ಕುಸಿದ ಅಂತರ್ಜಲ: ಕಂಗೆಟ್ಟ ರೈತರು

7

ಕುಸಿದ ಅಂತರ್ಜಲ: ಕಂಗೆಟ್ಟ ರೈತರು

Published:
Updated:
ಕುಸಿದ ಅಂತರ್ಜಲ: ಕಂಗೆಟ್ಟ ರೈತರು

ಗಜೇಂದ್ರಗಡ: ನೀರಾವರಿ ಆಶ್ರಿತ ರೈತ ಸಮೂಹದ `ಜೀವ ನಾಡಿ ಬೆಳೆ~ ಎಂದೇ ಕರೆಯಲ್ಪಡುವ ಬೇಸಿಗೆ ಶೇಂಗಾ ಬೆಳೆ ಪ್ರಸಕ್ತ ವರ್ಷ ಬೆಳೆಗಾರರ ಕೈಹಿಡಿಯುವಲ್ಲಿ ವಿಫಲವಾಗಿದೆ.ಮಳೆರಾಯನ ಮುನಿಸಿನಿಂದ ಪಾರಾಗಲು ಕೆಂಪು ಮಿಶ್ರಿತ ಜವಗು (ಮಸಾರಿ) ಪ್ರದೇಶ ಹೊಂದಿರುವ ರೋಣ ತಾಲ್ಲೂಕಿನ ಗಜೇಂದ್ರಗಡ, ರಾಜೂರ, ಲಕ್ಕಲಕಟ್ಟಿ, ನಾಗೇಂದ್ರಗಡ, ಮುಶಿಗೇರಿ, ಗೋಗೇರಿ, ನಾಗರಸಕೊಪ್ಪ, ಕಾಲಕಾಲೇಶ್ವರ, ಪುರ್ತಗೇರಿ, ಕುಂಟೋಜಿ, ರಾಮಾಪುರ, ಹೊಸ ರಾಮಾಪೂರ, ನಾಗರಸಕೊಪ್ಪ ತಾಂಡಾ, ಮ್ಯಾಕಲ್ ಝರಿ, ವದೇಗೋಳ.

 

ಕೊಡಗಾನೂರ ಮುಂತಾದ ಗ್ರಾಮಗಳ ಸಾವಿರಾರು ರೈತರು ಹಲವು ದಶಕಗಳ ಹಿಂದೆಯೇ ಸಾವಿರಾರೂ ರೂಪಾಯಿ ಖರ್ಚು ಮಾಡಿ ಕೊಳವೆ ಬಾವಿಗಳನ್ನು ಕೊರೆಯಿಸಿ ಪ್ರತಿವರ್ಷ ಬೇಸಿಗೆ ಶೇಂಗಾವನ್ನು ಬೆಳೆದು, ನಿರೀಕ್ಷೆಗೂ ಮೀರಿ ಆದಾಯವನ್ನು ಪಡೆದು ಸಮೃದ್ಧ ಬದುಕು ಕಟ್ಟಿಕೊಂಡಿದ್ದರು. ಪರಿಣಾಮ ಈ ಭಾಗದ ಮಸಾರಿ ಪ್ರದೇಶದ ರೈತರ ಅತ್ಯಂತ ವಿಶ್ವಾಸಾರ್ಹ ಬೆಳೆಯಾಗಿ ಹೊರಹೊಮ್ಮಿತ್ತು.ಪ್ರಸಕ್ತ ವರ್ಷ ಮುಂಗಾರು ಮತ್ತು ಹಿಂಗಾರು ಮಳೆಗಳು ಕೈಕೊಟ್ಟ ಪರಿಣಾಮ ರೋಣ ತಾಲ್ಲೂಕು ಬರ ಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರ್ಪಡೆಗೊಂಡಿದೆ. ಇಂಥ ಭೀಕರ ಬರದ ಮಧ್ಯೆಯೂ ಸಂಕಷ್ಟಗಳನ್ನು ನಿವಾರಿಸಿಕೊಂಡು ನೆಮ್ಮದಿಯ ಬದುಕಿಗೆ ಆಸರೆ ಒದಗಿಸಿಕೊಳ್ಳಬೇಕು ಎನ್ನುವ ಏಕೈಕ ಕಾರಣಕ್ಕಾಗಿ ಪ್ರಸಕ್ತ ವರ್ಷ ಈ ಹಿಂದಿನ ವರ್ಷಗಳಿಗಿಂತಲ್ಲೂ ಹೆಚ್ಚಿನ ಪ್ರಮಾಣದಲ್ಲಿ ತಾಲ್ಲೂಕಿನಾದ್ಯಂತ 3,700 ಹೆಕ್ಟೇರ್ ಪ್ರದೇಶದಲ್ಲಿ ಬೇಸಿಗೆ ಶೇಂಗಾ ಬೆಳೆಯಲಾಗಿದೆ.ಒಟ್ಟು 90 ದಿನಗಳ ಬೆಳೆ ಇದಾಗಿದ್ದು, ಎಕರೆ ಶೇಂಗಾ ಬಿತ್ತನೆ ಕಾರ್ಯದಿಂದ ಫಸಲು ಬೆಳೆಗಾರನ ಕೈಸೇರೋವರೆಗೆ 7 ರಿಂದ 8 ಸಾವಿರ ರೂಪಾಯಿ ಖರ್ಚಾಗುತ್ತದೆ. ಬೇಸಿಗೆ ಶೇಂಗಾ ಬೆಳೆಗೆ ಇನ್ನುಳಿದ ಬೆಳೆಗಳಂತೆ ಕೀಟ ಭಾದೆ, ರೋಗ-ರುಜಿನಗಳ ಭಾದೆ ತೀರಾ ವಿರಳ. ಹೀಗಿದ್ದರೂ ಪ್ರಸಕ್ತ ವರ್ಷ ಬಿತ್ತನೆ ಕಾರ್ಯದ ಬಳಿಕ ಹಸಿರಿನಿಂದ ಕಂಗೊಳಿಸಿ, ಬೆಳೆಗಾರನ ವಿಶ್ವಾಸ ಇಮ್ಮಡಿಗೊಳಿಸಿದ ಬೆಳೆಗೆ ಅಪರೂಪದ ಕೀಟ ಭಾದೆ ಅಂಟಿಕೊಂಡು ಬೆಳೆಗಾರನನ್ನು ಸಾಲದ ಶೂಲಕ್ಕೆ ದೂಡಿತು. ಕೈಕೊಡುತ್ತಿರುವ ಟಿ.ಸಿ.ಗಳು

ಅಪರೂಪದ ಕೀಟ ಭಾದೆಯಿಂದ ಮುಕ್ತಿ ಹೊಂದಿ ಚೇತರಿಸಿಕೊಳ್ಳುವಷ್ಟೊತ್ತಿಗೆ ತಾಲ್ಲೂಕಿನ ನೀರಾವರಿ ಪ್ರದೇಶಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿರುವ 3,770 ಟಿ.ಸಿ (ವಿದ್ಯುತ್ ಪರಿವರ್ತಕ)ಗಳು ವಿದ್ಯುತ್ ಸರಬರಾಜಿನಲ್ಲಿ ಉಂಟಾಗುವ ಏರಿಳಿತದಿಂದ ಏಕಾಏಕಿ ಟಿ.ಸಿಗಳು ದುರಸ್ತಿಗೆ ಒಳಪಡುತ್ತಿವೆ.ಹೀಗೆ ದುರಸ್ತಿಗೆ ಒಳಗಾಗುವ ಟಿ.ಸಿಗಳನ್ನು ಸರಿಪಡಿಸುವ ಕಾರ್ಯವನ್ನು ಹೆಸ್ಕಾಂ ಇಲಾಖೆ ಖಾಸಗಿ ಕಂಪೆನಿಯೊಂದಕ್ಕೆ ಗುತ್ತಿಗೆ ನೀಡಿದೆ. ಆದರೆ, ಗುತ್ತಿಗೆದಾರರು ದುರಸ್ತಿಗೆ ಒಳಗಾದ ಟಿ.ಸಿ ಗಳನ್ನು ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ದುರಸ್ತಿಗೊಳಿಸುತ್ತಿರುವುದರಿಂದ ಜೋಡಣೆ ಮಾಡಿದ ಕೆಲವೆ ದಿನಗಳಲ್ಲಿ ಟಿ.ಸಿ ಗಳು ಸುಡುತ್ತಿವೆ. ಈ ಕುರಿತು ಹೆಸ್ಕಾಂ ಇಲಾಖೆಗೆ ಸಾಕಷ್ಟು ಬಾರಿ ತಿಳಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ.

ಹೀಗಾಗಿ ತಾಲ್ಲೂಕಿನ ನೀರಾವರಿ ಆಶ್ರಿತ ಎಲ್ಲ ಬೆಳೆಗಳು ಬಾಡುತ್ತಿವೆ. ಪರಿಣಾಮ ರೈತ ಸಮೂಹದ ಸಾಲದ ಹೊರೆ ಹೆಚ್ಚುತ್ತಲೇ ಇದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೂಡ್ಲೆಪ್ಪ ಗುಡಿಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕುಸಿದ ಅಂತರ್ಜಲ ಮಟ್ಟ 

ಇದರ ಮಧ್ಯೆಯೂ ಉತ್ತಮ ಶೇಂಗಾ ಇಳುವರಿ ಪಡೆದು ಸೈ ಎನಿಸಿಕೊಳ್ಳಬೇಕೆಂಬ ಬೆಳೆಗಾರ ಸಮೂಹದ ಹೆಬ್ಬಯಕೆಗೆ ಅಂತರ್ಜಲ ಮಟ್ಟ ಕುಸಿತ ತಣ್ಣೀರೆಚ್ಚಿದೆ. ಪ್ರಸ್ತುತ ನೀರಾವರಿಗೆ ಸಂಬಂಧಿಸಿದಂತೆ ತಾಲ್ಲೂಕಿನಲ್ಲಿರುವ 5,096 ಕೊಳವೆ ಬಾವಿಗಳ ಪೈಕಿ ಶೇ.53 ರಷ್ಟು ಕೊಳವೆ ಬಾವಿಗಳು ನೀರುಣಿಸುವಲ್ಲಿ ವಿಫಲವಾಗಿವೆ. ಪ್ರಸಕ್ತ ವರ್ಷ ವಾಡಿಕೆಯಂತೆ ಮುಂಗಾರು ಮತ್ತು ಹಿಂಗಾರು ಮಳೆಗಳು ಸುರಿಯದಿರುವುದೇ  ಅಂತರ್ಜಲ ಮಟ್ಟದ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.   ಈ ಹಿಂದಿನ ಎಲ್ಲ ವರ್ಷಗಳಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಂದರೆ, ಎಕರೆಗೆ 35 ರಿಂದ 40 ಚೀಲ ಶೇಂಗಾ ಬೆಳೆದು ಸೈ ಎನಿಸಿಕೊಳ್ಳುತ್ತಿದ್ದ ತಾಲ್ಲೂಕಿನ ಶೇಂಗಾ ಬೆಳೆಗಾರರ ಬಯಕೆಗೆ ಟಿ.ಸಿ ದುರಸ್ತಿ. ವಿದ್ಯುತ್ ಕಣ್ಣಾಮುಚ್ಚಾಲೆ ಹಾಗೂ ಅಂತರ್ಜಲ ಮಟ್ಟ ಕುಸಿತ  ಎಳ್ಳು ನೀರು ಬಿಟ್ಟಿವೆ. ಪರಿಣಾಮ ಭರದ ಮಧ್ಯೆಯೂ ತಮ್ಮದಲ್ಲದ ತಪ್ಪಿಗೆ ಮತ್ತೊಂದು ಸಂಕಷ್ಟವನ್ನು ಶೇಂಗಾ ಬೆಳೆಗಾರ ಸಮೂಹ ಎದುರಿಸಬೇಕಿದೆ.   

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry