updated:
ಕುವೆಂಪು ಮಂತ್ರ ಮಾಂಗಲ್ಯಕ್ಕೆ ಹೊಸ ಕಾಯಕಲ್ಪ

ಮಲೆನಾಡು ಈಗ ಸಂಕೀರ್ಣ ಹೊರಳಿಕೆಯಲ್ಲಿದೆ. ಕುತೂಹಲದ ಸಂಗತಿಯೆಂದರೆ ಕುವೆಂಪು, ಅನಂತಮೂರ್ತಿ, ತೇಜಸ್ವಿಯಂತಹ ಪ್ರಖರ ವೈಚಾರಿಕ ಲೇಖಕರ ಪ್ರಭಾವ, ಶಾಂತವೇರಿ ಗೋಪಾಲಗೌಡರ ನೇತೃತ್ವದ ಸಮಾಜವಾದಿ ರಾಜಕಾರಣದ ಫಲಶ್ರುತಿ, ಹೋರಾಟಗಾರರಾದ ಕಡಿದಾಳು ಶಾಮಣ್ಣ, ಎಚ್. ಗಣಪತಿಯಪ್ಪ, ಟಿ.ಆರ್. ಕೃಷ್ಣಪ್ಪನವರ ಗಾಂಧೀ ಮಾರ್ಗದ ಚಳವಳಿಗಳು ಒಟ್ಟಾರೆಯಾಗಿ ಮಲೆನಾಡು ಹೆಚ್ಚಿನ ಸಂಘರ್ಷಕ್ಕೆ ಆಸ್ಪದವಿಲ್ಲದಂತೆ ಮಾನವತಾವಾದಿ ಮೌಲ್ಯಗಳನ್ನು ಸಹಜವಾಗಿಯೇ ತನ್ನ ಬದುಕಿನ ಲಯದಲ್ಲಿ ರೂಢಿಸಿಕೊಂಡಿದೆ. ಈ ಕಾರಣದಿಂದಾಗಿಯೇ ಜಾತಿ ಹಿನ್ನೆಲೆಯ ಸಾಮಾಜಿಕ ತಾರತಮ್ಯಗಳು ಕಂಡರೂ ಉತ್ತರ ಕರ್ನಾಟಕ ಹಾಗೂ ಮೈಸೂರು ಸೀಮೆಯಲ್ಲಿ ಈಗಲೂ ಸಾಮಾನ್ಯವಾಗಿರುವ ದಲಿತರ ಮೇಲಿನ ದೌರ್ಜನ್ಯಗಳು ಇಲ್ಲಿಲ್ಲ. ಎಲ್ಲೆಡೆಯಂತೆ ಅಸಾಮಾನ್ಯ ಬಡವ ಶ್ರೀಮಂತರ ನಡುವಿನ ಅಂತರ ಇಲ್ಲಿದ್ದರೂ ಕೂಲಿಕಾರ್ಮಿಕರು ಸ್ವಾಭಿಮಾನದಿಂದ ಬದುಕುವ ವಾತಾವರಣವಿದೆ. ಧಾರ್ಮಿಕ ಶ್ರದ್ಧೆಯಿದ್ದರೂ ಅತಿ ಎನಿಸುವ ಕಂದಾಚಾರಗಳು ಆಚರಣೆಯಲ್ಲಿಲ್ಲ. ಮಡೆಸ್ನಾನ, ಬೇವಿನ ಉಡುಗೆಯಂಥ ಧಾರ್ಮಿಕ ವಿಧಿಗಳ ಪರಿಪಾಠವೂ ಇಲ್ಲ.ಕುವೆಂಪು ಅವರು ರೂಪಿಸಿದ ‘ಮಂತ್ರಮಾಂಗಲ್ಯ’ ಎಂಬ ಸರಳ ವಿವಾಹ ಪದ್ಧತಿಯ ಪ್ರಭಾವ ಇಲ್ಲಿ ಸಾಕಷ್ಟು ಉಳಿದುಕೊಂಡಿದೆ. ರೈತಚಳವಳಿಯ ಉಚ್ಛ್ರಾಯ ಕಾಲಘಟ್ಟದಲ್ಲಿ ಈ ಭಾಗದಲ್ಲಿ ಮಂತ್ರ ಮಾಂಗಲ್ಯ ವಿವಾಹಗಳು ಸಾಕಷ್ಟು ನಡೆದಿದ್ದವು. ಅನಂತರ ನಾಡಿನ ಉಳಿದೆಡೆ ಇವು ನಿಂತೇ ಹೋದವೇನೋ ಎನ್ನುವಷ್ಟರಮಟ್ಟಿಗೆ ಕ್ಷೀಣಿಸಿದ್ದರೆ ಮಲೆನಾಡಿನಲ್ಲಿ ಈ ಪದ್ಧತಿಯ ವಿವಾಹಗಳು ಅಲ್ಲೊಂದು ಇಲ್ಲೊಂದು ನಡೆಯುತ್ತಲೇ ಇವೆ.ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ರಮ, ಕೃಷಿ ಕ್ಷೇತ್ರದಲ್ಲಿನ ಕಾರ್ಮಿಕರ ಸಮಸ್ಯೆಯಂತಹ ಬಿಕ್ಕಟ್ಟುಗಳು, ಕೃಷಿ ಉತ್ಪನ್ನಗಳ ಬೆಲೆಯಲ್ಲಿ ಉಂಟಾಗುತ್ತಿರುವ ತೀವ್ರ ಮಟ್ಟದ ಇಳಿಕೆ ಮತ್ತು ಏರಿಕೆ, ಜಾಗತೀಕರಣ ತಂದ ಜೀವನಶೈಲಿ ಮತ್ತು ನಮ್ಮ ಯೋಚನಾಕ್ರಮದಲ್ಲಿ ಮೂಡಿದ ಪಲ್ಲಟಗಳು ಮಲೆನಾಡನ್ನು ಸಂಕೀರ್ಣ ಹೊರಳಿಕೆಗಳತ್ತ ದೂಡಿವೆ. ಯುವ ಪೀಳಿಗೆ ನಗರದ ಬಹುರಾಷ್ಟ್ರೀಯ ಕಂಪೆನಿಗಳತ್ತ ಮುಖ ಮಾಡಿದ ಪರಿಣಾಮ ಹಳ್ಳಿಗಳು ವೃದ್ದಾಶ್ರಮಗಳಾಗುತ್ತಿವೆ. ಮನುಷ್ಯರ ನಡುವಿನ ಪರಸ್ಪರ ಒಡನಾಟ ಕಡಿಮೆಯಾಗುತ್ತಿದೆ. ಕುವೆಂಪು ಮನೆಯ ಆಸುಪಾಸಿನಲ್ಲಿಯೂ ಕೂಡ ರೆಸಾರ್ಟುಗಳು ತಲೆಯೆತ್ತುವ ಆತಂಕ ಕಾಣಿಸಿಕೊಂಡಿದೆ. ಮಲೆನಾಡನ್ನು ಆವರಿಸಿರುವ ಪೀಡೆಗಳನ್ನು ನಿವಾರಿಸುವ ಹೋರಾಟಗಳಿರಲಿ, ಹೋರಾಟದ ಮನಸ್ಥಿತಿಯೇ ಕಾಣೆಯಾಗುತ್ತಿದೆ.ಇದೇ ರೀತಿ ಮಂತ್ರಮಾಂಗಲ್ಯ ವಿವಾಹ ಪದ್ದತಿಯ ಆಚರಣೆಗಳ ರೀತಿಯಲ್ಲೂ ವಿರೋಧಭಾಸವೆನಿಸುವ ಬದಲಾವಣೆಗಳಾಗಿವೆ. ಮದುವೆಯ ಸೂತ್ರಧಾರರಾದ ಪುರೋಹಿತರನ್ನು ಹೊರಗಿಡುವುದು ಮತ್ತು ಆಡಂಬರದ ಪ್ರದರ್ಶನವನ್ನು