ಶುಕ್ರವಾರ, ಮೇ 20, 2022
20 °C

ಕುಶಾಲನಗರ: ಆಹಾರ ಅಪವ್ಯಯ ತಡೆಗೆ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಶಾಲನಗರ: ಸ್ಥಳೀಯ ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಆಹಾರ ಸಂರಕ್ಷಣಾ ಅಭಿಯಾನ ಸಮಿತಿ ವತಿಯಿಂದ ಭಾನುವಾರ ವಿಶ್ವ ಆಹಾರ ದಿನದ ಅಂಗವಾಗಿ ಆಹಾರ ಸಂರಕ್ಷಣಾ ಅಭಿಯಾನ ಸಮಿತಿ ವತಿಯಿಂದ  ಕುಶಾಲನಗರ ಪಟ್ಟಣದಲ್ಲಿ ಆಹಾರ ಅಪವ್ಯಯ ತಡೆಗಟ್ಟುವಿಕೆ ಕುರಿತು ಬೃಹತ್ ಜಾಗೃತಿ ಜಾಥಾ ನಡೆಸಲಾಯಿತು.ಬೈಚನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಎನ್ನೆಸ್ಸೆಸ್ ಶಿಬಿರದಿಂದ ಆರಂಭವಾದ ಜಾಥಾದಲ್ಲಿ   ಶಿಬಿರಾರ್ಥಿಗಳು ಆಹಾರ ಅಪವ್ಯಯ ತಡೆಗಟ್ಟುವ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಿದರು. 

ಆಹಾರ ಅಪವ್ಯಯ ತಡೆಗಟ್ಟುವ ಕುರಿತಂತೆ ವಿವಿಧ ಘೋಷಣಾ ಫಲಕಗಳೊಂದಿಗೆ ಪಾದಯಾತ್ರೆ ಮೂಲಕ ತೆರಳಿದ ವಿದ್ಯಾರ್ಥಿಗಳು, ಆಹಾರ ಸಂರಕ್ಷಣೆ ಬಗ್ಗೆ ನಾಗರಿಕರ ಗಮನ ಸೆಳೆದರು.ಚಿಂತಕ ಭಾರದ್ವಾಜ ಕೆ.ಆನಂದತೀರ್ಥ ಮಾತನಾಡಿ, ಕೃಷಿಕರು ಕಷ್ಟಪಟ್ಟು ಬೆವರು ಸುರಿಸಿ ಬೆಳೆದ ಆಹಾರವನ್ನು ಪೋಲು ಮಾಡದೆ ಭವಿಷ್ಯದಲ್ಲಿ ಎದುರಾಗಬಹುದಾದ ಆಹಾರ ಸಮಸ್ಯೆಯನ್ನು ತಡೆಗಟ್ಟುವ ದಿಸೆಯಲ್ಲಿ ಇಂತಹ ಅಭಿಯಾನಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದರು. ಅಭಿಯಾನದ ಸಂಚಾಲಕ ಎನ್.ಕೆ.ಮೋಹನ್‌ಕುಮಾರ್ ಅವರ ವಿಶೇಷ ಆಸಕ್ತಿ, ದೂರದೃಷ್ಟಿಯಿಂದ ನಡೆಯುತ್ತಿರುವ ಈ ಅಭಿಯಾನವನ್ನು ಮುನ್ನಡೆಸುವ ಸಂಕಲ್ಪ ಮಾಡಬೇಕು ಎಂದರು.ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಮಂಡಳಿ ಸದಸ್ಯ ಟಿ.ಜಿ.ಪ್ರೇಮಕುಮಾರ್ ಜಾಥಾಕ್ಕೆ ಚಾಲನೆ ನೀಡಿದರು. ಜಾಥಾದಲ್ಲಿ ವಿದ್ಯಾರ್ಥಿಗಳು ಆಹಾರ ಅಪವ್ಯಯ ತಡೆಗಟ್ಟುವ ಕುರಿತ ಕರಪತ್ರ ಹಂಚಿದರು.ಎಸ್‌ಡಿಎಂಸಿ ಅಧ್ಯಕ್ಷ ಶೇಖರ್‌ನಾಯಕ್, ಎನ್ನೆಸ್ಸೆಸ್ ಶಿಬಿರಾಧಿಕಾರಿ ಎಚ್.ಕೆ.ತಿಲಗಾರ್, ಬೈಚನಹಳ್ಳಿ ಪ್ರಗತಿ ಯುವಕ ಸಂಘದ ಅಧ್ಯಕ್ಷ ವಿನು, ಕಾರ್ಯದರ್ಶಿ ಚಂದನಕುಮಾರ್, ಪದಾಧಿಕಾರಿಗಳಾದ ಗಂಗಾಧರ್, ಶಿವು, ಕಿರಣ್‌ಕುಮಾರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.