ಕುಷ್ಟಗಿ ತಾಲ್ಲೂಕು ಪಂಚಾಯ್ತಿ ನಿರ್ಲಕ್ಷ್ಯ ಸಾಮರ್ಥ್ಯಸೌಧದಲ್ಲಿ ಇಸ್ಪೇಟ್, ಸಿಗರೇಟ್ ರಾಶಿ

7

ಕುಷ್ಟಗಿ ತಾಲ್ಲೂಕು ಪಂಚಾಯ್ತಿ ನಿರ್ಲಕ್ಷ್ಯ ಸಾಮರ್ಥ್ಯಸೌಧದಲ್ಲಿ ಇಸ್ಪೇಟ್, ಸಿಗರೇಟ್ ರಾಶಿ

Published:
Updated:

ಕುಷ್ಟಗಿ: ಸರ್ಕಾರದ ವಿವಿಧ ಯೋಜನೆಗಳ ಕುರಿತ ಉಪಗ್ರಹ ಆಧಾರಿತ ತರಬೇತಿ ಕಾರ್ಯಕ್ರಮಗಳು ನಡೆಸುವುದಕ್ಕಾಗಿ ಇಲ್ಲಿಯ ತಾಲ್ಲೂಕು ಪಂಚಾಯ್ತಿ ಹಿಂದೆ ನಿರ್ಮಿಸಿರುವ `ಸಾಮರ್ಥ್ಯಸೌಧ'ದಲ್ಲಿ ರಾಶಿಗಟ್ಟಲೇ ಇಸ್ಪೇಟ್, ಸಿಗರೇಟ್‌ಗಳು ಬಿದ್ದಿರುವುದು ಬುಧವಾರ ಕಂಡುಬಂದಿತು.ಮೊದಲ ಅಂತಸ್ತಿನಲ್ಲಿ ವಿಶಾಲವಾದ ಸಭಾಂಗಣದಲ್ಲಿ ಉಪಗ್ರಹದ ಮೂಲಕ ಸಂಕೇತ ಸ್ವೀಕರಿಸುವ ರಿಸಿವರ್ ಕೇಂದ್ರ ಸ್ಥಾಪಿಸಲಾಗಿದ್ದು ಮೂರು ಹಂತದ ಪಂಚಾಯಿತಿ ವ್ಯವಸ್ಥೆಯಲ್ಲಿನ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಕುಳಿತು ಬೃಹತ್ ಗಾತ್ರದ ಟೆಲಿವಿಷನ್‌ಸೆಟ್ ಇರಿಸಲಾಗಿದ್ದು ಪ್ರಮುಖ ತರಬೇತಿಗಳು, ಸಭೆಗಳು ಇಲ್ಲಿಯೇ ನಡೆಯುತ್ತಿವೆ.ಆದರೆ ಸದರಿ ಸ್ಥಳದಲ್ಲಿ ಎಲ್ಲೆಂದರಲ್ಲಿ ಇಸ್ಪೇಟ್ ಎಲೆಗಳ, ಸಿಗರೇಟ್ ಪ್ಯಾಕ್‌ಗಳು, ಮೂಲೆ ಮೂಲೆಯಲ್ಲಿ ಸೇದಿ ಬಿಸಾಡಿದ ಸಿಗರೇಟ್ ತುಂಡುಗಳು, ಪ್ಲಾಸ್ಟಿಕ್ ಲೋಟಗಳು ಇರುವುದು ಗಮನಕ್ಕೆ ಬಂದ ನಂತರ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರಲ್ಲದೇ ಸಂಬಂಧಿಸಿದವರ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.ಸಾಮರ್ಥ್ಯಸೌಧದಲ್ಲಿನ ಈ ಸ್ಥಿತಿ ಕಂಡು ಅಸಮಾಧಾನ ವ್ಯಕ್ತಪಡಿಸಿದ ತಳುವಗೇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ ಮೇಟಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ತರಬೇತಿಗಳು, ಸಂವಾದ, ಚಿಂತನೆಗಳು ನಡೆಯುವ ಇಂಥ ಪವಿತ್ರ ಸ್ಥಳವನ್ನು ಜೂಜಾಟದ ತಾಣವನ್ನಾಗಿಸಿ ಅಪವಿತ್ರಗೊಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶುಕ್ರವಾರ (ಡಿ.21)ದಂದು ಇಲ್ಲಿಗೆ ಬಂದಾಗಲೂ ಇದೇ ಸ್ಥಿತಿ ಇತ್ತು ಈಗಲೂ ಸಹ ಸ್ವಚ್ಛಗೊಳಿಸದೇ ಹಾಗೆ ಬಿಟ್ಟಿರುವುದು ಬೇಜವಾಬ್ದಾರಿಯ ಪರಮಾವಧಿ ಎಂದು ದೂರಿದರು.ನೂತನ ಅಧ್ಯಕ್ಷ ಶರಣು ತಳ್ಳಿಕೇರಿ ತಾ.ಪಂ ಕಚೇರಿ, ಎಲ್ಲ ಚೇಂಬರ್‌ಗಳನ್ನು ಸಾಕಷ್ಟು ಖರ್ಚುವೆಚ್ಚದಲ್ಲಿ ಶೃಂಗರಿಸುವುದಲ್ಲದೇ ಆಡಳಿತ ವ್ಯವಸ್ಥೆ ಚುರುಕುಗೊಳಿಸಲು ಕ್ಲೋಸ್‌ಸರ್ಕ್ಯೂಟ್ ಕ್ಯಾಮೆರಾ ವ್ಯವಸ್ಥೆ ಕಲ್ಪಿಸಿದ್ದರೆ ಸಾಮರ್ಥ್ಯಸೌಧ ಮಾತ್ರ ಜೂಜಾಟದ ಕೇಂದ್ರದಂತೆ ಕಂಡುಬಂದಿರುವುದು ಅಚ್ಚರಿಗೆ ಕಾರಣವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry