ಕುಷ್ಟಗಿ: ಗಂಗಾಜಲ ಕುಂಭೋತ್ಸವ

7

ಕುಷ್ಟಗಿ: ಗಂಗಾಜಲ ಕುಂಭೋತ್ಸವ

Published:
Updated:

ಕುಷ್ಟಗಿ: ಇಷ್ಟಲಿಂಗ ಮಹಾಪೂಜೆ ಮತ್ತು ಧರ್ಮೋತ್ತೇಜನ ಸಮಾರಂಭದ ಅಂಗವಾಗಿ ಪಟ್ಟಣದಲ್ಲಿ ಗಂಗಾಜಲ ಕುಂಭೋತ್ಸವ ವಿಜೃಂಭಣೆಯಿಂದ ನೆರವೇರಿತು.ಮದ್ದಾನೇಶ್ವರ ಮಠದಿಂದ ಬಸವೇಶ್ವರ ವೃತ್ತ, ಮಾರುತಿ ವೃತ್ತದ ಮೂಲಕ ಪ್ರಮುಖ ಬೀದಿಗಳಲ್ಲಿ ನಡೆದ ಮೇಳದಲ್ಲಿ ಮದ್ದಾನೇಶ್ವರ ಹಿರೇಮಠದ ಕರಿಬಸವ ಸ್ವಾಮೀಜಿ ಹಾಗೂ ಮಂಗಳೂರಿನ ಸಿದ್ಧಲಿಂಗ ಸ್ವಾಮೀಜಿ ಗಂಗಾಜಲ ಹೊತ್ತು ಹೆಜ್ಜೆ ಹಾಕಿದರೆ ಕಳಸ, ಕುಂಭಗಳನ್ನು ಹೊತ್ತ ನೂರಾರು ಮಹಿಳೆಯರು, ಮಕ್ಕಳು ವಿವಿಧ ವಾದ್ಯಮೇಳ ಒಳಗೊಂಡ ಕುಂಭ ಮೇಳವನ್ನು ಪಟ್ಟಣದ ಜನತೆ ವೀಕ್ಷಿಸಿದರು.ವೀರಶೈವ ಸಮಾಜದ ಯುವಕರು ಪ್ರಮುಖರು ಸಹ ಮೆರವಣಿಗೆಯಲ್ಲಿ ಪಾಲ್ಗೊಂಡು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.ನಂತರ ರೇಣುಕಾಚಾರ್ಯ ಮಂಗಲ ಭವನದಲ್ಲಿ ಗಂಗಾಜಲದೊಂದಿಗೆ ಇಷ್ಟಲಿಂಗ ಮಹಾಪೂಜೆಯನ್ನು ನಡೆಸಲಾಯಿತು.ರಂಭಾಪುರಿ ಪೀಠದ ಪ್ರಸನ್ನರೇಣುಕ ವೀರಸೋಮೇಶ್ವರ ಸ್ವಾಮೀಜಿ ಮಹಾಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ವಿವಿಧ ಮಠಾಧೀಶರು, ರೇಣುಕಾಚಾರ್ಯ ಮಂಗಲ ಭವನ ಟ್ರಸ್ಟ್‌ನ ಪ್ರಮುಖರು ಇದ್ದರು.ಶುಕ್ರವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ರಂಭಾಪುರಿ ಶ್ರೀಗಳು, ಎಲ್ಲ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ ದೊಡ್ಡದು, ಶಿಕ್ಷಣದಿಂದ ಬುದ್ಧಿಶಕ್ತಿ ಬೆಳೆದರೆ ಧರ್ಮದಿಂದ ಭಾವನೆಗಳು ಬೆಳೆಯುತ್ತವೆ ಎಂದರು.`ವೀರಶೈವ ಧರ್ಮದಲ್ಲಿ ಇಷ್ಟಲಿಂಗ ಪೂಜೆ ಮಹತ್ವ~ ಕುರಿತು ಅಮೀನಭಾವಿಯ ಶಾಂತಲಿಂಗ ಸ್ವಾಮೀಜಿ ವಿಶೇಷ ಉಪನ್ಯಾಸ ನೀಡಿದರು. ನಿಡಶೇಸಿ ಚನ್ನಬಸವ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ.ಗುಡದೂರಿನ ನೀಲಕಂಠಯ್ಯ ತಾತನವರು ಗುರುರಕ್ಷೆ ನೀಡಿದರು.

ಟ್ರಸ್ಟ್‌ನ ಕಾರ್ಯಾಧ್ಯಕ್ಷ ಡಾ.ಬಿ.ಎಂ.ಗೌಡರ್ ಮತ್ತಿತರರು ಇದ್ದರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry