ಗುರುವಾರ , ಜೂನ್ 24, 2021
21 °C

ಕುಷ್ಟಗಿಯಲ್ಲಿ ಮದ್ದಾನೇಶ್ವರ ಜಾತ್ರೆ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಪಟ್ಟಣದಲ್ಲಿ ಶುಕ್ರವಾರ ಲಿಂ.ಕರಿಬಸವ ಮಹಾಸ್ವಾಮೀಜಿಯವರ 38ನೇ ಪುಣ್ಯಾರಾಧನೆ ಹಾಗೂ ಮದ್ದಾನೇಶ್ವರ ಜಾತ್ರೆ ಮತ್ತು ಕರಿಬಸವ ಸ್ವಾಮೀಜಿಯವರ 12ನೇ ಪಟ್ಟಾಧಿಕಾರ ಮಹೋತ್ಸವ ವಿಜೃಂಭಣೆಯೊಂದಿಗೆ ನೆರವೇರಿತು.ಬೆಳಿಗ್ಗೆ ವಿವಿಧ ಮಠಾಧೀಶ ಸಮ್ಮುಖದಲ್ಲಿ ಹನ್ನೆರಡು ಮಹಾಮಂಟಪಗಳ ಪೂಜಾ ಕೈಂಕರ್ಯ, ಧರ್ಮ ಧ್ವಜಾರೋಹಣ, ಮೂವತ್ತು ವಟುಗಳಿಗೆ ಅಯಾಚಾರ, ಲಿಂಗದೀಕ್ಷೆ ನಡೆಯಿತು. ಅಲ್ಲದೇ ಸಾಮೂಹಿಕ ಮದುವೆಯಲ್ಲಿ ಎಂಟು ಜೋಡಿ ವಧುವರರು ಶ್ರೀಗಳ ಸಾನ್ನಿಧ್ಯದಲ್ಲಿ ದಾಂಪತ್ಯ ಬದುಕಿಗೆ ಕಾಲಿರಿಸಿದರು.ನಂತರ ಕರಿಬಸವ ಸ್ವಾಮೀಜಿಯವರ 12ನೇ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಸಂಭ್ರಮದಿಂದ ನೆರವೇರಿತು. ಈ ಸಂದರ್ಭದಲ್ಲಿ ಎರಡು ನೂರಕ್ಕೂ ಅಧಿಕ ಮಹಿಳೆಯರು ಪೂರ್ಣಕುಂಭ, ಕಲಶದೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆಹಾಕಿದರು.ಗ್ರಾಮೀಣ ಪ್ರದೇಶದ ಡೊಳ್ಳು ಕಲಾವಿದರು, ಮಹಿಳಾ ಡೊಳ್ಳು ಕಲಾವಿದೆಯರ ಡೊಳ್ಳು ಕುಣಿತ ಆಕರ್ಷಕವಾಗಿತ್ತು. ಅಲ್ಲದೇ ಯುವಕರಿಂದ ನಡೆದ ಕೋಲಾಟ, ನೃತ್ಯ ಜನರ ಗಮನಸೆಳೆಯಿತು. ಮೆರವಣಿಗೆಯ ಮುಂಚೂಣಿಯಲ್ಲಿ ಗಾಂಭೀರ್ಯದ ಹೆಜ್ಜೆಹಾಕುತ್ತಿದ್ದ ಆನೆ ಮಕ್ಕಳು, ಭಕ್ತರನ್ನು ಆಶೀರ್ವದಿಸುತ್ತ ಮುನ್ನಡೆಯಿತು.ಸಂಜೆ ಮಠದ ಆವರಣದಲ್ಲಿ ನಡೆದ ಲಘು ರಥೋತ್ಸವದಲ್ಲಿ ಮಹಿಳೆಯರು ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು. ಗುರುವಾರ ಸಂಜೆ ಮದ್ದಾನೇಶ್ವರ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಧರ್ಮ ಜಾಗೃತಿ ಸಭೆಯಲ್ಲಿ ರಂಭಾಪುರಿ ಪೀಠದ ಪ್ರಸನ್ನರೇಣುಕ ವೀರಸೋಮೇಶ್ವರ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಚಳಗೇರಿಯ ವಿರುಪಾಕ್ಷಲಿಂಗ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವಾರು ಮಠಾಧೀಶರು ಉಪಸ್ಥಿತರಿದ್ದರು. ಮತ್ತು ವಿವಿಧ ಚುನಾಯಿತ ಪ್ರತಿನಿಧಿಗಳು, ಅನೇಕ ಗಣ್ಯರು ಭಾಗವಹಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.