ಭಾನುವಾರ, ಜೂನ್ 13, 2021
25 °C

ಕುಸಿದ ಅಂತರ್ಜಲ; ಶೇಂಗಾ ಬೆಳೆಗಾರ ಕಂಗಾಲು

ಪ್ರಜಾವಾಣಿ ವಾರ್ತೆ/ಮಂಜುನಾಥ ಯಲ್ಲಾಪುರದ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ಕೊಳವೆಬಾವಿ ಆಸರೆಯ ಮೂಲಕ ನೀರಾವರಿ ಅಳವಡಿಸಿಕೊಂಡಿರುವ ರೈತ ಸಮುದಾಯದ `ನೆಮ್ಮದಿ~ಯ ಬದುಕಿಗೆ ಬೆಂಕಿಯ ಜ್ವಾಲೆ ಆವರಿಸಿಕೊಂಡಿದೆ!.  ಜೀವಸೆಲೆ ಆಗಿದ್ದ ಕೊಳವೆಬಾವಿಯಲ್ಲಿನ ಅಂತರ್ಜಲ ಬತ್ತಿ ಹೋಗುತ್ತಿರುವ ಹಿನ್ನೆಲೆಯಲ್ಲಿ ಬೇಸಿಗೆ ಹಂಗಾಮಿನಲ್ಲಿ ಬಿತ್ತನೆಯಾಗಿದ್ದ ಶೇಂಗಾ ಬೆಳೆ ಒಣಗಿನಿಂತಿದೆ. ಪರಿಣಾಮ ರೈತರ ಬದುಕು `ಬಾಣಲೆಯಿಂದ ಬೆಂಕಿಗೆ~ ಎಸೆದಂತಾಗಿದೆ.ಮುಂಗಾರು-ಹಿಂಗಾರು ಮಳೆಯ ವೈಫಲ್ಯದಿಂದಾಗಿ ಮತ್ತೊಮ್ಮೆ ತಾಲ್ಲೂಕಿನಲ್ಲಿ ಭೀಕರ ಬರಗಾಲದ ಸೂತಕದ ಛಾಯೆ ಆವರಿಸಿದೆ. ಸಹಸ್ರಾರು ರೂಗಳ ವೆಚ್ಚದಲ್ಲಿ ಕೊರೆಯಿಸಿದ ಕೊಳವೆಬಾವಿಗಳಲ್ಲಿ ಅಂತರ್ಜಲ ಇದ್ದಕ್ಕಿದ್ದಂತೆ ಬರಿದಾಗಿ ಹೋಗಿದೆ. ನಾಲ್ಕಾರು ಇಂಚುಗಳ ಲೆಕ್ಕದಲ್ಲಿ ನೀರು ಹೊರಚೆಲ್ಲುತ್ತಿದ್ದ ಕೊಳವೆಬಾವಿಯಲ್ಲಿ ಈಗ ನಾಲ್ಕಾರು ಹನಿಯೂ ಹೊರಬರುತ್ತಿಲ್ಲ!.

 

