ಸೋಮವಾರ, ಏಪ್ರಿಲ್ 19, 2021
23 °C

ಕುಷ್ಟಗಿಯಲ್ಲಿ ವಿಶ್ವ ಕನ್ನಡ ತೇರು ಯಾನ ಅಸಡ್ಡೆ ಮೆರೆದ ಜನಪ್ರತಿನಿಧಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಬೆಳಗಾವಿಯಲ್ಲಿ ನಡೆಯಲಿರುವ ‘ವಿಶ್ವ ಕನ್ನಡ ಸಮ್ಮೇಳನ 2011’ರ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಸಂಚರಿಸುತ್ತಿರುವ ವಿಶ್ವ ಕನ್ನಡ ತೇರು ಯಾನ ಸ್ವಾಗತಿಸುವಾಗ ಗೈರು ಹಾಜರಾಗುವ ಮೂಲಕ ಚುನಾಯಿತ ಪ್ರತಿನಿಧಿಗಳು ಮತ್ತು ಬಹುತೇಕ ಅಧಿಕಾರಿಗಳು ಅಸಡ್ಡೆ ‘ಮೆರೆದ’ ಪ್ರಸಂಗ ಮಂಗಳವಾರ ಇಲ್ಲಿ ಕಂಡುಬಂದಿತು. ಕನ್ನಡ ನೆಲ, ಜಲ, ಭಾಷೆಗೆಸಂಬಂಧಿಸಿದಂತೆ ಕನ್ನಡಿಗರಲ್ಲಿನ ಸ್ವಾಭಿಮಾನವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಹೊರಟಿರುವ ಈ ತೇರು ಯಾನ ಕನಕಗಿರಿಯಿಂದ ತಾವರಗೇರಾ ಮೂಲಕ ಆಗಮಿಸಿದಾಗ ಪಟ್ಟಣದ ಅನ್ನಪೂರ್ಣೇಶ್ವರಿ ದೇವಸ್ಥಾನದ ಬಳಿ ಸ್ವಾಗತಿಸಲಾಗುತ್ತದೆ, ಉಪಸ್ಥಿತರಿರುವಂತೆ ಅಧಿಕಾರಿಗಳು ಮೊದಲೇ ಎಲ್ಲ ಚುನಾಯಿತ ಪ್ರತಿನಿಧಿಗಳಿಗೆ ಆಹ್ವಾನ ತಲುಪಿಸಿದ್ದರು.  ತೇರು ಸರಿಯಾದ ಸಮಯಕ್ಕೆ ಬಂದರೂ ಅಲ್ಲಿ ತಹಸೀಲ್ದಾರರು ಮಾತ್ರ ಇದ್ದರೆ ಉಳಿದ ಅಧಿಕಾರಿಗಳು ನಂತರ ಬಂದರು. ಆದರೆ ಇಡಿ ಕಾರ್ಯಕ್ರಮದಲ್ಲಿ ಶಾಸಕರು, ಆರು ಜನ ಜಿ.ಪಂ ಸದಸ್ಯರಲ್ಲಿ ಒಬ್ಬರೂ ಇರಲಿಲ್ಲ ತಾಲ್ಲೂಕು ಪಂಚಾಯತಿ, ಪುರಸಭೆ ಪ್ರತಿನಿಧಿಗಳೂ ನಾಪತ್ತೆಯಾಗಿದ್ದರು. ಅಷ್ಟೇ ಏಕೆ ಬೆರಳೆಣಿಕೆ ಇಲಾಖೆ ಸಿಬ್ಬಂದಿಯನ್ನು ಹೊರತುಪಡಿಸಿದರೆ ಉಳಿದವರೂ ಕೈಕೊಟ್ಟರು. ಹಾಗಾಗಿ ಮೆರವಣಿಗೆಯಲ್ಲಿ ತೇರಿನೊಂದಿಗೆ ಬಂದ ವಿವಿಧ ಕಲಾವಿದರ ಸಂಖ್ಯೆಯೇ ಹೆಚ್ಚಿತ್ತು. ಚುನಾಯಿತ ಪ್ರತಿನಿಧಿಗಳ ಅಸಡ್ಡೆತನವನ್ನು ನಂತರ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಸಂಘಟನೆಗಳು ಖಂಡಿಸಿದವು. ಸಂತೆ ಮೈದಾನದ ಬನ್ನಿಮಂಟಪದ ಬಳಿ ನಡೆದ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ತಹಸೀಲ್ದಾರ ವೀರೇಶ ಬಿರಾದಾರ, ನಾವು ಎಲ್ಲೆ ಇರಲಿ ಹೇಗೇ ಇರಲಿ ಕನ್ನಡದ ಸಂಸ್ಕೃತಿಯೊಂದಿಗೆ ಬದುಕೋಣ ಎಂದರು. ಕಾರ್ಯಕ್ರಮದಲ್ಲಿ ಕರವೇ (ಟಿಎಎನ್ ಬಣ) ಜಿಲ್ಲಾಧ್ಯಕ್ಷ ಬಸನಗೌಡ ಪೊಲೀಸಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವೆಂಕಟೇಶ್, ಕಸಾಪ ಅಧ್ಯಕ್ಷ ರವೀಂದ್ರ ಬಾಕಳೆ ಮಾತನಾಡಿದರು.  ಪುರಸಭೆ ಸದಸ್ಯರಾದ ಜಿ.ಕೆ.ಹಿರೇಮಠ, ಪರಶುರಾಮ ನಾಗರಾಳ, ಶಿವಶಂಕರ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯರಾಮ ಚವ್ಹಾಣ, ಪುರಸಭೆ ಮುಖ್ಯಾಧಿಕಾರಿ ವಿಠ್ಠಲ ಲಾಟ್ನೆ, ಗುರುಬಸವರಾಜ, ಪಿ.ಎಸ್.ಐ ಅಮರೇಶ್.ಬಿ, ಕೃಷ್ಣಮೂರ್ತಿ ಟೆಂಗುಂಟಿ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು. ಕರವೇ ಗೌರವಾಧ್ಯಕ್ಷ ಶಂಕರ ಕರಪಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಟರಾಜ ಸೋನಾರ ಸ್ವಾಗತಿಸಿ ವಂದಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.