ಭಾನುವಾರ, ನವೆಂಬರ್ 17, 2019
28 °C

ಕುಷ್ಟಗಿ ಕ್ಷೇತ್ರ: 3 ನಾಮಪತ್ರ ತಿರಸ್ಕೃತ

Published:
Updated:

ಕುಷ್ಟಗಿ: ಈ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗುರುವಾರ ನಾಮಪತ್ರಗಳ ಪರಿಶೀಲನೆ ನಡೆಸಲಾಗಿದ್ದು ಅವುಗಳಲ್ಲಿ 3 ತಿರಸ್ಕೃತಗೊಂಡು 16 ಜನ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿ ಎಂ.ಸುಜ್ಞಾನಮೂರ್ತಿ ತಿಳಿಸಿದರು.ಚುನಾವಣೆಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿ 18 ಅಭ್ಯರ್ಥಿಗಳಿಂದ 29 ನಾಮಪತ್ರಗಳು ಬಂದಿದ್ದವು, ಅವರಲ್ಲಿ ಕಡಿಮೆ ವಯೋಮಾನ ಹೊಂದಿರುವ ಕಾರಣಕ್ಕೆ ಮಂಜುಳಾ ಎಂಬವವರ, ಮತದಾರರ ಪಟ್ಟಿಯಲ್ಲಿನ ಕ್ರಮಸಂಖ್ಯೆ ಮತ್ತು ಭಾಗ ತಪ್ಪಾಗಿ ಸೂಚಿಸಿರುವುದು ಮತ್ತು ಕೆಜೆಪಿ ಎಂದು ನಮೂದಿಸಿದ ಲಕ್ಷ್ಮಣ ತಳವಾರ ಬಿ ಫಾರ್ಮ್ ನೀಡದ ಕಾರಣ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ.ಆದರೆ ಲಕ್ಷ್ಮಣ ತಳವಾರ ಪಕ್ಷೇತರರಾಗಿಯೂ ಪ್ರತ್ಯೇಕವಾಗಿ ಸಲ್ಲಿಸಿದ ನಾಮಪತ್ರ ಕ್ರಮಬದ್ಧವಾಗಿದೆ ಎಂದು ವಿವರಿಸಿದರು.

ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ನ ಅಮರೇಗೌಡ ಪಾಟೀಲ, ಬಿಜೆಪಿಯ ದೊಡ್ಡನಗೌಡ ಪಾಟೀಲ, ಜೆಡಿಎಸ್‌ನ ಕೆ.ಶರಣಪ್ಪ ಮತ್ತು ಬಿಎಸ್‌ಪಿ ಶಿವಪುತ್ರಪ್ಪ ಹಾಗೂ ನೋಂದಾಯಿತ ರಾಜಕೀಯ ಪಕ್ಷಗಳಾದ ಬಿಎಸ್‌ಆರ್‌ಸಿಯ ರಾಜಶೇಖರಗೌಡ, ಕೆಜೆಪಿಯ ಫಕೀರಪ್ಪ ಚಳಗೇರಿ, ಸಿಪಿಎಂಎಲ್‌ನ ಬಸವರಾಜ ಬುನ್ನಟ್ಟಿ ಮತ್ತು ಜೆಡಿಯು ಪಕ್ಷದ ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ಇತರೆ 8 ಜನರ ನಾಮಪತ್ರಗಳು ಕ್ರಮಬದ್ಧವಾಗಿವೆ. ಅಭ್ಯರ್ಥಿಗಳು ಮತ್ತು ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ಪರಿಶೀಲನೆ ಪ್ರಕ್ರಿಯೆ ನಡೆಸಲಾಯಿತು ಎಂದರು.ಏ. 20ರ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರಗಳನ್ನು ಹಿಂದೆ ಪಡೆಯಲು ಅವಕಾಶ ನೀಡಲಾಗಿದೆ ಎಂದರು.

ತರಬೇತಿ: ಎಲೆಕ್ಟ್ರಾನಿಕ್ ಮತಯಂತ್ರಗಳಿಗೆ ಸಂಬಂಧಿಸಿದ ತಾಂತ್ರಿಕ ತಿಳಿವಳಿಕೆ ಮೂಡಿಸುವ ಸಲುವಾಗಿ ಏ.19ರಂದು ಕೊಪ್ಪಳ ರಸ್ತೆಯಲ್ಲಿರುವ ಲೋಕೋಪಯೋಗಿ ಸರ್ಕ್ಯೂಟ್‌ಹೌಸ್‌ನಲ್ಲಿ ಅಧಿಕಾರಿಗಳಿಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಅಲ್ಲದೇ ಏ.23-29ರಂದು ಪಟ್ಟಣದ ಬಸವರಾಜ ಚಿತ್ರಮಂದಿರದಲ್ಲಿ ಮತಗಟ್ಟೆ ಅಧಿಕಾರಿ ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಎರಡು ಹಂತದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಚುನಾವಣಾಧಿಕಾರಿ ತಿಳಿಸಿದರು.ಸೂಚನೆ: ಕ್ಷೇತ್ರದಲ್ಲಿ ಶಾಂತಿಯುತ ಮತದಾನ ಪ್ರಕ್ರಿಯೆ ನಡೆಸುವ ಸಲುವಾಗಿ ಎಲ್ಲ ರೀತಿಯ ಅಗತ್ಯ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದರು.ತಹಶೀಲ್ದಾರ ವೀರೇಶ ಬಿರಾದಾರ, ಸಿರಸ್ತೆದಾರ ಸುರೇಶ ಕುಲಕರ್ಣಿ ಇದ್ದರು.

ಪ್ರತಿಕ್ರಿಯಿಸಿ (+)