ನೀರು ನಂಬಿಕೊಂಡು ಶೇಂಗಾ ಬಿತ್ತನೆ ಮಾಡಿದ್ದ ರೈತರ ಮುಖದ ಮೇಲೆ ಅಕ್ಷರಶಃ ಕಣ್ಣೀರಧಾರೆ ಜಿನುಗುತ್ತಿದೆ. ಆತ್ತ ಬಿತ್ತನೆಗಾಗಿ ಮಾಡಿದ ಬೀಜ-ಗೊಬ್ಬರ, ಆಳು-ಹೋಳಿನ ಸಾಲದ ಮೇಲಿನ ಬಡ್ಡಿಯ ಮೀಟರ್ ತಿರುಗುತ್ತಿರುವ ಪರಿಣಾಮ, ಬೆಳೆಗಾರರ ಕುಟುಂಬಗಳಿಗೆ ಸಾಲದ ಶೂಲದ ಬಲೆಯಲ್ಲಿ ಸಿಲುಕಿಕೊಳ್ಳುವ ಆತಂಕ ಮನೆಮಾಡಿದೆ. ಇತ್ತ ಬಿತ್ತನೆ ಮಾಡಿರುವ ಖರ್ಚಿಗೂ ಫಸಲು ಕೈಗೆಟುಕದೆ ಕಣ್ಣೀರ ಕೋಡಿಯಲ್ಲಿ ರೈತ ಕೈತೊಳೆಯುತ್ತಿದ್ದಾನೆ!.`ಬೋರ್ ಕೊರ‌್ಸಿದಾಗ ನಾಕೂವರೆ ಇಂಚು ನೀರು ಹೊಡೆತ್ತಿತ್ತ್ರಿ. ಈಗ ನೋಡಿದ್ರ ಚಾಲೂ ಮಾಡಿ ಅರ್ಧ ಗಂಟ್ಗೆ ಖಾಲಿ ಮೋಟ್ರಾ ತಿರುಗುತ್ತೈತಿ. ಒಂದು ಅರ್ಧಗಂಟಿ ಮೇಲೆ ಒಂದು ಹನಿ ನೀರು ಬರ‌್ತಾ ಇಲ್ರೀ. ನಾಲ್ಕೂವರೆ ಎಕ್ರಿ ಶೇಂಗಾ ಹೊಲ್ದಾಗ, ಅರ್ಧ ಹೊಲ ನೀರಿಲ್ದೆ ಎಲ್ಲಾ ಒಣಗಿ ಹೋಗೈತ್ರಿ. ಉಳಿದ ಅರ್ಧದಲ್ಲಾದ್ರೂ ಫಸಲು ತಕ್ಕೊಳಕ್ಕ ಹಗಲು-ರಾತ್ರಿ ಕಣ್ಣಾಗ ಎಣ್ಣಿಹಾಕ್ಕೊಂಡು ಹೊಲ್ದಾಗ ಬಿದ್ದು ಸಾಯ್ತಿನಿ ನೋಡ್ರಿ~ ಎಂದು ಕರಳು ಕಿತ್ತುಹೋಗುವಂತೆ ಉಕ್ಕಿ ಬರುತ್ತಿರುವ ಸಂಕಟ ತೋಡಿಕೊಳ್ಳುತ್ತಾನೆ ಹಾರಕನಾಳು ಸಣ್ಣತಾಂಡಾದ ರೇಖಾನಾಯ್ಕ.ಇದು ಕೇವಲ ರೇಖಾನಾಯ್ಕ ಅವರೊಬ್ಬರ ಸ್ಥಿತಿಯಲ್ಲ; ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶೇಂಗಾ ಬಿತ್ತನೆ ಮಾಡಿರುವ ಬಹುತೇಕ ರೈತರು ಇಂತಹದೊಂದು ಆತಂಕದ ಭಯಾನಕತೆಯಲ್ಲಿ ಸಿಲುಕಿಕೊಂಡಿದ್ದಾರೆ. ಬೋರ್‌ವೆಲ್‌ಗಳಿಗೆ ಅಳವಡಿಸಲಾಗಿದ್ದ ಮೋಟಾರ್ ಪಂಪ್‌ಗಳನ್ನು ಈಗಾಗಲೇ ಕೆಲವರು ಮೇಲೆತ್ತಿ ಬಿಚ್ಚಿಟ್ಟಿದ್ದಾರೆ.

 

ಬಿತ್ತನೆಯಾಗಿದ್ದ ಶೇಂಗಾ ಬೆಳೆಯನ್ನು ಕೊನೆಗೆ ದನಗಳಿಗೆ ವೊಟ್ಟಾದ್ರೂ ಸಿಗಲಿ ಎಂಬ ಉದ್ದೇಶದೊಂದಿಗೆ ಕುಂಟೆಯಿಂದ ಹರಗಿ ವೊಟ್ಟು ಬಳಿದಿಟ್ಟುಕೊಂಡಿದ್ದಾರೆ ಎನ್ನುತ್ತಾರೆ ನಂದಿಬೇವೂರು ಗ್ರಾಮದ ಅಶೋಕ.

ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ 1,029ಹೆಕ್ಟೇರ್, ಚಿಗಟೇರಿ 547, ತೆಲಿಗಿ 339 ಹಾಗೂ ಅರಸೀಕೆರೆ ಹೋಬಳಿಯ ವ್ಯಾಪ್ತಿಯ 306ಹೆಕ್ಟೇರ್ ಭೂಪ್ರದೇಶ ಸೇರಿದಂತೆ 2,221ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆ ಮಾಡಲಾಗಿದೆ.ಬೆಳೆಗೆ ಪೂರಕವಾದ ಹವಾಮಾನ ಹಾಗೂ ಕೆಂಪುಮಿಶ್ರಿತ ಮರಳು ಮಣ್ಣು ಹೊಂದಿರುವ ತಾಲ್ಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಶೇಂಗಾ ಬೆಳೆದು, ಸಮೃದ್ಧ ಬದುಕು ಕಟ್ಟಿಕೊಳ್ಳಲು ಹೆಣಗುತ್ತಿದ್ದ ರೈತರ ಮೇಲೆ `ಬರ~ದ ಬರಸಿಡಿಲು ಅಪ್ಪಳಿಸಿದೆ.ಒಕ್ಕಲುತನದ ಜೀವನಾಡಿಯಾದ ರಾಸುಗಳಿಗೆ ಪೌಷ್ಟಿಕಾಂಶಭರಿತ ವೊಟ್ಟು ಹಾಗೂ ರೈತರ ಆರ್ಥಿಕ ಸದೃಢತೆಗೆ ಕಾರಣವಾಗಬೇಕಿದ್ದ ಶೇಂಗಾ ಬೆಳೆಯನ್ನು ಬತ್ತಿ ಹೋಗಿರುವ ಅಂತರ್ಜಲ ನುಂಗಿಹಾಕುವ ಮೂಲಕ ರೈತರ ಜಂಗಾಬಲವನ್ನೇ ಹೊಸಕಿ ಹಾಕಿದೆ. ಮುಂದೇನು? ಎಂದು ದಿಕ್ಕುತೋಚದ ದಾರಿಯಲ್ಲಿ ಬೆಳೆಗಾರ ಬಿಕ್ಕಳಿಸುತ್ತಿದ್ದಾನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.