ಮಂಗಳವಾರ, ನವೆಂಬರ್ 19, 2019
26 °C

ಕುಷ್ಟಗಿ: ಸಂಭ್ರಮದ ಮದ್ದಾನೇಶ್ವರ ಜಾತ್ರೆ

Published:
Updated:

ಕುಷ್ಟಗಿ: ಪಟ್ಟಣದಲ್ಲಿ ಗುರುವಾರ ಮದ್ದಾನೇಶ್ವರ ಜಾತ್ರಾ ಮಹೋತ್ಸವ ಹಾಗೂ ಲಿಂ. ಕರಿಬಸವ ಶಿವಾಚಾರ್ಯರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ಸಂಭ್ರಮ ಸಡಗರ ಮತ್ತು ಶ್ರದ್ಧೆ ಭಕ್ತಿಯ ನಡುವೆ ಆಚರಿಸಲಾಯಿತು.ಮಠದಿಂದ ಪ್ರಮುಖ ಬೀದಿಗಳಲ್ಲಿ ನಡೆದ ಉಜ್ಜಯಿನಿ ಪೀಠದ ಸಿದ್ಧಲಿಂಗರಾಜ ಸ್ವಾಮೀಜಿಯವರ ಅಡ್ಡಪಲ್ಲಕ್ಕಿ ಉತ್ಸವದ ಆಕರ್ಷಕ ಮೆರವಣಿಗೆಯಲ್ಲಿ ಕುಂಭಗಳನ್ನು ಹೊತ್ತ ಅಕ್ಕನ ಬಳಗದ ನೂರಾರು ಮಹಿಳೆಯರು. ಡೊಳ್ಳು ಕುಣಿತದಲ್ಲಿ ಮೈಮರೆತಿದ್ದ ಕಲಾವಿದರು,  ಕೋಲಾಟ ಮತ್ತಿತರೆ ಜನಪದ ಕಲೆ ಪ್ರದರ್ಶಿಸಿದರು.ಅಲ್ಲದೇ ಮೆರವಣಿಗೆಯಲ್ಲಿ ಗಾಂಭೀರ್ಯದಿಂದ ಹೆಜ್ಜೆ ಹಾಕಿದ ಗಜ, ಶೃಂಗರಿಸಲಾಗಿದ್ದ ನಂದಿ ಮತ್ತು ಕುದುರೆ ವಿಶೇಷ ಗಮನ ಸೆಳೆದವು. ಮೆರವಣಿಗೆಯುದ್ದಕ್ಕೂ ಭಕ್ತರು ಉಜ್ಜಯಿನಿ ಶ್ರೀಗಳ ಆಶೀರ್ವಾದ ಪಡೆದರು.ಬೆಳಿಗ್ಗೆ ಕತೃಗದ್ದುಗೆಗೆ ಮಹಾರುದ್ರಾಭಿಷೇಕ, ಅಯಾಚಾರ, ಲಿಂಗದೀಕ್ಷೆ, ಧರ್ಮ ಧ್ವಜಾರೋಹಣ ನೆರವೇರಿಸಲಾಯಿತು.ನಂತರ ಕರಿಬಸವ ಸ್ವಾಮೀಜಿಯವರ ನೇತೃತ್ವ ಮತ್ತು ವಿವಿಧ ಶ್ರೀಗಳ ಸಾನಿಧ್ಯದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ 8 ಜನ ವಧುವರರು ದಾಂಪತ್ಯ ಬದುಕಿಗೆ ಅಡಿಯಿಟ್ಟರು. ನಂತರ ನಡೆದ ಮಹಾರಥೋತ್ಸವದಲ್ಲಿ ಸಹಸ್ರ ಸಂಖ್ಯೆ ಭಕ್ತರು, ಗಣ್ಯರು, ಮಠದ ಅಭಿಮಾನಿಗಳು ಭಾಗವಹಿಸಿದ್ದರು.ವಿರುಪಾಕ್ಷಲಿಂಗ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಮರಿಸಿದ್ಧಲಿಂಗ ಸ್ವಾಮೀಜಿ ರೌಡಕುಂದ, ಸಿದ್ಧಲಿಂಗ ಸ್ವಾಮೀಜಿ ಮಂಗಳೂರು, ಚಂದ್ರಶೇಖರ ಸ್ವಾಮೀಜಿ, ನೀಲಕಂಠಯ್ಯ ತಾತನವರು, ಅಂಕಲಿಮಠದ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು ಮಹತೋತ್ಸವದಲ್ಲಿ ಉಪಸ್ಥಿತರಿದ್ದರು.ಬುಧವಾರ ಸಂಜೆ ಮದ್ದಾನೇಶ್ವರ ಮಠದಲ್ಲಿ ಜನಜಾಗೃತಿ, ಧರ್ಮ ಸಭೆ ಮತ್ತಿತರೆ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ನಡೆದವು. ಅಲ್ಲದೇ ಕಳೆದ ಒಂಭತ್ತು ದಿನಗಳಿಂದ ನಡೆದ ಪುರಾಣ ಪ್ರವಚನವನ್ನು ನಾಯಕನೂರಿನ ಕರಿವೀರಯ್ಯ ಶಾಸ್ತ್ರಿ ನಡೆಸಿಕೊಟ್ಟರು. ಪ್ರತಾಪಕುಮಾರ ಹಿರೇಮಠ ತಬಲಾ ಸೇವೆ ನೀಡಿದರು.

ಪ್ರತಿಕ್ರಿಯಿಸಿ (+)