ತ್ಯಜಿಸಿ ಸರಳವಾಗಿರುವುದು ಮಂತ್ರಮಾಂಗಲ್ಯ ವಿವಾಹ ಪದ್ಧತಿಯ ಮುಖ್ಯ ನೀತಿಸಂಹಿತೆಯಾಗಿದೆ. ಈ ವಿವಾಹದ ಬಗ್ಗೆ ಗಾಢ ಬದ್ಧತೆಯಿರುವವರು ಮಾತ್ರ ಮಂತ್ರಮಾಂಗಲ್ಯ ವಿವಾಹ ಪದ್ಧತಿಯ ನೀತಿ ಸಂಹಿತೆಯನ್ನು ಪೂರ್ಣವಾಗಿ ಪಾಲಿಸುತ್ತಾರೆ. ಉಳಿದಂತೆ ಮಂತ್ರಮಾಂಗಲ್ಯ ವಿವಾಹಗಳು ಪುರೋಹಿತರನ್ನು ಹೊರಗಿಡುವುದಷ್ಟಕ್ಕೇ ಮಾತ್ರ ಸೀಮಿತಗೊಳ್ಳುತ್ತಿದೆ. ಸರಳತೆಯನ್ನು ಬಿಟ್ಟುಕೊಡದ ಜನರು ಲಕ್ಷಾಂತರ ರೂಪಾಯಿ ಖರ್ಚುಮಾಡಿ ವೈಭವದಿಂಧ ಮದುವೆಯಾಗುತ್ತಾರೆ. ಈ ಮದುವೆಗಳು ಶತಮಾನದ ಕವಿಯನ್ನು ಅಣಕಿಸಿದಂತಿರುತ್ತದೆ.ತೀರ್ಥಹಳ್ಳಿಯ ಕುವೆಂಪು ಅವರ ಹುಟ್ಟೂರು ಕುಪ್ಪಳಿಯ ಕುವೆಂಪು ಪ್ರತಿಷ್ಠಾನ ಈಗ ಕುವೆಂಪು ಅವರ ಮಂತ್ರಮಾಂಗಲ್ಯ ವಿವಾಹಗಳನ್ನು ಅವರ ಉದ್ಧೇಶದ ಅನುಸಾರ ಸರಿದಾರಿಗೆ ತರುವ ಮತ್ತು ಪ್ರೋತ್ಸಾಹಿಸುವ ಸಣ್ಣ ಪ್ರಯತ್ನವೊಂದನ್ನು ಆರಂಭಿಸಿದೆ. ಕುವೆಂಪು ಪ್ರತಿಷ್ಠಾನದ ಆವರಣದಲ್ಲಿರುವ ಹೇಮಾಂಗಣದಲ್ಲಿ ಕೆಲವು ನಿಬಂಧನೆಗೊಳಪಟ್ಟು ವಂತ್ರ ಮಾಂಗಲ್ಯ ವಿವಾಹಗಳಿಗೆ ಅವಕಾಶ ನೀಡಲಾರಂಭಿಸಿದೆ. ಇದರ ಸಂಚಾಲಕರನ್ನಾಗಿ ಕುವೆಂಪು ಪ್ರತಿಷ್ಠಾನದ ಸದಸ್ಯರಾಗಿರುವ ಲೇಖಕ ಡಾ.ಜೆ.ಕೆ. ರಮೇಶ ಅವರನ್ನು ನೇಮಿಸಲಾಗಿದೆ. ಸ್ವತಃ ರಮೇಶ ಅವರು ಮಂತ್ರಮಾಂಗಲ್ಯದ ಪದ್ದತಿ ಅನುಸಾರ ಸರಳವಾಗಿ ವಿವಾಹವಾದವರು. ಕನ್ನಡ ಉಪನ್ಯಾಸಕರಾಗಿ ತಮ್ಮ ವೈಚಾರಿಕ ಉಪನ್ಯಾಸದಿಂದ ಮಲೆನಾಡಿನ ಸಾವಿರಾರು ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಮಾನವೀಯ ಭಾವನೆಗಳನ್ನು ಮೂಡಿಸಿದವರು.ಮಲೆನಾಡು ಕುವೆಂಪು ಅವರಿಂದ ತುಂಬಾ ಪ್ರಭಾವಿಸಲ್ಪಟ್ಟಿದೆ. ಆದರೂ ಈಗಲೂ ಕುವೆಂಪು ಅವರನ್ನು ಓದುವವರಿಗಿಂತ ಆರಾಧಿಸುವವರ ಸಂಖ್ಯೆಯೇ ಹೆಚ್ಚಿದೆ. ಮಂತ್ರಮಾಂಗಲ್ಯ ವಿವಾಹದ ಮಹತ್ವವನ್ನಲ್ಲದೆ ಕುವೆಂಪು ಅವರ ವೈಚಾರಿಕ ದೃಷ್ಟಿಕೋನವನ್ನು ತಮ್ಮ ತರಗತಿಯಲ್ಲಿ ನಿರಂತರವಾಗಿ ಜೆ.ಕೆ. ರಮೇಶ್ ಬೋಧಿಸಿಕೊಂಡು ಬಂದವರು. ಉತ್ತಮ ವಾಗ್ಮಿಯೂ ಆಗಿರುವ ಇವರು ತಮ್ಮ ಭಾಷಣಗಳಿಂದ ಜನರನ್ನು  ಸೆಳೆದಿರುವವರು.ಕುಪ್ಪಳ್ಳಿಯ ಹೇಮಾಂಗಣದಲ್ಲಿ ಮಂತ್ರಮಾಂಗಲ್ಯ ವಿವಾಹಕ್ಕೆ ಅವಕಾಶ ಕಲ್ಪಿಸಿದ ನಂತರ ರಮೇಶ್ ಅವರ ನೇತೃತ್ವದಲ್ಲಿ  ಅಂತರಜಾತಿ ಮತ್ತು ಅಂತರಧರ್ಮೀಯ ವಿವಾಹಗಳು ನಡೆದಿವೆ. ಜೆ.ಕೆ. ರಮೇಶ್ ತಮ್ಮ ಮಿತಿಯಲ್ಲಿ ಮಲೆನಾಡಿನ ತಲ್ಲಣಗಳಿಗೆ ಸ್ಪಂದಿಸುತ್ತಾ ಬಂದವರು. ಮಂತ್ರ ಮಾಂಗಲ್ಯ ವಿವಾಹ ಪದ್ಧತಿಯನ್ನು ಹೆಚ್ಚು ಆಚರಣೆಗೆ ಬರುವಂತೆ ಮಾಡುವುದು ಅವರ ಸಾಮಾಜಿಕ ಸ್ಪಂದನೆಯ ಒಂದು ಭಾಗ ಮಾತ್ರ. ಈ ತಿಂಗಳ 28-29ರಂದು ನಡೆಯುವ ತೀರ್ಥಹಳ್ಳಿ ತಾಲ್ಲೂಕು ಸಾಹಿತ್ಯ ಸಮ್ಮೇಳನಕ್ಕೆ ರಮೇಶ್ ಅವರನ್ನೇ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಿರುವುದರಿಂದ ಕುವೆಂಪು ವಿಚಾರಧಾರೆಗಳು ಮುನ್ನೆಲೆಗೆ ಬರಬಹುದು ಎಂಬ ಆಶಯ ಗರಿಗೆದರಿದೆ.

 

ಪ್ರತಿಕ್ರಿಯಿಸಿ (+)